ಆನೆಗಳು ಮತ್ತು ಆಶಾ ಕಾರ್ಯಕರ್ತೆಯರು ಮಾರಾಟಕ್ಕಿದ್ದಾರೆ, ತಮ್ಮ ಬದುಕುವ ಹಕ್ಕುಗಳಿಗಾಗಿ…..
1 min read
ಪೋಷಕರು ಬೇಕಾಗಿದ್ದಾರೆ……,
ಆನೆಗಳಿಗೆ ಮತ್ತು ಆಶಾ ಕಾರ್ಯಕರ್ತೆಯರಿಗೆ……..!!
ಅಥವಾ
ಇನ್ನಷ್ಟು ಕಠಿಣವಾಗಿ ಹೇಳಬೇಕೆಂದರೆ ಆನೆಗಳು ಮತ್ತು ಆಶಾ ಕಾರ್ಯಕರ್ತೆಯರು ಮಾರಾಟಕ್ಕಿದ್ದಾರೆ, ತಮ್ಮ ಬದುಕುವ ಹಕ್ಕುಗಳಿಗಾಗಿ…..



ಕ್ಷಮಿಸಿ, ಪದಗಳು ಕಠೋರತೆಯನ್ನು ಬಿಂಬಿಸುತ್ತಿರಬಹುದು. ಆದರೆ ಆನೆಗಳು ನಮ್ಮ ಪರಿಸರದ ಸಹಚರರು, ಆಶಾ ಕಾರ್ಯಕರ್ತೆಯರು ನಮ್ಮ ಅಕ್ಕ, ತಂಗಿ, ತಾಯಿ ಮತ್ತು ಸಹಪಾಠಿಗಳು. ಅದಕ್ಕಾಗಿ ಅವರ ಪರಿಸ್ಥಿತಿ ಕಂಡು ಈ ಕಾಠಿಣ್ಯ ಅನಿಸಿಕೆ….
ಸ್ವಲ್ಪ ವಾಸ್ತವ ನೆಲೆಯಲ್ಲಿ ಹೇಳಬೇಕೆಂದರೆ
ಕೊಲೆಗಳಿಂದ, ಅಪಘಾತಗಳಿಂದ, ವಂಚನೆಗಳಿಂದ, ಭ್ರಷ್ಟಾಚಾರದಿಂದ, ಜಾತೀಯತೆಯಿಂದ, ನಾಯಿ ಕಚ್ಚುವುದರಿಂದ, ಹಾವು ಕಚ್ಚುವುದರಿಂದ ಸಾಯುತ್ತಿರುವ ಬಹುದೊಡ್ಡ ಸಂಖ್ಯೆಗಳಿಗೆ ಹೋಲಿಸಿದರೆ ಆನೆ ಹಾವಳಿಯಿಂದ ಸಾಯುತ್ತಿರುವವರ ಸಂಖ್ಯೆ ತೀರಾ ಅತ್ಯಲ್ಪ.
ಹೌದು, ಸಾವು ಒಂದೇ ಇರಲಿ, ಎರಡೇ ಇರಲಿ ಅದನ್ನು ಗಂಭೀರವಾಗಿ ಪರಿಗಣಿಸಬೇಕು, ಸಮಸ್ಯೆ ಬಗೆಹರಿಸಬೇಕು. ಆದರೆ ಆನೆಗಳಿಗೆ ಕೊಡುತ್ತಿರುವ ಶಿಕ್ಷೆ, ಇದೇ ಅಪರಾಧಕ್ಕಾಗಿ ಮನುಷ್ಯ ಮತ್ತು ಇತರೆ ಪ್ರಾಣಿಗಳಿಗೆ ಕೊಡುತ್ತಿರುವ ಶಿಕ್ಷೆಯನ್ನು ಗಮನಿಸಿದಾಗ ತುಂಬಾ ಜಾಸ್ತಿ ಅನಿಸುತ್ತಿದೆ.
