AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ನಿಧನವಾರ್ತೆ” : “ಬದುಕಿನಲ್ಲೂ…ಸಾವಿನಲ್ಲೂ…ಸಾರ್ಥಕತೆ ಮೆರೆದ ಸುರೇಶ್.”

1 min read

ಅವಿನ್ ಟಿವಿ ಸುದ್ದಿಜಾಲ : ಬದುಕಿನಲ್ಲೂ..ಸಾವಿನಲ್ಲೂ..ಸಾರ್ಥಕತೆ ಮೆರೆದು ದೇಹ ದಾನದ ಜೊತೆಗೆ ಅಂಗಾಂಗಗಳ ದಾನ ಮಾಡಿ ನಾಲ್ಕಾರು ಜೀವಗಳಿಗೆ ಮರುಜೀವ ಕೊಟ್ಟು ಬದುಕಿಗೊಂದು ಬಾಷ್ಯ ಬರೆದು ಹೊರಟು ಹೋದ ಜನ ವಿಜ್ಞಾನ ಚಳುವಳಿಯ ಸಂಗಾತಿ ಹಣ್ಣೆ ಸುರೇಶ್ ಅವರ ಬದುಕು ಮತ್ತು ಸಾವು ಈ ಎರಡು ಕೂಡ ಸಮಾಜಕ್ಕೆ ಮಾದರಿಯಾದದ್ದು……

ಬೆಂಗಳೂರು ಆಗಸ್ಟ್ 06 : ಸಾಮಾಜಿಕ ಸೇವೆಯನ್ನು ಅನುದಿನವು ತನ್ನ ಕಾಯಕವಾಗಿಸಿಕೊಂಡು ಜನಪರ ಸಂಘಟನೆಯ ಪಥದಲ್ಲಿ ಸಾಗುತ್ತಿದ್ದ ಹಣ್ಣೆ ಸುರೇಶ್ ಅವರು ಇಂದು ಬೆಳಗಿನ ಜಾವ ಘಂಟೆ 4:00ರ ಸುಮಾರಿಗೆ ಬೆಂಗಳೂರಿನ ನಿಮಾನ್ಸ್ ಆಸ್ಪತ್ರೆಯಲ್ಲಿ ಮೆದುಳಿನ ರಕ್ತಸ್ರಾವದಿಂದ ನಿಧನರಾಗಿದ್ದಾರೆ, ನಿಧನದ ಸುದ್ದಿ ಕೇಳಿ ರಾಜ್ಯದ ಎಲ್ಲ ಜಿಲ್ಲೆಗಳಿಂದ ವಿಜ್ಞಾನ ಚಳುವಳಿಯ ಸಂಗಾತಿಗಳು ಮತ್ತು ಜನ ಮುಖಿ ಮನಸ್ಸುಗಳು ಮೃತರ ಪಾರ್ಥಿವ ಶರೀರದ ದರ್ಶನ ಪಡೆದು ಅಂತಿಮ ನಮನ ಸಲ್ಲಿಸಿದ್ದಾರೆ.

ಒಳ್ಳೆಯದು ಘಟಿಸುತ್ತದೆ ಎಂಬುದು ನಮ್ಮ ನಂಬಿಕೆ ಮತ್ತು ಭರವಸೆಯಾದರೆ ಹಾಗೆಯೇ ಕೆಟ್ಟದ್ದು ಕೂಡ ಘಟಿಸುತ್ತದೆ ಎಂಬ ಅರಿವು ನಮ್ಮದಾಗಿರಬೇಕು.

