ಬದುಕಿನ ನಡೆಯಲ್ಲಿ ಎಷ್ಟು ಸ್ಪಷ್ಟತೆ ಇತ್ತೂ ಅಷ್ಟೇ ಸ್ಪಷ್ಟತೆಯಲ್ಲಿ ಸಾವನ್ನು ಎದುರಾದವರು, ತಾವು ಆಡಿದ ಮಾತನ್ನು ಬರೆದ ಬರಹಗಳ ಗಡಿಯನ್ನು ದಾಟದೆ,
1 min read
ಅವಿನ್ ಟಿವಿ ಸುದ್ದಿಜಾಲ ✍️: ಬದುಕಿನ ನಡೆಯಲ್ಲಿ ಎಷ್ಟು ಸ್ಪಷ್ಟತೆ ಇತ್ತೂ ಅಷ್ಟೇ ಸ್ಪಷ್ಟತೆಯಲ್ಲಿ ಸಾವನ್ನು ಎದುರಾದವರು, ತಾವು ಆಡಿದ ಮಾತನ್ನು ಬರೆದ ಬರಹಗಳ ಗಡಿಯನ್ನು ದಾಟದೆ, ಎದುರಾದ ಅದೆಂತಹ ಕಷ್ಟಗಳಿಗೂ ವಿಮುಖರಾಗದೆ, ನನ್ನ ಅನ್ನವನ್ನು ನಾನೆ ದುಡಿದು ತಿನ್ನುತ್ತೇನೆ ಎಂಬ ಶಾಸನವನ್ನು ತನ್ನೊಳಗೆ ತಾನೆ ಬರೆದುಕೊಂಡು,ತಾನು ನಂಬಿದ ಸಿದ್ಧಾಂತಕ್ಕೆ ಗುಲಗಂಜಿಯಷ್ಟು ಅಪಚಾರವಾಗದಂತೆ ಬದುಕಿದ ಮುಂಡಗೋಡು ಶ್ರೀನಿವಾಸ್ ಮೂರ್ತಿ ಅವರು ಫೇಸ್ಬುಕ್ ನಲ್ಲಿ ಬರೆದ ಅವರ ಬದುಕಿನ ಅನುಭವಗಳ ಬರಹವನ್ನು ಬಿಡದೆ ಬೆನ್ನತ್ತಿ ಓದಿದವರು ಸಾವಿರ ಸಾವಿರ ಸಂಖ್ಯೆಯ ಜನರು, ಏನಾದರೂ ಆ ಬರಹಗಳನ್ನೆಲ್ಲ ಒಂದು ಪುಸ್ತಕ ರೂಪದಲ್ಲಿ ತಂದಿದ್ದೆ ಆಗಿದ್ದರೆ ಚಿಕ್ಕಮಗಳೂರು ಜಿಲ್ಲೆಯ ಒಬ್ಬ ಶ್ರೇಷ್ಠ ಸಾಹಿತಿಯ ಸಾಲಿನಲ್ಲಿ ಶ್ರೀನಿವಾಸ್ ಮೂರ್ತಿಯವರು ನಿಲ್ಲುತ್ತಿದ್ದರು.
ಶೃಂಗೇರಿ ತಾಲೂಕಿನ ಮುಂಡಗೋಡು ಗ್ರಾಮದ ಇಂತಹ ಶ್ರೀನಿವಾಸ್ ಮೂರ್ತಿಯವರನ್ನು ನಾವೆಲ್ಲ ಬಹಳ ಪ್ರೀತಿಯಿಂದ ಸೀನಣ್ಣ ಎಂದು ಕರೆಯುತ್ತಿದ್ದೆವು, ಕನ್ನಡ ಸಾಹಿತ್ಯ ಪರಿಷತ್ತಿನ ಚಟುವಟಿಕೆಗಳ ಮೂಲಕ ಎಂದು ಮರೆಯದ ಒಂದು ಹಾಡಿನಂತೆ ನಮಗೆ ದಶಕಗಳ ಕಾಲದಿಂದ ಹತ್ತಿರವಾದವರು.
