लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
17/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಡಿ.ವಿ.ಜಿ ಅವರ ಕನ್ನಡದ ಕಗ್ಗ ಹಿಂದಿ ನೆಲಕ್ಕೂ ಸ್ಪರ್ಶ : ಸಾಹಿತಿ ರಮೇಶ್ ಬೊಂಗಾಳೆ ಅವರ ಸಾಧನೆಗೆ ವಾಗ್ಮಿ ಜಿ.ಎಸ್.ನಟೇಶ್ ಶ್ಲಾಘನೆ.”

1 min read

ಅವಿನ್ ಟಿವಿ ಸುದ್ದಿಜಾಲ:ಚಿಕ್ಕಮಗಳೂರು ಆ 09, ಕನ್ನಡದ ಮೇರು ಸಾಹಿತಿ ಡಿ.ವಿ.ಗುಂಡಪ್ಪನವರು ಬದುಕಿದ್ದಾಗಲೇ ಅವರ ಮಂಕುತಿಮ್ಮನ ಕಗ್ಗ ಕೃತಿ ಇಂಗ್ಲೀಷ್ ಅಥವಾ ಹಿಂದಿ ಭಾಷೆಗೆ ಅನುವಾದವಾಗಿದ್ದರೆ ಆ ಕೃತಿಗೆ ಜ್ಞಾನಪೀಠ ಪ್ರಶಸ್ತಿ ದೊರೆಯುತ್ತಿತ್ತು ಎಂದು ಮಂಕುತಿಮ್ಮನ ಕಗ್ಗ ಪ್ರವಚನ ಖ್ಯಾತಿಯ ವಾಗ್ಮಿ ಶಿವಮೊಗ್ಗದ ಜಿ.ಎಸ್. ನಟೇಶ್ ಹೇಳಿದರು.

ಬೊಂಗಾಳೆ ಪ್ರಕಾಶನ, ಕಲ್ಕಟ್ಟೆ ಪುಸ್ತಕದ ಮನೆ, ನಗರದ ಕುವೆಂಪು ಕಲಾಮಂದಿರದಲ್ಲಿ ಭಾನುವಾರ ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ ಅವರ ಮಂಕುತಿಮ್ಮನ ಕಗ್ಗ ಕೃತಿಯ ಹಿಂದಿ ಅನುವಾದ ಮತ್ತು ವ್ಯಾಖ್ಯಾನ ಕೃತಿಯನ್ನು ಲೋಕಾರ್ಪಣೆ ಮಾಡಿ ಅವರು ಮಾತನಾಡಿದರು.