ಚಿಕ್ಕಮಗಳೂರು ಜಿಲ್ಲೆ ಅಜ್ಜಂಪುರ ತಾಲೂಕಿನ ಹಣ್ಣೆ ಗ್ರಾಮದ ನಿವಾಸಿ ಎಚ್.ಬಿ.ಸುರೇಶ್ ಅವರ ಹೃದಯ ಮತ್ತು ಮನಸ್ಸು ಜೀವ ಕಾಳಜಿಯ ಮನುಷ್ಯ ಪ್ರೀತಿಯೊಂದಿಗೆ ಜನಮುಖಿ ಸಂಸ್ಕಾರದಿಂದ ಅರಳಿ ಬೆಳೆದದ್ದು, ಹುಟ್ಟಿದ್ದು ಚಿಕ್ಕಮಗಳೂರು ಜಿಲ್ಲೆಯ ಹಣ್ಣೆ ಗ್ರಾಮದಲ್ಲಾದರೂ ಬದುಕನ್ನು ಅರಸುತ್ತಾ ತಾನು ಹುಟ್ಟಿದ ಊರನ್ನು ಬಿಟ್ಟು ಪ್ರಥಮದಲ್ಲಿ ಹೊರಟಿದ್ದು ಕಲ್ಲಿನಕೋಟೆ ಚಿತ್ರದುರ್ಗ ಜಿಲ್ಲೆ, ಹೊಸದುರ್ಗದತ್ತ, ಹೊಸದುರ್ಗದಲ್ಲಿ ಕೆಲಕಾಲ ಖಾಸಗಿ ಶಾಲೆಯೊಂದರಲ್ಲಿ ದೈಹಿಕ ಶಿಕ್ಷಕರಾಗಿ ದುಡಿದು, ತದನಂತರ ಆ ಕೆಲಸವನ್ನು ಕೈ ಬಿಟ್ಟು ರಾಜ್ಯದ ರಾಜಧಾನಿ ಬೆಂಗಳೂರಿನತ್ತ ಮುಖ ಮಾಡಿ,ಅಲ್ಲಿ ವೈಚಾರಿಕ ಮತ್ತು ವೈಜ್ಞಾನಿಕ ಮನಸ್ಸುಗಳ ಜೊತೆ ಸಂಪರ್ಕ ಬೆಳೆಸಿಕೊಂಡು, ಸಾಕ್ಷರತಾ ಆಂದೋಲನ, ಜನವಿಜ್ಞಾನ ಚಳುವಳಿಗಳು, ಆಪ್ನದೇಶ್ ಚಟುವಟಿಕೆಗಳು ಸೇರಿದಂತೆ ಇನ್ನಿತರೆ ಹಲವಾರು ಸಂಘಟನೆಗಳೊಟ್ಟಿಗೆ ಸುಮಾರು ಮೂರರಿಂದ ನಾಲ್ಕು ದಶಕಗಳ ಕಾಲ ಸಾಮಾಜಿಕ ಚಟುವಟಿಕೆಯ ಒಂದು ಭಾಗವಾಗಿ ಎಲೆಮರೆಯ ಕಾಯಿಯಂತೆ ಕೆಲಸ ಮಾಡಿದವರು ಈ ಸುರೇಶ್ ಅವರು.

ಸುರೇಶ್ ಅವರು ಜೀವಮಾನವಿಡಿ ದುಡಿದ ವೃತ್ತಿ ಬದುಕಿನಲ್ಲಿ ಸುಖ ಸುಮ್ಮನೆ ಅನುಕಂಪ ಗಿಟ್ಟಿಸಿಕೊಳ್ಳುವ ಸ್ವಭಾವ ಅವರದಾಗಿರಲಿಲ್ಲ, ಸರಳ ಜೀವನವನ್ನು ರೂಡಿಸಿಕೊಂಡು, ದೊರೆಯುತ್ತಿದ್ದ ಅತೀ ಕಡಿಮೆ ಸಂಬಳದಲ್ಲಿಯೂ ಸಂತೃಪ್ತಿಯಾಗಿ ಬದುಕುತ್ತಿದ್ದ ಸುಖಿ ಕುಟುಂಬ ಇವರದ್ದು, ಪ್ರಶಸ್ತಿ ಪುರಸ್ಕಾರಗಳನ್ನು ಬಯಸದೆ ದುಡಿದ ಸುರೇಶ್ ಅವರ ಬದುಕಿನ ಕೊನೆಯ ದಿನಗಳಲ್ಲಿ ಅವರ ಸೇವೆಗೆ ದಕ್ಕಬೇಕಾದ ಮನ್ನಣೆ ಮತ್ತು ಗೌರವ ಸಿಗದಿದ್ದ ಕಾರಣ ಮನಸ್ಸಿಗೆ ಆಳವಾದ ಬೇಸರವನ್ನು ತಂದುಕೊಂಡಿದ್ದರು, ಈ ಬೇಸರವನ್ನು ನಾನು ಸೇರಿದಂತೆ ಅವರ ಆತ್ಮೀಯರಲ್ಲಿ ಹಂಚಿಕೊಂಡಿದ್ದರು, ಈ ರೀತಿಯ ಹಂಚಿಕೊಂಡ ಬೇಸರದ ಮಾತುಗಳ ಬಿಸಿ ಆರುವ ಮುಂಚೆಯೇ ಸುರೇಶ್ ಅವರು ನಮ್ಮನ್ನೆಲ್ಲ ಬಿಟ್ಟು ಅಗಲಿರುವುದು ಅತ್ಯಂತ ದುಃಖದ ವಿಚಾರ.

