AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ವೃತ್ತಿ ಬದುಕಿನಿಂದ ನಿವೃತ್ತಿಯಾಗುತ್ತಿದ್ದಾರೆ ಎಂದರೆ ಅದು ಒಂದು ಪೀಳಿಗೆಯನ್ನು ರೂಪಿಸಿದ ಅನುಭವದ ಪಯಣವಾಗಬೇಕು: ಡಾ. ಕೆ.ಎನ್ ಲಕ್ಷ್ಮಿಕಾಂತ್ ಅವರ 32 ವರ್ಷಗಳ ವೃತ್ತಿ ಬದುಕಿಗೆ ಗೌರವಪೂರ್ಣ ಬಿಳ್ಕೊಡುಗೆ…

1 min read

ಅವಿನ್ ಟಿವಿ ಸುದ್ದಿಜಾಲ ✍️: ಒಬ್ಬ ಶಿಕ್ಷಕ ಅಥವಾ ಶಿಕ್ಷಕಿ ವೃತ್ತಿ ಬದುಕಿನಿಂದ ನಿವೃತ್ತಿಯಾಗುತ್ತಿದ್ದಾರೆ ಎಂದರೆ ಅದು ಒಂದು ಪೀಳಿಗೆಯನ್ನು ರೂಪಿಸಿದ ಅನುಭವದ ಪಯಣವಾಗಬೇಕು: ಡಾ. ಕೆ.ಎನ್ ಲಕ್ಷ್ಮಿಕಾಂತ್ ಅವರ 32 ವರ್ಷಗಳ ವೃತ್ತಿ ಬದುಕಿಗೆ ಗೌರವಪೂರ್ಣ ಬಿಳ್ಕೊಡುಗೆ.

ಚಿಕ್ಕಮಗಳೂರು: ಇದು ಕೇವಲ ಅಂಕಗಳ ಹಿಂದೆ ಪದವಿಗಳ ಜೊತೆಗೆ ಪಯಣಿಸುತ್ತಿರುವ ಕಾಲಘಟ್ಟವಿದು, ದೊಡ್ಡ ದೊಡ್ಡ ಶೈಕ್ಷಣಿಕ ಪದವಿಗಳನ್ನು ಗಳಿಸಿಕೊಳ್ಳುವುದಕ್ಕೂ, ಅನುಭವದ ಮೂಲಕ ಜ್ಞಾನವನ್ನು ಧಕ್ಕಿಸಿಕೊಳ್ಳುವುದಕ್ಕೂ ವ್ಯತ್ಯಾಸವಿದೆ, ಪದವಿಯನ್ನು ಗಳಿಸಿದ್ದಕ್ಕಿಸಿಕೊಂಡ ಜ್ಞಾನಕ್ಕಿಂತ ಅನುಭವದ ಮೂಲಕ ಗಳಿಸಿಕೊಂಡ ಜ್ಞಾನಕ್ಕೆ ಅತೀ ಎತ್ತರದ ನಿಲುವಿರುತ್ತದೆ, ಬೇರಿಳಿದು ಬೆಳೆದ ಬೇರಿನಂತೆ ಆಳವಾದ ಚಿಂತನೆ ಇರುತ್ತದೆ, ಇಂತಹ ಚಿಂತನೆಯ ಪಥದ ಕಡೆ ವಿದ್ಯಾರ್ಥಿಗಳನ್ನು ವಿಚಾರಶೀಲರನ್ನಾಗಿ ಮಾಡುವ ಪ್ರಮುಖ ಜವಾಬ್ದಾರಿ ಬೋಧನೆ ಮಾಡುವ ಶಿಕ್ಷಕ ವರ್ಗದ ಮೇಲಿರುತ್ತದೆ.

