लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
07/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರಮದಾನ ಪರಿಕಲ್ಪನೆಯ ಭಾಗವಾಗಿ ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ತಾಲ್ಲೂಕಿನ ಬಂಡಿಪುರ ಅಭಯಾರಣ್ಯದಲ್ಲಿರುವ ಬಳ್ಳೆಹಾಡಿಗೆ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು.

1 min read

ಶ್ರಮದಾನ – 9
°°°°°°°°°°°°°°°°°

ಶ್ರಮದಾನ ಪರಿಕಲ್ಪನೆಯ ಭಾಗವಾಗಿ ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ತಾಲ್ಲೂಕಿನ ಬಂಡಿಪುರ ಅಭಯಾರಣ್ಯದಲ್ಲಿರುವ ಬಳ್ಳೆಹಾಡಿಗೆ ಹೋಗುವ ಕಾರ್ಯಕ್ರಮ ನಿಗದಿಯಾಗಿತ್ತು.

ದಿನಾಂಕ 4/11/2026ರ ಬುಧವಾರ ಬೆಳಗ್ಗೆ ಆತ್ಮೀಯ ಗೆಳೆಯರಾದ ಶ್ರೀ ಡಿ ನಾರಾಯಣ್ ಮತ್ತು ಶ್ರೀ ಸತೀಶ್ ಅವರೊಂದಿಗೆ ಕಾರಿನಲ್ಲಿ ಹೊರಟು ದಾರಿಯಲ್ಲಿ ಬೆಳಗಿನ ಉಪಹಾರ ಮುಗಿಸಿ ಶ್ರೀರಂಗಪಟ್ಟಣದ ಬಳಿಯ ಪಾಲಹಳ್ಳಿಯ ಸಾಮಾಜಿಕ ಹೋರಾಟಗಾರರು ಮತ್ತು ಆತ್ಮೀಯ ಮಿತ್ರರಾದ ಶ್ರೀ ಪ್ರಸನ್ನ ಅವರನ್ನು ಜೊತೆಗೆ ಕರೆದುಕೊಂಡು ಬಳ್ಳೆಗೆ ಹೊರಟೆವು……

ಕಾಡೊಳಗಿನ ಹಾಡಿಯ ಜನರನ್ನು ಸಂಪರ್ಕಿಸುವುದು, ಅವರೊಂದಿಗೆ ಸಂವಾದ ನಡೆಸುವುದು ಅಷ್ಟು ಸುಲಭವಲ್ಲ. ಅತ್ಯಂತ ಸಂಕೋಚ ಸ್ವಭಾವದವರಾದ ಅವರು ಅಪರಿಚಿತರನ್ನು ಒಳಗೆ ಸೇರಿಸುವುದೂ ಇಲ್ಲ. ಆದರೆ ಶ್ರೀ ಪ್ರಸನ್ನ ಅವರು ಈ ಜನರೊಂದಿಗೆ ಬಹಳಷ್ಟು ವರ್ಷಗಳಿಂದ ಸತತವಾಗಿ ಸಂಪರ್ಕದಲ್ಲಿದ್ದು ಅವರ ಅನೇಕ ಸಮಸ್ಯೆಗಳಿಗೆ ಧ್ವನಿಯಾಗಿ ಅವರ ಹೋರಾಟಗಳಲ್ಲಿ ಭಾಗಿಯಾಗಿದ್ದವರು. ಇದನ್ನು ತಿಳಿದೇ ಪ್ರಸನ್ನ ಅವರು ಮೊದಲು ಹಾಡಿಯಲ್ಲಿಯೇ ವಾಸವಾಗಿದ್ದ ಈಗ ಎಚ್ ಡಿ ಕೋಟೆಯಲ್ಲಿರುವ ಹಾಡಿಯ ಶ್ರೀ ಭಾಸ್ಕರ್ ಎಂಬ ಸಮುದಾಯದ ಹಿರಿಯರನ್ನು ನಮ್ಮೊಂದಿಗೆ ಕರೆದುಕೊಂಡು ನಾವು ಜೊತೆಯಲ್ಲಿಯೇ ಹೊರಟೆವು.