ಇಂದಿಗೆ ಇದೇ ಆಗಸ್ಟ್ 2ಕ್ಕೆ ಶ್ರೀನಿವಾಸ್ ಮೂರ್ತಿಯವರು ಕಾಲ ಗರ್ಭದೊಳಗೆ ಸರಿದು ಹೋಗಿ ಒಂದು ವರ್ಷ ಸಂದಾಯವಾಯಿತು, ಈ ಸಂದರ್ಭದಲ್ಲಿ ಅವರ ಆಪ್ತ ವಲಯಲ್ಲಿ ಗುರುತಿಸಿಕೊಂಡಿದ್ದ ಅಕ್ಷತಾ ಹುಂಚನಕಟ್ಟೆ, ಗುರುಮೂರ್ತಿ ಜೋಗಿ ಬೈಲು, ಭಾಗ್ಯಲಕ್ಷ್ಮಿ ಮತ್ತು ಸುಮಿತ್ರ ಮತ್ತು ಇತರರು ಶ್ರೀನಿವಾಸ್ ಮೂರ್ತಿ ಅವರ ಬರಹಗಳನ್ನೆಲ್ಲ ಸಂಗ್ರಹಿಸಿ ಹೊರ ತಂದ “ಕಾಲಿಯೇ ಉಳಿದ ದಿನಚರಿಯ ಹಾಳೆಗಳು” ಎಂಬ ಹೆಸರಿನ ಪುಸ್ತಕ ಇಂದಿನಿಂದ ಓದುಗರಿಗೆ ಜನಾರ್ಪಣೆಗೊಳ್ಳಲಿದೆ, ಶಿವಮೊಗ್ಗದ ಆಹರ್ನಿಶಿ ಪ್ರಕಾಶನದ ಪ್ರಕಾಶಕಿ ಮತ್ತು ಬರಹಗಾರ್ತಿ ಅಕ್ಷತಾ ಹುಂಚನಕಟ್ಟೆ ಬರೆದ ಈ ಲೇಖನವನ್ನು ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಕೂಡ ಮಾಡುತ್ತಿದೆ.
•••••••••••••
ಸಾವು ಎದುರಿಗಿದ್ದ ಹೊತ್ತಲ್ಲೂ….
ಕೊಪ್ಪ- ಶೃಂಗೇರಿಯ ಕೆ ಶ್ರೀನಿವಾಮೂರ್ತಿಯವರು ಫೇಸ್ ಬುಕ್ ನಿಂದಾಗಿಯೇ ಹಲವರಿಗೆ ಪರಿಚಿತರಾದವರು. ಅವರ ಸ್ಪಷ್ಟತೆ, ಪ್ರಾಯೋಗಿಕತೆ , ಜಾತ್ಯಾತೀತತೆಯಿಂದಾಗಿ ನಮಗೆಲ್ಲ ಹತ್ತಿರಾದವರು. ಅವರ ಬರೆಹಗಳಂತೂ ಎಷ್ಟು ಜನರನ್ನು ಕಾಡಿದವೋ… ಕಣ್ಣೀರು ಹಾಕಿಸಿದವೋ…ಅದು ಅವರ ಬಾಲ್ಯದ ದಿನಗಳ ಬಗೆಗೆ ಬರೆದಾಗ…ಕಡುಕಷ್ಟದ ಬದುಕಿನಿಂದ ಛಲ, ಸ್ವಂತಿಕೆ, ಶ್ರಮದಿಂದ ಮೇಲೆದ್ದು ಬಂದವರು .. ಹಳ್ಳಕ್ಕೆ ತಾವೇ ಸೇತುವೆ ಕಟ್ಟಿದವರು, ಕಾಡು ಪ್ರಾಣಿಗಳು ಹಾಗೂ ಮರಗಳ ಜೊತೆ ಬಂಧುತ್ವ ಸಾಧಿಸಿದವರು. ದೌರ್ಜನ್ಯದ ವಿರುದ್ಧ ಸೌಜನ್ಯ ಹೋರಾಟದಲ್ಲಿ ಬದ್ದತೆಯಲ್ಲಿ ಪಾಲ್ಗೊಂಡವರು. ಕ್ಯಾನ್ಸರ್ ಜೊತೆ ಹೋರಾಟ ನಡೆಸಿ ಕಳೆದ ವರುಷ ಆಗಸ್ಟ್ ಎರಡರಂದು ಶ್ರೀನಿವಾಸಮೂರ್ತಿ ಯವರು ಇನ್ನಿಲ್ಲವಾದರು. ಬದುಕಿನ ಪ್ರತಿ ನಡೆಯಲ್ಲಿ ಎಷ್ಟು ಸ್ಪಷ್ಟತೆ ಇತ್ತೋ ಸಾವನ್ನು ಅದೇ ಸ್ಪಷ್ಟತೆಯಲ್ಲಿ ಎದಿರಾದವರು ಶ್ರೀನಿವಾಸಮೂರ್ತಿ. ಸಾಯುವುದಕ್ಕೆ ಕೆಲವೇ ದಿನಗಳಿರುವಾಗ ತನ್ನ ಶವವನ್ನು ಯಾವ ರೀತಿ ವಿಲೇವಾರಿ ಮಾಡಬೇಕೆಂದು ಅದರ ಬಗೆಗೆ ಸಾರ್ವಜನಿಕವಾಗಿ ಬರೆದುಕೊಂಡವರು. ಕ್ಯಾನ್ಸರ್ ಬಂದಾಗ ನಾವೆಲ್ಲ ಗೆಳೆಯರು ಅವರು ತುಂಬಾ ಗೌರವಿಸುವ ಒಬ್ಬರನ್ನು ಮೂರ್ತಿಗಳ ಜೊತೆ ಮಾತಾಡಿಸಿ ಟ್ರೀಟ್ ಮೆಂಟ್ ಗೆ ನಮ್ಮನಮ್ಮಲ್ಲೇ ಹಣ ಸಂಗ್ರಹಿಸಿ ನೀಡುವುದಾಗಿ ಹೇಳಿಸಿದಾಗ ಖಡಾಖಂಡಿತವಾಗಿ ನಿರಾಕರಿಸಿದವರು.ಅವರು ಒಬ್ಬ ಒಳ್ಳೆಯ ಕವಿ ಮತ್ರು ಲೇಖಕರಾಗಿದ್ದರು. ಅವರ ಬರಹಗಳು ಪ್ರಕಟವಾಗಿದ್ದರೆ. ಕನ್ನಡಕ್ಕೆ ಒಬ್ಬರು ಅಪೂರ್ವ ಲೇಖಕರು ದೊರಕುತ್ತಿದ್ದರು. ಅವರ ಆತ್ಮಕತೆ ಅವರಿದ್ದಾಗಲೇ ತರಬೇಕಿತ್ತು…ಎಂಬ ಪಾಪಪ್ರಜ್ಞೆಯೊಂದಿಗೆ ಅಹರ್ನಿಶಿ ಯಿಂದ ಅವರ ಬದುಕಿನ ಗಾಥೆ ಅವರದೇ ಕವಿತೆಯ ಸಾಲು ” ಖಾಲಿಯೇ ಉಳಿದ ದಿನಚರಿಯ ಹಾಳೆಗಳು” ಶೀರ್ಷಿಕೆ ಯಲ್ಲಿ ಪ್ರಕಟಿಸುತ್ತಿದ್ದೇವೆ . ಇಂದು ಅವರ ಒಂದು ವರ್ಷದ ಸಂಸ್ಕರಣೆಯ ನೆನಪಿನ ದಿನ… ಇಂದಿನಿಂದ ಈ ಪುಸ್ತಕ ಲಭ್ಯವಿದೆ ( ಬೆಲೆ ರೂ 140+20=160)
.ಅವರ ಬದುಕಿನ ಪುಟಗಳ ಒಂದು ಅಧ್ಯಾಯ ನಿಮ್ಮ ಓದಿಗೆ .(..ಈಗಾಗಲೇ ಬಹುತೇಕರು ಇದನ್ನು ಓದಿ ಕಣ್ಣೀರು ಸುರಿಸಿದ್ದೇವೆ..)
