AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

79 ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು….

ದಣಿದ ದೇಹಗಳೆಷ್ಟೋ…..ದುಡಿದ ಕೈಗಳೆಷ್ಟೋ….
ಆಳಿದ ತಲೆಗಳೆಷ್ಟೋ….. ಅರಚಿದ ಕಂಠಗಳೆಷ್ಟೋ….
ನಡೆದ ಚಳುವಳಿಗಳೆಷ್ಟೋ…. ನುಸುಳಿದ ದಾಳಿಕೋರರೇಷ್ಟೊ…
ಹೋರಾಡಿ ಮಡಿದ ವೀರರೆಷ್ಟೋ…!!
ಮಡಿದರೂ ಸದಾ ಮನದಲಿ ಮಿಡಿದು ಅಮರರಾದವರೆಷ್ಟೋ……!!!!

ಪ್ರತೀ ವರ್ಷ ಆಗಸ್ಟ್ 15 ರಂದು ದೇಶಾದ್ಯಂತ ಸ್ವಾತಂತ್ರ್ಯ ದಿನಾಚರಣೆ ಆಚರಣೆ ಮಾಡುವುದು ವಾಡಿಕೆ. ಆಗಸ್ಟ್ 15 ಎಂದ ತಕ್ಷಣ ನಮಗೆ ಮೊದಲಿಗೆ ನೆನಪಿಗೆ ಬರುವುದು ಧ್ವಜಾರೋಹಣ, ಬಾವುಟ,ರಾಷ್ಟ್ರಗೀತೆ, ವಂದೇ ಮಾತರಂ, ಝಂಡಾ ಊಂಚ , ಸಮವಸ್ತ್ರ, ಕೇಸರಿ ಬಿಳಿ ಹಸಿರು ಬ್ಯಾಂಡ್,ಭಾಷಣ, ಸಾಂಸ್ಕೃತಿಕ ಕಾರ್ಯಕ್ರಮ, ಮೆರವಣಿಗೆ ಕೊನೆಯಲ್ಲಿ ಸಿಗುವ ಚಾಕಲೇಟ್ ಇಷ್ಟೇ…. ಇವೆಲ್ಲವೂ ನಮ್ಮ ಬಾಲ್ಯದ ನೆನಪುಗಳು 10ನೇ ತರಗತಿವರೆಗೆ ಈ ಎಲ್ಲಾ ಚಟುವಟಿಕೆಗಳು ಶಾಲೆಗಳಲ್ಲಿ ನಡೆಯುವುದು ಸಾಮಾನ್ಯ ಹಾಗೆ ಕಡ್ಡಾಯವೂ ಹೌದು. ಶಾಲಾ ದಿನಗಳಲ್ಲಿ ಆಗಸ್ಟ್ 15 ರಂದು ಸಂಭ್ರಮಿಸಿದ ಕ್ಷಣಗಳು ಪ್ರತಿವರ್ಷ ಮರುಕಳಿಸುತ್ತದೆ. ಕಾಲೇಜಿನ ಮೆಟ್ಟಿಲು ಹತ್ತಿದ ಮೇಲಂತೂ ರಾಷ್ಟ್ರೀಯ ಹಬ್ಬಗಳ ಆಚರಣೆಗೆ ಹಾಜರಾಗುವುದು ಬೆರಳೆಣಿಕೆಯಷ್ಟು ಮಂದಿ ಮಾತ್ರ. ಹಾಗಾಗಿ ಶಾಲೆಯಲ್ಲಿ ನೆಡೆದ ಸಂಭ್ರಮಾಚರಣೆಯ ಸಡಗರವೇ ಹೆಚ್ಚು ಆನಂದ ಕೊಡುವಂತದ್ದು.