ಈ ಕಾರಣಕ್ಕಾಗಿ, ಪ್ರತಿಭೆಗಳನ್ನು ಗುರುತಿಸಲು ಪ್ರಾಧ್ಯಾಪಕರು ತಡಮಾಡಬಾರದು, ಆದರ್ಶ ಗುರುಗಳ ಬಗ್ಗೆ ಪ್ರತಿಭಾವಂತ ವಿದ್ಯಾರ್ಥಿಗಳು ಮಾತನಾಡಬೇಕು ಬರೆಯುವಂತಾಗಬೇಕು, ಪ್ರಚೋದನಾತ್ಮಕ ಮಾತುಗಳಿಗೂ ಪ್ರಭಾವಪೂರ್ಣ ಬರಹಗಳಿಗೂ ಇರುವ ವ್ಯತ್ಯಾಸವನ್ನು ಗುರು ಶಿಷ್ಯರಿಬ್ಬರೂ ಏಕಕಾಲದಲ್ಲಿ ಅರಿಯುವಂತಾಗಬೇಕು.

ಭಿನ್ನಾಭಿಪ್ರಾಯಗಳನ್ನು ಗೌರವಿಸುವ, ದ್ವೇಷಕ್ಕಿಂತ ಸಂವಾದವನ್ನು ಆಯ್ಕೆ ಮಾಡಿಕೊಳ್ಳುವ ಅಭಿರುಚಿಯು ವಿದ್ಯಾರ್ಥಿಗಳ ಮನದೊಳಗೆ ನೆಲೆಗೊಂಡಾಗ ಮಾತ್ರ ಯಾವುದೇ ಶಿಕ್ಷಣ ಪ್ರಗತಿಯ ಪಥದಲ್ಲಿ ಸಾಗುತ್ತಿದೆ ಎಂದರ್ಥ, ಇಂತಹ ಮನೋಭಾವವನ್ನು ಬೋಧನೆ ಮಾಡುವ ಭೋದಕರು ಮೊದಲು ತಮ್ಮೊಳಗೆ ತಾವು ಒಂದು ಪರಿವರ್ತನೆಗೆ ಒಳಪಡಿಸಿಕೊಂಡು ನಂತರ ವಿದ್ಯಾರ್ಥಿಗಳಿಗೆ ಅದನ್ನು ಒಂದು ಜತನದೊಂದಿಗೆ ವರ್ಗಾಯಿಸಬೇಕಾಗುತ್ತದೆ, ಇದಕ್ಕೆ ಒಂದು ಸಾಧಕ ಮನಸ್ಥಿತಿ ಇರಬೇಕು, ಯಾವುದೇ ಶಿಕ್ಷಕ ಅಥವಾ ಬೋಧಕರಿಗೆ ಇಂತಹ ಸಾಧನೆಯ ಮನಸ್ಥಿತಿ ಇದ್ದಾಗ ಮಾತ್ರ ಶಿಕ್ಷಣ ಕ್ಷೇತ್ರದಲ್ಲಿ ಹೊಸ ಮನ್ವಂತರವನ್ನು ಕಾಣಲು ಸಾಧ್ಯ ವಾಗುತ್ತದೆ.

ಚಿಕ್ಕಮಗಳೂರಿನ ಐ ಡಿ ಎಸ್ ಜಿ ಕಾಲೇಜಿನಲ್ಲಿ ಸಹ ಪ್ರಾಧ್ಯಾಪಕರು ಮತ್ತು ಅರ್ಥಶಾಸ್ತ್ರ ಸ್ನಾತಕೋತ್ತರ ಅಧ್ಯಯನ ವಿಭಾಗದ ಸಂಯೋಜಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಡಾ. ಲಕ್ಶ್ಮೀಕಾಂತ್ ಕೆ ಎನ್ ಅವರು ಸುಮಾರು 32 ವರ್ಷಗಳ ಸುದೀರ್ಘವಾದ ಅಧ್ಯಾಪಕ ವೃತ್ತಿಯನ್ನು ಮುಗಿಸಿ, ಜುಲೈ 31ಕ್ಕೆ ಸರ್ಕಾರಿ ಕರ್ತವ್ಯದಿಂದ ವಯೋ ನಿವೃತ್ತಿಗೊಂಡರು.

