ಸಾವಿರಾರು ಜನರಿಗೆ ಅನ್ನ ಕೊಟ್ಟು ಬದುಕು ನೀಡಬೇಕೆಂದು ಬಯಸಿದ್ದ ಸಿದ್ದಾರ್ಥನೆಂಬ ಸಿದ್ದಾರ್ಥ ಎಲ್ಲವನ್ನೂ ತೊರೆದು ಹೋಗಿ ಇಂದಿಗೆ ಏಳು ವರ್ಷ ಸಂದಾಯವಾಗಿದೆ:…
1 min read
ಅವಿನ್ ಟಿವಿ ಸುದ್ದಿಜಾಲ ✍️: ಸಾವಿರಾರು ಜನರಿಗೆ ಅನ್ನ ಕೊಟ್ಟು ಬದುಕು ನೀಡಬೇಕೆಂದು ಬಯಸಿದ್ದ ಸಿದ್ದಾರ್ಥನೆಂಬ ಸಿದ್ದಾರ್ಥ ಎಲ್ಲವನ್ನೂ ತೊರೆದು ಹೋಗಿ ಇಂದಿಗೆ ಏಳು ವರ್ಷ ಸಂದಾಯವಾಗಿದೆ: ಕಾಫಿ ಡೇ ಮಾಲಿಕ ಸಿದ್ಧಾರ್ಥ ಹೆಗ್ಡೆಯವರ ಒಂದು ನೆನಪು.
ಕಾಫಿ ಡೇ ಮಾಲಿಕ,ಉದ್ಯಮಿ ಸಿದ್ದಾರ್ಥ ಹೆಗ್ಡೆಯವರು ಕಾಲ ಗರ್ಭದೊಳಗೆ ಜಾರಿ ಹೋಗಿ ಎಂದಿಗೆ ಏಳು ವರ್ಷಗಳು ಕಳೆದೇ ಹೋದವು. ಸಿದ್ದಾರ್ಥ ಹೆಗ್ಡೆಯವರ ಹಿರಿಕರು ಅರಮನೆಗೂ ಮಿಗಿಲಾದ ಮಲೆನಾಡಿನ ಸಂಸ್ಕೃತಿ, ಸಂಸ್ಕಾರ, ಅಭಿರುಚಿಯನ್ನೆಲ್ಲಾ ಹೆಣೆದು ವೈಭವ ವೈಭೋಗದಿಂದ ಕಟ್ಟಿದ್ದ ಅವರ ತೊಟ್ಟಿ ಮನೆಯನ್ನು ಕುರಿತು ಲೇಖಕಿ ಡಾ. ವೈಶಾಲಿ ಹೊನ್ನಳ್ಳಿ ಬರೆದಿರುವ ಈ ಕೆಳಕಂಡ ಲೇಖನವನ್ನು ಸಿದ್ದಾರ್ಥ ಹೆಗ್ಡೆಯವರ ಸಂಸ್ಮರಣೆಯ ನೆನಪಿನಲ್ಲಿ ಅವಿನ್ ಟಿವಿ ಸುದ್ದಿಜಾಲ ತನ್ನ ಓದುಗರಿಗಾಗಿ ಕೊಡ ಮಾಡುತ್ತಿದೆ.
•••••••••••••••
ಕೂತುಂಡರೂ ಕರಗಲ್ಲ, ಬೇಸಾಯವ ಮರೆತಿಲ್ಲ!
