ಗೌರವಾನ್ವಿತ ಪಾದಯಾತ್ರಿಗಳೇ,
1 min read
ಗೌರವಾನ್ವಿತ ಪಾದಯಾತ್ರಿಗಳೇ,
ದೂರದೂರದ ಊರುಗಳಿಂದ ಶಿವನನ್ನು ಆರಾಧಿಸಲು ಹಾಗೂ
ಧರ್ಮಸ್ಥಳದ ಶ್ರೀ ಮಂಜುನಾಥನ ದರುಶನಕ್ಕೆ ತಾವುಗಳು ಪಾದಯಾತ್ರೆ ಬರುತ್ತಿರುವುದು ಸಂತೋಷ.
ಆ ಬಿರುಬಿಸಿಲಿನಲಿ,
ನೂರಾರು ಮೈಲಿಗಳನ್ನು ಹಗಲು ರಾತ್ರಿ ಎನ್ನದೇ ಶಿವಭಕ್ತಿಯಲಿ ಬರಿಗಾಲಿನಲಿ
ನಡೆದು ತಮ್ಮತಮ್ಮ ಊರುಗಳಿಗೆ ಹಿಂತಿರುಗುತ್ತೀರಿ.
ದಾರಿಯುದ್ದಕ್ಕೂ ನಿಮ್ಮ ಊಟ, ವಸತಿ, ಶೌಚ, ಸ್ನಾನ, ವಿಶ್ರಾಂತಿಗಾಗಿ ಇಲ್ಲಿನ ಸಂಪನ್ಮೂಲಗಳನ್ನು ವಿವಿಧ ರೀತಿಯಲ್ಲಿ ಬಳಸಿಕೊಳ್ಳುತ್ತೀರಿ ಹಾಗೂ ಸ್ಥಳೀಯರೂ ಸಹ ಅವರ ಸಾಧ್ಯತೆಯಲ್ಲಿ ತಮಗೆ ಆತಿಥ್ಯ ನೀಡುತ್ತಾರೆ.
ಆದರೆ,
ನೀವು ಬಂದು ಹೋದ ನಂತರ ಇಲ್ಲಿ ಕಾಣ ಸಿಗುವುದು:
ದಾರಿಯುದ್ದಕ್ಕೂ ತಿಂದೆಸೆದು ಹೋಗಿರುವ
ತಟ್ಟೆ-ಲೋಟಗಳು,
ಬಿಚ್ಚಿ ಬಿಸಾಕಿರುವ ಚಿಂದಿ ಬಟ್ಟೆಗಳು, ಕಾಲಿಟ್ಟೆಡೆಯಲ್ಲೆಲ್ಲ ಮೆತ್ತಿಕೊಳ್ಳುವ ನಿಮ್ಮ ಉಚ್ಛಿಷ್ಠಗಳು,
ನೀವು ಅಜಾಗರೂಕತೆಯಿಂದ ಕಿಚ್ಚಿಟ್ಟ ಪೊದೆಗಳು,
ಕುಡಿದೆಸೆದ ನೀರಿನ ಬಾಟಲಿಗಳು,
ಹಾಕಿ ಹರಿದೆಸೆದ ಚಪ್ಪಲಿಗಳು,……. ಒಂದಾ? ಎರಡಾ?
ಛೇ! ಇದೊಂದು ರಂಪ ರಾಮಾಯಣ.
ಪಾದಯಾತ್ರೆಯ ಸಂದರ್ಭದಲ್ಲಿನ ಈ ಅಸಹ್ಯದಿಂದ ಇಡೀ ನಾಗರಿಕ ಸಮಾಜ ನಾಚಿಕೆಯಿಂದ ತಲೆ ಎತ್ತದಂತಾಗಿದೆ.
ಮನುಷ್ಯನ ಬಗ್ಗೆ ಮನುಷ್ಯನೇ ಹೇಸಿಗೆ ಪಟ್ಟು ಛೀ..ಥೂ… ಎನ್ನುವಂತಾಗಿದೆ.
ನಿಮಗೆ ದೇವರ ಬಗ್ಗೆ ಗೌರವ, ಭಕ್ತಿ, ಶ್ರದ್ಧೆ ಇದ್ದಲ್ಲಿ; ಈ ಪಾದಯಾತ್ರೆಯ ಹೆಸರಿನಲಿ ನೀವು ಸಾಗುವ ದಾರಿಯುದ್ದಕ್ಕೂ ಕಸ ಹಾಕುತ್ತಾ ಹೋಗಬೇಡಿ.
