AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸ್ವಾತಂತ್ರ್ಯ ದಿನ ಎನ್ನುವ ಬದಲು, ಅಧಿಕಾರ ಹಸ್ತಾಂತರವಾದ ದಿನ ಎನ್ನಬಹುದು”..

1 min read

“ಸ್ವಾತಂತ್ರ್ಯ ದಿನ ಎನ್ನುವ ಬದಲು, ಅಧಿಕಾರ ಹಸ್ತಾಂತರವಾದ ದಿನ ಎನ್ನಬಹುದು”..

ಆಗಸ್ಟ್ 15 ನೇ ದಿನದಂದು ಭಾರತದಾದ್ಯಂತ ಸಡಗರ ಸಂಭ್ರಮ, ಆದರೆ ಪ್ರಮಾಣ ಕೇವಾಲ 30% ಅಷ್ಟೇ.. ರಾಜಕೀಯ ವ್ಯಕ್ತಿಗಳಿಗೆ, ಸರ್ಕಾರಿ ನೌಕರರಿಗೆ, ಖಾಸಗಿ ನೌಕರರಿಗೆ, ಸಂಘ ಸಂಸ್ಥೆಗಳ ಸದಸ್ಯರಿಗೆ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಪತ್ರಿಕಾ ಮಾಧ್ಯಮದವರಿಗೆ, ಆದರೆ 70% ಜನರಿಗೆ ಇದರ ಅರಿವೇ ಇಲ್ಲದೆ ಆ ದಿನವೂ ಸಹ ಹೊಟ್ಟೆ ಪಾಡಿಗಾಗಿ ದುಡಿಯುತ್ತಾರೆ. ಆದರೂ 30% ಜನರು ಸಡಗರ ಸಂಭ್ರಮದಿಂದ ಆಚರಿಸುವ ದಿನವನ್ನೇ ‘ರಾಷ್ಟ್ರೀಯ ಹಬ್ಬ. ಎಂದು ಹಾಡಿ ಹೊಗಳುತ್ತಿದ್ದೇವೆ. ಶಾಲಾ ಮಕ್ಕಳಂತೂ ಆಗಸ್ಟ್ 15 ದಿನದಂದು ಬಣ್ಣ ಬಣ್ಣದ ಬಟ್ಟೆಗಳನ್ನು ಹಾಕಿಕೊಂಡು ಭಾರತದ ಬಾವುಟವನ್ನು ಹಿಡಿದುಕೊಂಡು ಹಿಂದಿ ಚಲನಚಿತ್ರ ಗೀತೆಯಾದ “ದೇಶ ರಂಗೀಲಾ ರಂಗೀಲಾ ದೇಶ ರಂಗೀಲಾ ರಂಗೀಲಾ” ಹಾಗೂ ” ವಂದೇ ಮಾತರಂ ವಂದೇ ಮಾತರಂ ವಂದೇ……… ಮಾತರಂ” ಎಂದು ಕುಣಿಯುವುದು , ಶಿಕ್ಷಕರು ಕುಣಿಸುವುದು. ವೇದಿಕೆ ಮೇಲೆ ಆಸೀನರಾಗಿರುವ ಗಣ್ಯರು ಗಂಟೆಗಟ್ಟಲೆ ದೇಶಪ್ರೇಮದ ಬಗ್ಗೆ ಮಾತನಾಡುವುದು. ಸಾಧಾಕರಿಗೆ ಒಂದಿಷ್ಟು ಸನ್ಮಾನ, ಇದು ಪ್ರತಿ ವರ್ಷ ನಡೆಯುವ ಪ್ರಕ್ರಿಯೆಯಾಗಿದೆ. ಆಗಸ್ಟ್ 15 ರಂದು ಮಾತ್ರ ಸಡಗರ ಸಂಭ್ರಮದಿಂದ ಕುಣಿದು ಕುಪ್ಪಳಿಸಿ ಮರುದಿನ ಯಥಾ ರಾಜ ತಥಾ ಪ್ರಜೆ ಅಷ್ಟೇ . ಇಂತಹ ಆಚರಣೆಯನ್ನು ಸ್ವಾತಂತ್ರ್ಯ ದಿನಾಚರಣೆಗೆ ಎನ್ನುವ ಬದಲು ಅಧಿಕಾರ ಹಸ್ತಾಂತರವಾದ ದಿನ ಎನ್ನಬಹುದು.
ಬ್ರಿಟಿಷರ ವಸಾಹತುಶಾಹಿ ನೀತಿಯ ವಿರುದ್ಧ ಭಾರತೀಯ ಎಲ್ಲಾ ಸಮುದಾಯದವರು ಹೋರಾಟ ಮಾಡಿ ಪ್ರಾಣ ತ್ಯಾಗ ಮಾಡಿದ್ದು ಚರಿತ್ರೆಯ ಪುಟಗಳಲ್ಲಿ ದಾಖಲಾಗಿದೆ. ಅಂತಹ ವೀರರ ಹೋರಾಟಗಳನ್ನು ಮರೆಯಲು ಸಾಧ್ಯವೇ ಇಲ್ಲ. ಆದರೆ ಆಗಸ್ಟ್ ತಿಂಗಳ 15 ನೇ ದಿನದಂದು ಏಕೆ? ಬ್ರಿಟಿಷರ ಅಧಿಕಾರ ಹಸ್ತಾಂತರ ಮಾಡಿದರು ಎಂದರೆ, ಕ್ರಿ.ಶ 1939 ರಿಂದ 1945 ರ ತನಕ ದ್ವಿತೀಯ ಮಹಾಯುದ್ಧ ನಡೆಯುತ್ತದೆ. ಆ ಸಂದರ್ಭದಲ್ಲಿ ಎರಡು ಬಣಗಳನ್ನು ರಚನೆ ಮಾಡಿಕೊಳ್ಳಲಾಗಿತ್ತು ಶತ್ರು ಬಣದಲ್ಲಿದಲ್ಲಿ ಇಟಲಿ, ಜರ್ಮನಿ ಮತ್ತು ಜಪಾನ್ ಒಂದು ಬಣವಾದರೆ ಮಿತ್ರಕೂಟದಲ್ಲಿ ಫ್ರಾನ್ಸ್, ಬ್ರಿಟನ್ ಮತ್ತು ರಷ್ಯಾ ಗಳು ಮತ್ತೊಂದು ಬಣವಾದವು. ಇಂಗ್ಲೆಂಡ್ ನ ವಸಾಹತುಶಾಹಿಯ ಕೂಸಾಗಿದ್ದ ಭಾರತ ಅನಿವಾರ್ಯವಾಗಿ ಇಂಗ್ಲೆಂಡ್ ದೇಶಕ್ಕೆ ಬೆಂಬಲ ಸೂಚಿಸ ಬೇಕಾಗಿತ್ತು. ಈ ಯುದ್ಧದಲ್ಲಿ 1941ರ ವೇಳೆಗೆ ಜಪಾನ್ ಜರ್ಮನಿಯೊಂದಿಗೆ ಸೇರಿಕೊಂಡು ಭಾರತದ ಪೂರ್ವ ಗಡಿಯವವರೆಗೆ ಮುನ್ನುಗಿತು. ಇದು ಇಂಗ್ಲೆಂಡಿಗೆ ಭಯವನ್ನು ಹುಟ್ಟಿಸಿತು ಏಕೆಂದರೆ ಭಾರತದಲ್ಲಿ ಇಂಗ್ಲೆಂಡ್ ನ ಅನೇಕ ವಸಾಹತು ಶಾಹಿ ಕೇಂದ್ರಗಳಿದ್ದವು. ಅಲ್ಲದೆ ಅಮೆರಿಕಾ ದೇಶದವರು ಜಪಾನ್ ನಿರಾಶ್ರಿತರಿಗೆ ಆಶ್ರಯ ಕೊಟ್ಟಿಲ್ಲವೆಂಬ ಕಾರಣ ಮತ್ತು ಅಮೆರಿಕಾ ಮಾಡುತ್ತಿದ್ದ ರಫ್ತುಗಳ ಮೇಲೆ ಅಧಿಕ ತೆರಿಗೆ ವಿಧಿಸಿದೆ ಎಂದು ತಿಳಿದು ಜಪಾನ್ 1941 ಡಿಸೆಂಬರ್ 07 ರಂದು ಹವಾಯ್ ದ್ವೀಪದ “ಪರ್ಲ್ ಹಾರ್ಬರ್” ಬಂದರಿನ ಅಮೆರಿಕದ ನೌಕಾ ನೆಲೆಯ ಮೇಲೆ ಬಾಂಬ್ ದಾಳಿ ಮಾಡಿತು ಪರಿಣಾಮವಾಗಿ ಅಮೆರಿಕದ 08 ನೌಕೆ 350 ಯುದ್ಧ ವಿಮಾನಗಳು ನಾಶವಾದವು ಅಲ್ಲದೆ ಸುಮಾರು 2638 ಜನ ಪ್ರಾಣ ಕಳೆದುಕೊಂಡರು. ಈ ಘಟನೆ ಅಮೆರಿಕಾಕ್ಕೆ ತೀವ್ರ ಆಘಾತ ತಂದಿತು ಅಲ್ಲಿಯವರೆಗೆ ಕೇವಾಲ ಬೆಂಬಲ ನೀಡುತ್ತಿದ್ದ ಅಮೆರಿಕಾವು ಬ್ರಿಟನ್ ನೊಂದಿಗೆ ಸೇರಿ ಯುದ್ಧಕ್ಕೆ ಇಳಿಯಿತು. ಮಿತ್ರ ರಾಷ್ಟ್ರಕ್ಕೆ ಮತ್ತಷ್ಟು ಬಲ ಬಂದಂತಾಯಿತು ಜರ್ಮನಿ ಇಟಲಿಗಳು ಯುದ್ಧದಲ್ಲಿ ಸೋತು ಮಿತ್ರ ರಾಷ್ಟ್ರಗಳಿಗೆ ಶರಣಾದರು. ಜಪಾನ್ ಮಾತ್ರ ತನ್ನ ಹೋರಾಟವನ್ನು ಮುಂದುವರಿಸಿತು .ಮಿತ್ರ ರಾಷ್ಟ್ರಗಳ ನೇತೃತ್ವ ವಹಿಸಿದ ಇಂಗ್ಲೆಂಡಿಗೆ ಬಾರಿ ತಲೆನೋವಾಗಿ ಪರಿಣಮಿಸಿತು. ಜಪಾನ್ ಯುದ್ಧದಲ್ಲಿ ಮುಂದುವರಿದಿದ್ದು. ಇಂಗ್ಲೆಂಡ್ ದೇಶಕ್ಕೆ ಆರ್ಥಿಕವಾಗಿ ಬಹಳ ತೊಂದರೆಯಾಯಿತು. ಆ ಸಂದರ್ಭದಲ್ಲಿ ಇಂಗ್ಲೆಂಡ್ ದೇಶಕ್ಕೆ ಅಮೆರಿಕಾ ಬೆಂಬಲವಾಗಿ ನಿಂತಿದ್ದರಿಂದ ಅಮೆರಿಕದ ಅಧ್ಯಕ್ಷ ಎಫ್. ಡಿ ರೊಸ್ ವೆಲ್ಟ್ ಯುದ್ಧವನ್ನು ಬೇಗ ಮುಗಿಸಲು ಆದೇಶಿಸಿ ಕೊನೆಗೆ ದಿನಾಂಕ 06.08.1945ರಂದು ಅಮೇರಿಕಾ ದೇಶವು ಜಪಾನ್ ದೇಶದ ಹಿರೋಶಿಮಾದ ಮೇಲೆ ಹಾಗೂ ದಿನಾಂಕ.09.08.1945 ರಂದು ಜಪಾನ್ ದೇಶದ ನಾಗಸಾಕಿಯ ಮೇಲೆ ಅಣುಬಾಂಬ್ ಹಾಕಿದರ ಪರಿಣಾಮವಾಗಿ ಜಪಾನ್ ದೇಶದ ಆ ನಗರಗಳು ಸಂಪೂರ್ಣವಾಗಿ ನಿರ್ನಾಮವಾದವು ಪರಿಣಾಮವಾಗಿ ಆ ಪ್ರದೇಶದಲ್ಲಿ ಇಂದಿಗೂ ಸಹ ಅನೇಕರು ಅಂಗವಿಕತೆಯಿಂದ ಬಳಲುತ್ತಿದ್ದಾರೆ ಹಾಗೂ ಅಂಗವಿಕಲತೆಯ ಮಕ್ಕಳು ಜನಿಸುತ್ತಿದ್ದಾರೆ. ಬಹಳ ಸಾವು ನೋವುಗಳನ್ನು ಕಣ್ಣಾರೆ ಕಂಡ ಜಪಾನ್ ದೇಶದ ಅಂದಿನ ರಾಜ ಹೀರೋಹಿಟ್ಟೋರವರು ದಿನಾಂಕ.15.08.1945 ರಂದು 12.00 ಗಂಟೆಯಿಂದ 12.04 ನಿಮಿಷಗಳ ಕಾಲ ಅಂದರೆ ಕೇವಲ 04 ನಿಮಿಷಗಳ ಕಾಲ ರೇಡಿಯೋ ಮುಖಾಂತರ ಭಾಷಣ ಮಾಡಿ, ದ್ವಿತೀಯ ಮಹಾಯುದ್ಧದಿಂದ ನಾವು ಹಿಂದೆ ಸರಿಯುತ್ತೇವೆಂದು ಶಾಂತಿ ಒಪ್ಪಂದ ಮಾಡಿಕೊಂಡರು.
ಇಂಗ್ಲೆಂಡ್ ದೇಶ ಈ ಸಂದೇಶವನ್ನು ಕೇಳಿದ ತಕ್ಷಣ ಹರ್ಷಗೊಂಡು ದೇಶದಲ್ಲಿ ಸಂಭ್ರಮಾಚರಣೆಯನ್ನು ಆಚರಿಸಿಕೊಂಡಿತು ಏಕೆಂದರೆ ಎರಡನೇ ಮಹಾಯುದ್ಧದಿಂದಾಗಿ ಇಂಗ್ಲೆಂಡ್ ದೇಶ ಅಪಾರ ಹಣವನ್ನು ವಿನಿಯೋಗಿಸಿ ಆರ್ಥಿಕ ಮುಗ್ಗಟ್ಟನ್ನು ಅನುಭವಿಸಿದ್ದರು. ಈ ಯುದ್ಧದಿಂದಾಗಿ ಸಾರಿಗೆ ಸಂಪರ್ಕ ಮಾಧ್ಯಮಗಳು ಮತ್ತು ಕೈಗಾರಿಕೆಗಳು ಧ್ವಂಸವಾದುದ್ದರಿಂದ ಅಗತ್ಯ ವಸ್ತುಗಳ ಬೆಲೆ ಗಗನಕ್ಕೇರಿದ್ದವು. ಜಪಾನ್ ದೇಶ ಶಾಂತಿ ಒಪ್ಪಂದ ಮಾಡಿಕೊಂಡಿದ್ದರಿಂದ ದ್ವಿತೀಯ ಮಹಾ ಯುದ್ಧ ಮುಕ್ತಾಯವಾಯಿತು. ಮುಂದೆ ಇಂಗ್ಲೆಂಡ್ ದೇಶವು ಬೇರೆ ಯಾವ ದೇಶಗಳಲ್ಲಿಯೂ ವಸಾಹತುಶಾಹಿ ಸ್ಥಾಪಿಸಲು ಆಸಕ್ತಿಯನ್ನು ತೋರಿಸಲಿಲ್ಲ ಏಕೆಂದರೆ ಇಂಗ್ಲೆಂಡ್ ಆರ್ಥಿಕವಾಗಿ ಮುಗ್ಗಟ್ಟನ್ನು ಅನುಭವಿಸುತ್ತಿತ್ತು. ತನ್ನ ದೇಶದ ಆರ್ಥಿಕ ಪರಿಸ್ಥಿತಿಯನ್ನು ಸುಧಾರಿಸಲು ಪ್ರಯತ್ನಿಸ ತೊಡಗಿತು. ದ್ವಿತೀಯ ಮಹಾಯುದ್ಧ ಮುಗಿದ ದಿನದ ಐತಿಹಾಸಿಕ ನೆನಪಿಗಾಗಿಯೇ ಇಂಗ್ಲೆಂಡ್ ದೇಶ ಭಾರತಕ್ಕೆ ಆಗಸ್ಟ್ 15. 1947ರಂದು ಅಧಿಕಾರವನ್ನು ಹಸ್ತಾಂತರ ಮಾಡಿತು. ಆದರೆ ಭಾರತೀಯರಾದ ನಾವು ಅಧಿಕಾರ ಹಸ್ತಾಂತರ ಮಾಡಿದ ದಿನವನ್ನು ಸ್ವಾತಂತ್ರ್ಯ ದಿನ ಎಂದು ಆಚರಣೆ ಮಾಡುತ್ತಿದ್ದೇವೆ. ಅಖಂಡ ಭಾರತಕ್ಕೆ “ಜನಗಣಮನ ಅಧಿನಾಯಕ ಜಯ ಹೇ ಭಾರತ ಭಾಗ್ಯವಿಧಾತ” ಹೇಗೆ ರಾಷ್ಟ್ರಗೀತೆಯಾಗಿದೆಯೋ, ಮತ್ತು ಕರ್ನಾಟಕ ರಾಜ್ಯಕ್ಕೆ “ಜೈ ಭಾರತ ಜನನಿಯ ತನುಜಾತೆ ಜಯಹೇ ಕರ್ನಾಟಕ ಮಾತೆ” ಹೇಗೆ ನಾಡಗೀತೆ ಆಗಿದೆಯೋ ಹಾಗೆಯೇ ದಲಿತ ಸಂಘರ್ಷ ಸಮಿತಿಗೆ ಹೋರಾಟದ ಗೀತೆಯಾಗಿದ್ದು ಜನಕವಿ ಡಾ. ಸಿದ್ದಲಿಂಗಯ್ಯನವರು ಬರೆದಂತಹ “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ” ಎಂಬ ಹೋರಾಟದ ಹಾಡು ಭಾರತದ ಚರಿತ್ರೆಯಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿವರೆಗೆ ಯಾವ ಚಿಂತಕರು ಎತ್ತದಂತಹ ಗಂಭೀರ ಪ್ರಶ್ನೆಯನ್ನು ಎತ್ತಿ, ಸ್ವಾತಂತ್ರ ಭಾರತವನ್ನು ಪ್ರಶ್ನಿಸಿದ ಏಕೈಕ ಸಂಘಟನೆ ಎಂದರೆ ಕರ್ನಾಟಕದಲ್ಲಿ “ದಲಿತ ಸಂಘರ್ಷ ಸಮಿತಿ”.(D.S.S) ಪ್ರತಿಯೊಂದು ಹೋರಾಟದಲ್ಲಿಯೂ “ಯಾರಿಗೆ ಬಂತು ಎಲ್ಲಿಗೆ ಬಂತು 47ರ ಸ್ವಾತಂತ್ರ್ಯ” ಎಂಬಾ ಗೀತೆಯನ್ನು ಪ್ರತಿ ಸಂದರ್ಭದಲ್ಲಿ ಹಾಡುತ್ತಿದ್ದಾರೆ. ಎಲ್ಲಿ ಶೋಷಣೆ ಇಲ್ಲವೋ ಎಲ್ಲಿ ಒಂದು ವರ್ಗದ ಮೇಲೆ ಇನ್ನೊಂದು ವರ್ಗದ ದಬ್ಬಾಳಿಕೆ ಇರುವುದಿಲ್ಲವೋ ಎಲ್ಲಿ ನಿರುದ್ಯೋಗ ಬಡತನಗಳು ಇಲ್ಲವೋ ಎಲ್ಲಿ ವ್ಯಕ್ತಿಗೆ ತನ್ನ ಕ್ರಿಯೆಯ ಪರಿಣಾಮವಾಗಿ ಉದ್ಯೋಗ ಮನೆ ಆಹಾರಗಳನ್ನು ಕಳೆದುಕೊಳ್ಳುವ ಭೀತಿ ಇರುವುದಿಲ್ಲವೋ ಅಲ್ಲಿ ನಿಜವಾದ ಸ್ವಾತಂತ್ರ್ಯ ಇರುವುದಿಲ್ಲ. ರಾಷ್ಟ್ರದ ಸ್ವಾತಂತ್ರ್ಯ ವಾಸ್ತವ ವಾಗಬೇಕಾದರೆ ಅದರಲ್ಲಿನ ವಿವಿಧ ವರ್ಗಗಳ ಸ್ವಾತಂತ್ರವನ್ನು ಕಾಪಾಡಲೇಬೇಕು ವಿಶೇಷವಾಗಿ ಯಾರನ್ನು ದಾಸ್ಯರ ಸ್ಥಾನದಿಂದ ಇರಿಸಲಾಗಿದೆಯೋ ಅವರನ್ನು ಸಮಾನತೆಯಿಂದ ಕಾಣಬೇಕು ಆದರೆ ಭಾರತದಲ್ಲಿ ಈ ವ್ಯವಸ್ಥೆ ಇನ್ನೂ ಕೂಡ ಬಾರದೆ ಇದ್ದುದ್ದರಿಂದ ಭಾರತವನ್ನು ಸ್ವಾತಂತ್ರ ರಾಷ್ಟ್ರ ಎಂದು ಕರೆಯಲು ಸಾಧ್ಯವಾಗುವುದಿಲ್ಲ.
1991ರಲ್ಲಿ ಜಾರಿಗೊಂಡಂತಹ ಜಾಗತೀಕರಣ, ಉದಾರೀಕರಣ, ಖಾಸಗೀಕರಣ ನೀತಿಯಿಂದಾಗಿ ಇಡೀ ಭಾರತದ ಆರ್ಥಿಕ ವ್ಯವಸ್ಥೆ ವಿದೇಶಿಯ ಬಂಡವಾಳಗಾರರ ಹಿಡಿತದಲ್ಲಿರುವುದರಿಂದ ಹೊಸ, ಹೊಸ ಕೃಷಿ ಕಾಯ್ದೆಗಳು ಭಾರತಕ್ಕೆ ಪ್ರವೇಶ ಮಾಡಿದ್ದರಿಂದ ಭಾರತದ ಕೃಷಿ ನೀತಿ ಸ್ವತಂತ್ರವಾಗಿ ಯಾವ ನಿರ್ಧಾರವನ್ನು ತೆಗೆದುಕೊಳ್ಳದೆ, ಬಿಕ್ಕಟ್ಟಿನಲ್ಲಿದೆ. ಕರ್ನಾಟಕದಲ್ಲಿ ಬೆಳೆಯುತ್ತಿರುವ ಕಾಫಿಗೆ ಲಂಡನ್ ಮತ್ತು ನ್ಯೂಯಾರ್ಕ್ ನಲ್ಲಿ ಬೆಲೆ ನಿಗದಿಯಾಗುತ್ತಿದೆ. ಅಂದರೆ ಭಾರತದಲ್ಲಿ ಬೆಳೆಯುವ ಬೆಳೆಗಳಿಗೆ ವಿದೇಶಗಳಲ್ಲಿ ಬೆಲೆ ನಿಗದಿಯಾಗುತ್ತಿದೆ. ಪ್ರತಿಯೊಂದು ವ್ಯಾಪಾರ ವ್ಯವಹಾರಗಳು ಎಲ್ಲವೂ ವಿದೇಶಿಮಯವಾಗಿದೆ.
ಇದಕ್ಕೆ ಉದಾ: ಕಳೆದ ಕೆಲ ತಿಂಗಳ ಹಿಂದೆ ಪಾಕಿಸ್ತಾನದ ಮೇಲೆ ಭಾರತವು ಯುದ್ಧ ಘೋಷಿಸುವ ತಯಾರಿಯಲ್ಲಿದ್ದಾಗ ಅಮೆರಿಕದ ಅಧ್ಯಕ್ಷ ಟ್ರಂಪ್ ಯುದ್ಧ ನಿಲ್ಲಿಸುವಂತೆ ಭಾರತಕ್ಕೆ ಕರೆ ನೀಡಿದ ತಕ್ಷಣ ಯುದ್ಧವನ್ನು ನಿಲ್ಲಿಸಿದ್ದು, ಭಾರತದ ವಿದೇಶ ನೀತಿಯನ್ನು ತೋರಿಸುತ್ತದೆ. ಪ್ರತಿಯೊಂದು ನೀತಿಯು ವಿದೇಶಿ ಬಂಡವಾಳದ ಮೇಲೆ ಕೇಂದ್ರೀಕರಣವಾಗಿದೆ. ಜಾಗತೀಕರಣದ ಹೆಸರಿನಲ್ಲಿ ನೂರಾರು ವಿದೇಶಿ ಕಂಪನಿಗಳು ಭಾರತದಲ್ಲಿ ಕಾರ್ಯ ನಿರ್ವಹಿಸುತ್ತಿವೆ. 1947 ರ ಹೊತ್ತಿಗೆ ಬ್ರಿಟಿಷರು ಭಾರತದಲ್ಲಿ ಹಲವಾರು ಕಂಪನಿಗಳನ್ನು ಬೆಳೆಸಿ ಭಾರತದಲ್ಲಿಯೇ ಬಿಟ್ಟು ಅವುಗಳನ್ನು ಸುರಕ್ಷಿತವಾಗಿ ನೋಡಿಕೊಳ್ಳುವಂತೆ ಭಾರತೀಯರಿಗೆ ಹಲವಾರು ಕಾಯ್ದೆ, ಕಾನೂನುಗಳನ್ನು ರೂಪಿಸಿ ರಾಜಕೀಯ ಅಧಿಕಾರವನ್ನು ಹಸ್ತಾಂತರ ಮಾಡಿರುವುದರಿಂದ ಈ ದಿನವನ್ನು “ಸ್ವಾತಂತ್ರ್ಯ ದಿನ ಎನ್ನುವ ಬದಲು ಅಧಿಕಾರ ಹಸ್ತಾಂತರವಾದ ದಿನ ಎನ್ನಬಹುದು”….
ಬರಹ:✍ ಡಾ. ಹರೀಶ್ ನಲ್ಕೆ ಸಂಶೋಧನಾ ಬರಹಗಾರರು.

About Author

Leave a Reply

Your email address will not be published. Required fields are marked *

You may have missed