ಸಾಮಾನ್ಯವಾಗಿ ಇಲ್ಲಿಯವರೆಗಿನ ಎಂಟು ಶ್ರಮದಾನದಲ್ಲಿ ನಾನು ಒಂದಷ್ಟು ದೈಹಿಕ ಕೆಲಸ ಕಾರ್ಯಗಳನ್ನು ಮಾಡಿದೆನು. ಹಾಗೆ ಇಲ್ಲಿಯೂ ಹಾಡಿಯ ಜನರೊಂದಿಗೆ ಒಂದಷ್ಟು ಅವರ ದಿನನಿತ್ಯದ ಚಟುವಟಿಕೆಗಳಲ್ಲಿ ಭಾಗವಹಿಸುವ ಆಸಕ್ತಿ ಹೊಂದಿದ್ದೆನು. ಆದರೆ ಇಲ್ಲಿ ಆ ಅವಕಾಶ ಸಿಗಲಿಲ್ಲ. ಸುಮಾರು 130ಕ್ಕೂ ಹೆಚ್ಚು ಹಾಡಿಗಳು ಎಚ್ ಡಿ ಕೋಟೆಯ ಸುತ್ತಮುತ್ತಲ ಭಾಗದಲ್ಲಿವೆ. ಅದು ಒಂದು ಸಾರ್ವಜನಿಕ ನಿರ್ಬಂಧಿತ ಪ್ರದೇಶವೂ ಹೌದು. ಅಲ್ಲಿ ಯಾವುದೇ ಚಟುವಟಿಕೆಗಳನ್ನು ಮಾಡಬೇಕಾದರೂ ಅರಣ್ಯ ಇಲಾಖೆಯ ಅನುಮತಿ ಬೇಕಾಗುತ್ತದೆ. ಆದ್ದರಿಂದ ಈ ಬಾರಿ ಶ್ರಮದಾನ ಕೇವಲ ಅಧ್ಯಯನ ಮತ್ತು ಚರ್ಚೆ, ಚಿಂತನೆ, ಸಮಸ್ಯೆಗಳ ಅರಿವಿಗೆ ಮಾತ್ರ ಸೀಮಿತವಾಗಿತ್ತು. ಮತ್ತೊಮ್ಮೆ ಅವಕಾಶವಾದಲ್ಲಿ ಅವರೊಂದಿಗೆ ಶ್ರಮದಾನ ಮಾಡುವ ಪ್ರಯತ್ನ ಜಾರಿಯಲ್ಲಿರುತ್ತದೆ.

ಹಾಡಿಗೆ ಪ್ರವೇಶಿಸುತ್ತಿದ್ದಂತೆ ಅಂಗನವಾಡಿ ಶಾಲೆಯ ಪುಟ್ಟ ಪುಟ್ಟ ಮಕ್ಕಳು ಆಟವಾಡುತ್ತಿದ್ದನ್ನು ಗಮನಿಸಿದೆವು. ಮುಂದೆ ಅಲ್ಲಿನ ಒಂದಷ್ಟು ಯುವಕರು ನೆಟ್ ಕಟ್ಟಿಕೊಂಡು ತಾವೇ ಸಿದ್ಧಪಡಿಸಿಕೊಂಡ ಸಣ್ಣ ಆಟದ ಮೈದಾನದಲ್ಲಿ ವಾಲಿಬಾಲ್ ಆಟವಾಡುತ್ತಿದ್ದರು. ಅಲ್ಲಿಂದ ಮುಂದೆ ಗುಡಿಸಲುಗಳ ರೀತಿಯಲ್ಲಿ ಅಥವಾ ಮಣ್ಣಿನ ಚಿಕ್ಕ ಚಿಕ್ಕ ಮನೆಗಳನ್ನೇ ನೋಡಿಕೊಂಡು ಹೊರಟೆವು. ಬಹುತೇಕ ಮನೆಗಳನ್ನು ಟಾರ್ಪಲುಗಳಿಂದ ಮೇಲ್ಹೊದಿಕೆಯಾಗಿ ಮುಚ್ಚಲಾಗಿದ್ದು ಸರಿಯಾದ ಬಾಗಿಲುಗಳು ಇರಲಿಲ್ಲ. ಅಲ್ಲಿ ಕೆಲವು ವರ್ಷಗಳ ಹಿಂದೆ ಹಳ್ಳಿ ಹುಡುಗ ಪ್ಯಾಟೆಗೆ ಬಂದ ಎಂಬ ಟಿವಿ ರಿಯಾಲಿಟಿ ಶೋ ಮುಖಾಂತರ ಪ್ರಖ್ಯಾತರಾಗಿ ಜಂಗಲ್ ಜಾಕಿ ಎಂಬ ಸಿನಿಮಾಗೂ ನಾಯಕ ನಟನಾಗಿ ಆಯ್ಕೆಯಾಗಿ, ಕೊನೆಗೆ ನಗರದ ಬದುಕಿನ ಕೃತಕ ಜನಗಳ ಒತ್ತಡ ತಡೆಯಲಾಗದೆ ಆತ್ಮಹತ್ಯೆ ಮಾಡಿಕೊಂಡ ರಾಜೇಶ್ ಅದೇ ಹಾಡಿಯವರು. ಅವರ ಸಂಬಂಧಿಕರು ಈಗಲೂ ಅಲ್ಲೇ ಇದ್ದಾರೆ. ಆ ಆದಿವಾಸಿಗಳು ಸಾಂಪ್ರದಾಯಿಕ ರೀತಿಯಲ್ಲಿ ಸತ್ತ ವ್ಯಕ್ತಿಗೆ ಘೋರಿ ಕಟ್ಟುವುದು ಆಚರಣೆಯಲ್ಲಿ ಇಲ್ಲದಿದ್ದರೂ ರಾಜೇಶನ ಒಂದು ಸಣ್ಣ ನೆನಪಿನ ಸ್ಮಾರಕ ಕಟ್ಟಿದ್ದಾರೆ. ಅದರಲ್ಲಿ ಆತನ ಹುಟ್ಟು ಸಾವಿನ ದಿನಾಂಕವನ್ನು ನಮೂದಿಸಿದ್ದಾರೆ.

