ವಾಜಪೇಯಿ ಜನ್ಮದಿನಾಚರಣೆಗೆ ಸಿದ್ಧತೆ
1 min read
ವಾಜಪೇಯಿ ಜನ್ಮದಿನಾಚರಣೆಗೆ ಸಿದ್ಧತೆ
ಚಿಕ್ಕಮಗಳೂರು: ಜಿಲ್ಲೆಯಲ್ಲಿ ಮಾ.1ರಿಂದ ಮಾಜಿ ಪ್ರಧಾನಮಂತ್ರಿ ಅಟಲ್‌ಬಿಹಾರಿ ಪಾಜಪೇಯಿ ಜನ್ಮ ಶತಮಾನೋತ್ಸವವನ್ನು ವಿಜೃಂಭಣೆಯಿಂದ ವರ್ಷಪೂರ್ತಿ ಆಚರಿಸಲು ಬಿಜೆಪಿ ನಿರ್ಧರಿಸಿದೆ ಎಂದು ಪಕ್ಷದ ಜಿಲ್ಲಾಧ್ಯಕ್ಷ ಎಂ.ಆರ್.ದೇವರಾಜ ಶೆಟ್ಟಿ ತಿಳಿಸಿದರು.
ಬಿಜೆಪಿಯ ಎಲ್ಲ ಮಂಡಲಗಳಲ್ಲಿ ವಾಜಪೇಯಿ ಹೆಸರಿನಲ್ಲಿ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಜಿಲ್ಲಾ ಮತ್ತು ಮಂಡಲ ಮಟ್ಟದಲ್ಲಿ ಸಮಿತಿ ರಚಿಸಿದ್ದು ಜಿಲ್ಲಾ ಪಂಚಾಯಿತಿ ಮಾಜಿ ಅಧ್ಯಕ್ಷೆ ಚೈತ್ರಶ್ರೀ ಜಿಲ್ಲಾ ಸಂಚಾಲಕರಾಗಿದ್ದಾರೆ ಎಂದು ಬುಧವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಫೆ.28 ರೊಳಗಾಗಿ ಎಲ್ಲ ಮಂಡಲಗಳಲ್ಲಿ ಅಟಲ್‌ಜೀ ಕಾಲಘಟ್ಟದಲ್ಲಿ ಅವರೊಂದಿಗಿನ ಅನುಭವಗಳನ್ನು ಹೊಂದಿದ್ದವರನ್ನು ಭೇಟಿ ಮಾಡಿ ಅವರ ನೆನಪುಗಳನ್ನು ಮೆಲುಕು ಹಾಕುವುದು ಮತ್ತು ಅವರಿಗೆ ಸನ್ಮಾನ ಮಾಡಲಾಗುವುದು ಎಂದು ಹೇಳಿದರು.
ಮಾ.1ರಿಂದ 5ರವರೆಗೆ ಎಲ್ಲ ಮಂಡಲಗಳಲ್ಲಿ ಅಟಲ್‌ಜೀ ಬಗ್ಗೆ ವಿಚಾರ ಸಂಕಿರಣ, ಮಾ.10 ರಿಂದ 14 ರವರೆಗೆ ಭಾಷಣ, ಪ್ರಬಂಧ, ರಂಗೋಲಿ, ಚಿತ್ರಕಲೆ ಮತ್ತಿತರ ಸ್ಪರ್ಧೆಗಳನ್ನು ಆಯೋಜಿಸಲಾಗಿದೆ ಎಂದು ತಿಳಿಸಿದರು. ಮಾ.15ರಂದು ಜಿಲ್ಲಾಮಟ್ಟದ ಅಟಲ್ ಜೀ ವಿರಾಸತ್ ಸಮ್ಮೇಳನ ನಡೆಸಲಾಗುತ್ತದೆ. ಅಟಲ್‌ಜೀ ಸಾಧನೆ ಕುರಿತ ಚಿತ್ರ ಪ್ರದರ್ಶನ, ವಿವಿಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ, ಅಟಲ್‌ಜೀ ವ್ಯಕ್ತಿತ್ವದ ಬಗ್ಗೆ ವಿಷಯ ಮಂಡನೆ ನಡೆಯಲಿದೆ ಎಂದು ಮಾಹಿತಿ ನೀಡಿದರು. ಕಾಂಗ್ರೆಸ್ ಸರ್ಕಾರ ಬಂದು 21 ತಿಂಗಳು ಕಳೆದಿದೆ.
ಜಿಲ್ಲಾ ಉಸ್ತುವಾರಿ ಸಚಿವ ಕೆ.ಜೆ.ಜಾರ್ಜ್ ಅವರು ಜನರ ಸಮಸ್ಯೆಗಳಿಗೆ ಸ್ಪಂದಿಸುತ್ತಿಲ್ಲ. ಅವರ ತೋಟಕ್ಕೆ ಮತ್ತು ರಾಷ್ಟ್ರಧ್ವಜ ಹಾರಿಸಲು ಮಾತ್ರ ಜಿಲ್ಲೆಗೆ ಬರುತ್ತಿದ್ದು ಜಿಲ್ಲೆಯ ಜನತೆ ಬಗ್ಗೆ ಈ ಮಂತ್ರಿಗೆ ಕಾಳಜಿ ಇಲ್ಲ ಎಂದು ದೂರಿದರು. ಗ್ಯಾರಂಟಿ ಹಣ ಬಿಡುಗಡೆಯಾಗಿಲ್ಲ ಎಂದು ಜನ ಕೇಳುತ್ತಿದ್ದಾರೆ ಎಂದರೆ ನಾವು ಅವರಿಗೆ ಮಾಸಿಕ ವೇತನ ನೀಡುತ್ತಿಲ್ಲ ಎಂದು ಕೆ.ಜೆ. ಜಾರ್ಜ್ ಹೇಳುವ ಮೂಲಕ ರಾಜ್ಯದ ಜನರಿಗೆ ಅಪಮಾನ ಮಾಡಿದ್ದಾರೆ. ಗ್ಯಾರಂಟಿ ಕೊಡಿ ಎಂದು ಕೇಳಿದವರು ಯಾರು? ಕೊಟ್ಟ ಮೇಲೆ ಸಮರ್ಪಕವಾಗಿ ನೀಡುವುದು ಅವರ ಹೊಣೆಯಲ್ಲವೇ ಎಂದು ಪ್ರಶ್ನಿಸಿದರು.
ಮುಖಂಡ ವೆಂಕಟೇಶ್ ಮಾತನಾಡಿ, ಕಾಂಗ್ರೆಸ್ ಸರ್ಕಾರದಲ್ಲಿ ವಸತಿ ಯೋಜನೆಯ ಮನೆ ಮಂಜೂರಾಗಿಲ್ಲ ದೂರಿದರು. ಬಿಜೆಪಿ ಮುಖಂಡರಾದ ಚೈತ್ರಶ್ರೀ, ಪುಷ್ಪರಾಜ್, ದಿನೇಶ್, ಕನಕರಾಜ್ ಅರಸ್, ಹಿರೇಮಗಳೂರು ಪುಟ್ಟಸ್ವಾಮಿ ಮತ್ತಿತರರಿದ್ದರು.