ಅಮ್ಮನ ಉಗ್ಗ
————
ನಲವತ್ತೊಂದು ವರ್ಷಗಳ ಹಿಂದೆ ಶೃಂಗೇರಿಯ ನವರಾತ್ರಿ ಜಾತ್ರೆಯಂಗಡಿಯಲ್ಲಿ ಅಮ್ಮ ಉಗ್ಗ ಖರೀದಿಸುವಾಗ ನಾನೂ ಜೊತೆಗಿದ್ದೆ. ಚೌಕಾಸಿ ಗೊತ್ತಿಲ್ಲದ ಅವಳು ಅದನ್ನು ಎಂಟು ರೂಪಾಯಿ ಕೊಟ್ಟು ತಂದಿದ್ದಕ್ಕೆ ಅಪ್ಪ ಬೈದಿದ್ದೂ ನೆನಪಿದೆ. ಅಲ್ಲದೆ ಆ ಎಂಟು ರೂಪಾಯಿ ಅಪ್ಪನ ಒಂದಿಡೀ ದಿನದ ಬೆವರಿನ ದುಡಿಮೆ ಕೂಡಾ.
ಅದಾಗಿ ಕೆಲವೇ ದಿನಗಳಲ್ಲಿ ಅಪ್ಪನನ್ನು ಮಣಿಪಾಲದ ಆಸ್ಪತ್ರೆಗೆ ಸೇರಿಸಿದ್ದರು. ಅವನ ಆರೈಕೆಗೆ ಹೋದ ಅಮ್ಮನ ಜೊತೆಗೆ ಈ ಉಗ್ಗವೂ ಹೋಗಿತ್ತು.
ಅಮ್ಮ ವಾರಕ್ಕೊಮ್ಮೆ ಮನೆಗೆ ಬಂದು ಹೋಗುತ್ತಿದ್ದರೂ ಅಪ್ಪನ ಸುಳಿವೇ ಇರಲಿಲ್ಲ. ಸ್ವಲ್ಪ ಹುಷಾರಾಗಿರುವುದಾಗಿಯೂ ಮುಂದಿನ ವಾರ ಕರೆದುಕೊಂಡು ಬರುವುದಾಗಿಯೂ ಅಮ್ಮ ಹೇಳುತ್ತಲೇ ಶಿವರಾತ್ರಿಯೂ ಸಮೀಪಿಸಿತ್ತು.
ಉಡುಪಿಯಿಂದ ಶೃಂಗೇರಿ ಮೂಲಕ ಕೊಪ್ಪಕ್ಕೆ ಹೋಗುವ ಸಂಜೆ ಏಳರ ಶಂಕರ ಕಂಪೆನಿಯ ಮಿನಿ ಬಸ್ಸಿಗೆ ಅವಳು ಬಂದಿಳಿಯುವುದೂ, ಭಜನೆ ಮಾಡುತ್ತಾ ಕುಳಿತಿರುತ್ತಿದ್ದ ನಾವು ಮಕ್ಕಳೆಲ್ಲ ಎದ್ದು ಹೋಗಿ ಬರಮಾಡಿಕೊಳ್ಳುವುದೂ, ಅವಳು ತಂದುಕೊಟ್ಟ ಪೆಪ್ಪರ್‌ಮಿಂಟ್ ಚಪ್ಪರಿಸುವುದೂ, ‘ಅಪ್ಪ ಹೇಗಿದ್ದಾನೆ? ಯಾವಾಗ ಬರ್ತಾನೆ?’ ಎಂದು ಪ್ರಶ್ನಿಸಿ ಅದೇ ಅಪ್ರಿಯ ಉತ್ತರ ಪಡೆಯುವುದೂ ಮಾಮೂಲಿಯೇ ಆಗಿಹೋಗಿತ್ತು.
ನಾವು ಬೆಳಿಗ್ಗೆ ಎದ್ದು ನೋಡುವಾಗ ಅಮ್ಮ ಇರುತ್ತಿರಲಿಲ್ಲ. ಬೆಳಕು ಹರಿಯುವ ಮುನ್ನವೇ ಎದ್ದು ಸುತ್ತಲಿನ, ಅಪ್ಪ ಕೆಲಸಕ್ಕೆ ಹೋಗುತ್ತಿದ್ದ ಊರಿನ ಹತ್ತಾರು ಮನೆ ಮೆಟ್ಟಿಲು ಹತ್ತಿಳಿದು ನಾಲ್ಕು ಕಾಸು ಒಟ್ಟುಗೂಡಿಸಿ ತರುವಾಗ ಹೊತ್ತು ಮಧ್ಯಾಹ್ನವೇ ಆಗಿರುತ್ತಿತ್ತು. ಬರಬರುತ್ತಾ ಕಾಡಿಬೇಡಿ ತರಬೇಕಾದ ಅಸಹಾಯಕತೆ ಅವಳದಾಗಿತ್ತು.