*ಅಪ್ಪ* ಮುಂದಿನ ಜನ್ಮ ಅನ್ನುವುದು ಏನಾದರೂ ಇದ್ದರೆ ನಿನ್ನ ಮಗಳಾಗಿಯೇ ಹುಟ್ಟಬೇಕಪ್ಪ ಎಂಬ ಸುರೇಶ್ ಅವರ ಏಕಮಾತ್ರ ಪುತ್ರಿ ಲಾವಣ್ಯ ಳ ರೋಧನೆ, ತಾತ ಹೋಗಿ ಬರ್ತೀಯಾ ಬಾಯ್ ಎಂದು ಟಾಟಾ ಮಾಡಿದ ಹಾಲುಗಲ್ಲದ ಮೊಮ್ಮಗ ಹೆಯಾಶ್ ನ ಮುಗ್ದತೆ, ನಾನು ಸತ್ತರೆ ನನ್ನ ದೇಹವನ್ನು ಕೂಡ ಆಸ್ಪತ್ರೆಗೆ ದಾನ ಮಾಡುತ್ತೇನೆ ಎಂದ ಮಡದಿ ಭಾರತೀಯವರ ವಾಗ್ದಾನ ಸುರೇಶ್ ಅವರ ದೇಹದ ಕಿಡ್ನಿ ಕರುಳು ಕಾರ್ನಿಯ ಮುಂತಾದ ಅಂಗಾಂಗಗಳನ್ನು ತೆಗೆದು ಸಂಕಷ್ಟದಲ್ಲಿ ನರಳುತ್ತಿದ್ದ ಇತರರ ದೇಹಕ್ಕೆ ಅದನ್ನು ಜೋಡಣೆ ಮಾಡಿ,ತದನಂತರ ಅವರ ದೇಹವನ್ನು ವೈದ್ಯಕೀಯ ವಿದ್ಯಾರ್ಥಿಗಳ ಸಂಶೋಧನೆಗಾಗಿ ಬೆಂಗಳೂರಿನ ಬೋರಿಂಗ್ ಆಸ್ಪತ್ರೆಗೆ ದಾನ ಮಾಡುವ ಮುಂಚೆ ಈ ಎಲ್ಲ ಮಾತುಗಳು ಮತ್ತು ವೇದನೆಗಳು ಸುರೇಶ್ ಅವರ ಪಾರ್ಥಿವ ಶರೀರದ ಸುತ್ತ ರೋದಿಸಿದವು.