ನಿಜ, ನಗರದಲ್ಲಿ ವಾಸಿಸುತ್ತಿರುವ ನನಗೆ ಆನೆಗಳ ಕಾಟದ ಬಗ್ಗೆ ಸಂಪೂರ್ಣ ಅರಿವಿಲ್ಲ. ಆದರೆ ಆನೆ ಸಂಘರ್ಷದ ವ್ಯಾಪ್ತಿಯಲ್ಲಿರುವವರ ನೋವುಗಳ ಬಗ್ಗೆ ಖಂಡಿತ ನಮಗೆ ಸಹಾನುಭೂತಿಯಿದೆ. ಮನುಷ್ಯ ಮತ್ತು ಆನೆಯ ಆಯ್ಕೆಯಲ್ಲಿ ನನ್ನ ಆಯ್ಕೆ ಮನುಷ್ಯನೇ ಮೊದಲ ಆದ್ಯತೆ. ಅದರಲ್ಲಿ ಯಾವುದೇ ಗೊಂದಲವಿಲ್ಲ. ಆದರೆ ಈ ಸಂಘರ್ಷವನ್ನು ನಿಲ್ಲಿಸಲು ಆನೆಗಳನ್ನು ಓಡಿಸುವ ಅಥವಾ ಇನ್ನೊಂದು ಪ್ರದೇಶಕ್ಕೆ ಅಟ್ಟುವ ಕಾರ್ಯವಿಧಾನ ನಿಜಕ್ಕೂ ಒಳ್ಳೆಯ ಪರ್ಯಾಯ ಮಾರ್ಗವೇ, ಅದನ್ನು ವಿರೋಧಿಸುವ ಜನಪ್ರತಿನಿಧಿಗಳ ಆಯ್ಕೆ ಸರಿಯಾದ ನಿರ್ಧಾರವೇ ಅಥವಾ ಆನೆ ದಾಳಿಯಿಂದ ಮನುಷ್ಯ ಮತ್ತು ಬೆಳೆಗಳನ್ನು ರಕ್ಷಿಸಲು ಇರಬಹುದಾದ ಸಮಾಧಾನಕರ ಪರ್ಯಾಯ ನಮ್ಮಿಂದ ಸಾಧ್ಯವಿಲ್ಲವೇ ಎಂಬುದಷ್ಟೇ ನಮ್ಮ ಪ್ರಶ್ನೆ. ಈ ಬಗ್ಗೆ ಹೆಚ್ಚು ಗಂಭೀರವಾಗಿ ಯೋಚಿಸಬೇಕಿದೆ…..
ಆನೆಗಳು ಮೂಕ ಪ್ರಾಣಿಗಳು. ಅವು ನಮ್ಮಂತೆ ಕ್ರಿಮಿನಲ್ ಗಳಲ್ಲ, ವಂಚಕವಲ್ಲ. ಆದರೆ ಕೆಲವೊಮ್ಮೆ ಮನುಷ್ಯನನ್ನು ಸಾಯಿಸುವ ಕಠಿಣ ನಿರ್ಧಾರಕ್ಕೆ ಬರುವುದು ಆನೆಗಳು ಮಾಡುವ ತಪ್ಪು. ಕಾರಣವೇನೇ ಇರಲಿ, ಯಾರೇ ಇರಲಿ ಆಹಾರಕ್ಕಾಗಿ ಮತ್ತು ರಕ್ಷಣೆಗಾಗಿ ಮಾಡುವ ಹತ್ಯೆಗಳನ್ನು ಹೊರತುಪಡಿಸಿ ಬೇರೆ ರೀತಿಯ ಅಮಾಯಕರಿಗೆ, ನಿರುಪದ್ರವಿಗಳಿಗೆ ತೊಂದರೆ ಕೊಡುವುದು ಅಪರಾಧ. ಅದು ಪ್ರಾಣಿಯೇ ಮಾಡಲಿ, ಮನುಷ್ಯನೇ ಮಾಡಲಿ ಅದರ ವಿರುದ್ಧ ಕ್ರಮ ಕೈಗೊಳ್ಳಬೇಕು.
ಕಾಡಿನ ನ್ಯಾಯ ಮತ್ತು ನಾಡಿನ ನ್ಯಾಯ….