ನೀವು ಬಳಸಿದ ವಸ್ತುಗಳನ್ನು ನೀವೇ ಸೂಕ್ತ ರೀತಿಯಲಿ ವಿಲೇವಾರಿ ಮಾಡಿ ಇತರರಿಗೆ ಮಾದರಿಯಾಗುವ ಮೂಲಕ ಸ್ಥಳೀಯರ ಗೌರವಾದರ ಮತ್ತು ದೇವರ ಕೃಪೆಗೆ ಪಾತ್ರರಾಗಿ.
ಈ ಪಾದಯಾತ್ರೆ ಸಮಯದ ಜನಜಂಗುಳಿಯಿಂದ ಆಗುವ ಸಂಚಾರ ಅವ್ಯವಸ್ಥೆ, ಅಪಘಾತ ಹಾಗೂ ಕಾನೂನು-ಸುವ್ಯವಸ್ಥೆ ಸವಾಲು ಇವುಗಳನ್ನು ನಿಭಾಯಿಸುವುದು ಆಡಳಿತದ ಜವಾಬ್ದಾರಿಯಾಗಿದ್ದರೂ,
ಭಾಗವಹಿಸುವ ಸಾವಿರಾರು ಜನರ ಸಹಕಾರವೂ ಅಷ್ಟೇ ಅಗತ್ಯವಾದುದು. ಪಾದಯಾತ್ರಿಗಳ ಬೇಜವಾಬ್ದಾರಿ ವರ್ತನೆಯಿಂದ ಪಾದಯಾತ್ರೆಯ ಕುರಿತು ಜನಸಾಮಾನ್ಯರಲ್ಲಿ ಹೇವರಿಕೆ ಮೂಡಬಾರದೆಂಬುದು ನಮ್ಮ ಆಶಯ.
ಭಾರತೀಯ ಸಂಪ್ರದಾಯ, ಆಚರಣೆ, ಪರಂಪರೆ, ಸಂಸ್ಕೃತಿಯ ಬಗೆಗೆ ಕುತ್ಸಿತ ಟೀಕೆ ಹಾಗೂ ಅಪಹಾಸ್ಯ ಮಾಡುವವರಿಗೆ ಈ ಪಾದಯಾತ್ರೆಯಲ್ಲಿ ಘಟಿಸುವ ಅವಾಂತರಗಳು ಹೊಸ ಅಸ್ತ್ರ ಒದಗಿಸಿಕೊಟ್ಟಿವೆ.
ನಿಮ್ಮ ಪಯಣ ಸುಖಕರ, ಸುರಕ್ಷಿತ
ಹಾಗೂ ಫಲಪ್ರದವೂ ಆಗಿರಲಿ.
ಸತ್ಯಂ ಶಿವಂ ಸುಂದರಂ.
———
ಇನ್ನೇನು ಕೆಲವೇ ದಿನಗಳಲ್ಲಿ ಶಿವರಾತ್ರಿಯ ಪಾದಯಾತ್ರೆಯು ನಮ್ಮ- ನಿಮ್ಮಊರಿನ ಮೂಲಕ ಹಾದುಹೋಗಲು ಪ್ರಾರಂಭವಾಗಲಿದೆ.
ಯಾತ್ರಿಗಳು ಸೃಷ್ಠಿಸಿ, ಚೆಲ್ಲಿ ಹೋಗುವ ಕಸದ ರಾಶಿಯಲ್ಲಿ ಸ್ಥಳೀಯರ ಮತ್ತು ವ್ಯಾಪಾರಿಗಳ ಪಾತ್ರವೂ ಅಗಾಧವಾದದ್ದು.
ನಾವೆಲ್ಲರೂ ಜವಾಬ್ದಾರಿಯಿಂದ ವರ್ತಿಸಬೇಕಾದ್ದು ಅತ್ಯಗತ್ಯ.
ಈ ಮೇಲಿನ ಸಂದೇಶವನ್ನು ನಿಮ್ಮ ನಿಮ್ಮ ವ್ಯಾಪ್ತಿಯಲ್ಲಿ ಕರಪತ್ರದ ರೂಪದಲ್ಲಿ ಮುದ್ರಿಸಿ, ಪಾದಯಾತ್ರಿಗಳು ಮತ್ತು ಹಾದಿಯುದ್ದಕ್ಕೂ ವ್ಯಾಪಾರ ಮಾಡಲು ಅಂಗಡಿ, ಹೋಟೆಲ್ ತೆರೆಯುವವರಿಗೆ ತಲುಪುವಂತೆ ಮಾಡಲು ಈ ಮೂಲಕ ಮನವಿ ಮಾಡಿಕೊಳ್ಳುತ್ತೇವೆ.
ನೇಚರ್ ಕ್ಲಬ್, ಮೂಡಿಗೆರೆ
ಹಾಗೂ
ಗೆಳೆಯರ ಬಳಗ, ಹಾಸನ.