लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
31/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು ಬದುಕಿದ್ದರೆ ಇದೇ ಆಗಸ್ಟ್ 29ಕ್ಕೆ ನೂರು ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡು ಶತಾಯುಷಿಗಳಾಗುತ್ತಿದ್ದರು…..

1 min read

ಅವಿನ್ ಟಿವಿ ಸುದ್ದಿಜಾಲ ✍️: ಕರ್ನಾಟಕದ ಮಾಜಿ ಮುಖ್ಯಮಂತ್ರಿಗಳಾದ ರಾಮಕೃಷ್ಣ ಹೆಗಡೆಯವರು ಬದುಕಿದ್ದರೆ ಇದೇ ಆಗಸ್ಟ್ 29ಕ್ಕೆ ನೂರು ವರ್ಷದ ಜನ್ಮದಿನಾಚರಣೆ ಆಚರಿಸಿಕೊಂಡು ಶತಾಯುಷಿಗಳಾಗುತ್ತಿದ್ದರು.

ಕಾಲದ ನದಿಯಲ್ಲಿಒಂದು ನೂರು ವರ್ಷಗಳೆಂದರೆ ಕೇವಲ ದಿನಾಂಕಗಳ ಸರಮಾಲೆಯಲ್ಲ, ಅದು ಮನುಷ್ಯನೊಬ್ಬ ತನ್ನ ನಡೆ ನುಡಿ ಮತ್ತು ಒಡನಾಟದಿಂದ ಉಳಿಸಿ ಹೋದ ನೆನಪಿನ ಘಮಲು…..

ರಾಜಕೀಯ ಎದುರಾಳಿಗಳನ್ನು ವೈಯಕ್ತಿಕವಾಗಿ ದ್ವೇಷಿಸದೆ ಸೈದ್ಧಾಂತಿಕವಾಗಿ ಎದುರಿಸುತ್ತಿದ್ದ ರಾಮಕೃಷ್ಣ ಹೆಗಡೆಯವರ ರಾಜಕೀಯ ಸೌಹಾರ್ದತೆ ಭಾರತೀಯ ಪ್ರಜಾಪ್ರಭುತ್ವದಲ್ಲಿ ವಿಶಿಷ್ಟವಾಗಿದೆ.

ಈ ನೂರರ ಹೊಸ್ತಿಲಿನಲ್ಲಿ ಹಿರಿಯ ಪತ್ರಕರ್ತ ವಿಶ್ವೇಶ್ವರ ಭಟ್ಟರು ಹೆಗಡೆಯವರೊಂದಿಗೆ ಹೊಂದಿದ ಒಡನಾಟ ಮತ್ತು ರಾಜಕೀಯ ಸಾಹಿತ್ಯ ಸಾಂಸ್ಕೃತಿಕ ನಿಲುವುಗಳ ಬಗ್ಗೆ ಬರೆದ ಈ ಕೆಳಕಂಡ ಲೇಖನವು ವಿಶೇಷವಾಗಿ ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಒಂದು ವಿಶೇಷ ಪಾಠದಂತಿದೆ, ಓದಿ ತಮ್ಮ ತಮ್ಮ ಅರಿವಿಗೆ ತೆರೆದುಕೊಳ್ಳಬೇಕಾದ ಅಧ್ಯಯನವಾಗಿದೆ,ನ್ಯೂಸ್ ಕಿಂಗ್ ಈ ಬರಹವನ್ನು ತನ್ನ ಓದುಗರಿಗಾಗಿ ಕೂಡ ಮಾಡಿದೆ.
•••••••••••••••
ರಾಮಕೃಷ್ಣ ಹೆಗಡೆ ಅವರು ಬದುಕಿದ್ದಿದ್ದರೆ ಇಂದು ಅವರಿಗೆ ನೂರು ವರ್ಷ ತುಂಬುತ್ತಿತ್ತು. ಅವರು ನಿಧನರಾಗಿ ಇಪ್ಪತ್ತೆರಡು ವರ್ಷಗಳಾದರೂ, ಅವರ ನೆನಪು ನಮ್ಮ ಚಿತ್ತಭಿತ್ತಿಯಲ್ಲಿ ನಿತ್ಯ ಹರಿದ್ವರ್ಣ. ಅದಕ್ಕೆ ಅವರ ವ್ಯಕ್ತಿತ್ವ ಮತ್ತು ಬಿಟ್ಟು ಹೋದ ಚಿಂತನೆಗಳೇ ಕಾರಣ. ಅವರ ಕೊನೆಯ ಎಂಟು ವರ್ಷ, ಅವರೊಂದಿಗೆ ಆತ್ಮೀಯವಾಗಿ ಒಡನಾಡುವ ಅವಕಾಶ ಸಿಕ್ಕಿತ್ತು.

ಹೆಗಡೆಯವರು ನನಗೆ ಆತ್ಮೀಯರಾಗಲು ಮುಖ್ಯ ಕಾರಣ ‘ಕನ್ನಡ ಪ್ರಭ’ದ ಅಂದಿನ ಸಂಪಾದಕರಾಗಿದ್ದ ವೈಎನ್ಕೆ. ನಾನು ವೈಎನ್ಕೆ ಜತೆ ತಿಂಗಳಲ್ಲಿ ಒಂದೆರಡು ಸಲ ಹೆಗಡೆ ಅವರ ಮನೆಗೆ ಹೋಗುತ್ತಿದ್ದೆ ಅಥವಾ ಕಾರ್ಯಕ್ರಮಗಳಲ್ಲಿ ಭೇಟಿಯಾಗುತ್ತಿದ್ದೆ.