ನಾಡಿನ ನ್ಯಾಯದಲ್ಲಿ ಹಿಂದೆ ರಾಜಪ್ರಭುತ್ವದಲ್ಲಿದ್ದಂತೆ ಬಲಿಷ್ಠ ವ್ಯಕ್ತಿ ದುರ್ಬಲ ವ್ಯಕ್ತಿಗಳನ್ನು ಶೋಷಿಸುವುದೇ ಆಗಿತ್ತು. ಆದರೆ ಪ್ರಜಾಪ್ರಭುತ್ವ ವ್ಯವಸ್ಥೆ ಬಂದ ನಂತರ ಎಲ್ಲರಿಗೂ ಬದುಕುವ ಹಕ್ಕು ಮತ್ತು ಘನತೆಯನ್ನು ನೀಡಲಾಗಿದೆ. ಅದಕ್ಕೆ ಕಾರಣ ಮನುಷ್ಯನ ಪ್ರಜ್ಞಾವಂತಿಕೆ, ಅದರ ಮೂಲಕ ನಿರ್ಮಿಸಿಕೊಂಡ ನಾಗರಿಕ ಸಮಾಜ. ಇಷ್ಟಾದರೂ ನಾಡಿನ ನ್ಯಾಯ ಬಲಿಷ್ಠರ ಪರವಾಗಿಯೇ ಇದೆ. ಆದರೆ ಕಾಡಿನ ನ್ಯಾಯ ಮತ್ತದೇ ಬಲಿಷ್ಠರ ಉಳಿವು. ಕಾಡು ಆನೆ, ಹುಲಿ, ಚಿರತೆ, ಜಿಂಕೆ ಮುಂತಾದ ಪ್ರಾಣಿಗಳಿಗೆ ಸೇರಿದ್ದು. ಆ ಕಾಡಿಗೆ ಮಾನವ ಸಮಾಜಕ್ಕಿರುವಂತೆ ಒಂದು ವ್ಯಾಪ್ತಿ ಇಲ್ಲ. ಅದಕ್ಕೆ ಸಂವಿಧಾನವೂ ಇಲ್ಲ. ಆನೆ ನಡೆದದ್ದೇ ದಾರಿ. ಅದರ ಮಧ್ಯೆ ಮನುಷ್ಯರು ಸಿಕ್ಕಿದಾಗ ಬಹಳಷ್ಟು ಸಾರಿ ಆನೆ ಯಾವುದೇ ತೊಂದರೆ ಕೊಡುವುದಿಲ್ಲ. ತೀರಾ ಅಪರೂಪಕೊಮ್ಮೆ ಮನುಷ್ಯರನ್ನು ಕೊಲ್ಲುತ್ತದೆ.
ಇಲ್ಲಿ ನಾಡಿನ ಹಿಂಸಾತ್ಮಕ ಸನ್ನಿವೇಶವನ್ನು ಗಮನಿಸಿದಾಗ ನಾಡಿನ ನ್ಯಾಯವೇ ಕುಲಗೆಟ್ಟು ಹೋಗಿದೆ, ಅಮಾನವೀಯವಾಗಿದೆ, ಅನಾಗರಿಕವಾಗಿದೆ ಅನಿಸುತ್ತದೆ. ಅದಕ್ಕೆ ಹೋಲಿಸಿದಾಗ ಕಾಡಿನ ನ್ಯಾಯವೇ ಹೆಚ್ಚು ಜೀವ ಪರವಾಗಿದೆ. ಕಾಡಿನ ನ್ಯಾಯದಲ್ಲಿ ಯಾವುದೇ ಪ್ರಾಣಿಗಳು ರಕ್ಷಣೆ ಮತ್ತು ಆಹಾರಕ್ಕೆ ಹೊರತುಪಡಿಸಿ ಇನ್ನೊಂದು ಪ್ರಾಣಿಯನ್ನು ಹಿಂಸಿಸುವುದು ತೀರಾ ಅಪರೂಪ. ಆದರೆ ನಾಡಿನ ನ್ಯಾಯದಲ್ಲಿ ಮನುಷ್ಯ ಪ್ರಾಣಿ ಅನಾವಶ್ಯಕವಾಗಿ ಎಲ್ಲವೂ ನನಗೇ ಬೇಕು ಎಂದು ಎಲ್ಲರನ್ನೂ ಬೇಕಂತಲೇ, ಯಾವುದೇ ಪ್ರಚೋದನೆಯೂ ಇಲ್ಲದೆ ಹಿಂಸಿಸುತ್ತಾನೆ. ಹಣ ಪಡೆದು ಸುಫಾರಿ ಕೊಲೆಗಳನ್ನು ಮಾಡುತ್ತಾನೆ. ತನ್ನ ಕೆಲಸಕ್ಕೆ ಸಂಬಳ ಕೊಟ್ಟರೂ ಜನರ ರಕ್ತ ಹೀರಿ ಲಂಚ ಪಡೆಯುತ್ತಾನೆ. ಇಂಥ ಪರಿಸ್ಥಿತಿಯಲ್ಲಿ ನಾವೇ ಕೆಟ್ಟು ಕೆರಹಿಡಿದಿರುವಾಗ ಕಾಡಿನ ನ್ಯಾಯವನ್ನು ಧಿಕ್ಕರಿಸಿ, ನಾಡಿನ ನ್ಯಾಯವನ್ನು ಕಾಡಿನ ಮೇಲೆ ಹೇರಲು ಹೊರಟಿರುವುದು ತಪ್ಪಾಗುತ್ತದೆ….
