ರೈತರಿಗೇ ಸಿಗಲಿ ಹೆಚ್ಚುವರಿ ಹಣ…..
1 min read
ರೈತರಿಗೇ ಸಿಗಲಿ ಹೆಚ್ಚುವರಿ ಹಣ
ಚಿಕ್ಕಮಗಳೂರು: ರಾಜ್ಯ ಸರ್ಕಾರ ಹಾಲಿಗೆ 8 ರೂಪಾಯಿ ಹೆಚ್ಚಳ ಮಾಡಿದೆ ಅದರಲ್ಲಿ 7 ರುಪಾಯಿ ರೈತರಿಗೆ ನೀಡುವುದಾಗಿ ಹೇಳಿದೆ. ಇದು ಸ್ವಾಗತಾರ್ಹ ವಿಚಾರ. ಆದರೆ ರೈತರಿಗೆ ನೀಡುವ ಹಣ ಎಷ್ಟು. ಗ್ರಾಹಕರಿಂದ ವಸೂಲಿ ಮಾಡುವ ಹಣ ಎಷ್ಟು ಎನ್ನುವ ಬಗ್ಗೆಯೂ ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದು ಸಾಮಾಜಿಕ ಹೋರಾಟಗಾರ ಹೊಲದಗದ್ದೆ ಗಿರೀಶ್ ಒತ್ತಾಯಿಸಿದ್ದಾರೆ.
ರೈತರಿಂದ ಹಾಲು ಸಂಗ್ರಹಣೆ ಮಾಡುವಾಗ ಹಾಲಿನ ಡಿಗ್ರಿ ಪರಿಶೀಲನೆ ಮಾಡಲಾಗುತ್ತದೆ. ಉತ್ತಮ ಗುಣಮಟ್ಟದ ಹಾಲು ಸರಬರಾಜು ಮಾಡುವ ರೈತರಿಗೆ ಪ್ರತಿ ಲೀಟರ್ ಗೆ ಸಹಾಯಧನ ಹೊರತುಪಡಿಸಿ 35 ರೂ. ನೀಡಲಾಗುತ್ತಿದೆ. ಪ್ರಸ್ತುತ ಹಾಲಿನ ದರ ಹೆಚ್ಚಳದ ಹಿನ್ನೆಲೆಯಲ್ಲಿ 7 ರೂ. ರೈತರಿಗೆ ಹೆಚ್ಚು ನೀಡಿದರೂ 42 ರೂ. ಆಗಲಿದೆ. ಆದರೆ ಗ್ರಾಹಕರಿಗೆ ಮಾರಾಟ ಮಾಡುವುದು 64 ರೂ.ಗೆ ಇದು ಎಷ್ಟರಮಟ್ಟಿಗೆ ಸರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ರೈತರಿಂದ ಹಾಲು ಸಂಗ್ರಹಣೆ ಮಾಡುವಾಗ ಹಾಲಿನಲ್ಲಿರುವ ಪೌಷ್ಟಿಕಾಂಶದ ಜಿಡ್ಡಿನ ಪ್ರಮಾಣವನ್ನು ಪರಿಶೀಲನೆ ಮಾಡಲಾಗುತ್ತದೆ. ಆದರೆ ಗ್ರಾಹಕರಿಗೆ ಹಾಲನ್ನು ಮಾರಾಟ ಮಾಡುವಾಗ ಅದೇ ಜಿಡ್ಡಿನ ಪ್ರಮಾಣವನ್ನು ಕೊಡುತ್ತಾರೆಯೇ ಎಂಬುದು ಪ್ರಶ್ನೆಯಾಗಿದೆ. ಇದಕ್ಕೆ ಕೆಎಂಎಫ್ ಆಡಳಿತ ಮಂಡಳಿ ಉತ್ತರ ನೀಡಬೇಕಿದೆ ಎಂದು ಆಗ್ರಹಿಸಿದ್ದಾರೆ.
ರೈತರಿಂದ ಸಂಗ್ರಹಿಸಿದ ಹಾಲಿನಲ್ಲಿ ಬೆಣ್ಣೆ, ತುಪ್ಪ, ಕೋವಾ ಸೇರಿದಂತೆ ಎಲ್ಲ ಉತ್ಪನ್ನಗಳನ್ನು ತಯಾರಿಸಿ ಬಳಿಕ ಹಾಲನ್ನು ಗ್ರಾಹಕರಿಗೆ ಮಾರಾಟ ಮಾಡಲಾಗುತ್ತದೆ ಎಂದು ದೂರಿದ್ದಾರೆ.
ಹಾಲಿನ ದರದ ಹೆಚ್ಚಳ ರೈತರಿಗೆ ಅನುಕೂಲವಾದರೆ ಮೊಸರಿನ ಮೇಲೆ ಮಾಡಿರುವ ದರ ಹೆಚ್ಚಳ ಯಾರಿಗೆ ಅನುಕೂಲವಾಗುತ್ತದೆ ಎನ್ನುವುದನ್ನು ಸರ್ಕಾರ ಸ್ಪಷ್ಟಪಡಿಸಬೇಕಿದೆ ಎಂದು ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.
ಇನ್ನು ನಂದಿನಿ ಸ್ಪೆಷಲ್ ಹಾಲಿನ ದರವನ್ನು ಪ್ರತಿ ಲೀಟರ್ ಗೆ 12 ರೂ. ಹೆಚ್ಚಳ ಮಾಡಲಾಗಿದೆ. ಮೊಸರಿನ ದರವನ್ನು 14ರೂ. ಹೆಚ್ಚಳ ಮಾಡಲಾಗಿದೆ. ಸರ್ಕಾರ ಜನ ಸಾಮಾನ್ಯರಿಗೆ ದರ ಹೆಚ್ಚಳದ ಬರೆ ಹಾಕುವುದನ್ನು ಬಿಟ್ಟು ರೈತರಿಗೆ ಪ್ರೋತ್ಸಾಹ ಧನ ನೀಡಬೇಕು. ಜೊತೆಗೆ ಗ್ರಾಹಕರಿಗೆ ಹಿಂದಿನ ದರದಲ್ಲೇ ಹಾಲು ಮಾರಾಟ ಮಾಡಬೇಕು ಎಂದು ಒತ್ತಾಯಿಸಿದ್ದಾರೆ.
ವರದಿ…..
ಹೊಲದಗದ್ದೆ ಗಿರೀಶ್…..ಚಿಕ್ಕಮಗಳೂರು…

