ಶಿಬಿರ ಚಕ್ರವರ್ತಿ’ಗೆ ರಂಗ ವಿದಾಯ; ಹಿರಿಯ ರಂಗಗುರು ಪಿ.ಗಂಗಾಧರಸ್ವಾಮಿ ನಿಧನ.
1 min read
ಅವಿನ್ ಟಿವಿ ಸುದ್ದಿಜಾಲ ✍️:
ಶಿಬಿರ ಚಕ್ರವರ್ತಿ’ಗೆ ರಂಗ ವಿದಾಯ; ಹಿರಿಯ ರಂಗಗುರು ಪಿ.ಗಂಗಾಧರಸ್ವಾಮಿ ನಿಧನ.
ಮೈಸೂರು ಆ 29: ಮೈಸೂರು ರಂಗಾಯಣದ ವರ್ಣಮಯ ಚರಿತ್ರೆಯೊಂದಿಗೆ ಅವಿನಾಭಾವ ಸಂಬಂಧ ಹೊಂದಿದ್ದ ಹಿರಿಯ ರಂಗಭೂಮಿ ತರಬೇತುದಾರ, ಬೆಳಕು ವಿನ್ಯಾಸ ತಜ್ಞ ಹಾಗೂ ನಾಡಿನಾದ್ಯಂತ ಸಾವಿರಾರು ರಂಗಾಸಕ್ತರಿಗೆ ತರಬೇತಿ ನೀಡಿದ್ದ ಪಿ.ಗಂಗಾಧರಸ್ವಾಮಿ ಅವರು ಇಂದು ಮೈಸೂರಿನಲ್ಲಿ ಹೃದಯಘಾತದಿಂದ ನಿಧನರಾಗಿದ್ದಾರೆ.
ರಂಗಭೂಮಿ ಕ್ಷೇತ್ರದಲ್ಲಿ ಅಪಾರ ಸೇವೆ ಸಲ್ಲಿಸಿದ್ದ 76ರ ವಯೋಮಾನದ ಗಂಗಾಧರಸ್ವಾಮಿ ಅವರು ಕರ್ನಾಟಕದ ಮೂಲೆಮೂಲೆಗಳಲ್ಲಿ ರಂಗ ತರಬೇತಿ ಶಿಬಿರಗಳನ್ನು ನಡೆಸುವ ಮೂಲಕ ಅನೇಕ ಹೊಸ ಕಲಾವಿದರಿಗೆ ರಂಗಭೂಮಿಯ ದಾರಿ ತೋರಿಸಿದ್ದರು. ಅವರ ಶಿಬಿರಗಳ ವ್ಯಾಪ್ತಿ ಮತ್ತು ನಿರಂತರ ಸೇವೆಯಿಂದಾಗಿ ರಂಗವಲಯದಲ್ಲಿ ಅವರು ‘ಶಿಬಿರ ಚಕ್ರವರ್ತಿ’ ಎಂದೇ ಹೆಸರಾಗಿದ್ದರು.
ಮೈಸೂರು ಮತ್ತು ಧಾರವಾಡದ ರಂಗಾಯಣವನ್ನು ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗಂಗಾಧರ ಸ್ವಾಮಿಯವರು ನಿನಾಸಂ ನಲ್ಲಿ ಅಧ್ಯಾಪಕರಾಗಿ ಪ್ರಾಂಶುಪಾಲರಾಗಿ, ಮೈಸೂರು ರಂಗಾಯಣದ ನೇಪಥ್ಯದ ಪ್ರಶಿಕ್ಷಕರಾಗಿ, ಧಾರವಾಡ ರಂಗಾಯಣದ ನಿರ್ದೇಶಕರಾಗಿ, ಸಮುದಾಯ ಸಾಂಸ್ಕೃತಿಕ ಸಂಘಟನೆಯನ್ನು ಕಟ್ಟಲು ಹೆಗಲು ಕೊಟ್ಟು ದುಡಿದಿದ್ದರು.
ಮೈಸೂರು ರಂಗಾಯಣದ ಆರಂಭಿಕ ದಿನಗಳ ಬೆಳವಣಿಗೆಯಲ್ಲಿ ಮಹತ್ವದ ಪಾತ್ರ ವಹಿಸಿದ್ದ ಗಂಗಾಧರಸ್ವಾಮಿ ಅವರು ಅನೇಕ ಕಲಾವಿದರಿಗೆ ಗುರುಗಳಾಗಿದ್ದರು. ರಂಗಭೂಮಿಯ ಕಲಾತ್ಮಕ ಅಂಶಗಳಲ್ಲಿ ವಿಶೇಷವಾಗಿ ಬೆಳಕು ವಿನ್ಯಾಸದ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದ ಅವರು, ನಾಟಕದ ದೃಶ್ಯಲೋಕಕ್ಕೆ ವಿಶಿಷ್ಟ ರೂಪ ನೀಡುವಲ್ಲಿ ಪರಿಣತರಾಗಿದ್ದರು.