ಅತ್ಯದ್ಭುತ ಮತ್ತು ಆಶ್ಚರ್ಯದ ವಿಷಯವೆಂದರೆ, ಹಾಡಿ ಜನರ ಮುಗ್ಧತೆಯನ್ನು ಖಂಡಿತವಾಗಿ ಈಗಲೂ ಗ್ರಹಿಸಲೇ ಸಾಧ್ಯವಾಗದಷ್ಟು ನನ್ನ ಮನಸ್ಥಿತಿ ಭ್ರಷ್ಟಗೊಂಡಿತ್ತು. ಅಲ್ಲಿನ ಯುವಕರಾಗಲಿ, ಮಹಿಳೆಯರಾಗಲಿ, ಮಕ್ಕಳಾಗಲಿ ತುಂಬಾ ನಾಚಿಕೆ ಸ್ವಭಾವದವರು. ಹೊರಗಿನ ಪ್ರಪಂಚಕ್ಕೆ ಭಯಪಡುವವರು. ಅವರ ಹೆಸರು ಕೇಳಿದರೇ ಸಾಕು ಸಂಕೋಚದ ಮುದ್ದೆಯಾಗುತ್ತಾರೆ. ತಮ್ಮ ಪಾಡಿಗೆ ತಾವು ಈಗಿರುವ ಆ ಕಾಡಿನ, ದಟ್ಟ ಅರಣ್ಯದ ಜಾಗವನ್ನೇ ಸ್ವಚ್ಛವಾಗಿಟ್ಟುಕೊಂಡು ತಮ್ಮ ಪ್ರದೇಶದಲ್ಲಿ ಧ್ಯಾನಸ್ಥ ಮನಸ್ಥಿತಿಯಲ್ಲಿ ಬದುಕುತ್ತಿರುವವರು. ಅದನ್ನು ನಗರದ ಪ್ರಜ್ಞಾಪೂರ್ವಕವಾಗಿ ಬದುಕುವ ನಾವಾಗಲಿ ಅಥವಾ ಭ್ರಷ್ಟಗೊಂಡ ಪ್ರಕ್ಷ್ಯುಬ್ಧ ಮನಸ್ಥಿತಿಯ ಜನರಾಗಲಿ ಅರ್ಥ ಮಾಡಿಕೊಳ್ಳುವುದೇ ಕಷ್ಟ. ಆದರೆ ಅವರುಗಳು ಅನೇಕ ಮೂಲಸೌಕರ್ಯಗಳಿಂದ ವಂಚಿತರಾಗಿದ್ದಾರೆ. ಅಜ್ಞಾನ, ಮೌಢ್ಯ, ಬಡತನದಲ್ಲಿ ಬದುಕುತ್ತಿದ್ದಾರೆ. ಆದರೆ ಅವರೊಳಗಿನ ಜೀವ ಪ್ರೀತಿ, ಸಹಜತೆ, ಕಾಡಿನ ಆ ಪ್ರಾಕೃತಿಕ ಶಕ್ತಿ ಅವರ ಬದುಕನ್ನು ಮುನ್ನೆಡೆಸಿಕೊಂಡು ಹೋಗುತ್ತಿದೆ.