ಹೆಗಡೆ ಮತ್ತು ವೈಎನ್ಕೆ ಜತೆ ಅನೇಕ ಭೈಠಕ್ ಗಳಲ್ಲಿ, ಪಟ್ಟಾಂಗಗಳಲ್ಲಿ, ಗುಂಡು ಪಾರ್ಟಿಗಳಲ್ಲಿ ಕುಳಿತುಕೊಳ್ಳುವ ಅವಕಾಶ ನನಗೆ ಒದಗಿ ಬಂದಿತ್ತು. ಅವರಿಬ್ಬರ ಮಾತುಗಳನ್ನು ಕೇಳಿಸಿಕೊಂಡರೆ ಸಾಕು, ಕಿಕ್ ಏರುತ್ತಿತ್ತು. ಅವರಿಬ್ಬರೂ ಅನಗತ್ಯವಾದ ಯಾವ ಮಾತುಗಳನ್ನೂ ಆಡುತ್ತಿರಲಿಲ್ಲ. ಆ ಮಾತುಗಳನ್ನು ಬೇರೆ ಯಾವ ವಿಶ್ವವಿದ್ಯಾಲಯಗಳಲ್ಲೂ ಕೇಳಲು ಸಾಧ್ಯವಿರಲಿಲ್ಲ. ವೈಎನ್ಕೆ ಮತ್ತು ಹೆಗಡೆಯವರಿಗೆ ಅನೇಕ ವಿಷಯಗಳಲ್ಲಿ ಸಾಮ್ಯವಿತ್ತು.

ಇಬ್ಬರೂ ರಾಜಕಾರಣದ ಹೊರತಾಗಿ, ಸಾಹಿತ್ಯ, ಸಂಗೀತ, ಸಿನಿಮಾ, ಕಲೆ, ರಂಗಭೂಮಿ ಮುಂತಾದ ವಿಷಯಗಳಲ್ಲಿ ಆಸಕ್ತಿ ಹೊಂದಿದವರಾಗಿದ್ದರು. ಹೆಗಡೆಯವರಿಗೆ ಸಾಹಿತಿ, ಕಲಾವಿದರ ಒಡನಾಟವಿತ್ತು. ಅಂಥ ಒಡನಾಟವನ್ನು ಅವರು ಇಷ್ಟಪಡುತ್ತಿದ್ದರು. ಅವರೊಂದಿಗಿನ ತಮಾಷೆಯ ಪ್ರಸಂಗಗಳನ್ನು ಮೆಲುಕು ಹಾಕುತ್ತಿದ್ದರು. ತಾವು ಓದಿದ ಪುಸ್ತಕಗಳ ಬಗ್ಗೆ ವೈಎನ್ಕೆ, ಹೆಗಡೆಯವರಿಗೆ ಹೇಳುತ್ತಿದ್ದರು. ಇಂಗ್ಲಿಷ್ ಸಾಹಿತಿಗಳ ಬಗ್ಗೆ ವೈಎನ್ಕೆ ಓತಪ್ರೋತವಾಗಿ ಮಾತಾಡುತ್ತಿದ್ದರೆ , ಹೆಗಡೆಯವರು ತದೇಕಚಿತ್ತದಿಂದ ಕೇಳುತ್ತಿದ್ದರು.

ರಾಮಕೃಷ್ಣ ಹೆಗಡೆ ಮತ್ತು ವೈಎನ್ಕೆ ನಡುವಿನ ಆ ಒಡನಾಟ ಕೇವಲ ಒಬ್ಬ ರಾಜಕಾರಣಿ ಮತ್ತು ಪತ್ರಕರ್ತನ ನಡುವಿನ ಸೌಹಾರ್ದತೆಯಾಗಿರಲಿಲ್ಲ, ಅದು ಎರಡು ಅತ್ಯುನ್ನತ ಬೌದ್ಧಿಕ ಮನಸ್ಸುಗಳ ಆಳವಾದ ಸಂವಾದದಂತಿರುತ್ತಿತ್ತು. ಹೆಗಡೆಯವರ ವ್ಯಕ್ತಿತ್ವದಲ್ಲಿದ್ದ ರಾಜಕೀಯ ಮುತ್ಸದ್ದಿತನ ಮತ್ತು ಸಾಂಸ್ಕೃತಿಕ ಅಭಿರುಚಿಗಳು ಇಂಥ ಸಂದರ್ಭಗಳಲ್ಲಿ ಅದ್ಭುತವಾಗಿ ಅನಾವರಣಗೊಳ್ಳುತ್ತಿದ್ದವು.

ಹೆಗಡೆಯವರ ಬಗ್ಗೆ ವೈಎನ್ಕೆ ಅವರಿಗೆ ವಿಶೇಷ admiration ಇತ್ತು. ಹೆಗಡೆಯವರನ್ನು ಟೀಕಿಸಿದರೆ ಅವರು ತಣ್ಣಗೆ ಪ್ರತಿರೋಧಿಸುತ್ತಿದ್ದರು. ಒಮ್ಮೆ ಹೆಗಡೆಯವರ ಜನ್ಮದಿನ ನಿಮಿತ್ತ ಏಟ್ರಿಯಾ ಹೋಟೆಲಿನಲ್ಲಿ ಒಂದು ಪಾರ್ಟಿ ಏರ್ಪಾಡಾಗಿತ್ತು. ಆಗ ಜೆ.ಎಚ್.ಪಟೇಲರು ಮುಖ್ಯಮಂತ್ರಿ. ದೇವೇಗೌಡರು ಪ್ರಧಾನಿ. ಪಟೇಲರು ಆ ಪಾರ್ಟಿಗೆ ಬರಬೇಕಿತ್ತು. ಆದರೆ ಬರಲಿಲ್ಲ. ಆ ಪಾರ್ಟಿಯಲ್ಲಿದ್ದ ಸಾಹಿತಿ ಸುಮತೀಂದ್ರ ನಾಡಿಗರು, ‘ಒಂದು ವೇಳೆ ಪಟೇಲರು ಈ ಪಾರ್ಟಿಗೆ ಬಂದಿದ್ದರೇ ಆಶ್ಚರ್ಯವಾಗುತ್ತಿತ್ತು’ ಎಂದು ಹೇಳಿದರು. ಅದಕ್ಕೆ ಹೆಗಡೆಯವರು, The best contribution some people make to a party is their absence ಎಂದು ಮಾರ್ಮಿಕವಾಗಿ ಹೇಳಿದ್ದರು. ಆ ಒಂದು ಮಾತಿನಲ್ಲಿ ಹೆಗಡೆ ಅವರು ಅಂದಿನ ರಾಜಕೀಯ ವಿದ್ಯಮಾನದ ಅನೇಕ ಜಣುಕುಗಳನ್ನು ಬಿಚ್ಚಿಟ್ಟಿದ್ದರು.

ಸದಾಶಿವನಗರದ ಮನೆಯೊಂದರ ಟೆರೇಸ್ ಮೇಲೆ ನಡೆದ ಇನ್ನೊಂದು ಪಾರ್ಟಿ. ನಾನು ಮತ್ತು ವೈಎನ್ಕೆ ಹೋಗಿದ್ದೆವು. ಸಂಗೀತಗೋಷ್ಠಿಯೂ ಏರ್ಪಾಡಾಗಿತ್ತು. ಅನೇಕ ಸಾಹಿತಿಗಳು, ಕಲಾವಿದರು, ಬುದ್ಧಿಜೀವಿಗಳು ಸೇರಿದ್ದರು. ಒಂದೆರಡು ರೌಂಡ್ ಮುಗಿದಿತ್ತು, ‘ಸಮಾರಾಧನೆ’ ನಿಧಾನವಾಗಿ ರಂಗೇರ ತೊಡಗಿತ್ತು. ಹೆಗಡೆ ಅವರು ವಚನವೊಂದನ್ನು ಹೇಳುತ್ತಾ, ‘ನನ್ನಲ್ಲಿ ಬಸವಣ್ಣನವರ ಚಿಂತನೆ ಯಾವತ್ತೂ ಬೆರಗು ಮೂಡಿಸುತ್ತದೆ’ ಎಂದು ಹೇಳಿದರು. ಅದಕ್ಕೆ ತಕ್ಷಣ ವೈಎನ್ಕೆ, ‘ಹೆಗಡೆ ಅವರೇ, ನೀವು ರಾಜ್ಯದ ಮುಖ್ಯಮಂತ್ರಿಗಳಾದವರು. ಯಾರದ್ದೋ ವಚನವನ್ನು ಇನ್ಯಾರಿಗೋ attribute ಮಾಡಬಾರದು. ನೀವು ಹೇಳಿದ ವಚನ ಬಸವಣ್ಣನವರದ್ದಲ್ಲ, ಅದು ಅಲ್ಲಮನ ವಚನ’ ಎಂದು ಖಡಾಖಡಿ ಹೇಳಿದರು. ಪಾರ್ಟಿಯಲ್ಲಿ ಒಂದು ಕ್ಷಣ ಮೌನ. ಹೆಗಡೆಯವರು ಒಂದು ಕ್ಷಣ ತಬ್ಬಿಬ್ಬು.

ತಕ್ಷಣ ಸಾವರಿಸಿಕೊಂಡ ಹೆಗಡೆ, ‘ವೈಎನ್ಕೆ, wrong attribution ಸಹಜ. ವಿನ್‌ಸ್ಟನ್ ಚರ್ಚಿಲ್ ಹೇಳಿದ್ದನ್ನು ನಾಟಕಕಾರ ಜಾರ್ಜ್ ಬರ್ನಾರ್ಡ್ ಶಾ ಹೇಳಿದ್ದಾರೆ ಎನ್ನುವುದು, ಜಾರ್ಜ್ ಬರ್ನಾರ್ಡ್ ಶಾ ಹೇಳಿದ್ದನ್ನು ಚರ್ಚಿಲ್ ಹೇಳಿದ್ದಾರೆ ಎನ್ನುವುದು ಸಹಜ. ಲಂಕೇಶ ಹೇಳಿದ್ದನ್ನು ಅನಂತಮೂರ್ತಿ ಹೇಳಿದ್ದಾರೆನ್ನುವುದು, ಅನಂತಮೂರ್ತಿ ಹೇಳಿದ್ದನ್ನು ಅಡಿಗರು ಹೇಳಿದ್ದಾರೆ ಎನ್ನುವುದು ಸಹಜ. ಇವೆಲ್ಲ ಇದ್ದಿದ್ದೇ. ಆದರೆ ನಾನು ಹೇಳಿದ್ದನ್ನು, ದೇವೇಗೌಡರು ಹೇಳಿದ್ದು ಎನ್ನಬಾರದಷ್ಟೇ’ ಎಂದು ಆ ಇರುಸು-ಮುರಿಸಿನ ವಾತಾವರಣದಲ್ಲೂ ನಗುವಿನ ಹೊನಲನ್ನು ಹರಿಸಿದ್ದರು.

