“ನಿಯಮ ಉಲ್ಲಂಘಿಸಿ ನಡೆಯುತ್ತಿರುವ ಹೋಂಸ್ಟೇಗಳ ವಿರುದ್ಧ ಕಠಿಣ ಕ್ರಮಕ್ಕೆ ಒತ್ತಾಯ.”
1 min read
ಚಿಕ್ಕಮಗಳೂರು:ಜಿಲ್ಲೆಯಲ್ಲಿ ಹೋಂಸ್ಟೇಗಳ ಹೆಸರಿನಲ್ಲಿ ನಿಯಮ ಉಲ್ಲಂಘಿಸಿ ನಡೆಸಲಾಗುತ್ತಿರುವ ವಾಣಿಜ್ಯ ಚಟುವಟಿಕೆಗಳ ವಿರುದ್ಧ ಜಿಲ್ಲಾಡಳಿತ ಹಾಗೂ ಪ್ರವಾಸೋದ್ಯಮ ಇಲಾಖೆ ಕಠಿಣ ಕ್ರಮ ಕೈಗೊಳ್ಳಬೇಕು ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.


ಹೋಂಸ್ಟೇ ಪರಿಕಲ್ಪನೆಯ ಮೂಲ ಉದ್ದೇಶ “ಅತಿಥಿ ದೇವೋ ಭವ” ಎಂಬ ತತ್ವದಡಿ, ಮನೆಯಲ್ಲಿಯೇ ಅತಿಥಿಗಳಿಗೆ ವಾಸ್ತವ್ಯ, ಊಟೋಪಚಾರ ಹಾಗೂ ಆತಿಥ್ಯ ನೀಡುವುದಾಗಿದೆ. ನಿಯಮಾನುಸಾರ ಹೋಂಸ್ಟೇ ಮಾಲೀಕರು ಅದೇ ಮನೆಯಲ್ಲಿ ವಾಸವಿದ್ದು, ಅತಿಥಿಗಳಿಗೆ ನೇರವಾಗಿ ಸೇವೆ ಒದಗಿಸಬೇಕಾಗಿದೆ.
ಆದರೆ ಇತ್ತೀಚಿನ ದಿನಗಳಲ್ಲಿ ಬೆಂಗಳೂರು ಸೇರಿದಂತೆ ಹೊರವಲಯದ ಕೆಲವರು ಗ್ರಾಮೀಣ ಪ್ರದೇಶಗಳಲ್ಲಿ ಒಂದು ಅಥವಾ ಎರಡು ಎಕರೆ ತೋಟಗಳನ್ನು ಖರೀದಿಸಿ ಮನೆ ನಿರ್ಮಿಸಿ, ತಾವೇ ಅಲ್ಲಿದ್ದು ಸೇವೆ ನೀಡುವ ಬದಲು ಕೇರ್‌ಟೇಕರ್‌ಗಳನ್ನು ನೇಮಿಸಿ ಹೋಂಸ್ಟೇಗಳನ್ನು ನಡೆಸುತ್ತಿರುವ ಪ್ರಕರಣಗಳು ಹೆಚ್ಚುತ್ತಿವೆ ಎಂದು ಆರೋಪಿಸಲಾಗಿದೆ.

ಇಂತಹ ಹೋಂಸ್ಟೇಗಳಲ್ಲಿ ಮಾಲೀಕರು ಸ್ಥಳದಲ್ಲೇ ಇಲ್ಲದ ಕಾರಣ ಮೇಲ್ವಿಚಾರಣೆಯ ಕೊರತೆ ಉಂಟಾಗುತ್ತಿದ್ದು, ಕೆಲವೆಡೆ ಅಹಿತಕರ ಘಟನೆಗಳು ನಡೆಯುತ್ತಿರುವ ಬಗ್ಗೆ ದೂರುಗಳು ಕೇಳಿಬರುತ್ತಿವೆ. ಅಲ್ಲದೆ ಮೋಜು-ಮಸ್ತಿ, ಜೋರಾದ ಸಂಗೀತ ಹಾಗೂ ಇತರೆ ಚಟುವಟಿಕೆಗಳಿಂದ ಸುತ್ತಮುತ್ತಲಿನ ನಿವಾಸಿಗಳಿಗೆ ತೀವ್ರ ತೊಂದರೆಯಾಗುತ್ತಿದೆ ಎನ್ನಲಾಗಿದೆ.
ಹೀಗಾಗಿ ಹೋಂಸ್ಟೇ ನಿಯಮಗಳನ್ನು ಉಲ್ಲಂಘಿಸಿ ನಡೆಸಲಾಗುತ್ತಿರುವ ಇಂತಹ ಸಂಸ್ಥೆಗಳನ್ನು ಜಿಲ್ಲಾಡಳಿತ ಮತ್ತು ಪ್ರವಾಸೋದ್ಯಮ ಇಲಾಖೆ ಗುರುತಿಸಿ ಪರಿಶೀಲನೆ ನಡೆಸಬೇಕು. ನಿಯಮ ಪಾಲಿಸದ ಹೋಂಸ್ಟೇಗಳ ವಿರುದ್ಧ ಕಾನೂನುಬದ್ಧ ಹಾಗೂ ಕಠಿಣ ಕ್ರಮ ಕೈಗೊಂಡು, ಹೋಂಸ್ಟೇ ವ್ಯವಸ್ಥೆಯ ಮೂಲ ಉದ್ದೇಶವನ್ನು ಕಾಪಾಡಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ.
✍ಬರಹ ಕೃಪೆ.✍

ಹೊಲದಗದ್ದೆ ಗಿರೀಶ್.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