ಸೀರೆ ಸೆರಗಿನ ಗಂಟು ಬಿಚ್ಚಿ ಅದರಲ್ಲಿನ ಒಂದರಿAದ ಹತ್ತರವರೆಗಿನ ಒಂದು ಮುಷ್ಟಿ ನೋಟುಗಳಲ್ಲಿ ಕೆಲವನ್ನು ನಮ್ಮೆಲ್ಲರ ಹೊಟ್ಟೆಪಾಡು ಬಾಬ್ತಿಗಾಗಿ ಅಕ್ಕನ ಕೈಗಿತ್ತು ಒಂದೆರಡು ಹನಿ ಕಣ್ಣೀರು ಸುರಿಸಿ ತನ್ನ ಬಣ್ಣ ಮಾಸಿದ ಸೀರೆ ಸೆರಗಲ್ಲಿ ಒರಸಿಕೊಂಡು ಗುಡುಗುಡನೆ ಹೊರಟೇಬಿಡುತ್ತಿದ್ದಳು ಗಂಡನ ಸೇವೆಗೆ ಮಣಿಪಾಲದ ಕಡೆಗೆ.
ಈ ಬಾರಿ ಅಪ್ಪನನ್ನು ನೋಡಲು ನಾನೂ ಬರುವುದಾಗಿ ಹಠ ಹಿಡಿದು ಅತ್ತೂ ಕರೆದು, ತಡೆದು ನಿಂತಿದ್ದ ಅಕ್ಕನಿಂದ ತಪ್ಪಿಸಿಕೊಂಡು, ಅಮ್ಮನ ಹಿಂದೆ ಓಡಿದ್ದೆ ಹಾಕಿದ ಬಟ್ಟೆಯಲ್ಲಿ, ಬರಿಗಾಲಲ್ಲಿ (ಅಪ್ಪನ ಹೊರತಾಗಿ ಯಾರೂ ಚಪ್ಪಲಿ ಹಾಕುತ್ತಿರಲಿಲ್ಲ ಬಿಡಿ. ಅಮ್ಮನದು ಇಡೀ ಜೀವನವೇ ಬರಿಗಾಲು) ಅಕ್ಕಂದಿರ ಕೈಯಿಂದ ಬಿಡಿಸಿಕೊಂಡು ಗುಡ್ಡದ ಕಾಲುದಾರಿಯಲ್ಲಿ ಓಡಿ ಕಲ್ಲುಬೆಂಚ್ ಬಸ್ ಸ್ಟಾಪ್ ತಲುಪುವುದಕ್ಕೂ, ಉಡುಪಿ ಮಿನಿ ಬಂದು ನಿಲ್ಲುವುದಕ್ಕೂ, ಅಮ್ಮ ಬಸ್ ಹತ್ತುವುದಕ್ಕೂ ಸರಿಹೋಗಿತ್ತು.
ಹೊರಡಲು ಅನುವಾಗಿದ್ದ ಬಸ್ಸನ್ನು ಮುಂಬಾಗದಿಂದಲೇ ಹಾಯ್ದು ರಸ್ತೆ ದಾಟಿ ಡೋರ್ ಹತ್ತಿದ್ದೆ. ಡ್ರೈವರ್ ಅಣ್ಣನ ಕೆಂಗಣ್ಣಿಗೆ ಗುರಿಯಾಗಿದ್ದರೂ ತಡಬಡಿಸಿದ ಅಮ್ಮ ಕೈ ಹಿಡಿದು ಮೇಲೆ ಹತ್ತಿಸಿಕೊಂಡಿದ್ದಳು. ಘಟನೆಯ ಅರಿವಿರದ ಡ್ರೈವರ್ ಕಂಡಕ್ಟರಾದಿಯಾಗಿ ಬಸ್ಸಿನಲ್ಲಿದ್ದ ಪ್ರಯಾಣಿಕರು ಅಮ್ಮನಿಗೆ ಬೈದಿದ್ದರು. ಅದಾವುದನ್ನೂ ಲೆಕ್ಕಿಸದೇ ನಿರ್ಲಿಪ್ತವಾಗಿ ಕುಳಿತ ಅಮ್ಮನ ತೊಡೆಯ ಮೇಲೆ ನನ್ನ ಪ್ರಯಾಣ ಮುಂದುವರೆದಿತ್ತು.
