“ಕೂಲಿ ಹಣದ ವಿವಾದ : ತೋಟದ ಮಾಲೀಕ ಹಾರಿಸಿದ ಗುಂಡು 4 ವರ್ಷದ ಬಾಲಕನ ತಲೆಗೆ ತಗುಲಿ ಗಾಯ”
1 min read
ಮೂಡಿಗೆರೆ:ಕೂಲಿ ಹಣದ ವಿಚಾರವಾಗಿ ಕಾಫಿ ತೋಟದ ಮಾಲೀಕ ಮತ್ತು ಕಾರ್ಮಿಕರ ನಡುವೆ ಉಂಟಾದ ವಾಗ್ವಾದದ ವೇಳೆ ತೋಟದ ಮಾಲೀಕ ಹಾರಿಸಿದ ಗುಂಡು ನಾಲ್ಕು ವರ್ಷದ ಬಾಲಕನ ತಲೆಗೆ ತಗುಲಿ ಗಾಯಗೊಂಡ ಘಟನೆ ತಾಲ್ಲೂಕಿನ ಬಾಳೆಹಳ್ಳಿ ಗ್ರಾಮದಲ್ಲಿ ಶುಕ್ರವಾರ ನಡೆದಿದೆ.
ಬಾಳೆಹಳ್ಳಿ ಗ್ರಾಮದ ಜಗದೀಶ್ ಅವರಿಗೆ ಸೇರಿದ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಕಾರ್ಮಿಕರು ದಿನಕ್ಕೆ ₹400 ಕೂಲಿ ನೀಡುವಂತೆ ಬೇಡಿಕೆ ಇಟ್ಟಿದ್ದರು. ಇದಕ್ಕೆ ಪ್ರತಿಕ್ರಿಯಿಸಿದ ತೋಟದ ಮಾಲೀಕರು, ಸದ್ಯಕ್ಕೆ ₹350 ನೀಡುವುದಾಗಿ ಹಾಗೂ ಉಳಿದ ₹50ನ್ನು ನಂತರ ಪಾವತಿಸುವುದಾಗಿ ತಿಳಿಸಿದ್ದರು.
ಆದರೆ ಇದಕ್ಕೆ ಒಪ್ಪದ ಕಾರ್ಮಿಕರು, ಸಂಪೂರ್ಣ ಕೂಲಿಯನ್ನು ತಕ್ಷಣವೇ ನೀಡುವಂತೆ ಒತ್ತಾಯಿಸಿದರು. ಅಲ್ಲದೆ, ಸಮೀಪದ ತೋಟಗಳಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಮೂಲದ ಇತರ ಕಾರ್ಮಿಕರನ್ನೂ ಕರೆಸಿಕೊಂಡು ತೋಟದ ಮಾಲೀಕರೊಂದಿಗೆ ವಾಗ್ವಾದ ನಡೆಸಿದರು.
ಮಾತಿನ ಚಕಮಕಿ ತೀವ್ರಗೊಂಡ ವೇಳೆ ಕಾರ್ಮಿಕರನ್ನು ಹೆದರಿಸುವ ಉದ್ದೇಶದಿಂದ ತೋಟದ ಮಾಲೀಕ ತೋಟಕೋವಿ ಮೂಲಕ ಗುಂಡು ಹಾರಿಸಿದ್ದು, ಅದು ಸಮೀಪದಲ್ಲೇ ಆಟವಾಡುತ್ತಿದ್ದ ನಾಲ್ಕು ವರ್ಷದ ಬಾಲಕನ ತಲೆಯ ಒಂದು ಭಾಗಕ್ಕೆ ತಗುಲಿ ಗಾಯಗೊಂಡಿದೆ ಎಂದು ತಿಳಿದುಬಂದಿದೆ.
ಗಾಯಗೊಂಡ ಬಾಲಕನಿಗೆ ಮೊದಲು ಮೂಡಿಗೆರೆಯ ಮಹಾತ್ಮ ಗಾಂಧಿ ಸ್ಮಾರಕ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಲಾಗಿದ್ದು, ಬಳಿಕ ಹೆಚ್ಚಿನ ಚಿಕಿತ್ಸೆಗೆ ಮಂಗಳೂರಿನ ಆಸ್ಪತ್ರೆಗೆ ರವಾನಿಸಲಾಗಿದೆ.
ಈ ಸಂಬಂಧ ಮೂಡಿಗೆರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಆರೋಪಿಯನ್ನು ಶೀಘ್ರದಲ್ಲೇ ಬಂಧಿಸಲಾಗುವುದು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿತೇಂದ್ರಕುಮಾರ್ ದಯಾಮ ತಿಳಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