ರಾಮ ಫಲ, ಲಕ್ಷ್ಮಣ ಫಲ, ಸೀತಾಫಲ, ಹಲಸಿನ ಹಣ್ಣು, ಗೆಡ್ಡೆ ಗೆಣಸು, ವಿವಿಧ ರೀತಿಯ ಬೇರುಗಳು, ಬೆಟ್ಟದ ನೆಲ್ಲಿಕಾಯಿ, ಜೇನು ಮುಂತಾದ ಆಹಾರ ವಸ್ತುಗಳನ್ನು ಅತ್ಯಂತ ಪ್ರಾಮಾಣಿಕವಾಗಿಯೇ ಕಡಿಮೆ ಹಣಕ್ಕೆ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದಾರೆ. ನಮ್ಮೊಂದಿಗೆ ಬಂದ ಶ್ರೀ ಭಾಸ್ಕರ್ ಅವರ ಮಾತುಗಳನ್ನು ಸಂಪೂರ್ಣವಾಗಿ ಆಲಿಸಿದಾಗ ನಿಜಕ್ಕೂ ಅಲ್ಲಿನ ಜನ ಅತ್ಯಂತ ಪ್ರಾಮಾಣಿಕರು, ಮುಗ್ಧರು ಎಂಬುದು ತುಂಬಾ ಸ್ಪಷ್ಟವಾಯಿತು. ಯಾವುದೇ ಕಾರಣಕ್ಕೂ ಹೆಚ್ಚು ಆಸೆ ಪಡುವುದಿಲ್ಲ, ದುರಾಸೆ ಪಡುವುದಿಲ್ಲ ವಂಚನೆ ಮಾಡುವುದಿಲ್ಲ. ಹೇಳುವುದನ್ನು ಸಂಕೋಚದಿಂದಲೇ ಹೇಳುತ್ತಾರೆ, ಕೇಳುವುದನ್ನು ಸಂಕೋಚದಿಂದಲೇ ಕೇಳುತ್ತಾರೆ.

ಗಿಡ – ಮರ, ಪ್ರಾಣಿ ಪಕ್ಷಿ, ಕೀಟಗಳ ಬಗ್ಗೆ ದೈವತ್ವದ ಭಾವನೆ ಹೊಂದಿದ್ದಾರೆ. ಅದನ್ನು ಆಹಾರವೇ ಆಗಲಿ ಅಥವಾ ಬೇರೆ ಉಪಯೋಗಕ್ಕೆಯಾದರೂ ಕಾಡನ್ನು ನಾಶ ಪಡಿಸದೆ ಅದನ್ನು ಬದುಕಿನ ಅವಶ್ಯಕತೆ ಮತ್ತು ಅನಿವಾರ್ಯತೆಗೆ ಮಾತ್ರ ಉಪಯೋಗಿಸಿಕೊಳ್ಳುತ್ತಾರೆಯೇ ಹೊರತು ಅದನ್ನೆಂದೂ ದುರುಪಯೋಗಪಡಿಸಿಕೊಳ್ಳುವುದಿಲ್ಲ. ಅಷ್ಟರಮಟ್ಟಿಗೆ ನಮಗಿಂತ ಹೆಚ್ಚಿನ ಜ್ಞಾನ ಕಾಡಿನ ಉಳಿವಿನ ಬಗ್ಗೆ, ತಮ್ಮ ಅಸ್ತಿತ್ವದ ಬಗ್ಗೆ ಅವರಿಗೆ ಇದೆ. ಕಾಡು ಉಳಿದಿರುವುದೇ ಅವರಿಂದಾಗಿ. ಇಲ್ಲದಿದ್ದರೆ ಸರ್ಕಾರ ಮತ್ತು ರೆಸಾರ್ಟ್ ಸಂಸ್ಕೃತಿ ಕಾಡನ್ನು ಈಗಾಗಲೇ ನಾಶಪಡಿಸುತ್ತಿತ್ತು.