ಶೃಂಗೇರಿಯವರೆಗಿನ ಪರಿಚಿತ ರಸ್ತೆ ಮುಗಿದು ಬಸ್ಸು ಆಗುಂಬೆಯ ಮಾರ್ಗ ಹಿಡಿದಾಗ ಕಿಟಕಿಯ ಹೊರಗೆ ನೋಡುವುದರಲ್ಲಿ ಎಲ್ಲವನ್ನೂ ಮರೆತಿದ್ದೆ. ಆಗುಂಬೆ ಬಸ್ಟಾಂಡ್ ಹೋಟೆಲಿನಲ್ಲಿ ನನಗೆ ಗೋಲಿಬಜ್ಜಿ ಕೊಡಿಸಿ ಅವಳು ಬರೀ ನೀರು ಕುಡಿದಿದ್ದಳು.
ಘಾಟಿ ರಸ್ತೆ, ನನಗೆ ಹೊಸದು. ಭಯಂಕರ ಕುತೂಹಲ. ನನ್ನ ಯಾವ ಪ್ರಶ್ನೆಗೂ ಅಮ್ಮ ಉತ್ತರ ಕೊಡದೇ ಶೂನ್ಯವನ್ನು ದಿಟ್ಟಿಸತೊಡಗಿದಾಗ ಯಾಕೋ ಬಹಳ ಹಿಂಸೆಯಾಗಿತ್ತು.
ಮಣಿಪಾಲ ತಲುಪಿದಾಗ ಆಸ್ಪತ್ರೆಯ ಅಷ್ಟೆತ್ತರದ ಕಟ್ಟಡಗಳು ನನ್ನಲ್ಲಿ ಭಯ ಹುಟ್ಟಿಸಿದ್ದವು. ಮೊದಲ ಬಾರಿಗೆ ಲಿಫ್ಟ್ನಲ್ಲಿ ನಿಂತು ಏರಿ ವಾರ್ಡ್ ತಲುಪುವಾಗ ಏನೋ ಮಜ ಎನಿಸಿದ್ದರೂ ಆ ಭಾವ ಕ್ಷಣಿಕವಾಗಿತ್ತು.
ರಗ್ಗು ಹೊದಿಸಿ ಹಾಸಿಗೆಯಲ್ಲಿ ಮಲಗಿಸಿದ್ದ ಅಪ್ಪನ ಮೂಗಿನೊಳಗೆ ತೂರಿದ್ದ ಕೊಳವೆಗಳೂ, ಮಂಚದ ಕೆಳಗಿದ್ದ ಪಾತ್ರೆಗೆ ಕೊಳವೆಯ ಮೂಲಕ ಹನಿಹನಿಯಾಗಿ ಬಂದು ಬೀಳುತ್ತಿದ್ದ ರಕ್ತ ಮಿಶ್ರಿತ ಅವನ ಮೂತ್ರವೂ, ಕೆಟ್ಟ ವಾಸನೆಯೂ, ಅವನ ಗಂಟಲಿನ ಗೊರ ಗೊರ ಸದ್ದೂ…..
ನನ್ನನ್ನು ಕಾಣುತ್ತಲೆ ಅವನ ನಿಸ್ತೇಜ ಕಣ್ಣಲ್ಲಿ ಹೊಳಪೊಂದು ಮೂಡಿ ಕ್ಷಣಾರ್ಧದಲ್ಲಿ ಮಂಜಾಗಿತ್ತು. ಗಂಟಲ ಸದ್ದು ಜೋರಾಗುವುದರ ಜೊತೆಗೆ ಅವನ ಕೈ ನಿಧಾನವಾಗಿ ಮೇಲೇರಿ ನನ್ನ ಭುಜದ ಮೇಲೆ ಬಿದ್ದಿತ್ತು. ಬೈನೇ ದಬ್ಬೆಯ ಮೇಲೆ ನೂಲಣಬೆ ಬೆಳೆದಂತೆ ಇರುತ್ತಿದ್ದ ಅವನ ಕೈ ಮೂಳೆಗಂಟಿದ ಚರ್ಮದಂತಾಗಿತ್ತು. ನಿತ್ಯವೂ ಅಡಿಕೆ ಮರ ಏರಿ ಏರಿ ದಡ್ಡುಗಟ್ಟಿದ್ದರೂ ಕೆಂಪಗೆ ಬಿಸಿಯಾಗಿರುತ್ತಿದ್ದ ಹಸ್ತ ಹುರುಕು ಬಂದು ಚರ್ಮ ಸುಲಿದು ಹೋಗಿ ತಣ್ಣಗಿತ್ತು.