ಮೂರು ದಶಕಗಳಿಗೂ ಹೆಚ್ಚು ಕಾಲ ಜಿಲ್ಲೆಯು ಸೇರಿದಂತೆ ರಾಜ್ಯದ ಕೆಲವು ಕಡೆ ಅತಿಥಿ ಉಪನ್ಯಾಸಕರಾಗಿ, ಅರೆಕಾಲಿಕ ಬೋಧಕರಾಗಿ, ಪ್ರಾಂಶುಪಾಲರಾಗಿ,ಅಧ್ಯಾಪಕರಾಗಿ ವೃತ್ತಿ ಬದುಕಿಗೆ ಬದ್ಧರಾಗಿ , ಸಾವಿರಾರು ವಿದ್ಯಾರ್ಥಿಗಳ ಭವಿಷ್ಯದ ಬೆಳಕಾಗಿ ದುಡಿದ ಡಾ. ಲಕ್ಷ್ಮೀಕಾಂತ್ ಕೆ ಎನ್ ರವರಿಗೆ ಕಾಲೇಜು ಅಭಿವೃದ್ಧಿ ಸಮಿತಿ, ವಿದ್ಯಾರ್ಥಿ ವೃಂದ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ವರ್ಗ, ಸಹೋದ್ಯೋಗಿಗಳು, ಹಿತೈಷಿಗಳು, ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ದುಡಿಯುತ್ತಿರುವ ಕನ್ನಡಪರ ಸಂಘಟನೆಗಳು ಲಕ್ಶ್ಮೀಕಾಂತ್ ಅವರ ವೃತ್ತಿ ಬದುಕಿನ ಇಡೀ ಪಯಣವನ್ನು ಕುರಿತು ಅಭಿನಂದನಾ ನುಡಿಗಳ ಮೂಲಕ ಭಾವಪೂರ್ಣ ಮತ್ತೆ ಗೌರವಪೂರ್ಣ ಬೀಳ್ಕೊಡುಗೆಯೊಂದಿಗೆ ಲಕ್ಶ್ಮೀಕಾಂತ್ ದಂಪತಿಗಳನ್ನು ಅಭಿನಂದಿಸಿತು.

ವೃತ್ತಿ ಬದುಕಿನೊಂದಿಗೆ ಪ್ರವೃತ್ತಿಯಾಗಿ ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಹಲವು ಕ್ಷೇತ್ರಗಳಲ್ಲಿ ವಿವಿಧ ಹುದ್ದೆಗಳನ್ನು ನಿಭಾಯಿಸಿ, ಕಾಲೇಜಿನ ಹಲವು ವಿಭಾಗಗಳಲ್ಲಿ ಸಂಯೋಜಕರಾಗಿ, ಪರಿವೀಕ್ಷಕರಾಗಿ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿಗಾಗಿ ದುಡಿದ ಲಕ್ಶ್ಮೀಕಾಂತ್ ಅವರ ಸಾಧನೆಯ ಮೈಲುಗಲ್ಲುಗಳನ್ನು, ಅವರ ಕರ್ತವ್ಯ ಮತ್ತು ಸೇವೆಯ ವಿವಿಧ ಮಗ್ಗಲುಗಳನ್ನು ಈ ಸಂದರ್ಭದಲ್ಲಿ ಮೆಲುಕು ಹಾಕಲಾಯಿತು.

ಅಭಿನಂದನೆಯನ್ನು ಸ್ವೀಕರಿಸಿದ ಡಾ. ಲಕ್ಶ್ಮೀಕಾಂತ್ ಅವರು ತಮ್ಮ ವೃತ್ತಿ ಬದುಕಿನ ಮೊದಲ ದಿನದಿಂದ ಈ ಕೊನೆಯ ದಿನದ ಇಡೀ ಪಯಣವನ್ನು ನೆನಪಿಸಿಕೊಂಡು, ಏಕಕಾಲಕ್ಕೆ ಕಣ್ಣಂಚಿನಲ್ಲಿ ಹೊರಬಂದ ಸಂತೋಷ ಸಂಕಟದ ಕಣ್ಣೀರಿನೊಂದಿಗೆ ಸಲಹೆ ಸಹಕಾರ ಮಾರ್ಗದರ್ಶನ ನೀಡಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿ ತಮ್ಮ ಕೊನೆಯ ಮಾತುಗಳನ್ನು ಭಾವಪೂರ್ಣವಾಗಿ ಸಭೆಯ ಮುಂದಿಟ್ಟು ಸರ್ಕಾರಿ ಸೇವೆಯಿಂದ ನಿವೃತ್ತರಾದರು.

ಕಾಲೇಜಿನ ಮಲ್ಲೇಗೌಡ ಸಭಾಂಗಣದಲ್ಲಿ ಹಮ್ಮಿಕೊಂಡಿದ್ದ ಈ ಕಾರ್ಯಕ್ರಮದ ಉದ್ಘಾಟನೆಯನ್ನು ಚಿಕ್ಕಮಗಳೂರು ವಿಧಾನಸಭಾ ಕ್ಷೇತ್ರದ ಶಾಸಕರಾದ ಹೆಚ್ ಡಿ ತಮ್ಮಯ್ಯ ಉದ್ಘಾಟಿಸಿದರು, ಕಾಲೇಜಿನ ಪ್ರಾಂಶುಪಾಲರಾದ ಡಾ. ಹೆಚ್ಚು ಮಹೇಶ್ ಅವರು ಅಧ್ಯಕ್ಷತೆ ವಹಿಸಿದ್ದರು, ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷರಾದ ಎ ಎನ್ ಮಹೇಶ್, ಮಕ್ಕಳ ತಜ್ಞ ಡಾ. ಜೆ ಪಿ ಕೃಷ್ಣೇಗೌಡ, ಸಾಹಿತಿಗಳಾದ ಹಳೆಕೋಟೆ ರಮೇಶ್, ಡಾ. ಬೆಳವಾಡಿ ಮಂಜುನಾಥ , ಸಾಮಾಜಿಕ ಹೋರಾಟಗಾರ್ತಿ ರಾಧಾ ಸುಂದರೇಶ್ , ಕನ್ನಡ ಸಾಹಿತ್ಯ ಪರಿಷತ್ತಿನ ನಿಕಟ ಪೂರ್ವ ಅಧ್ಯಕ್ಷ ಕುಂದೂರು ಅಶೋಕ್, ಕಾಲೇಜಿನ ಸಿಡಿಸಿ ಸದಸ್ಯ ಆದಿಲ್,ಸೂರ್ಯ ಎಜುಕೇಶನ್ ಫೌಂಡೇಶನ್ ಅದ್ಯಕ್ಷೆ ಪಲ್ಲವಿ ಸಿ ಟಿ ರವಿ, ತಾಲೂಕು ಕಸಾಪ ಅಧ್ಯಕ್ಷ ಲೋಕೇಶ್ವರಪ್ಪ, ಮಮತಾ ಲಕ್ಶ್ಮೀಕಾಂತ್ , ಡಾ. ಮೋಹನ್ ಕುಮಾರ್ ಮಿರ್ಲೆ, ಡಾ. ಸತೀಶ್, ಡಾ. ಸೋಮಶೇಖರ್, ಡಿ ಎಂ ಮಂಜುನಾಥಸ್ವಾಮಿ ಮುಂತಾದವರು ಉಪಸ್ಥಿತರಿದ್ದು ಮಾತನಾಡಿದರು.

ಇದೇ ಸಂದರ್ಭದಲ್ಲಿ ಡಾ. ಲಕ್ಷ್ಮೀಕಾಂತ್ ದಂಪತಿಗಳನ್ನು ಸಾಹಿತ್ಯ ಮತ್ತು ಸಾಂಸ್ಕೃತಿಕವಾಗಿ ಕೆಲಸ ಮಾಡುತ್ತಿರುವ ಅನೇಕ ಸಂಘಟನೆಗಳು, ಸಹೋದ್ಯೋಗಿಗಳು, ಕಾಲೇಜಿನ ಹಳೆಯ ವಿದ್ಯಾರ್ಥಿಗಳು, ವಿವಿಧ ರಾಜಕೀಯ ಪಕ್ಷದ ಮುಖಂಡರು ಆತ್ಮೀಯವಾಗಿ ಸನ್ಮಾನವಿತ್ತು ಬಿಳ್ಕೊಟ್ಟರು.
•••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *

You may have missed