ಆ ಸಂಜೆಯ ಘಟನೆಯನ್ನು ಗಮನಿಸಿದರೆ ಹೆಗಡೆಯವರ ಹಾಸ್ಯಪ್ರಜ್ಞೆ ಮತ್ತು ಸಮಯಪ್ರಜ್ಞೆಯ ಆಳ ಅರ್ಥವಾಗುತ್ತದೆ. ಮುಖ್ಯಮಂತ್ರಿಯಾಗಿ ಅಧಿಕಾರ ಅನುಭವಿಸಿದ ನಾಯಕನೊಬ್ಬನಿಗೆ ಸಾರ್ವಜನಿಕವಾಗಿ ಸಾಹಿತ್ಯಿಕ ತಪ್ಪೊಂದನ್ನು ಎತ್ತಿ ತೋರಿಸಿದಾಗ ಸಹಜವಾಗಿಯೇ ಇತರರಿದ್ದರೆ ಮುಜುಗರಕ್ಕೊಳಗಾಗಿ ಸಿಟ್ಟಾಗುತ್ತಿದ್ದರು. ಆದರೆ ಹೆಗಡೆ ಹಾಗಲ್ಲ. ವೈಎನ್ಕೆಯವರ ನೇರ ನುಡಿಯನ್ನು ಕ್ರೀಡಾ ಮನೋಭಾವದಿಂದ ಸ್ವೀಕರಿಸಿದ್ದಷ್ಟೇ ಅಲ್ಲ, ಅದನ್ನು ತಮ್ಮದೇ ಶೈಲಿಯ ಸೂಕ್ಷ್ಮ ವ್ಯಂಗ್ಯಕ್ಕೆ ತಿರುಗಿಸಿಕೊಂಡರು. ಅನಪೇಕ್ಷಿತ ಮುಜುಗರ, ಕಹಿ ಘಟನೆಗಳನ್ನು ಕೂಡ ಇಂಥ ಲಘು ಹಾಸ್ಯದ ಮೂಲಕ ದಾಟಿಸುವ ಅಪರೂಪದ ಕಲೆ ಹೆಗಡೆಯವರಿಗೆ ಸಿದ್ಧಿಸಿತ್ತು.

ಹೆಗಡೆಯವರ ಕೊನೆಯ ದಿನಗಳ ಸಂಜೆಗಳು ಹೆಚ್ಚಾಗಿ ಇಂಥ ಬೌದ್ಧಿಕ ಚರ್ಚೆಗಳಿಗೇ ಮೀಸಲಾಗಿದ್ದವು. ಅವರ ಡ್ರಾಯಿಂಗ್ ರೂಮ್ ಕೇವಲ ರಾಜಕೀಯ ಲೆಕ್ಕಾಚಾರಗಳ ಅಡ್ಡಾ ಆಗಿರದೇ, ಸಾಹಿತ್ಯ, ಕಲೆ, ದೇಶ-ವಿದೇಶಗಳ ರಾಜಕೀಯ ಬೆಳವಣಿಗೆಗಳು ಮತ್ತು ತತ್ವಶಾಸ್ತ್ರದ ಗಂಭೀರ ವಿಶ್ಲೇಷಣೆಗಳ ತಾಣವಾಗಿತ್ತು. ಮಾಲ್ಟ್‌ ವಿಸ್ಕಿಯ ಗುಟುಕಿನೊಂದಿಗೆ, ಹಿನ್ನೆಲೆಯಲ್ಲಿ ಮೆಲ್ಲನೆ ಮೊಳಗುವ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ—ವಿಶೇಷವಾಗಿ ಭೀಮಸೇನ ಜೋಷಿ ಅಥವಾ ಕುಮಾರ ಗಂಧರ್ವರ ಗಾಯನ—ಅವರ ಕೂಟಗಳಿಗೆ ಒಂದು ಗಾಂಭೀರ್ಯ ಹಾಗೂ ತೇಜಸ್ಸನ್ನು ತಂದುಕೊಡುತ್ತಿತ್ತು. ವೈಎನ್ಕೆ ಹೊಮ್ಮಿಸುತ್ತಿದ್ದ ಚುರುಕಾದ ಒನ್‌ಲೈನರ್‌ಗಳು ಮತ್ತು ಹೆಗಡೆಯವರ ಮಾರ್ಮಿಕ ಪ್ರತಿಕ್ರಿಯೆಗಳು ಆ ಚರ್ಚೆಗಳನ್ನು ಬೇರೆಯದೇ ಎತ್ತರಕ್ಕೆ ಕೊಂಡೊಯ್ಯುತ್ತಿದ್ದವು.