ದುರಂತವೆಂದರೆ ಕೃಷಿ ಮಾಡಲು, ಮಧ್ಯಪಾನ ಮಾರಾಟ ಮಾಡಲು ಅಲ್ಲಿ ಸಂಪೂರ್ಣ ನಿಷೇಧವಿದ್ದರೂ ಕಾಡ ಅಂಚಿನಲ್ಲಿ ಮೊದಲು ಸಿಗುವುದೇ ಬಾರ್ ಮತ್ತು ರೆಸಾರ್ಟ್ ಗಳು. ಇದು ಈ ವ್ಯವಸ್ಥೆಯ ದುರಂತ. ಈ ಮುಗ್ಧರನ್ನು, ಅವರ ಹೆಸರನ್ನು ಅಧಿಕಾರಿಗಳು, ಮನರಂಜನಾ ಉದ್ಯಮಿಗಳು ಅಥವಾ ಬರಹಗಾರರು ಒಂದು ವಸ್ತುವಿಷಯದಂತೆ ಉಪಯೋಗಿಸಿಕೊಳ್ಳುತ್ತಾರೆ. ಆದರೆ ಅವರಿಗೆ ಉಪಯೋಗವಾಗುವ ಕೆಲಸ ಮಾಡಿ ಕೊಡುವುದಿಲ್ಲ. ಮೈಸೂರಿನ ದಸರಾ ಮಹೋತ್ಸವದಲ್ಲಿ ಇಡೀ ಮೈಸೂರು ವಿದ್ಯುತ್ ಅಲಂಕಾರದಿಂದ ಜಗಮಗಿಸುವಾಗ ಅಲ್ಲಿಂದ ಕೆಲವೇ ಕಿಲೋಮೀಟರ್ ದೂರದಲ್ಲಿರುವ ಈ ಹಾಡಿಯ ಜನ ಕೇವಲ ಸೋಲಾರ್ ಬೆಳಕಿನಲ್ಲಿ, ಚಂದಮಾಮನ ಬೆಳಕಿನಲ್ಲಿ ಜೀವನ ಸಾಗಿಸುತ್ತಾರೆ. ಅದೇ ಕಾಡಿನ ಆನೆಗಳು , ಮೈಸೂರು ಮಹೋತ್ಸವದ ಬಹುದೊಡ್ಡ ಆಕರ್ಷಣೆಯಾದರೆ ಅದರ ಮಾವುತರು ಕತ್ತಲ ಬದುಕಿನ ಕಾವಾಡಿಗರು.

ಅವರ ಹಿರಿಯ ಮುಖಂಡರು ಹೇಳಿದಂತೆ ಯಾವ ಯಾವುದೋ ಕಾರಣದಿಂದ ಸಣ್ಣಪುಟ್ಟ ತಪ್ಪುಗಳನ್ನೇ ಕಾನೂನಾತ್ಮಕ ತಪ್ಪುಗಳನ್ನಾಗಿ ದೊಡ್ಡದು ಮಾಡಿ ಇಲ್ಲಿನ ಅನೇಕ ಅವರ ಜನರ ಮೇಲೆ ಅರಣ್ಯ ಇಲಾಖೆಯವರ ಸಾಕಷ್ಟು ಮೊಕದ್ದಮೆಗಳು ನ್ಯಾಯಾಲಯದಲ್ಲಿ ದಾಖಲಾಗಿದೆ. ಅದಕ್ಕೆ ಅಲೆಯುವುದೇ ಬಹುದೊಡ್ಡ ಸಮಸ್ಯೆಯಾಗಿದೆ. ಯಾರಾದರೂ ಅರಣ್ಯ ಮಂತ್ರಿ ಮನಸ್ಸು ಮಾಡಿ ಕನ್ನಡ ಹೋರಾಟಗಾರರು, ರೈತ ಹೋರಾಟಗಾರರು ಅಥವಾ ಇತರ ಯಾವುದೇ ಹೋರಾಟಗಾರರ ಮೇಲಿನ ಮೊಕದ್ದಮೆಗಳನ್ನು ರದ್ದು ಮಾಡುವಂತೆ ಕ್ರಿಮಿನಲ್ ಅಲ್ಲದ ಮೊಕದ್ದಮೆಗಳನ್ನು ಈ ಕಾಡಿನ ಆದಿವಾಸಿ ಸಮುದಾಯದ ಜನರ ಬಗ್ಗೆಯೂ ಸಹಾನುಭೂತಿ ತೋರಿಸಿ ಆ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯುವ ಕೆಲಸ ಆಗಬೇಕೆಂದು ಮನವಿ ಮಾಡಿಕೊಳ್ಳುತ್ತಾರೆ. ಆ ಬಗ್ಗೆ ಸರ್ಕಾರದ ಗಮನ ಸೆಳೆಯಲು ಪ್ರಯತ್ನಿಸುವುದಾಗಿ ನಾವು ಭರವಸೆ ನೀಡಿದೆವು