ಕನ್ನಡದ ಭಗವದ್ಗೀತೆ ಎಂದೇ ಖ್ಯಾತವಾಗಿರುವ ಡಿವಿಜಿ ಅವರ ಮಂಕುತಿಮ್ಮನ ಕಗ್ಗ ಕನ್ನಡ ಭಾಷೆಯಲ್ಲಿ ಇದ್ದುದರಿಂದ ಅದಕ್ಕೆ ಜ್ಞಾನಪೀಠ ಪ್ರಶಸ್ತಿ ಬರಲಿಲ್ಲ ಎಂದು ವಿಷಾದಿಸಿದ ಅವರು ಮಂಕುತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ಅನುವಾದ ಮಾಡುವುದು ಅಷ್ಟು ಸುಲಭದ ಕೆಲಸವಲ್ಲ, ಈ ಹಿಂದೆ ಸಾಹಿತಿ ಸರೋಜಿನಿ ಮಹಿಷಿ ಅವರು ಕಗ್ಗದ ಕೆಲವು ಸಾಲುಗಳನ್ನಷ್ಟೇ ಅನುವಾದ ಮಾಡಿದ್ದರು, ಇದುವರೆಗೂ ಅದನ್ನು ಸಂಪೂರ್ಣವಾಗಿ ಅನುವಾದ ಮಾಡಲು ಸಾಧ್ಯವಾಗಿಲ್ಲ, ಅದನ್ನು ಸಾಹಿತಿ ರಮೇಶ್ ಬೊಂಗಾಳೆ ಅವರು ಯಶಸ್ವಿಯಾಗಿ ಸಾಧಿಸಿದ್ದಾರೆ ಎಂದು ಶ್ಲಾಘಿಸಿದರು.
ಪುಸ್ತಕ ಬರೆಯುವವರ ಸಂಖ್ಯೆ ಇಂದು ಹೆಚ್ಚುತ್ತಿದೆ, ಆದರೆ ಓದುವವರ ಸಂಖ್ಯೆ ಕ್ಷೀಣಿಸುತ್ತಿದೆ, ಸಮಾಜದಲ್ಲಿ ಓದುವ ಹವ್ಯಾಸ ದೂರವಾಗುತ್ತಿದೆ ಎಂದು ವಿಷಾದಿಸಿದ ಅವರು ಯಾವ ಸಮಾಜದಲ್ಲಿ ಓದು ಬಿದ್ದು ಹೋಗುತ್ತದೆಯೋ ಆ ಸಮಾಜ ಆದಷ್ಟು ಬೇಗ ಅದ:ಪತನವಾಗುತ್ತದೆ ಎಂದು ಎಚ್ಚರಿಸಿದರು.
ಹಿಂದಿನ ಕಾಲದಲ್ಲಿ ನಮ್ಮನ್ನಾಳುತ್ತಿದ್ದ ರಾಜರುಗಳಿಗೆ ಶಸ್ತ್ರ ಜ್ಞಾನ ಮತ್ತು ಶಾಸ್ತ್ರ ಜ್ಞಾನವಿತ್ತು ಹಾಗಾಗಿ ಸಂಗೀತ ಸಾಹಿತ್ಯ ಕಲೆ ಅಂದು ಬೆಳೆಯುತ್ತಿದ್ದವು ಆದರೆ ಇಂದಿನ ರಾಜರುಗಳಿಗೆ ಶಸ್ತ್ರ ಜ್ಞಾನ ಮತ್ತು ಶಾಸ್ತ್ರ ಜ್ಞಾನವಿಲ್ಲ ಹಾಗಾಗಿ ಸಂಗೀತ ಸಾಹಿತ್ಯ ಕಲೆ ಬೆಳೆಯುತ್ತಿಲ್ಲ ಎಂದರು.
ಸಾಹಿತಿ ರಮೇಶ್ ಬೊಂಗಾಳೆ ಅವರು ಮಂಕುತಿಮ್ಮನ ಕಗ್ಗವನ್ನು ಡಿವಿಜಿ ಅವರಂತೆಯೇ ಅತ್ಯಂತ ಸರಳವಾಗಿ ಅನುವಾದಿಸಿದ್ದಾರೆ, ಮಂಕುತಿಮ್ಮನ ಕಗ್ಗವನ್ನು ಓದುವುದರಿಂದ ಬದುಕುವ ರೀತಿ, ಬದುಕುವ ಕಲೆ ನಮಗೆ ಸಿದ್ದಿಸುತ್ತದೆ, ಇಂತಹ ಸಾಹಿತ್ಯದ ಕಾರ್ಯಕ್ರಮಗಳಿಗೆ ಕಲಾಮಂದಿರ ಜನರಿಂದ ತುಂಬಿ ತುಳುಕಬೇಕು ಆಗ ಮಾತ್ರ ಆರೋಗ್ಯವಂತ ಸಮಾಜದ ನಿರ್ಮಾಣವಾಗುತ್ತದೆ ಎಂದು ತಿಳಿಸಿದರು.

ರಮೇಶ್ ಬೊಂಗಾಳೆ ಅವರ ಬದುಕುವ ಕಲೆ ಮತ್ತು ಅರಿವಿನ ಹಾದಿ ಕೃತಿಯನ್ನು ಬಿಡುಗಡೆಗೊಳಿಸಿ ಮಾತನಾಡಿದ ಕರ್ನಾಟಕ ಮುಕ್ತ ವಿಶ್ವವಿದ್ಯಾಲಯದ ಭಾಷಾ ವಿಜ್ಞಾನಿ ಡಾ,ವಿಜಯಕುಮಾರ್ ಅವರೇಕಾಡು ವಿಶ್ವ ಪುಸ್ತಕ ಪ್ರೇಮಿಗಳ ದಿನದಂದೇ ಇಂತಹ ವಿಶೇಷ ಕೃತಿಗಳು ಲೋಕಾರ್ಪಣೆಗೊಂಡಿರುವುದು ತಮಗೆ ಅತ್ಯಂತ ಸಂತಸ ತಂದಿದೆ ಎಂದರು.
ಕನ್ನಡದ ಭಗವದ್ಗೀತೆ ಎಂದೇ ಪ್ರಸಿದ್ಧವಾದ ಮಂಕುತಿಮ್ಮನ ಕಗ್ಗವನ್ನು ಹಿಂದಿ ಭಾಷೆಗೆ ಅನುವಾದ ಮಾಡಿರುವ ರಮೇಶ್ ಬೊಂಗಾಳೆ ಅವರ ಸಾಧನೆ ಅಪಾರ ಮತ್ತು ಅದ್ಭುತವಾಗಿದೆ ಎಂದರು.