ಒಮ್ಮೆ ಜ್ಞಾನಪೀಠ ಪ್ರಶಸ್ತಿ ಪುರಸ್ಕೃತ ಬಂಗಾಳಿ ಸಾಹಿತಿಯೊಬ್ಬರು ಬೆಂಗಳೂರಿಗೆ ಬಂದಿದ್ದರು. ಕಾರ್ಯಕ್ರಮದಲ್ಲಿ ಅವರಿಬ್ಬರೂ ವೇದಿಕೆಯ ಮೇಲಿದ್ದರು. ಮರುದಿನ ಬಂಗಾಳಿ ಸಾಹಿತಿಯನ್ನು ತಮ್ಮ ಸದಾಶಿವನಗರದ ಮನೆಗೆ ಹೆಗಡೆಯವರು ರಾತ್ರಿ ಊಟಕ್ಕೆ ಆಹ್ವಾನಿಸಿದ್ದರು. ಅನಂತಮೂರ್ತಿ ಮತ್ತು ವೈಎನ್ಕೆಯವರನ್ನು ಆಹ್ವಾನಿಸಿದ್ದರು. ಆಗ ನಾನು ಏಶಿಯನ್ ಕಾಲೇಜ್ ಆಫ್ ಜರ್ನಲಿಸಂನಲ್ಲಿ ಅಸಿಸ್ಟಂಟ್ ಪ್ರೊಫೆಸರ್ ಆಗಿದ್ದೆ. ಹೆಗಡೆ ಅವರು ಆ ಕಾಲೇಜಿಗೆ ಮೂರ್ನಾಲ್ಕು ಸಲ ಅತಿಥಿ ಉಪನ್ಯಾಸಕರಾಗಿ ಆಗಮಿಸಿದ್ದರು. ಹೀಗಾಗಿ ನನ್ನ ಮತ್ತು ಅವರ ಒಡನಾಟ ಹೆಚ್ಚಾಗಿತ್ತು. ಈ ಭೋಜನಕೂಟಕ್ಕೆ ಹೆಗಡೆಯವರು ನನ್ನನ್ನೂ ಆಹ್ವಾನಿಸಿದ್ದರು. ಆ ಪಾರ್ಟಿಯಲ್ಲಿ ರವೀಂದ್ರನಾಥ ಟ್ಯಾಗೋರರ ಸಾಹಿತ್ಯ, ಸಂಗೀತದ ಬಗ್ಗೆ ಹೆಗಡೆಯವರ ಮಾತುಗಳನ್ನು ಕೇಳಿ ಎಲ್ಲರೂ ನಿಬ್ಬೆರಗಾಗಿದ್ದರು, ಸ್ವತಃ ಆ ಬಂಗಾಳಿ ಸಾಹಿತಿಯೂ.

ಅದಾದ ನಂತರ ನಾನು ಸುಮಾರು ಹತ್ತು ಮುಖ್ಯಮಂತ್ರಿಗಳನ್ನು ಹತ್ತಿರದಿಂದ ನೋಡಿದ್ದೇನೆ. ಯಾವ ಮುಖ್ಯಮಂತ್ರಿಯೂ ಸಾಹಿತಿಗಳನ್ನು, ಅದರಲ್ಲೂ ಬೇರೆ ಭಾಷೆಗಳ ಜ್ಞಾನಪೀಠ ಪುರಸ್ಕೃತ ಸಾಹಿತಿಯನ್ನು ಮನೆಗೆ ಕರೆದು ಮೂರು ತಾಸು ಮಾತಾಡಿ, ಆತಿಥ್ಯ ನೀಡಿ ಕಳಿಸಿದ್ದನ್ನಂತೂ ನೋಡಿಲ್ಲ. ಅತಿಥಿ ಯಾರೇ ಆಗಿರಬಹುದು, ಹೆಗಡೆಯವರು ಅವರನ್ನು ಸಲೀಸಾಗಿ ನಿಭಾಯಿಸುತ್ತಿದ್ದರು, ಹ್ಯಾಂಡಲ್ ಮಾಡುತ್ತಿದ್ದರು.

ನಾನು ‘ವಿಜಯ ಕರ್ನಾಟಕ’ದ ಸಂಪಾದಕನಾಗಿದ್ದಾಗ, ಹೆಗಡೆಯವರು ನನಗೆ ಆಗಾಗ ಫೋನ್ ಮಾಡುತ್ತಿದ್ದರು. ನಾನು ಬಯಸಿದಾಗಲೆಲ್ಲ ಮಾತಿಗೆ ಸಿಗುತ್ತಿದ್ದರು. ಅಷ್ಟೇ ಅಲ್ಲ, ಹೆಸರಘಟ್ಟದ ಅವರ ತೋಟದಮನೆಗೆ ಆಗಾಗ ಆಹ್ವಾನಿಸುತ್ತಿದ್ದರು. ಒಮ್ಮೆ ಅವರು ನನಗೆ, ‘ನೀವು ವಿಶ್ವೇಶ್ವರ ಭಟ್ಟ ಎಂದು ಏಕೆ ಹೆಸರನ್ನು ಇಟ್ಟುಕೊಂಡಿದ್ದೀರಿ? ಸಾಮಾನ್ಯವಾಗಿ ನಿಮ್ಮ ಕಡೆ ಹೆಸರಿನ ಮುಂದೆ ಊರಿನ ಹೆಸರನ್ನು ಇಟ್ಟುಕೊಳ್ಳುವುದು ರೂಢಿ’ ಎಂದು ಕೇಳಿದ್ದರು. ಅದಕ್ಕೆ ನಾನು, ‘ನೀವೇಕೆ ರಾಮಕೃಷ್ಣ ದೊಡ್ಮನೆ ಅಂತ ಹೆಸರನ್ನಿಟ್ಟುಕೊಳ್ಳಲಿಲ್ಲ? ರಾಮಕೃಷ್ಣ ಹೆಗಡೆ ಅಂತ ಯಾಕೆ ಇಟ್ಟುಕೊಂಡಿರಿ?’ ಎಂದು ಕೇಳಿದ್ದೆ.