ತೊಂದರೆ ಇದೇ ನಿಜ. ಸತ್ತವರು ನಮ್ಮ ಮನೆಯವರಲ್ಲ ನಿಜ, ಸತ್ತವರ ಬಗ್ಗೆ ಸಹಾನುಭೂತಿ ಇದೆ. ಮುಂದೆ ಸಾವುಗಳಾಗದಂತೆ ನೋಡಿಕೊಳ್ಳುವ ಕರ್ತವ್ಯವೂ ಇದೆ. ಆದರೆ ಅದಕ್ಕಾಗಿ ಆನೆಗಳನ್ನು ಓಡಿಸುವ ವಿಧಾನ ಅಷ್ಟು ಒಳ್ಳೆಯದಲ್ಲ. ಅದಕ್ಕಿಂತ ಉತ್ತಮ ಪರ್ಯಾಯ ಮಾರ್ಗಗಳನ್ನು ಹುಡುಕಿ, ಬೇರೆ ಬೇರೆ ವಿಧಾನಗಳ ಮೂಲಕ ಆನೆ ಮತ್ತು ಮನುಷ್ಯನ ಸಂಘರ್ಷವನ್ನು ತಡೆಯುವ ಉಪಾಯವಿದ್ದರೆ ಅದನ್ನು ಪ್ರಯೋಗಿಸುವುದು ಒಳ್ಳೆಯದು.
ನಾಡಿನ ಕ್ರಿಮಿನಲ್ ಗಳ ಚಟುವಟಿಕೆಗಳನ್ನು ನೋಡಿದಾಗ, ಅವರು ಬಹಿರಂಗವಾಗಿಯೇ ರಾಜಾರೋಷವಾಗಿ ಓಡಾಡುತ್ತಿರುವಾಗ, ಕಾಡಿನ ಅಪರೂಪದ ಕೆಲವೇ ಬೃಹತ್ ಗಾತ್ರದ ಆನೆಗಳ ಬಗ್ಗೆ ಈ ಮನುಷ್ಯ ಪ್ರಾಣಿ ತೋರಿಸುತ್ತಿರುವ ಕ್ರೌರ್ಯ ಸ್ವಲ್ಪ ಹೆಚ್ಚೇ ಅನಿಸುತ್ತದೆ. ನಾವಿರುವುದು ಸುಮಾರು ಏಳು ಕೋಟಿ ಜನ. ಆನೆಗಳಿರುವುದು ಕೆಲವೇ ಅಂದರೆ ಸುಮಾರು ಸಾವಿರಗಳ ಲೆಕ್ಕದಲ್ಲಿ. ಅದನ್ನು ಇನ್ನಷ್ಟು ನಾಗರಿಕವಾಗಿ ನಿರ್ವಹಿಸಬೇಕಿದೆ.
ನಾಡಿನ ನ್ಯಾಯದಲ್ಲಿ ಎಷ್ಟೋ ಮನೆಗಳಲ್ಲಿ ವಯಸ್ಸಾದ ತಂದೆ ತಾಯಿಯರನ್ನು ನೋಡಿಕೊಳ್ಳಲು ಮಕ್ಕಳು ನ್ಯಾಯ ಪಂಚಾಯಿತಿ ಸೇರಿ, ನೀನು ಅಷ್ಟು ದಿನ, ನೀನು ಅಷ್ಟು ದಿನ, ನೀನು ಅಷ್ಟು ದುಡ್ಡು ಕೊಡು, ನಾನಷ್ಟು ಕೊಡುವೆ ಎನ್ನುವ ನ್ಯಾಯ ಪಂಚಾಯಿತಿಯ ರೀತಿಯಲ್ಲಿ ಈ ಆನೆಗಳ ತಳ್ಳುವಿಕೆಯಲ್ಲಿ ಕಂಡು ಬರುತ್ತಿರುವುದು ವಿಷಾದನೀಯ…..
