“ಗ್ರಾಮೀಣ ರಸ್ತೆ ಹಾಳಾದರೆ ಜಲಮೂಲಕ್ಕೆ ಧಕ್ಕೆ,ಸಿರಿವಂತರ ಮೋಜಿನ ಆಟ ಆಫ್ ರೋಡ್ ಸಾಹಸಕ್ಕೆ ಕಟ್ಟುನಿಟ್ಟಿನ ಕ್ರಮ : ಸಚಿವ ಈಶ್ವರ್ ಖಂಡ್ರೆ ಸೂಚನೆ.”
1 min read
ಅವಿನ್ ಟಿವಿ ಸುದ್ದಿಜಾಲ : ಬೆಂಗಳೂರು ಆ 12: ಬೆಂಗಳೂರಿನ ಸಾಹಸಿಗರ ಸಂಸ್ಥೆಯೊಂದು ಇದೇ ಆಗಸ್ಟ್ 15 ಮತ್ತು 16ರಂದು ಕುದುರೆಮುಖದಲ್ಲಿ ಆಫ್ ರೋಡ್ ಸಾಹಸ ಆಯೋಜಿಸಿದ್ದು, ಇದರಿಂದ ಜಲಮೂಲ ಕಲುಷಿತವಾದರೆ ಮತ್ತು ಗ್ರಾಮೀಣ ರಸ್ತೆ ನಾಶವಾದರೆ ಕಠಿಣ ಕ್ರಮ ಜರುಗಿಸುವಂತೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವ ಈಶ್ವರ ಬಿ ಖಂಡ್ರೆ ಸೂಚನೆ ನೀಡಿದ್ದಾರೆ.


ಚಿಕ್ಕಮಗಳೂರು ಜಿಲ್ಲಾ ಪಂಚಾಯತಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ಈ ಸಂಬಂಧ ಲಿಖಿತ ಸೂಚನೆ ನೀಡಿರುವ ಅವರು, ಆ.15, 16ರಂದು ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದಲ್ಲಿ ಆಫ್ ರೋಡ್ ಅಡ್ವೆಂಚರ್ ನಡೆಸುತ್ತಿರುವುದಾಗಿ ಬೆಂಗಳೂರಿನ ಒಂದು ಸಂಸ್ಥೆ ಪ್ರಚಾರ ಮಾಡಿದ್ದು, ಈ ಆಫ್ -ರೋಡ್ ನಲ್ಲಿ ನದಿಗಳನ್ನು ದಾಟುವ, ಮಣ್ಣು ದಾರಿಯಲ್ಲಿ ಸಾಗುವ, ಬೆಟ್ಟ ಗುಡ್ಡ ಹತ್ತಿ ಇಳಿಯುವ ಸಾಹಸದ ಅವಕಾಶವಿದೆ ಎಂದು ಹೇಳಿಕೊಂಡಿದೆ. ಇದರಿಂದ ರಸ್ತೆಗಳು ಹಾಳಾಗದಂತೆ ಕ್ರಮ ವಹಿಸಲು ಸೂಚಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದ ಜೀವವೈವಿಧ್ಯತೆಗಳ ತಾಣವಾದ ಮತ್ತು ಸೂಕ್ಷ್ಮತೆ ಸೂಕ್ಷ್ಮ ಪರಿಸರ ಹಾಗೂ ನದಿ, ತೊರೆ ಸೇರಿದಂತೆ ಜಲಮೂಲಗಳ ಸಂರಕ್ಷಣೆಯ ದೃಷ್ಟಿಯಿಂದ ಸಾಹಸಿ ವಾಹನಗಳ ಆಫ್‌ರೋಡ್ ಚಟುವಟಿಕೆಗಳಿಗೆ ನಿಯಂತ್ರಣ ಹೇರುವಂತೆ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗೆ ಸೂಚಿಸಲಾಗಿದೆ.