ಸಿಕ್ಕಷ್ಟು ಸಮಯದಲ್ಲಿ ಇನ್ನೊಂದು ಹಾಡಿಯನ್ನು ನೋಡಿಕೊಂಡು, ಅಲ್ಲಿನ ಕೆಲವು ಮುಖಂಡರನ್ನು ಮಾತನಾಡಿಸಿಕೊಂಡು ಬೆಂಗಳೂರಿನತ್ತ ಹೊರಟಾಗ ಹೋರಾಟಗಾರರಾದ ಪಾಲಹಳ್ಳಿಯ ಶ್ರೀ ಪ್ರಸನ್ನ ಅವರು ಅಲ್ಲಿಯೇ ಒಬ್ಬ ಒಂಟಿ ಕಾಲಿನ ರೈತರನ್ನು ಮಾತನಾಡಿಸಿಕೊಂಡು ಹೋಗೋಣ ಎಂದು ಹೇಳಿದರು. ಆಗ ನಂಜನಗೂಡು ತಾಲೂಕಿನ ಮಹೇಂದ್ರ ಅವರನ್ನು ಅವರ ತೋಟದಲ್ಲಿಯೇ ಭೇಟಿಯಾದವು. ಸಂಜೆ ಸೂರ್ಯ ಮುಳುಗುವ ಹೊತ್ತಿನಲ್ಲಿ ಅವರ ಬಾಳೆ ತೋಟಕ್ಕೆ ಹೋಗಿ ಅವರನ್ನು ಮಾತನಾಡಿಸಿದೆವು. ಎಲ್ಲರಂತೆ ವಿದ್ಯಾರ್ಥಿ ಜೀವನ ನಡೆಸುತ್ತಿದ್ದ ಅವರು ಎಂಟು ವರ್ಷಗಳ ಕೆಳಗೆ ಮೂಳೆ ಕ್ಯಾನ್ಸರ್ ಗೆ ಬಲಿಯಾಗಿ ಒಂದು ಕಾಲನ್ನು ಕಳೆದುಕೊಳ್ಳುತ್ತಾರೆ. ಅದರಿಂದಲೇ ಖಿನ್ನತೆಗೆ ಒಳಗಾಗುತ್ತಾರೆ. ಅವರದೇ ತೋಟವನ್ನು ಬೇರೆಯವರಿಗೆ ಲೀಸ್ ಗೆ ಕೊಟ್ಟಿದ್ದ ಜಾಗದಲ್ಲಿ ಕುಳಿತು ಸದಾ ಯೋಚಿಸುತ್ತಿರುತ್ತಾರೆ. ಅಲ್ಲಿಯೇ ಸಣ್ಣಪುಟ್ಟ ಕೆಲಸ ಮಾಡುತ್ತಿರುತ್ತಾರೆ.