ಇದೇ ನ್ಯಾಯವನ್ನು ಆಶಾ ಕಾರ್ಯಕರ್ತೆಯರಿಗೂ ಅನ್ವಯಿಸಬೇಕಾಗುತ್ತದೋ ಏನೋ. ಏಕೆಂದರೆ ಮಾನ್ಯ ಮುಖ್ಯಮಂತ್ರಿಗಳು ಕೋಟಿ ಕೋಟಿ ಉದ್ಯಮ, ವ್ಯಾಪಾರ, ವ್ಯವಹಾರ ಕುದುರಿಸಲು ಜಪಾನ್ ಗೆ ಹೋಗಿದ್ದರೆ, ಇಲ್ಲಿ ವೈಯಕ್ತಿಕವಾಗಿ ಕೇವಲ 15000 ಸಂಬಳ ಅಂದರೆ ಒಟ್ಟಾರೆಯಾಗಿ ಸುಮಾರು 300 ಕೋಟಿ ಹಣಕ್ಕಾಗಿ ನಮ್ಮದೇ ಅಕ್ಕತಂಗಿಯರು ಚಳಿ ಮಳೆಯಲ್ಲಿ ಪ್ರತಿಭಟನೆ ಮಾಡುತ್ತಿರುವುದು ಆನೆಗಳ ಪರಿಸ್ಥಿತಿಯನ್ನೇ ನೆನಪಿಸುವಂತಿದೆ. ಆನೆಗಳಿಗೂ ಪೋಷಕರು ಬೇಕಾಗಿದ್ದಾರೆ, ಆಶಾ ಕಾರ್ಯಕರ್ತೆಯರಿಗೂ ಪೋಷಕರು ಬೇಕಾಗಿದ್ದಾರೆ.
ಸರ್ಕಾರಕ್ಕೆ ಯೋಗ್ಯತೆ ಇದೆಯೋ ಇಲ್ಲವೋ ಗೊತ್ತಿಲ್ಲ. ಆದರೆ ಕರ್ನಾಟಕದ ದೊಡ್ಡ ದೊಡ್ಡ ಉದ್ದಿಮೆದಾರರು, ವ್ಯಾಪಾರಸ್ಥರು, ಪ್ರಖ್ಯಾತರು, ಕುಖ್ಯಾತರು ಕನಿಷ್ಠ ನಮ್ಮ ಸಂಪಾದನೆಯ ಲಾಭದಲ್ಲಿ ಕೇವಲ ಶೇಕಡ ಒಂದರಷ್ಟು ತೆರಿಗೆ ರೂಪದ ಸೆಸ್ಸನ್ನು ನೀಡಿದರೂ ಆಶಾ ಕಾರ್ಯಕರ್ತರ ಬೇಡಿಕೆ ಈಡೇರುತ್ತದೆ. ಅಷ್ಟನ್ನೂ ನಾವು ಮಾಡಲು ಸಾಧ್ಯವಾಗುತ್ತಿಲ್ಲ.
ಅನೇಕ ಉತ್ಸವಗಳಿಗೆ, ಮನರಂಜನೆಗಳಿಗೆ ಹಲವಾರು ಕೋಟಿ ದುಂದು ವೆಚ್ಚ ಮಾಡುವ ನಾವು, ಹೊಟ್ಟೆಪಾಡಿಗಾಗಿ ದುಡಿಯುತ್ತಿರುವ ನಮ್ಮದೇ ಹೆಣ್ಣು ಮಕ್ಕಳಿಗೆ ಕನಿಷ್ಠ ಗೌರವದನ ಕೊಡದಿರುವುದು ನಿಜಕ್ಕೂ ನಾಚಿಕೆಗೇಡು.
ಸಾಕಲು ಸಾಧ್ಯವಾಗದಿದ್ದರೆ, ಗೌರವ ಘನತೆಯನ್ನು ಕಾಪಾಡಲು ಆಗದಿದ್ದರೆ ಆನೆಗಳನ್ನು, ಆಶಾ ಕಾರ್ಯಕರ್ತೆಯರನ್ನು ಮಾರಿಬಿಡಿ ಮಾನ್ಯ ಮುಖ್ಯಮಂತ್ರಿಗಳೇ. ಬೇರೆ ರಾಜ್ಯದವರಾದರು ಅವರನ್ನು ಚೆನ್ನಾಗಿ ನೋಡಿಕೊಳ್ಳಬಹುದು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