ಮಲೆನಾಡ ಮೂಲೆನಲ್ಲೊಂದು ಪುಟ್ಟ ಹಳ್ಳಿ. ಈ ಹಳ್ಳಿಯಲ್ಲೊಂದು ಒಂಟಿ ದೊಡ್ಮನೆ. ಮನೆಯೆಂದರೆ ಅಂತಿಂಥ ಮನೆಯಲ್ಲ. ಸುಮಾರು 600 ರಿಂದ 700 ವರ್ಷಗಳ ಇತಿಹಾಸವಿರುವ ಮಹಾ ತೊಟ್ಟಿ ಮನೆ. ಕರ್ನಾಟಕದಲ್ಲೇ ಇಂತದ್ದೊಂದು ಮನೆ ಇನ್ನೆಲ್ಲೂ ಕಾಣಸಿಗದು. ದೇಶದಲ್ಲೂ ವಾಸಕ್ಕೆ ಯೋಗ್ಯವಿರುವಂತ ಇಷ್ಟು ಪುರಾತನ ಮನೆಯೂ ಅಪರೂಪ. ಈ ಮನೆ ಸಾಮಾನ್ಯದ್ದಲ್ಲ. ಬ್ರಿಟಿಷರಿಗೂ ಭಿಕ್ಷೆ ಕೊಟ್ಟಂತ ಮನೆ. ಇಲ್ಲಿಗೆ ರಾಜ ಮಹಾರಾಜರು ಆಗಮಿಸಿದ ಇತಿಹಾಸವಿದೆ. ದೇಶ ವಿದೇಶಗಳಿಂದ ಗಣ್ಯರು, ಮಂತ್ರಿಗಳು, ಉದ್ಯಮಿಗಳು, ಸಾಫ್ಟವೇರ್ ದಿಗ್ಗಜರು ಬಂದು ಹೋದ ಕತೆಗಳಿವೆ. ಗಾಂಧಿ ಕುಟುಂಬಕ್ಕೂ ಈ ಮನೆಯ ನಂಟಿತ್ತು. ದೇಶದ ಮೊದಲ ಮಹಿಳಾ ಪ್ರಧಾನಿ ಇಂದಿರಾ ಗಾಂಧಿ ಕೂಡ ಈ ಮನೆಯ ಅತಿಥಿಯಾಗಿದ್ದರಂತೆ. ಇಷ್ಟೆಲ್ಲಾ ಹಿನ್ನೆಲೆಯಿರುವ ಈ ಮನೆ ಯಾರಿಗೆ ಸೇರಿದ್ದು ಅನ್ನೋ ಕುತೂಹಲ ನಿಮಗೂ ಇರಬಹುದು.
ಇದು ಉದ್ಯಮಿ, ಕಾಫಿ ದೊರೆ, ಕೆಫೆ ಕಾಫಿ ಡೇ ಮಾಲೀಕರಾದ ವಿ.ಜಿ. ಸಿದ್ದಾರ್ಥ ಹೆಗ್ಡೆ ಅವರ ತಂದೆ ಗಂಗಯ್ಯ ಹೆಗ್ಡೆ ಹುಟ್ಟಿ ಬೆಳೆದ ಮನೆ. ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರಿಗೆ ಬೀಗರ ಮನೆ. ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಅಳಿಯನ ಅಜ್ಜನ ಮನೆ. ಚಿಕ್ಕಮಗಳೂರಿನ ಕಾಫಿ ಘಮವನ್ನು ಪ್ರಪಂಚದಾದ್ಯಂತ ಪಸರಿಸಿದ ಸಿದ್ಧಾರ್ಥ ಅಂದು ಇದೇ ಮನೆಯಲ್ಲಿ ಅಂಬೆಗಾಲಿಟ್ಟು ಓಡಾಡಿದ್ದರು.
‘ಪುಟ್ನಂಜ’ ಚಿತ್ರದ ಮನೆ :
1993-94 ನೇ ಇಸವಿಯಲ್ಲಿ ನಟ ರವಿಚಂದ್ರನ್ ಅಭಿನಯದ ‘ಪುಟ್ನಂಜ’ ಚಿತ್ರವನ್ನು ಇದೇ ಮನೆಯಲ್ಲಿ ಚಿತ್ರೀಕರಿಸಲಾಗಿತ್ತು. ಈ ಮನೆಯ ವಿನ್ಯಾಸ ಮತ್ತು ಮಲೆನಾಡಿನ ಮೂಲ ಸಂಸ್ಕೃತಿಯನ್ನು ಯಾವುದಾದರೂ ಚಿತ್ರದಲ್ಲಿ ದಾಖಲಿಸಬೇಕು ಅನ್ನೋದು ಸಿದ್ದಾರ್ಥ ಹೆಗ್ಡೆ ಯವರ ಚಿಕ್ಕಪ್ಪನವರ ಆಸೆಯಾಗಿತ್ತಂತೆ(ನಮ್ ತಾತ ನಂಜ ಅನ್ನುವ ಹಾಡಿನಲ್ಲಿ ಬರುವ ವ್ಯಕ್ತಿ). ಹೀಗಾಗಿ ಕೇವಲ ಒಂದು ಚಿತ್ರಕ್ಕಾಗಿ ಮಾತ್ರ ಮನೆ ಮತ್ತು ಇಲ್ಲಿನ ಪರಿಸರವನ್ನು ಚಿತ್ರೀಕರಣಕ್ಕೆ ನೀಡಲಾಗಿತ್ತು. ಸೂಪರ್ ಹಿಟ್ ಚಿತ್ರ ‘ಪುಟ್ನಂಜ’ದ ಕಥೆ ಮತ್ತು ಹಾಡುಗಳು ಈ ಮನೆಗೆ ಹೇಳಿ ಬರೆಸಿದಂತಿತ್ತು. ನಟ ರವಿಚಂದ್ರನ್, ನಾದ ಬ್ರಹ್ಮ ಹಂಸಲೇಖ ಅವರಿಗೆ ಆ ಕ್ರೆಡಿಟ್ ಸಲ್ಲಬೇಕು. ಈ ಚಿತ್ರ ನೋಡಿದರೆ ಮನೆಯ ಇನ್ನಷ್ಟು ಪರಿಚಯವಾಗಬಹುದು.
ಮನೆಯ ವೈಶಿಷ್ಟ:
ಸುಮಾರು ನೂರಿನ್ನೂರು ವರ್ಷಗಳ ಹಿಂದೆ ಮಲೆನಾಡಿನ ಬಹುತೇಕ ಒಕ್ಕಲಿಗರ/ಜಮೀನ್ದಾರರ ಮನೆಗಳು ಕೈ ಹೆಂಚು, ಕಂಬಗಳನ್ನೊಳಗೊಂಡ ತೊಟ್ಟಿ ಮನೆಗಳೇ. ಉದಾಹರಣೆಗೆ ಕುಪ್ಪಳಿಯ ಕುವೆಂಪು ಮನೆ. ಆದರೆ ಈ ಮನೆ ಅದಕ್ಕಿಂತಲೂ ಹಳೆಯದಾಗಿದ್ದು, ಇಲ್ಲಿ ಕಾಣುವ ಅಂದಿನ ಕಾಲದ ಪುರಾತನ ವಸ್ತುಗಳು ಮತ್ತೆಲ್ಲಿಯೂ ಕಾಣಸಿಗವು. ಸಂಪೂರ್ಣ ಮರ ಮತ್ತು ಮಣ್ಣಿನಿಂದಲೇ ಕಟ್ಟಿದ ಮನೆ ಇಂದಿಗೂ ಅಷ್ಟೇ ಸುಸ್ಥಿತಿಯಲ್ಲಿದೆ. ಕಲ್ಲಿನಿಂದ ಕುಟ್ಟಿದರೂ ಗೋಡೆಗಳು ಹಾನಿಯಾಗದಷ್ಟು ಗಟ್ಟಿಯಾಗಿವೆ. ಕುಳಿತು ಹರಟಲು ತೆರೆದ ಜಗಲಿ, ನ್ಯಾಯ ಪಂಚಾಯ್ತಿ ಕಟ್ಟೆ, ದೇವರ ಕೋಣೆ, ಊಟದ ಕೊಠಡಿ, ಉಪ್ಪರಿಗೆ, ಸ್ನಾನದ ಮನೆ, ದವಸಧಾನ್ಯ ಕೂಡಿಡುವ ಜಾಗ, ವಿಶಾಲ ಅಂಗಳ, ಹಸು-ಕರುಗಳ ಕೂಡುವ ಹಟ್ಟಿ, ಭತ್ತದ ಕಣಗಳು ಹೀಗೆ ಎಲ್ಲವೂ ಒಂದಕ್ಕಿಂತ ಒಂದು ವಿಶಿಷ್ಟವಾಗಿವೆ. ಆ ಕಾಲದ ಪಾತ್ರೆ ಪಗಡಗಳು, ಪಲ್ಲಕ್ಕಿ, ದೀಪಗಳು, ವರ್ಣ ಚಿತ್ರಗಳು , ಕೆತ್ತನೆಗಳು ನೂರಾರು ವರ್ಷಗಳ ಹಿಂದಕ್ಕೆ ಕರೆದೊಯ್ಯುತ್ತವೆ. ಇನ್ನೂ ಅಚ್ಚರಿ ಎಂದರೆ ಹಿಂದೆ ಬ್ರಿಟೀಷರು, ಮಂತ್ರಿ ಮಹೋದಯರೂ ಯಾರೇ ಇಲ್ಲಿಗೆ ಬಂದರೂ ಈ ಮನೆ ಗೇಟಿನ ಒಳಗೆ ಯಾರೊಬ್ಬರ ಅಧಿಕಾರವೂ ನಡೆಯುತ್ತಿರಲಿಲ್ಲವಂತೆ. ಬಂದ ಮೇಲೆ ಇಲ್ಲಿ ಮನೆಯ ಯಜಮಾನದೆ ವೇದವಾಕ್ಯವಾಗಿತ್ತಂತೆ. ಆ ಕಾಲದಲ್ಲೇ ಈ ಮನೆಯ ತಲೆಮಾರಿನವರು ಮೈಸೂರು ಮಹಾರಾಜ ಕಾಲೇಜಿನ ಪ್ರೊಫೆಸರ್ ಗಳಾಗಿದ್ದರು. ಬರಗಾಲ, ಬಡತನ ಏನೇ ಬಂದರೂ ಅಕ್ಕಪಕ್ಕದ ಹಳ್ಳಿಗಳ ಜನರು ಇಲ್ಲಿ ಸಹಾಯಕ್ಕಾಗಿ ಕೈಚಾಚಿ ನಿಲ್ಲುತ್ತಿದ್ದರಂತೆ. ಅರ್ಧದಷ್ಟು ಸಂಪತ್ತನ್ನ ಬ್ರಿಟೀಷರೇ ಕೇಳಿ ಪಡೆದಿದ್ದ ಸನ್ನಿವೇಶಗಳೂ ಇವೆ. ಹೀಗಾಗಿ ಕಷ್ಟ ಎಂದು ಬಂದವರಿಗೆ ಅನ್ನ ನೀಡಿದ ಮನೆಯೂ ಹೌದು.