ಸಾಹಿತಿ ಡಾ.ಬೆಳವಾಡಿ ಮಂಜುನಾಥ ಮಾತನಾಡಿ ರಮೇಶ ಬೊಂಗಾಳೆ ಉತ್ತಮ ಅನುವಾದಕ,
ಧ್ಯಾನಸ್ಥ ಮನಮಃಸ್ಥಿತಿ ಹಾಗೂ ಸ್ವವಿಮರ್ಶೆ ಇರದಿದ್ದರೆ ಉತ್ತಮ ಕೃತಿ ಬರಲು ಸಾಧ್ಯವಿಲ್ಲ. ಅಧ್ಯಯನ ,ಅನುಭವ ಲೇಖಕನನ್ನು ಪರಿಷ್ಕರಣಗೊಳಿಸುತ್ತದೆ. ರಮೇಶ್ ಬೊಂಗಾಳೆ ಅವರ ಸಾಹಿತ್ಯವನ್ನು ಸೃಜನಶೀಲ ಸಾಹಿತ್ಯ ಮತ್ತು ಅನುವಾದ ಸಾಹಿತ್ಯ ಎಂಬ ಎರಡು ನೆಲೆಯಲ್ಲಿ ಗುರುತಿಸಬೇಕು.
ಸೃಜನಶೀಲ ಎಂದು ಭಾವಿಸಿರುವ ಅವರ ಅಭಿವ್ಯಕ್ತಿ ಕೇವಲ ನೈತಿಕ ಮೌಲ್ಯಗಳನ್ನು ಸಾದರ ಪಡಿಸುವ ಸಂಕಲನಗಳಾಗಿವೆ. ನೀತಿಯನ್ನು ವಿವಿಧ ಮುಖಗಳಲ್ಲಿ ಹೇಳುವ. ಪ್ರಯತ್ನ ಮಾಡಿದ್ದಾರೆ. ಆದರೆ ಅನುವಾದ ಕ್ಷೇತ್ರದಲ್ಲಿ ಅವರಿಗಿರುವ ಪ್ರತಿಭೆ ಅಗಾಧವಾದುದು.ಅವರು ಕನ್ನಡ ಹಾಗೂ ಹಿಂದಿ ಭಾಷೆಯ ನಡುವಿನ ಸೇತುವೆಯಾಗಿದ್ದಾರೆ.ಮೂಲ ಕೃತಿಯ ಆಶಯಕ್ಕೆ ಧಕ್ಕೆ ಬಾರದಂತೆ ಭಾವದ ಎಳೆಯನ್ನು ಹಿಡಿದು ತರ್ಜುಮೆ ಮಾಡುವ ಸಾಮರ್ಥ್ಯ ಅವರಿಗಿದೆ. ಈ ನೆಲೆಯಲ್ಲಿ ಕಗ್ಗದ ಕಲೆ ಕೃತಿ ಕಳಶ ಪ್ರಾಯವಾದುದು.
ಹಲವು ವರ್ಷಗಳ ಅವಿರತ ಪ್ರಯತ್ನದಿಂದ ಡಿವಿಜಿ ಅವರ 945 ಕಗ್ಗ ಗಳನ್ನೂ ವ್ಯಾಖ್ಯಾನ ಸಹಿತ ಪ್ರಕಟಿಸಲು ಸಾಧ್ಯವಾಗಿದೆ.ಕೆವಲ ಒಂದು ಕೃತಿಯ ಅವಲೋನದಿಂದu ಸಾಹಿತಿಯ ಮಹತ್ವವನ್ನು ಹೇಳುವುದು ಸರಿಯಾದ ಕ್ರಮವಲ್ಲ. ಸಮಗ್ರವಾಗಿ ಗ್ರಹಿಸಿದಾಗ ಮಾತ್ರ ಅಭಿವ್ಯಕ್ತಿಯ ಹರವನ್ನು ಮೌಲ್ಯೀಕರಿಸಬೇಕು. ಹಾಗೆ ನೋಡಿದರೆ ಬೊಂಗಾಳೆ ಅನುವಾದಕರಾಗಿ ದೀರ್ಘಕಾಲ ಉಳಿಯಬಲ್ಲ ಸಾಹಿತಿಯಾಗಿದ್ದಾರೆ ಎಂದರು .