ಎಷ್ಟು ಹೊತ್ತಾದರೂ ಅವನ ಶರೀರದಲ್ಲಿ ಚಲನೆಯೇ ಇಲ್ಲದ್ದು ನೋಡಿ ಕಾಲಿಗೆ ಹೊದಿಸಿದ್ದ ರಗ್ಗು ತೆಗೆಯಲು ಪ್ರಯತ್ನಿಸಿದ್ದೆ, ಅಮ್ಮ ತಡೆದಿದ್ದಳು.
ಅಮ್ಮ ಹೊರಗೆ ಹೋದಾಗ ರಗ್ಗು ಸರಿಸಿ ನೋಡಿಯೇಬಿಟ್ಟೆ. ಶವದ ಕಾಲುಗಳಂತೆ ಊದಿಕೊಂಡಿದ್ದ, ಬಿಳಚಿಕೊಂಡು ಅಲ್ಲಲ್ಲಿ ಚರ್ಮ ಸುಲಿದುಹೋಗಿ ಕೀವು ಸೋರುತ್ತಿದ್ದ ಅವನ ಕಾಲುಗಳು ತಣ್ಣಗೆ ಕೊರೆದವು. ಅಟ್ಟದಲ್ಲಿ ಇಲಿ ಸತ್ತಾಗ ಬರುವಂತಹ ವಾಸನೆಯೂ ಮೂಗಿಗಡರಿತು.
ಅಮ್ಮ ಹೇಳಿದ್ದು ಬರೀ ಸುಳ್ಳು ಎಂಬುದು ಖಾತ್ರಿಯಾಗಿತ್ತು.
ಆಚೀಚಿನ ವಾರ್ಡುಗಳೂ, ನೂರಾರು ರೋಗಿಗಳೂ, ಕೈ ಮುರಿದುಕೊಂಡವರೂ, ಕಾಲು ಮುರಿದುಕೊಂಡವರೂ, ಡಾಕ್ಟರು ನರ್ಸಮ್ಮಗಳ ಓಡಾಟವೂ, ಗಡಿಬಿಡಿಯೂ, ನರಳುವಿಕೆಗಳೂ, ಚೀರಾಟಗಳೂ… ಆಸ್ಪತ್ರೆಯನ್ನೇ ನೋಡಿರದ ನನಗೆ ವಿಚಿತ್ರವೆನಿಸಿತ್ತು. ನರಕವೆಂದರೆ ಇದೇ ಇರಬಹುದೇನೋ ಎನಿಸಿತ್ತು.
ಮರುದಿನ ಬೆಳಿಗ್ಗೆ ಊರಿಗೆ ಹೊರಡು ಬಸ್ ಹತ್ತಿಸಿ ಕಳಿಸುತ್ತೇನೆ ಎಂಬ ಅವಳ ಮಾತನ್ನು ನಿರಾಕರಿಸಿದ್ದೆ. ಅಪ್ಪನ ಜೊತೆಗೇ ಹಿಂದಿರುಗುವುದಾಗಿ ಹಟ ಹಿಡಿದಿದ್ದೆ. ಅವನ ಉಪಚಾರಕ್ಕೆ ದಾದಿಯರು ಬಂದಾಗ ನನ್ನನ್ನು ಹೊರಗೆ ಕಳಿಸುವ ಪ್ರಯತ್ನ ಮಾಡಿ ಸೋತಿದ್ದರು. ಆಗ ಅವನ ನಿಜಸ್ಥಿತಿ ಇನ್ನಷ್ಟು ಬಯಲಾಗಿತ್ತು. ಮರದಿಂದ ಬಿದ್ದಾಗಲೇ ಸೊಂಟ ಮುರಿದು ದೇಹದ ಕೆಳ ಅರ್ಧ ಭಾಗವೇ ಸತ್ತುಹೋಗಿತ್ತು.