ಕಾಲ ಕಳೆದಂತೆ, ಮನೆಯ ಮಕ್ಕಳು ಮದುವೆ ನಂತರ ತಮ್ಮ ತಮ್ಮ ಪಾಲನ್ನು ಪಡೆದು ಬೇರೆ ಬೇರೆ ಕಡೆಗಳಲ್ಲಿ ಮನೆ ಮಾಡಿ ನೆಲೆಸಿದ್ದಾರೆ. ಸಿದ್ದಾರ್ಥ ಹೆಗ್ಡೆಯವರ ತಂದೆಯೂ ಮದುವೆ ನಂತರ ಕುಟುಂಬದೊಂದಿಗೆ ಬೇರೆ ಮನೆ ಮಾಡಿ ನೆಲೆಸಿದ್ದರು. ಪ್ರಸ್ತುತ ಮನೆಯನ್ನು ಈ ಕುಟುಂಬದ ಈಗಿನ ತಲೆಮಾರು ಮುನ್ನೆಡೆಸಿಕೊಂಡು ಹೋಗುತ್ತಿದೆ. ವಿಶೇಷವೆಂದರೆ ಕೂತು ತಿನ್ನುವಷ್ಟು ಐಶ್ವರ್ಯವಿದ್ದರೂ ಇಂದಿಗೂ ಯಾರೂ ವ್ಯವಸಾಯವನ್ನು ಮರೆತಿಲ್ಲ. ದೇಶ ವಿದೇಶಗಳಲ್ಲಿದ್ದರೂ ಇದೇ ಇವರ ಮೂಲ ಕಸುಬು. ಈ ಮನೆ ಅದೆಷ್ಟು ಸಾವು-ನೋವುಗಳನ್ನ, ಸಿರಿವಂತಿಕೆ, ಆಡಂಬರಗಳನ್ನ, ಯಶಸ್ಸು- ಸೋಲುಗಳನ್ನ ಕಂಡಿದಿಯೋ! ಎಲ್ಲವೂ ಕಾಲಗರ್ಭದಲ್ಲಿ ಹುದುಗಿ ಹೋಗಿವೆ.
ಮುಂದೊಂದು ದಿನ ಅನುಮತಿ ಸಿಕ್ಕಿದರೆ ಈ ಮಹಾ ಮನೆ ಇತಿಹಾಸದ ಪುಸ್ತಕಗಳಲ್ಲಿಯೂ ಸೇರಬಹುದೇನೋ!
ಉದ್ಯಮಿ ವಿ.ಜಿ. ಸಿದ್ದಾರ್ಥ ಹೆಗ್ಡೆ ಕಾಲವಾಗಿ ಇಂದಿಗೆ ಏಳು ವರ್ಷಗಳು. ಈ ಹಿನ್ನೆಲೆಯಲ್ಲಿ ಅವರ ಆದಿ ಮನೆಯ ಕಿರು ಪರಿಚಯ.
ವಿ. ಸೂ: ಆಪ್ತರು, ನೆಂಟರಿಷ್ಟರನ್ನು ಹೊರತುಪಡಿಸಿ, ಸಾರ್ವಜನಿಕರಿಗೆ ಮನೆ ನೋಡಲು ಅವಕಾಶವಿಲ್ಲ. ಹಾಗೂ ಮನೆ ಒಳಾಂಗಣದ ಚಿತ್ರ ತೆಗೆಯುವುದು ಮತ್ತು ಚಿತ್ರೀಕರಣ ಮಾಡುವುದನ್ನು ನಿರ್ಬಂಧಿಸಲಾಗಿದೆ.
•••••••••••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