ಆದರೆ ಈ ಸಂದರ್ಭದ ಹಿಂದಿನ ರೋಚಕಥೆಯ ಬಗ್ಗೆ ಅಷ್ಟಾಗಿ ನೆನಪಾಗುವುದಿಲ್ಲ. ಈ ದಿನಕ್ಕಾಗಿ ಪರಿತಪಿಸುತ್ತಿದ್ದ ಭಗತ್ ಸಿಂಗ್, ಮಹಾತ್ಮ ಗಾಂಧೀಜಿ, ವಿ.ಡಿ ಸಾವರ್ಕರ್, ಜವಹರಲಾಲ್ ನೆಹರು,ಲಾಲ್ ಬಹದ್ದೂರ್ ಶಾಸ್ತ್ರಿ, ಬಾಲ ಗಂಗಾಧರ್ ತಿಲಕ್, ಸುಭಾಷ್ ಚಂದ್ರಬೋಸ್, ಸುಖದೇವ್, ಸಂಗೊಳ್ಳಿ ರಾಯಣ್ಣ, ಚಂದ್ರಶೇಖರ್ ಆಜಾದ್, ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಕಿತ್ತೂರು ರಾಣಿ ಚೆನ್ನಮ್ಮ, ಲಾಲ ಲಜಪತ್ ರಾಯ್ ಇವರೆಲ್ಲರ ಹೋರಾಟದ ಪ್ರತಿಫಲ 1947ರ ಆಗಸ್ಟ್ 15. ಇಂಥಹ ಸ್ಪೂರ್ತಿದಾಯಕ ವ್ಯಕ್ತಿತ್ವಗಳನ್ನು ಮತ್ತು ಅವರ ಹೋರಾಟ , ತ್ಯಾಗ, ದೇಶಭಕ್ತಿಯನ್ನು ನೆನೆಯುವ ಸುದಿನ ಇಂದು.ಬ್ರಿಟಿಷ್ ಆಳ್ವಿಕೆಯಿಂದ ಹೊರಬಂದು ಸ್ವತಂತ್ರವಾಗಿ ಬದುಕುವ ಅವಕಾಶ ಸಿಕ್ಕಿದ ದಿನ ಇದು. ಭಾರತೀಯರು ತಮ್ಮ ದೇಶದ ಬಗ್ಗೆ ಇರುವ ಪ್ರೀತಿ,ಗೌರವ ,ಅಭಿಮಾನವನ್ನು ಆಚರಣೆಯ ಮೂಲಕ ವ್ಯಕ್ತಪಡಿಸುತ್ತಾರೆ.ಸ್ವಾತಂತ್ರಕ್ಕಾಗಿ ಹೋರಾಡಿ ಮಡಿದ ಅದೆಷ್ಟೋ ಹೋರಾಟಗಾರರನ್ನು ಈ ದಿನ ಸ್ಮರಿಸುತ್ತಾರೆ. ಹಲವು ದಶಕಗಳು ಪ್ರತಿಭಟಿಸಿ,ಚಳುವಳಿಗಳನ್ನು ನಡೆಸಿ, ತ್ಯಾಗ ಬಲಿದಾನ ಮಾಡಿದ ಪ್ರತೀಕ ಈ ದಿನಾಚರಣೆ ಎಂದರೆ ತಪ್ಪಾಗಲಾರದು…. ಅಂಥಹ ಮಹಾನ್ ವ್ಯಕ್ತಿಗಳನ್ನು ಒಂದು ದಿನ ನೆನೆದರೆ ಸಾಲದು. ದೇಶಭಕ್ತಿ,ದೇಶಪ್ರೇಮವೆಂಬುದು ಒಂದು ದಿನ ಆಚರಿಸಿ ತೋರ್ಪಡಿಸುವಂತಹ ಅಂಶ ಅಲ್ಲ. ಅದು ನಿರಂತರವಾಗಿ ದೇಶದ ಒಳಿತಿಗಾಗಿ ಮಿಡಿವ ಅಂತರಂಗದ ಮೃದಂಗ. ಇಂದು ನಾವೆಲ್ಲರೂ ಸ್ವತಂತ್ರ ಭಾರತದಲ್ಲಿ ಬದುಕುತ್ತಿರುವುದರ ಹಿಂದೆ ಸಾವಿರಾರು ಹೋರಾಟಗಾರರ ಪರಿಶ್ರಮ ಹಾಗೂ ತ್ಯಾಗ ಅಪಾರ. ಬ್ರಿಟಿಷ್ ಆಳ್ವಿಕೆಯಿಂದ ಮುಕ್ತಿ ಹೊಂದಿ ಸ್ವ-ಅಧಿಕಾರ ಪಡೆದಿದ್ದು ಭಾರತ ದೇಶವಾದರೂ ತನ್ನ ಸಮಾಜಿಕ ರಚನೆಯನ್ನು ಹಾಳುಗೆಡವಲು ಆಳವಾಗಿ ಬೇರೂರಿರುವ ಜಾತಿ ತಾರತಮ್ಯ,ಲಿಂಗ ತಾರತಮ್ಯ, ಅನಕ್ಷರತೆ, ಶೋಷಣೆ, ಮಹಿಳೆಯರ ಮೇಲೆ ದೌರ್ಜನ್ಯ,ಅಸಮಾನತೆಯ ಬಿಕ್ಕಟ್ಟು ಇಂಥಹ ಹತ್ತು ಹಲವು ಸಾಮಾಜಿಕ ಪಿಡುಗುಗಳ ಬಂಧನದಲ್ಲಿರುವುದು ಶೋಚನೀಯ…ಭಾರತ ಅಧಿಕಾರದಲ್ಲಿ ಸ್ವತಂತ್ರವಾಗಿರಬಹುದು ಆದರೆ ಸಂಪೂರ್ಣವಾಗಿ ಸ್ವತಂತ್ರ ದೊರಕಲು ಸಾಮಾಜಿಕ ಪಿಡುಗುಗಳಿಂದ ಮುಕ್ತಿ ಹೊಂದಬೇಕು…ದೇಶದ ಏಕತೆ ಮತ್ತು ಸಂಸ್ಕೃತಿಯನ್ನು ಬೆಳೆಸುವ ಜವಾಬ್ದಾರಿ ಯುವಜನತೆಯ ಹೆಗಲೇರಿದೆ. ಸಧೃಡ ದೇಶವನ್ನು ಕಟ್ಟುವ ಹಾದಿಯಲ್ಲಿ ಮುಳ್ಳಿನಂತೆ ಇರುವ ಪಿಡುಗುಗಳನ್ನು ತೊಡೆದು ಹಾಕಿ ಆತ್ಮನಿರ್ಬರ ಭಾರತವನ್ನು ಕಟ್ಟುವ ಚಿತ್ತ ಯುವಪೀಳಿಗೆಯದಾಗಬೇಕು. ಸಾಮಾಜಿಕವಾಗಿ, ಆರ್ಥಿಕವಾಗಿ,ವೈಜ್ಞಾನಿಕವಾಗಿ,ತಾಂತ್ರಿಕವಾಗಿ ಸ್ವಾವಲಂಬಿಯಾಗುವ ಧ್ಯೇಯದತ್ತ ಭಾರತ ಹೆಜ್ಜೆ ಹಾಕುತ್ತಿದೆ. ಕಳೆದ 78 ವರ್ಷಗಳಿಂದ ತನ್ನದೇ ಆದ ಅಧಿಕಾರಶಾಹಿಯನ್ನು ಕಂಡುಕೊಂಡು ಸಂವಿಧಾನಾತ್ಮಕವಾಗಿ ಅಂಗೀಕರಿಸಿ ಅದನ್ನು ಮುಂದುವರಿಸಿಕೊಂಡು ಏಳಿಗೆಯತ್ತ ಸಾಗುತ್ತಿರುವ ಭಾರತ ದೇಶವು ಮುಂದೊಂದು ದಿನ ಯಾವ ದೇಶವನ್ನೂ ಅವಲಂಬಿಸದೆ ಜಗತ್ತಿನ ಅಭಿವೃದ್ಧಿ ರಾಷ್ಟ್ರಗಳ ಪಟ್ಟಿಯಲ್ಲಿ ಮೊದಲನೇ ಸ್ಥಾನ ಪಡೆದುಕೊಳ್ಳುವುದರಲ್ಲಿ ಸಂಶಯವಿಲ್ಲ ….

” ನಡೆ ಮುನ್ನಡೆ, ಸ್ವತಂತ್ರ ಭಾರತದ ಕಡೆ……”

– ಹರಿಣಿಮಹೇಶ್.ಬೆಟ್ಟಗೆರೆ..

About Author

Leave a Reply

Your email address will not be published. Required fields are marked *

You may have missed