ಒಂದು ದಿನ ನಾನು ಕೃಷಿಕನಾಗಿ ಕೆಲಸ ಮಾಡಬೇಕೆಂದು ನಿರ್ಧರಿಸಿ ಆ ಜಮೀನನ್ನು ಹಿಂಪಡೆದು, ಜೊತೆಗೆ ಇನ್ನೊಂದಿಷ್ಟು ಜಾಗವನ್ನು ಸಹ ಗುತ್ತಿಗೆ ಪಡೆದು ಕೃಷಿ ಪ್ರಾರಂಭಿಸಿ, ಹಲವಾರು ಸವಾಲುಗಳನ್ನು ಎದುರಿಸಿ, ಇದೀಗ ರೈತರತ್ನ ಪ್ರಶಸ್ತಿ ಪಡೆಯುವ ಮಟ್ಟಿಗೆ ಯಶಸ್ವಿ ಕೃಷಿಕರಾಗಿದ್ದಾರೆ. ಇಷ್ಟಕ್ಕೇ ಇವರ ಯಶೋಗಾಥೆ ಮುಗಿಯುವುದಿಲ್ಲ. ಈ ನಡುವೆ ಹೈ ಜಂಪ್, ವೀಲ್ ಚೇರ್ ರಗ್ಬಿ ಮುಂತಾದ ಪ್ಯಾರಾ ವಿಶೇಷ ಚೇತನ ಕ್ರೀಡೆಗಳಲ್ಲಿ ಭಾಗವಹಿಸಿ ಪ್ರಶಸ್ತಿಗಳನ್ನು ಗೆದ್ದು, ಅನೇಕ ಸಂಘ ಸಂಸ್ಥೆಗಳಿಂದ ಸನ್ಮಾನಿತರಾಗಿದ್ದಾರೆ.

ಅವರನ್ನು ಮಾತನಾಡಿಸಿ, ಅವರಿಂದ ಒಂದಷ್ಟು ಜೀವನೋತ್ಸಹ ಭಾವವನ್ನು ಮೂಡಿಸಿಕೊಂಡು, ಅವರು ಪ್ರೀತಿಯಿಂದ ಕೊಟ್ಟ ಜೇನುತುಪ್ಪದ ಬಾಟಲ್ ತೆಗೆದುಕೊಂಡು, ಅಲ್ಲಿಂದ ಬರುವಾಗ ಜೀವನದಲ್ಲಿ ಒಮ್ಮೆಯೂ ನೋಡದ ದೊಡ್ಡ ಗಾತ್ರದ ಮಂಡಲದ ಹಾವು ನಮ್ಮ ವಾಹನದ ಎದುರಿಗೆ ರಸ್ತೆ ದಾಟುತ್ತಿದ್ದುದನ್ನು ನೋಡಿದೆವು. ಆ ಅದ್ಭುತ ದೃಶ್ಯದ ನೆನಪುಗಳೊಂದಿಗೆ ಪ್ರಸನ್ನ ಅವರನ್ನು ಅವರ ಮನೆಗೆ ಬಿಟ್ಟು ನಾವು ಗೆಳೆಯರು ಊಟ ಮಾಡಿ ಬೆಂಗಳೂರಿನತ್ತ ಸಾಗಿದೆವು. ಸುಮಾರು 12:30ರ ಮಧ್ಯರಾತ್ರಿ ಮನೆ ತಲುಪಿದೆನು.

ಬರಹಗಳಿಂದ ಕಲಿಯುತ್ತಾ, ಪಾದಯಾತ್ರೆಯಿಂದ ಅನುಭವ ಪಡೆಯುತ್ತಾ, ಇದೀಗ ಶ್ರಮದಾನದ ಪರಿಕಲ್ಪನೆಯಲ್ಲಿ ಮತ್ತಷ್ಟು ಹೊಸ ಹೊಸ ಅನುಭವಗಳೊಂದಿಗೆ ಬದುಕು ಮುನ್ನಡೆಯುತ್ತಿದೆ. ಮಾನವೀಯ ಮೌಲ್ಯಗಳ ಪುನರುತ್ಥಾನದಲ್ಲಿ ಇದು ಒಂದು ಸಣ್ಣ ಅರಿವಿನ ಪ್ರಕ್ರಿಯೆ….

(ಕೆಲವು ವಿಡಿಯೋ ಮತ್ತು ಚಿತ್ರಗಳನ್ನು vivekananda H K ಎಂಬ ಮುಖಪುಟದಲ್ಲಿ ನೋಡಬಹುದು…)

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed