ಪರಿಸರ ಸೂಕ್ಷ್ಮ ಪ್ರದೇಶ ಕರಡು ಹಿಂಪಡೆಯಲಿ : 137 ಹಳ್ಳಿಗಳ ಜನರು ಆಕ್ಷೇಪಣೆ ಸಲ್ಲಿಸಲಿ : ಹೆಚ್.ಹೆಚ್.ದೇವರಾಜ್.
1 min read
ಚಿಕ್ಕಮಗಳೂರು:ಜಿಲ್ಲೆಯ 137 ಹಳ್ಳಿಗಳನ್ನು ಪಶ್ಚಿಮ ಘಟ್ಟ ಪರಿಸರ ಸೂಕ್ಷ್ಮ ಪ್ರದೇಶ (ESA) ಎಂದು ಗುರುತಿಸಿ ಕೇಂದ್ರ ಸರ್ಕಾರ ಪ್ರಕಟಿಸಿರುವ ಕರಡು ಅಧಿಸೂಚನೆಯನ್ನು ತಕ್ಷಣ ಹಿಂಪಡೆಯಬೇಕು.ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡಿಸಿರುವ ಪ್ರತಿಯೊಂದು ಹಳ್ಳಿಯ ಜನರು ಆಕ್ಷೇಪಣೆ ಸಲ್ಲಿಸುವ ಮೂಲಕ ತಮ್ಮ ಹಕ್ಕುಗಳನ್ನು ರಕ್ಷಿಸಿಕೊಳ್ಳಬೇಕು ಎಂದು ಕೆ.ಪಿ.ಸಿ.ಸಿ ವಕ್ತಾರ ಹೆಚ್.ಹೆಚ್.ದೇವರಾಜ್ ಕರೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಲೆನಾಡಿನ ಜನರು ನೂರಾರು ವರ್ಷಗಳಿಂದ ಪ್ರಕೃತಿಯೊಂದಿಗೆ ಸಹಬಾಳ್ವೆ ನಡೆಸುತ್ತಾ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಪ್ರಾಣಿಗಳು, ಮನುಷ್ಯರು, ನೀರು ಹಾಗೂ ಭೂಮಿಯೊಂದಿಗೆ ಸಮತೋಲನದ ಜೀವನ ನಡೆಸುತ್ತಿರುವ ಜನರನ್ನು ಏಕಾಏಕಿ ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡಿಸುವುದರಿಂದ ಅವರ ಜೀವನ ಸಂಕಷ್ಟಕ್ಕೆ ಸಿಲುಕಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಪರಿಸರ ಸೂಕ್ಷ್ಮ ಪ್ರದೇಶ ಘೋಷಣೆಯಿಂದ ಉಂಟಾಗುವ ಅನುಕೂಲ-ಅನಾನುಕೂಲಗಳ ಕುರಿತು ಕರಡು ಅಧಿಸೂಚನೆಯಲ್ಲಿ ಸ್ಪಷ್ಟತೆ ಇಲ್ಲ.ಹೀಗಾಗಿ ಯಾವುದೇ ಗ್ರಾಮಸ್ಥರು ಧೃತಿಗೆಡಬಾರದು. ಜನಪರ ಸಂಘಟನೆಗಳು ಹಾಗೂ ವಿವಿಧ ಹೋರಾಟಗಾರರು ಗ್ರಾಮಸ್ಥರ ಪರವಾಗಿ ಹೋರಾಟ ನಡೆಸಲಿದ್ದಾರೆ ಎಂದು ಅವರು ಭರವಸೆ ನೀಡಿದರು.
ಒಂದು ವಾರದೊಳಗೆ ರೈತ ಸಂಘದ ನೇತೃತ್ವದಲ್ಲಿ ರೈತ ಸಂಘ,ಕಮ್ಯುನಿಸ್ಟ್ ಪಕ್ಷ,ಬಿ.ಎಸ್.ಪಿ,ಡಿ.ಎಸ್.ಎಸ್, ಕಾಂಗ್ರೆಸ್,ಜೆ.ಡಿ.ಎಸ್ ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ಪಕ್ಷಗಳ ಸಭೆ ನಡೆಸಿ ಮುಂದಿನ ಹೋರಾಟದ ರೂಪುರೇಷೆ ರೂಪಿಸಲು ನಿರ್ಧರಿಸಲಾಗಿದೆ ಎಂದು ತಿಳಿಸಿದರು.
ಕೇಂದ್ರ ಸರ್ಕಾರದ ಈ ನೀತಿಯಿಂದ ಮಲೆನಾಡಿನ 137 ಹಳ್ಳಿಗಳ ಜನರ ಭವಿಷ್ಯಕ್ಕೆ ಧಕ್ಕೆ ಉಂಟಾಗಲಿದೆ. ಆದ್ದರಿಂದ ಎಲ್ಲ ಗ್ರಾಮಸ್ಥರು ಎಚ್ಚೆತ್ತುಕೊಂಡು ಹೋರಾಟಕ್ಕೆ ಸಜ್ಜಾಗಬೇಕು. ಹೋರಾಟ ಮಾಡದಿದ್ದರೆ ತಮ್ಮ ಹಕ್ಕುಗಳನ್ನು ಉಳಿಸಿಕೊಳ್ಳುವುದು ಕಷ್ಟವಾಗಲಿದೆ ಎಂದು ಅವರು ಹೇಳಿದರು.
ಜನವಿರೋಧಿ ಕಸ್ತೂರಿರಂಗನ್ ವರದಿಯನ್ನು ತಿರಸ್ಕರಿಸಬೇಕು.ರಾಜ್ಯ ಸರ್ಕಾರ ಕೇಂದ್ರ ಸರ್ಕಾರದ ಮುಂದೆ ಜನರ ಪರವಾಗಿ ಮನವಿ ಸಲ್ಲಿಸಬೇಕು. ರಾಜ್ಯದ ಶಾಸಕರು ಹಾಗೂ ವಿಧಾನ ಪರಿಷತ್ ಸದಸ್ಯರು ಪಕ್ಷಾತೀತವಾಗಿ ಧ್ವನಿ ಎತ್ತಿ ಜನರ ಹಿತಾಸಕ್ತಿಯನ್ನು ಕಾಪಾಡಬೇಕು ಎಂದು ಒತ್ತಾಯಿಸಿದರು.
ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡಿಸಿರುವ ಪ್ರತಿಯೊಂದು ಹಳ್ಳಿಯ ಪ್ರತಿಯೊಬ್ಬರೂ ನಿಗದಿತ ಅವಧಿಯೊಳಗೆ ಆಕ್ಷೇಪಣೆ ಸಲ್ಲಿಸಿ ಜನಾಂದೋಲನದಲ್ಲಿ ಭಾಗವಹಿಸಬೇಕು ಎಂದು ದೇವರಾಜ್ ಕರೆ ನೀಡಿದರು.
ಕೆ.ಪಿ.ಸಿ.ಸಿ ವಕ್ತಾರ ರವೀಶ್ ಕ್ಯಾತನಬೀಡು ಮಾತನಾಡಿ, ಕರಡು ಅಧಿಸೂಚನೆ ಜಾರಿಗೆ ಬಂದರೆ ಅಭಿವೃದ್ಧಿ ಕಾಮಗಾರಿಗಳಿಗೆ ತೀವ್ರ ಅಡ್ಡಿಯಾಗಲಿದೆ.ಪರಿಸರ ಸೂಕ್ಷ್ಮ ಪ್ರದೇಶಕ್ಕೆ ಒಳಪಡುವ ಗ್ರಾಮ ಪಂಚಾಯಿತಿಗಳು,ಜಿಲ್ಲಾ ಪಂಚಾಯಿತಿ ವ್ಯಾಪ್ತಿಯ ಪ್ರದೇಶಗಳು ಹಾಗೂ ನಗರಸಭೆಗಳು ಈ ಕರಡನ್ನು ವಿರೋಧಿಸಿ ಕೇಂದ್ರ ಸರ್ಕಾರ ಮತ್ತು ಸುಪ್ರೀಂ ಕೋರ್ಟ್‌ಗೆ ತಮ್ಮ ಆಕ್ಷೇಪಣೆ ಸಲ್ಲಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಕಾಂಗ್ರೆಸ್ ಕಾರ್ಯದರ್ಶಿ ರಮೇಶ್,ತಾಲ್ಲೂಕು ಕಾರ್ಯದರ್ಶಿ ಸಚಿನ್,ಮುಖಂಡರಾದ ಶಾಂತಕುಮಾರ್ ಹಾಗೂ ಉಪ್ಪಳ್ಳಿ ಭರತ್ ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