ಆಸ್ಪತ್ರೆ ಎದುರಿನ ಹೋಟೆಲಿಗೆ ಕರೆದೊಯ್ದ ಅಮ್ಮನನ್ನು ಮಸಾಲೆ ದೋಸೆಗಾಗಿ ಪೀಡಿಸಿದ್ದೆ. ಅದು ನನಗೆ ಅಪರಿಚಿತವಾಗಿದ್ದರೂ ಎದುರಿನ ಟೇಬಲ್ಲಿನವರು ತಿನ್ನುತ್ತಿದ್ದುದು ನೋಡಿ ನಾನೂ ಮರುಳಾಗಿದ್ದೆ (ಅಪ್ಪ ಸಾಯುತ್ತಾ ಮಲಗಿರುವಾಗ ನನ್ನ ಬಾಯಿ ಚಪಲ! ಇಂದಿಗೂ ನೆನೆದು ನಾಚಿಕೆ ಪಟ್ಟುಕೊಳ್ಳುತ್ತೇನೆ).
ನನಗೆ ಮಸಾಲೆ ಕೊಡಿಸಿದ ಅಮ್ಮ ತಾನು ಮಾತ್ರ ಸಿಂಗಲ್ ಇಡ್ಲಿ ತಿಂದು ಕಾಫಿ ಕುಡಿದಿದ್ದಳು.
ಇನ್ನೂ ವಿಚಿತ್ರವೆಂದರೆ ಮಧ್ಯಾಹ್ನ ಹೋಟೆಲಿನವ ಪ್ಲೇಟ್ ಊಟ ತಂದಿಟ್ಟಾಗ ಅಮ್ಮ ತನ್ನ ಪ್ಲೇಟಿನ ಅನ್ನದಲ್ಲಿ ಅರ್ಧ ಭಾಗವನ್ನೂ, ಅರ್ದ ಕಪ್ ಸಾರನ್ನೂ ಈ ಉಗ್ಗದಲ್ಲಿ ತುಂಬಿಕೊಂಡಳು (ಹೋಟೆಲ್ಲಿನವ ಅದಕ್ಕೆ ಮತ್ತೊಂದು ಸೌಟು ಅನ್ನ ತಂದು ಹಾಕಿದ್ದ) ಅದು ಅಪ್ಪನಿಗಾಗಿ ಎಂದುಕೊಂಡಿದ್ದು ತಪ್ಪಾಗಿತ್ತು. ಅಪ್ಪನಿಗೆ ಘನ ಆಹಾರ ಇಳಿಯುತ್ತಿರಲಿಲ್ಲ. ಅದು ಅಮ್ಮನ ರಾತ್ರಿಯೂಟವಾಗಿತ್ತು. ನನಗೆ ಮಾತ್ರ ಫ್ರೆಷ್ ಪ್ಲೇಟೂಟ ಕೊಡಿಸುತ್ತಿದ್ದಳು.
ಅಮ್ಮನ ಒತ್ತಾಯಕ್ಕೆ, ಮೇಷ್ಟ ಹೆದರಿಕೆಗೆ ಮಾರನೇ ದಿನ ನಾನು ಊರಿಗೆ ಹಿಂದಿರುಗಲೇಬೇಕಾಯ್ತು.
ಆದರೆ ಅವರಿಬ್ಬರೂ ಇಂದಿಗೂ ಮನೆಗೆ ಹಿಂದಿರುಗಲೇ ಇಲ್ಲ. ಹಿಂದಿರುಗಿದ್ದು ಈ ಉಗ್ಗ ಮಾತ್ರ.
•••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು
•••••••••••••••
( *ಪುಸ್ತಕದ ಓದಿಗಾಗಿ ಆಸಕ್ತರು ಆಹರ್ನಿಶಿ ಪ್ರಕಾಶನ, ಶಿವಮೊಗ್ಗ 9449174662 ಇವರನ್ನು ಸಂಪರ್ಕಿಸಲು ಕೋರಿದೆ.*)

