ಶಂಕರಾಚಾರ್ಯರು ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ದಾರ್ಶನಿಕರು: ಬೋಜೇಗೌಡ.
1 min read
ಅವಿನ್ ಟಿವಿ ಸುದ್ದಿಜಾಲ ✍️: ಶಂಕರಾಚಾರ್ಯರು ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ದಾರ್ಶನಿಕರು: ಬೋಜೇಗೌಡ.
ಚಿಕ್ಕಮಗಳೂರು ಏ ೨೨, ಜಗದ್ಗುರು ಶ್ರೀ ಆದಿ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಸನಾತನ ಧರ್ಮವನ್ನು ಪುನರುಜ್ಜೀವನಗೊಳಿಸಿದ ಮಹಾತ್ಮರು ಎಂದು ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ಹೇಳಿದರು.
ಬ್ರಾಹ್ಮಣ ಮಹಾಸಭಾ, ಶೃಂಗೇರಿ ಶಂಕರ ಮಠ, ವಿಶ್ವ ಹಿಂದೂ ಪರಿಷತ್, ಜಗದ್ಗುರು ಶ್ರೀ ಆದಿಶಂಕರಾಚಾರ್ಯರು, ಶ್ರೀ ಮಧ್ವಾಚಾರ್ಯರು ಮತ್ತು ಶ್ರೀ ರಾಮಾನುಜಾಚಾರ್ಯರ ಜಯಂತಿ ಅಂಗವಾಗಿ ನಗರದ ರಂಗಣ್ಣನವರ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಏರ್ಪಡಿಸಿದ್ದ ತತ್ವಜ್ಞಾನಿಗಳ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭಾರತೀಯ ತತ್ತ್ವಶಾಸ್ತ್ರದ ಆಚಾರ್ಯ ತ್ರಯರೆಂದೇ ಪ್ರಸಿದ್ಧರಾಗಿರುವ ಶ್ರೇಷ್ಠ ದಾರ್ಶನಿಕರಾದ ಜಗದ್ಗುರು ಶ್ರೀ ಆದಿ ಶಂಕರಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರು ಕ್ರಮವಾಗಿ ಅದ್ವೈತ, ವಿಶಿಷ್ಟಾದ್ವೈತ ಮತ್ತು ದ್ವೈತ ಸಿದ್ಧಾಂತಗಳನ್ನು ಪ್ರತಿಪಾದಿಸಿದವರು, ಪ್ರಸ್ಥಾನತ್ರಯಗಳಿಗೆ, ವೇದಾಂತ ಸೂತ್ರ, ಉಪನಿಷತ್ತು, ಭಗವದ್ಗೀತೆ ಬ್ರಹ್ಮ ಸೂತ್ರಗಳಿಗೆ ಭಾಷ್ಯ ಬರೆದು ವಿಭಿನ್ನ ದೃಷ್ಟಿಕೋನಗಳ ಮೂಲಕ ಸನಾತನ ಧರ್ಮವನ್ನು ಬಲಗೊಳಿಸಿದವರು, ಜ್ಞಾನ ಭಕ್ತಿ ಮತ್ತು ತತ್ವಶಾಸ್ತ್ರದ ಮೂಲಕ ವೇದಾಂತವನ್ನು ಪುನರುಜ್ಜೀವನಗೊಳಿಸಿದವರು ಎಂದರು.
ಸಕಲರಿಗೂ ಲೇಸನ್ನೇ ಬಯಸಿದ ಜ್ಞಾನದ ಭಂಡಾರ ಶ್ರೀ ಶಂಕರಾಚಾರ್ಯರು ದೇಶದ ಉದ್ದಗಲಕ್ಕೂ ಸಂಚರಿಸಿ ಚತುರಾಮ್ನಾಯ ಪೀಠಗಳನ್ನು ಸ್ಥಾಪಿಸುವ ಮೂಲಕ ಅನ್ಯ ಧರ್ಮಗಳ ಪ್ರಾಬಲ್ಯ ಮತ್ತು ದಾಳಿಯಿಂದಾಗಿ ನಲುಗುತ್ತಿದ್ದ ಹಿಂದೂ ಧರ್ಮ ಮತ್ತು ಭಾರತೀಯ ಸಂಸ್ಕೃತಿಯನ್ನು, ದೇಶವನ್ನು, ರಾಷ್ಟ್ರದ ಜನರನ್ನು ಒಗ್ಗೂಡಿಸಿದರು ಎಂದರು.