ಅವರ ನಿಧನಕ್ಕೆ ರಂಗಭೂಮಿ ಕಲಾವಿದರು, ಶಿಷ್ಯರು ಹಾಗೂ ಸಾಂಸ್ಕೃತಿಕ ಕ್ಷೇತ್ರದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ. ಅವರ ಅಗಲಿಕೆಯಿಂದ ಕನ್ನಡ ರಂಗಭೂಮಿ ಒಬ್ಬ ಶ್ರೇಷ್ಠ ತರಬೇತುದಾರ ಮತ್ತು ಸಜ್ಜನ ವ್ಯಕ್ತಿತ್ವವನ್ನು ಕಳೆದುಕೊಂಡಂತಾಗಿದೆ.
ಮೆಲುದನಿಯ ಸಜ್ಜನ, ಶಿಸ್ತುಬದ್ಧ ಗುರು ಹಾಗೂ ರಂಗಭೂಮಿಯ ಶ್ರದ್ಧಾವಂತ ಸೇವಕರಾಗಿದ್ದ ಗಂಗಾಧರಸ್ವಾಮಿ ಅವರ ನೆನಪು ಅವರು ತರಬೇತಿ ನೀಡಿದ ಸಾವಿರಾರು ಶಿಷ್ಯರಲ್ಲಿ ಹೃದಯದೊಳಗೆ ಶಾಶ್ವತವಾಗಿ ನಿಂತು ನೆಲೆಗೊಂಡಿದೆ,*ಆ ಈ ಊ ಏ ಐ* ಎಂಬ ಕನ್ನಡದ ವರ್ಣಮಾಲೆಯನ್ನು ಸಂಗೀತದ ದಾಟಿಯಲ್ಲಿ ಸ್ಪಷ್ಟವಾಗಿ ಉಚ್ಚಾರಣೆ ಮಾಡುವಂತೆ ಹೇಳಿಕೊಡುವ ಮೂಲಕ ಅಕ್ಷರಗಳ ಉಚ್ಚಾರ ಸ್ಪಷ್ಟವಾಗಿದ್ದರೆ ಮಾತ್ರ ರಂಗಭೂಮಿಯಲ್ಲಿ ಉಳಿಯಲು ಸಾಧ್ಯ ಎಂಬ ಬಗ್ಗೆ ಪ್ರಾಥಮಿಕ ಪಾಠ ಮಾಡಿ ನಾನು ಸೇರಿದಂತೆ ನನ್ನಂತಹ ಹಲವಾರು ರಂಗಾಸಕ್ತರನ್ನು ನಟನಾಗಿ ನಿರ್ದೇಶಕನನ್ನಾಗಿ ಮಾಡಿದ ಕೀರ್ತಿ ಗಂಗಾಧರಸ್ವಾಮಿ ಅವರಿಗೆ ಸಲ್ಲುತ್ತದೆ, ಈ ಮೂಲಕ ನಾಡಿನ ರಂಗಸಕ್ತರ ಹೃದಯದಲ್ಲಿ ಸದಾ ಜೀವಂತವಾಗಿರುತ್ತಾರೆ.
ಮಠದ ಸ್ವಾಮೀಜಿಯಾಗಬೇಕಾಗಿದ್ದವರು ಬದಲಾದ ಸಾಮಾಜಿಕ ಸಂದರ್ಭದಲ್ಲಿ ರಂಗಭೂಮಿಯ ಜಂಗಮರಾಗಿ ಇಡೀ ತಮ್ಮ ಬದುಕನ್ನು ರಂಗಭೂಮಿಗೆ ಮೀಸಲಿಟ್ಟು ದುಡಿದ ಗಂಗಾಧರಸ್ವಾಮಿಯವರಿಗೆ ಚಿಕ್ಕಮಗಳೂರು ಜಿಲ್ಲೆಯ ರಂಗಾಸಕ್ತರು ಅವಿನ್ ಟಿವಿ ಸುದ್ದಿ ವಾಹಿನಿಯ ಮೂಲಕ ಭಾವಪೂರ್ಣ ವಿದಾಯದೊಂದಿಗೆ ಅಂತಿಮ ನಮನ ಸಲ್ಲಿಸಿದ್ದಾರೆ.
••••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