61ರ ವಯೋಮಾನದ ಎಚ್.ಬಿ.ಸುರೇಶ್ ಅವರು ಬದುಕಿನ ಬಹಳಷ್ಟನ್ನು ಅರ್ಧದಲ್ಲಿಯೇ ಕಳೆದುಕೊಂಡು, ಜನಮಾನಸ ನೆನಪಿಡುವಷ್ಟು ನಿಸ್ವಾರ್ಥ ಸೇವೆಯನ್ನು ಸಮಾಜಕ್ಕೆ ಕೊಟ್ಟು, ನೆನಪಿನ ಬುತ್ತಿಯನ್ನು ನಮ್ಮ ನಡುವೆ ಬಿಟ್ಟು ಹೋಗಿದ್ದಾರೆ,ಅವರ ಈ ಅಕಾಲಿಕ ಅಗಲಿಕೆ ಅವರ ಕುಟುಂಬಕಷ್ಟೆ ಅಲ್ಲ, ಜನ ಮುಖಿ ಸಮಾಜಕ್ಕೆ ತುಂಬಲಾರದ ನಷ್ಟ ಮತ್ತು ಅತೀವ ನೋವಾಗಿದೆ.

ಮಡದಿ ಭಾರತಿ, ಮಗಳು ಲಾವಣ್ಯ, ಅಳಿಯ ನಾಗರಾಜ್ , ಮೊಮ್ಮಗ ಹೆಯಾಶ್ ಸೇರಿದಂತೆ ತನ್ನ ಕುಟುಂಬವರ್ಗ ಹಾಗೂ ಸಮಾಜದ ದೊಡ್ಡ ಸಂಖ್ಯೆಯ ಬಂಧುಗಳನ್ನು, ಜನ ವಿಜ್ಞಾನ ಚಳುವಳಿಯ ಸಂಗಾತಿಗಳನ್ನು, ಜನಪರ ಮತ್ತು ಜನಮುಖಿ ಸಂಘಟನೆಯ ದೇಶ ಬಂಧುಗಳನ್ನು ಬಿಟ್ಟು ಅಗಲಿದ ಸುರೇಶ್ ಅವರ ಸಾವಿಗೆ ರಾಜ್ಯದ ಮೂಲೆ ಮೂಲೆಗಳಿಂದ ಹಲವಾರು ಜನ ಸಂತಾಪ ಸೂಚಿಸಿ ಅಂತಿಮ ನಮನ ಸಲ್ಲಿಸಿದ್ದಾರೆ.

ಯೋಚನೆಯಲ್ಲಿ ಸಂಸ್ಕಾರದಲ್ಲಿ ಮುಂದಿರುವ ಈ ಸಮಾಜ ಒಳ್ಳೆಯದನ್ನು ಹೆಚ್ಚು ಗುರುತಿಸುವಲ್ಲಿ ಮತ್ತು ಸ್ವೀಕರಿಸುವಲ್ಲಿ ವಿಫಲವಾಗಿದೆ, ಯಾವುದೇ ಒಳ್ಳೆಯದನ್ನು, ಒಳ್ಳೆಯ ವ್ಯಕ್ತಿಯನ್ನು ಅವರು ಬದುಕಿದ್ದಾಗಲೇ ಅವರ ಶ್ರೇಷ್ಠತನಗಳನ್ನು ಗುರುತು ಮಾಡಿ ಹೆಚ್ಚು ಗೌರವಿಸಬೇಕು ಮನ್ನಣೆ ನೀಡಬೇಕು, ಈ ನಿಟ್ಟಿನಲ್ಲಿ ಸಮಾಜಮುಖಿ ಮನಸ್ಸುಗಳು ಹೆಚ್ಚೆಚ್ಚು ಚಿಂತಿಸುವಂತಾಗಲಿ, ಚಿಂತಿಸಿದ ಚಿಂತನೆಯನ್ನು ಕಾರ್ಯರೂಪಕ್ಕೆ ಇಳಿಸುವಂತಾಗಲಿ.

••••••••••••••••

✍🏻ಬರಹ ಕೃಪೆ.✍🏻

ಡಿ ಎಂ ಮಂಜುನಾಥಸ್ವಾಮಿ.

ಅವಿನ್ ಟಿವಿ ಸುದ್ದಿಜಾಲ.

ಚಿಕ್ಕಮಗಳೂರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *

You may have missed