ಪ್ರಾಸ್ತಾವಿಕವಾಗಿ ಮಾತನಾಡಿದ ಸಾಹಿತಿ ಬಿ.ಎನ್.ರಮೇಶ್ ಬೊಂಗಾಳೆ ಮಂಕುತಿಮ್ಮನ ಕಗ್ಗ ಕೃತಿಯನ್ನು ಹಿಂದಿ ಭಾಷೆಗೆ ಅನುವಾದಿಸಲು ತಮಗೆ ಮೂರು ವರ್ಷಗಳು ಬೇಕಾದವು, ಅದನ್ನು ಅನುವಾದಿಸಿ ಸಾಮಾಜಿಕ ಜಾಲತಾಣಕ್ಕೆ ಮತ್ತು ವಾಟ್ಸಾಪ್ ನಲ್ಲಿ ಹಾಕುವ ಇಚ್ಛೆ ತಮಗಿತ್ತು ಆದರೆ ಎಂ.ಆರ್. ಗುರುಮೂರ್ತಿ ದಂಪತಿ ಸಂಪೂರ್ಣ ವೆಚ್ಚವನ್ನು ತಾವೇ ಭರಿಸಿ ಅನುವಾದವನ್ನು ಪುಸ್ತಕವಾಗಿ ಪ್ರಕಟಿಸಿದ್ದಾರೆ ಎಂದು ತಿಳಿಸಿದರು.
ಕೃತಿಯ ಅನುವಾದಕ್ಕೆ ಮತ್ತು ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದ ಅವರು ಮಂಕುತಿಮ್ಮನ ಕಗ್ಗವನ್ನು ಓದುವುದರಿಂದ ಮನಸ್ಸಿಗೆ ಸಂಸ್ಕಾರ ದೊರೆಯುತ್ತದೆ ಎಂದು ಹೇಳಿದರು.

ಕಾಫಿ ಬೆಳೆಗಾರ ಎಂ.ಆರ್. ಗುರುಮೂರ್ತಿ ಕಾರ್ಯಕ್ರಮವನ್ನು ಉದ್ಘಾಟಿಸಿದರು, ಸುಜಾತ ಗುರುಮೂರ್ತಿ ಕಗ್ಗದ ಹಿಂದಿ ದ್ವನಮುದ್ರಿಕೆಯನ್ನು ಬಿಡುಗಡೆಗೊಳಿಸಿದರು, ಸಮಾರಂಭದ ನಡುವೆ ಶ್ರೀಕಂಠೇಶ್ವರ ನೃತ್ಯ ಶಾಲೆಯ ವಿದ್ಯಾರ್ಥಿಗಳಿಂದ ನೃತ್ಯ ಪ್ರದರ್ಶನ ನಡೆಯಿತು.
ಬದುಕುವ ಕಲೆ ಮತ್ತು ಅರಿವಿನ ಹಾದಿ ಕೃತಿಯ ಕುರಿತು ಸುಮಾಪ್ರಸಾದ್, ಕಲ್ಕಟ್ಟೆ ಪುಸ್ತಕದ ಮನೆಯ ಸಂಸ್ಥಾಪಕಿ ರೇಖಾ ನಾಗರಾಜ ರಾವ್ ಮಾತನಾಡಿದರು.

ಈ ಸಂದರ್ಭದಲ್ಲಿ ಆಶಾಕಿರಣ ಅಂಧ ಮಕ್ಕಳ ಶಾಲೆಯ ಅಧ್ಯಕ್ಷ ಡಾ.ಜೆ.ಪಿ.ಕೃಷ್ಣೇಗೌಡ ಅಧ್ಯಕ್ಷತೆ ವಹಿಸಿದ್ದರು. ಸಾಹಿತಿ ನಾಗರಾಜರಾವ್ ಕಲ್ಕಟ್ಟೆ,ರಾಯಾನಾಯಕ್,ಎಸ್. ಪಿ. ಅಶೋಕ್ ಉಪಸ್ಥಿತರಿದ್ದರು.
•••••••••••••

✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥ ಸ್ವಾಮಿ.
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

Leave a Reply

Your email address will not be published. Required fields are marked *