ಇದೇ ವೇಳೆ ದಾಸರ ಪದಗಳು, ವಚನಗಳು, ಜಾನಪದ ಗೀತೆಗಳು ಮತ್ತು ತತ್ವಪದಗಳನ್ನು ಹಾಡುವ ಮೂಲಕ ಭೋಜೇಗೌಡ ಸಭಿಕರ ಗಮನ ಸೆಳೆದರು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಹೆಚ್.ಪಿ.ಮಂಜೇಗೌಡ ಮಾತನಾಡಿ ಜಗದ್ಗುರು ಶ್ರೀ ಶಂಕರಾಚಾರ್ಯರು, ರಾಮಾನುಜಾಚಾರ್ಯರು ಮತ್ತು ಮಧ್ವಾಚಾರ್ಯರಿಂದಾಗಿ ಇಂದು ಸನಾತನ ಧರ್ಮ ಮತ್ತು ದೇಶ ಉಳಿದಿದೆ ಎಂದು ಹೇಳಿದರು.
ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಅನಿಲ್ ಆನಂದ್ ಮಾತನಾಡಿ ಶಂಕರಾಚಾರ್ಯರ ತತ್ವ, ಸಿದ್ಧಾಂತ ಸಾರ್ವಕಾಲಿಕ ಸತ್ಯ ಮತ್ತು ಅಜರಾಮರ ಎಂದರು.
ಜಗದ್ಗುರು ಆದಿ ಶಂಕರಚಾರ್ಯರ ಬದುಕು, ತತ್ವ, ಸಿದ್ಧಾಂತ ಮತ್ತು ಸಾಧನೆಗಳ ಕುರಿತು ಉಪನ್ಯಾಸ ನೀಡಿದ ಮೈಸೂರು ಮುಕ್ತ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಡಾ ಜ್ಯೋತಿಶಂಕರ್ ಶಂಕರಾಚಾರ್ಯರು ಶಂಕರನ ಅವತಾರ, ಮನುಷ್ಯರು ಮಾಯೆ ಮತ್ತು ಅವಿದ್ಯೆಯಿಂದ ಹೊರ ಬಂದು ಜ್ಞಾನದ ಮೂಲಕ ಪೂರ್ಣತೆಯ ಕಡೆಗೆ ಸಾಗುವ ಹಾದಿಯನ್ನು ತೋರಿಸಿಕೊಟ್ಟವರು ಭಗವಾನ್ ಶ್ರೀ ಶಂಕರಚಾರ್ಯರು ಎಂದು ತಿಳಿಸಿದರು.
ಶಂಕರಾಚಾರ್ಯರು ಪ್ರತಿಪಾದಿಸಿದ ಅದ್ವೈತ ಸಿದ್ದಾಂತ ಜಗತ್ತಿನ ಎಲ್ಲಾ ಮತಗಳು ಮತ್ತು ಧರ್ಮಗಳಿಗೂ ಮೂಲ ಬೇರಾಗಿದೆ ಎಂದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ಪಿ.ಮಂಜುನಾಥ ಜೋಶಿ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದವರಿಗೆ ಕೃತಜ್ಞತೆ ಸಲ್ಲಿಸಿದರು.
ಶಂಕರ ಜಯಂತಿ ಅಂಗವಾಗಿ ನಡೆಸಲಾದ ರಸಪ್ರಶ್ನೆ ಸ್ಪರ್ಧೆಯಲ್ಲಿ ವಿಜೇತರಾದವರಿಗೆ ಸಮಾರಂಭದಲ್ಲಿ ಬಹುಮಾನ ವಿತರಿಸಲಾಯಿತು.
ಕಾರ್ಯಕ್ರಮಕ್ಕೆ ಮುನ್ನ ಶ್ರೀ ಆದಿಶಂಕರಾಚಾರ್ಯರ ಭಾವಚಿತ್ರದ ಮೆರವಣಿಗೆ ನಡೆಯಿತು.
ಬಿಜೆಪಿ ನಗರ ಮಹಿಳಾ ಮಂಡಲದ ಉಪಾಧ್ಯಕ್ಷೆ ಪಲ್ಲವಿ ರವಿ, ಬ್ರಾಹ್ಮಣ ಮಹಾಸಭಾ ಕಾರ್ಯದರ್ಶಿ ಎನ್.ಕೆ. ಅಶ್ವಿನ್, ಖಜಾಂಚಿ ಶ್ಯಾಮಲ ಎಂ ರಾವ್, ನಿರ್ದೇಶಕರಾದ ಎಸ್.ಶಾಂತಕುಮಾರಿ, ಸುಮಾ ಪ್ರಸಾದ್ ಉಪಸ್ಥಿತರಿದ್ದರು.
••••••••••
ಡಿ.ಎಂ.ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ …. ✍️
ಚಿಕ್ಕಮಗಳೂರು