ಅದಕ್ಕೆ ಹೆಗಡೆ ಅವರು, ‘ನಾವು ಯಾರನ್ನೂ ನಿನ್ನ ಜಾತಿ ಯಾವುದು ಎಂದು ಕೇಳಬಾರದು. ಆದರೆ ನಮ್ಮ ಹೆಸರಿಂದ ಅದು ಗೊತ್ತಾಗುವಂತಿದ್ದರೆ ಒಳ್ಳೆಯದು’ ಎಂದು ಮಾರ್ಮಿಕವಾಗಿ ಹೇಳಿದ್ದರು. (ನನಗೆ ಇಲ್ಲಿ ತನಕ ಒಬ್ಬನೇ ಒಬ್ಬ ‘ವಿಶ್ವೇಶ್ವರ ಭಟ್ಟರೇ ನಿಮ್ಮ ಜಾತಿ ಯಾವುದು?’ ಎಂದು ಕೇಳಿಲ್ಲ.)

ಹೆಗಡೆ ಅವರಂತೆ ನಾನು ಹವ್ಯಕ ಸಮೂದಾಯಕ್ಕೆ ಸೇರಿದವನು. ಇಬ್ಬರು ಹವ್ಯಕರು ಸೇರಿದಾಗ, ಹವಿಗನ್ನಡ ಬೇಡವೆಂದರೂ ಇಣುಕುವುದುಂಟು. ನನಗೆ ಹೆಗಡೆಯವರ ಬಳಿ ಹವ್ಯಕ ಕನ್ನಡದಲ್ಲಿ ಮಾತಾಡಲು ಸಣ್ಣ ಅಳುಕಿತ್ತು. ಒಮ್ಮೆ ಅವರ ಮನೆಯಲ್ಲಿ ಊಟಕ್ಕೆ ಕುಳಿತಾಗ, ‘ಭಟ್ರೇ, ಬಿಡ್ಯ ಮಾಡ್ಕಳಡಿ, ಯಂತ ಬೇಕು ಹೇಳಿ ಹಾಕ್ಸ್ಕಳಿ (ಸಂಕೋಚ ಮಾಡಿಕೊಳ್ಳಬೇಡಿ. ಏನು ಬೇಕೋ ಅದನ್ನು ಹಾಕಿಸಿಕೊಂಡು ಊಟ ಮಾಡಿ)’ ಎಂದು ಅಪ್ಪಟ ಹವ್ಯಕ ಕನ್ನಡದಲ್ಲಿ ಹೇಳಿದ್ದು ಈಗಲೂ ಕಿವಿಯಲ್ಲಿ ಕುಳಿತಿದೆ.

ಅಧಿಕಾರದ ಉತ್ತುಂಗದಲ್ಲಿದ್ದಾಗಲೂ ಸಾಂಸ್ಕೃತಿಕ ಗಂಧವನ್ನು ಉಳಿಸಿಕೊಂಡಿದ್ದ, ಅಧಿಕಾರ ಹೋದಾಗಲೂ ಬೌದ್ಧಿಕ ಘನತೆಯನ್ನು ಕಾಪಾಡಿಕೊಂಡಿದ್ದ ರಾಮಕೃಷ್ಣ ಹೆಗಡೆಯವರಂಥ ನಾಯಕರು ಕರ್ನಾಟಕದ ಸಾರ್ವಜನಿಕ ಬದುಕಿನಲ್ಲಿ ಅಪರೂಪ. ಅವರು ಬಿಟ್ಟುಹೋದ ಇಂಥ ರಸನಿಮಿಷಗಳು ಮತ್ತು ಸಂಸ್ಕೃತಿಪೂರ್ಣ ರಾಜಕಾರಣದ ನೆನಪುಗಳು ಈಗ ಅನನ್ಯ ಸ್ಮೃತಿಬಿಂಬಗಳಂತೆ ತೋರುತ್ತವೆ.

ಹೆಗಡೆ ಅವರ ವ್ಯಕ್ತಿತ್ವದ ಮೊದಲ ಆಕರ್ಷಣೆಯೆಂದರೆ ಅವರ ಸಹಜ ಗಾಂಭೀರ್ಯ, ಸೌಜನ್ಯ ಹಾಗೂ ಸಂವಹನ ಕಲೆ. ಶ್ವೇತವರ್ಣದ ಖಾದಿ ಜುಬ್ಬಾ, ಹೆಗಲ ಮೇಲೊಂದು ಶಾಲು, ಮುಖದಲ್ಲಿ ಸದಾ ಮಂದಹಾಸ ಮತ್ತು ಕಣ್ಣುಗಳಲ್ಲಿ ತೀಕ್ಷ್ಣ ಚಿಂತನೆಗಳನ್ನು ಹೊತ್ತಿದ್ದ ಅವರ ಬಾಹ್ಯ ರೂಪವೇ ಎದುರಿಗಿದ್ದವರನ್ನು ಸೆಳೆಯುತ್ತಿತ್ತು. ಯಾವುದೇ ಕ್ಲಿಷ್ಟಕರ ವಿಷಯವನ್ನಾದರೂ ಅತ್ಯಂತ ಸಮಾಧಾನದಿಂದ, ಸೃಜನಶೀಲ ವಾಗ್ಝರಿಯ ಮೂಲಕ ಸರಳವಾಗಿ ವಿವರಿಸುವ ಕಲೆ ಅವರಿಗೆ ಕರಗತವಾಗಿತ್ತು. ಎದುರಾಳಿಗಳನ್ನು ವೈಯಕ್ತಿಕವಾಗಿ ದ್ವೇಷಿಸದೆ, ಸೈದ್ಧಾಂತಿಕವಾಗಿ ಎದುರಿಸುತ್ತಿದ್ದ ಅವರ ರಾಜಕೀಯ ಸೌಹಾರ್ದತೆ ಭಾರತೀಯ ಪ್ರಜಾಪ್ರಭುತ್ವದಲ್ಲೇ ವಿಶಿಷ್ಟ ಮಾದರಿಯಾಗಿತ್ತು. ಅಧಿಕಾರವನ್ನು ಅಂಟಿಸಿಕೊಂಡು ಕೂರುವ ಸಂಸ್ಕೃತಿಯ ನಡುವೆ, ಸಾತ್ವಿಕ ನೈತಿಕತೆಯನ್ನು ಮೆರೆದ ಹೆಗಡೆ ಅವರ ಈ ನಡೆ ಭಾರತೀಯ ರಾಜಕಾರಣದಲ್ಲಿ ಅಪರೂಪದ ನಿದರ್ಶನವಾಗಿ ಉಳಿದಿದೆ.

ರಾಮಕೃಷ್ಣ ಹೆಗಡೆ ಕೇವಲ ಒಂದು ರಾಜಕೀಯ ಕಾಲಘಟ್ಟದ ನಾಯಕರಾಗಿರದೇ, ಕರ್ನಾಟಕದ ಸಾಮಾಜಿಕ ಹಾಗೂ ಸಾಂಸ್ಕೃತಿಕ ಬದುಕಿನ ಶಾಶ್ವತ ಭಾಗವಾಗಿದ್ದಾರೆ. ಸೌಜನ್ಯಯುತ ಮಾತು, ಸಂಸ್ಕಾರಯುತ ನಡೆವಳಿಕೆ, ತತ್ವನಿಷ್ಠ ಆಡಳಿತ ಮತ್ತು ಜನಪರ ಕಾಳಜಿಯh ಸಮ್ಮಿಶ್ರಣವಾಗಿದ್ದ ಅವರ ವ್ಯಕ್ತಿತ್ವ ಇಂದಿನ ಪೀಳಿಗೆಯ ಸಾರ್ವಜನಿಕ ನಾಯಕರಿಗೆ ಅತ್ಯುತ್ತಮ ಮಾರ್ಗದರ್ಶಿಯಾಗಿದೆ. ಇಂದು ಅವರ ನೂರನೇ ಜನ್ಮದಿನದ ಸಂದರ್ಭದಲ್ಲಿ, ಅವರು ಹಾಕಿಕೊಟ್ಟ ಪ್ರಜಾಪ್ರಭುತ್ವದ ಮೌಲ್ಯಗಳು ಹಾಗೂ ವಿಕೇಂದ್ರೀಕರಣದ ಆಶಯಗಳನ್ನು ಎತ್ತಿಹಿಡಿಯುವುದೇ ಆ ಮಹಾನ್ ನಾಯಕನಿಗೆ ನಾವು ಸಲ್ಲಿಸಬಹುದಾದ ಶ್ರೇಷ್ಠ ಗೌರವ.

ಇಂದಿನ ರಾಜಕಾರಣದಲ್ಲಿ ಭಿನ್ನಾಭಿಪ್ರಾಯಗಳು ವೈಯಕ್ತಿಕ ದ್ವೇಷವಾಗಿ, ಸೈದ್ಧಾಂತಿಕ ಚರ್ಚೆಗಳು ಕ್ಷುಲ್ಲಕ ಕೆಸರೆರಚಾಟವಾಗಿ ಮಾರ್ಪಟ್ಟಿರುವ ಸಂದರ್ಭದಲ್ಲಿ ರಾಮಕೃಷ್ಣ ಹೆಗಡೆಯವರ ರಾಜಕೀಯ ಸಂಸ್ಕೃತಿ ದಾರಿದೀಪದಂತೆ ಕಾಣುತ್ತದೆ. ಕಟು ವಿರೋಧಿಗಳನ್ನೂ ಅತ್ಯಂತ ಗೌರವದಿಂದ ಕಾಣುತ್ತಿದ್ದ, ಟೀಕೆಗಳನ್ನು ಸಹಜ ಹಾಸ್ಯಪ್ರಜ್ಞೆ ಮತ್ತು ಘನತೆಯಿಂದ ಎದುರಿಸುತ್ತಿದ್ದ ಮುತ್ಸದ್ದಿತನ ಅವರಲ್ಲಿತ್ತು. ಸದನದ ಒಳಗೆ ತೀವ್ರ ಸೈದ್ಧಾಂತಿಕ ಸಂಘರ್ಷವಿದ್ದರೂ, ಹೊರಗೆ ಅದೇ ನಾಯಕರೊಂದಿಗೆ ಕುಳಿತು ಸಾಹಿತ್ಯ, ಸಂಗೀತ, ಕಲೆಗಳ ಬಗ್ಗೆ ಗಂಟೆಗಟ್ಟಲೆ ಸಂವಾದ ನಡೆಸುವ ಸಾಂಸ್ಕೃತಿಕ ಔದಾರ್ಯ ಅಂದಿನ ರಾಜಕಾರಣಕ್ಕಿತ್ತು.

ಅಧಿಕಾರಕ್ಕಿಂತ ಮೌಲ್ಯಗಳು ದೊಡ್ಡದು ಎಂದು ನಂಬಿದ್ದ ಹೆಗಡೆಯವರು, ಸಾರ್ವಜನಿಕ ಬದುಕಿನಲ್ಲಿ ನೈತಿಕ ಹೊಣೆಗಾರಿಕೆ ಮೆರೆದು ಮಾದರಿಯಾಗಿದ್ದರು. ಟೀಕೆ-ಟಿಪ್ಪಣಿಗಳನ್ನು ಆಡಳಿತ ಸುಧಾರಣೆಯ ಭಾಗವಾಗಿ ಸ್ವೀಕರಿಸುತ್ತಿದ್ದ ಅವರ ವಿಶಾಲ ಮನೋಭಾವ ಇಂದಿನ ಅಸಹಿಷ್ಣು ರಾಜಕೀಯ ವಾತಾವರಣಕ್ಕೆ ಅತ್ಯಗತ್ಯವಾದ ಮದ್ದು. ಅಧಿಕಾರ, ರಾಜಕೀಯವನ್ನು ಮೀರಿ ಪರಸ್ಪರ ಗೌರವಿಸುವ ಮತ್ತು ಬೌದ್ಧಿಕ ಸಂವಾದಕ್ಕೆ ಜಾಗ ಕೊಡುವ ಅವರ ಪ್ರಬುದ್ಧ ನಡೆವಳಿಕೆಯೇ ಅವರ ಜನ್ಮಶತಮಾನೋತ್ಸವದ ಈ ದಿನಗಳಲ್ಲಿ ಅವರನ್ನು ಇನ್ನಷ್ಟು ಪ್ರಸ್ತುತ ಹಾಗೂ ಚಿರಸ್ಮರಣೀಯವಾಗಿಸಿದೆ.

ರಾಜಕಾರಣದ ಏರಿಳಿತಗಳು, ಬಿರುಗಾಳಿಗಳು ಅವರನ್ನೂ ಬಿಡಲಿಲ್ಲ. ಅಧಿಕಾರದ ಉತ್ತುಂಗದಿಂದ ಹಿಡಿದು ರಾಜಕೀಯ ಬಿಕ್ಕಟ್ಟುಗಳು, ಆರೋಪ-ಪ್ರತ್ಯಾರೋಪಗಳು ಅವರ ಬದುಕಿನಲ್ಲೂ ಬಂದು ಹೋದವು. ಆದರೆ, ಅಂತಹ ಸಂದರ್ಭಗಳಲ್ಲಿಯೂ ಅವರು ತೋರುತ್ತಿದ್ದ ನೈತಿಕ ನಿಲುವು ಮತ್ತು ರಾಜೀನಾಮೆ ಕೊಟ್ಟು ಹೊರಬರುವಾಗ ಅವರ ಮುಖದಲ್ಲಿದ್ದ ನಿಸ್ಪೃಹ ಶಾಂತತೆ ಈ ದಿನಗಳಲ್ಲಿ ಸೋಜಿಗವಾಗಿ ಕಾಣುತ್ತದೆ. ಸೋಲು ಮತ್ತು ವಿವಾದಗಳನ್ನು ಎದುರಿಸುವಾಗಲೂ ಅವರು ಕಳೆದುಕೊಳ್ಳದ ಆ ಆಂತರಿಕ ಘನತೆಯೇ ಹೆಗಡೆ ಅವರನ್ನು ಸಮಕಾಲೀನ ರಾಜಕಾರಣಿಗಳಿಂದ ಭಿನ್ನವಾಗಿ ನಿಲ್ಲಿಸಿದೆ.

ಕಾಲದ ನದಿಯಲ್ಲಿ ನೂರು ವರ್ಷಗಳೆಂದರೆ ಕೇವಲ ದಿನಾಂಕಗಳ ಸರಮಾಲೆಯಲ್ಲ. ಅದು ಮನುಷ್ಯನೊಬ್ಬ ತನ್ನ ನಡಿಗೆ, ನುಡಿ ಮತ್ತು ಒಡನಾಟದಿಂದ ಉಳಿಸಿಹೋಗುವ ನೆನಪಿನ ಘಮಲು. ಇಂದು ನೂರು ವರ್ಷಗಳ ಈ ನೆನಪಿನ ಬಾಗಿಲಲ್ಲಿ ನಿಂತು ನೋಡಿದಾಗ, ರಾಮಕೃಷ್ಣ ಹೆಗಡೆ ಎನ್ನುವ ಹೆಸರು ಕೇವಲ ಒಬ್ಬ ಮಾಜಿ ಮುಖ್ಯಮಂತ್ರಿಯ ಇತಿಹಾಸವಾಗಿ ಕಾಣುವುದಿಲ್ಲ. ಬದಲಿಗೆ ಸಾರ್ವಜನಿಕ ಬದುಕಿನಲ್ಲೊಂದು ನವಿರಾದ ಅಭಿರುಚಿ, ಸಜ್ಜನಿಕೆ ಮತ್ತು ಸಂಸ್ಕೃತಿಯ ಪ್ರತೀಕವಾಗಿ ಹೊಳೆಯುತ್ತದೆ. ರಾಜಕಾರಣದ ಅಬ್ಬರದ ಶಬ್ದಕೋಶದಲ್ಲಿ ಹೆಗಡೆಯವರ ಧ್ವನಿ ಒಂದು ಮಂದ್ರ ಸಪ್ತಕದ ಗೀತೆಯಂತೆ. ಕಾಲವೆಷ್ಟು ಉರುಳಿದರೂ, ಮಾಸದ ಮುಗುಳ್ನಗುವಿನ, ಶುಭ್ರ ಶ್ವೇತ ವಸ್ತ್ರಧಾರಿಯಾದ ಆ ಕಲಾತ್ಮಕ ನಾಯಕ ಕನ್ನಡಿಗರ ಭಾವಕೋಶದಲ್ಲಿ ಸದಾ ಹಸಿರಾಗಿಯೇ ಉಳಿಯುತ್ತಾರೆ.
•••••••••••• ಸಂಗ್ರಹ
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

About Author

Leave a Reply

Your email address will not be published. Required fields are marked *