ಬೆಂಗಳೂರಿನ ಸಂಸ್ಥೆಯೊಂದು ಕುದುರೆಮುಖದಲ್ಲಿ ಆಫ್‌ರೋಡ್ ಅಡ್ವೆಂಚರ್ ನಡೆಸುತ್ತಿರುವುದಾಗಿ ಪ್ರಚಾರ ಮಾಡಿದ್ದು, ನದಿಗಳನ್ನು ದಾಟುವುದು, ಕೆಸರು-ಮಣ್ಣಿನ ದಾರಿಗಳಲ್ಲಿ ಸಂಚರಿಸುವುದು ಹಾಗೂ ಬೆಟ್ಟ-ಗುಡ್ಡಗಳನ್ನು ಹತ್ತಿ ಇಳಿಯುವ ಸಾಹಸಕ್ಕೆ ಅವಕಾಶವಿದೆ ಎಂದು ತಿಳಿಸಿರುವ ಹಿನ್ನೆಲೆಯಲ್ಲಿ ಈ ಸೂಚನೆ ನೀಡಲಾಗಿದೆ.
ಭಾರತದ ಸಂವಿಧಾನದ ವಿಧಿ 51ಎ(ಜಿ)ಯನ್ನು ಉಲ್ಲೇಖಿಸಿರುವ ಅರಣ್ಯ, ಪರಿಸರ ಮತ್ತು ಪರಿಸರ ವಿಜ್ಞಾನ ಸಚಿವ ಈಶ್ವರ ಖಂಡ್ರೆ, ನದಿ, ಅರಣ್ಯ, ಸರೋವರ, ವನ್ಯಜೀವಿಗಳು ಸೇರಿದಂತೆ ನೈಸರ್ಗಿಕ ಪರಿಸರವನ್ನು ರಕ್ಷಿಸುವುದು ಪ್ರತಿಯೊಬ್ಬ ಭಾರತೀಯನ ಕರ್ತವ್ಯವಾಗಿದೆ ಎಂದು ಹೇಳಿದ್ದಾರೆ. ಜೀವಂತ ಜೀವಿಗಳ ಬಗ್ಗೆ ಸಹಾನುಭೂತಿ ಹೊಂದುವುದು ಕೂಡ ಸಂವಿಧಾನಬದ್ಧ ಕರ್ತವ್ಯವಾಗಿದೆ ಎಂದಿದ್ದಾರೆ.
ಆಫ್‌ರೋಡ್ ಸಾಹಸಕ್ಕಾಗಿ ಬಳಸುವ ವಾಹನಗಳಿಗೆ ದಪ್ಪ ಹಾಗೂ ಪರಿವರ್ತಿತ ಟೈರ್‌ಗಳನ್ನು ಅಳವಡಿಸುವುದರಿಂದ, ಅದರಲ್ಲೂ ಮಳೆಯಿಂದ ತೊಯ್ದಿರುವ ರಸ್ತೆಗಳ ಮೇಲೆ ವಾಹನಗಳು ವೇಗವಾಗಿ ಸಂಚರಿಸುವುದರಿಂದ ಗ್ರಾಮೀಣ ರಸ್ತೆಗಳು ಹಾಳಾಗುವ ಸಾಧ್ಯತೆ ಇದೆ. ಬೆಟ್ಟ-ಗುಡ್ಡಗಳ ಮೇಲ್ಮೈ ಪದರ ಸವಕಳಿಯಾಗಿ ಮಳೆಯ ಸಂದರ್ಭದಲ್ಲಿ ಮಣ್ಣು ಕೊಚ್ಚಿಕೊಂಡು ಬಂದು ಕೆರೆ, ಕಟ್ಟೆ, ಸರೋವರ ಸೇರಿದಂತೆ ಜಲಮೂಲಗಳಲ್ಲಿ ಹೂಳು ಹೆಚ್ಚಾಗುವ ಅಪಾಯವೂ ಇದೆ. ಇದರಿಂದ ಜಲಮೂಲಗಳ ನೀರು ಸಂಗ್ರಹಿಸುವ ಸಾಮರ್ಥ್ಯ ಕುಸಿಯಬಹುದು ಎಂದು ಸಚಿವರು ಎಚ್ಚರಿಸಿದ್ದಾರೆ.
ಇಂತಹ ಆಫ್ ರೋಡ್ ಟ್ರಯಲ್‌ಗಳು ಶಬ್ದ ಮತ್ತು ವಾಯುಮಾಲಿನ್ಯಕ್ಕೂ ಕಾರಣವಾಗುವುದಲ್ಲದೆ, ವನ್ಯಜೀವಿಗಳ ಸಹಜ ಆವಾಸಕ್ಕೆ ಧಕ್ಕೆಯಾಗಿ ಜೀವಜಂತುಗಳಿಗೂ ಅಪಾಯ ಉಂಟುಮಾಡಬಹುದು ಎಂದು ಅವರು ತಿಳಿಸಿದ್ದಾರೆ.
ವಿಶೇಷವಾಗಿ ಜನರಿಗೆ ಕುಡಿಯುವ ನೀರು ಪೂರೈಸುವ ನದಿ, ತೊರೆ, ಕಾಲುವೆ ಸೇರಿದಂತೆ ಯಾವುದೇ ಜಲಮೂಲಗಳಲ್ಲಿ ಸಾಹಸಿ ವಾಹನಗಳು ಸಂಚರಿಸಿ ನೀರನ್ನು ಕಲುಷಿತಗೊಳಿಸದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು. ಗ್ರಾಮೀಣ ರಸ್ತೆಗಳು ಹಾಳಾಗದಂತೆಯೂ ಎಚ್ಚರಿಕೆ ವಹಿಸಬೇಕು ಎಂದು ಜಿಲ್ಲಾ ಪಂಚಾಯಿತಿ ಸಿಇಒ ಅವರಿಗೆ ಈಶ್ವರ ಖಂಡ್ರೆ ಸೂಚಿಸಿದ್ದಾರೆ.
ರಸ್ತೆ ಹಾಳಾದರೂ, ಜಲಮೂಲ ಕಲುಷಿತವಾದರೂ ಸಂಬಂಧಪಟ್ಟವರ ವಿರುದ್ಧ ಯಾವುದೇ ಮುಲಾಜಿಲ್ಲದೆ ನಿಯಮಾನುಸಾರ ಕಾನೂನು ಕ್ರಮ ಜರುಗಿಸಬೇಕು ಎಂದು ಅವರು ಸ್ಪಷ್ಟ ನಿರ್ದೇಶನ ನೀಡಿದ್ದಾರೆ.
ಕುದುರೆಮುಖದಂತಹ ಅಪರೂಪದ ಜೀವವೈವಿಧ್ಯದ ತಾಣಗಳಲ್ಲಿ ಸಾಹಸ ಪ್ರವಾಸೋದ್ಯಮವು ಪ್ರಕೃತಿ ಸಂರಕ್ಷಣೆಯ ಮಿತಿಯನ್ನು ಮೀರದಂತೆ ನಡೆಯಬೇಕು. ಪ್ರಕೃತಿಯ ಸೌಂದರ್ಯವನ್ನು ಅನುಭವಿಸುವ ಹಕ್ಕಿನಷ್ಟೇ, ಅದನ್ನು ಕಾಪಾಡುವ ಹೊಣೆಗಾರಿಕೆಯೂ ಪ್ರತಿಯೊಬ್ಬರ ಮೇಲಿದೆ ಎಂಬ ಸಂದೇಶ ಈ ಸೂಚನೆಯ ಮೂಲಕ ಪ್ರತಿಧ್ವನಿಸಿದೆ.
ಕುದುರೆಮುಖ ಆಫ್ ರೋಡ್ ಸಾಹಸಕ್ಕೆ ಕ್ರಮ ಕೈಗೊಳ್ಳುವ ಬಗ್ಗೆ ಆದೇಶ ಹೊರಡಿಸಿರುವ ಸಚಿವರ ಬಗ್ಗೆ ಜಿಲ್ಲೆಯ ಚಿಕ್ಕಮಗಳೂರು ಮತ್ತು ಹಾಸನ ಜಿಲ್ಲೆಯ ಪರಿಸರಸಕ್ತರು ಮೆಚ್ಚುಗೆ ಸೂಚಿಸಿ,ಜೊತೆಗೆ ಅಲಗೇಶ್ವರ ಆಫ್ ರೋಡ್ ಸಾಹಸದ ಬಗ್ಗೆಯೂ ಕೂಡ ಇದೇ ರೀತಿ ಗಮನವಹಿಸುವಂತೆ ಸಚಿವರನ್ನು ಒತ್ತಾಯ ಮಾಡುವ ಜೊತೆಗೆ ಈ ಸಿರಿವಂತರ ಮೋಜಿನ ಆಟಕ್ಕೆ ಶಾಶ್ವತವಾಗಿ ಕಡಿವಾಣ ಹಾಕಬೇಕೆಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
••••••••••••••
✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥಸ್ವಾಮಿ.
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

