ತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಅಮಾನತಿಗೆ ಆಗ್ರಹಿಸಿ ವಕೀಲ ಪ್ರತಿಭಟನೆ
1 min readತರೀಕೆರೆ ಉಪವಿಭಾಗಾಧಿಕಾರಿ ಕಾಂತರಾಜ್ ಅಮಾನತಿಗೆ ಆಗ್ರಹಿಸಿ ವಕೀಲ ಪ್ರತಿಭಟನೆ
ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ಅವರು ವಕೀಲರೊಬ್ಬರನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ ಎಂದು ಆರೋಪಿಸಿ ವಕೀಲರು ನ್ಯಾಯಾಲಯದ ಕಲಾಪ ಬಹಿಷ್ಕರಿಸಿ ಗುರುವಾರ ಪ್ರತಿಭಟನೆ ನಡೆಸಿದರು.
ತರೀಕೆರೆ, ಚಿಕ್ಕಮಗಳೂರು, ಕಡೂರು ಮತ್ತು ಮೂಡಿಗೆರೆಯಲ್ಲಿ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದರು. ನಂತರ ವಿಧಾನ ಪರಿಷತ್ ಸದಸ್ಯ ಎಸ್.ಎಲ್.ಭೋಜೇಗೌಡ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಮೀನಾ ನಾಗರಾಜ್ ಅವರನ್ನು ಭೇಟಿ ಮಾಡಿ ತರೀಕೆರೆ ಉಪವಿಭಾಗಾಧಿಕಾರಿ ಕೆ.ಜೆ.ಕಾಂತರಾಜ್ ವಿರುದ್ಧ ಕಠಿಣ ಕ್ರಮ ಜರುಗಿಸುವಂತೆ ಮನವಿ ಸಲ್ಲಿಸಿದರು.ಅದರೊಂದಿಗೆ ಕಂದಾಯ ಇಲಾಖೆ ರಾಜ್ಯ ಕಾರ್ಯದರ್ಶಿಗಳಿಗೆ ಮನವಿ ಸಲ್ಲಿಸಿ ದರು.
ಭೂವಿವಾದಕ್ಕೆ ಸಂಬಂಧಿಸಿದಂತೆ ಹೈಕೋರ್ಟ್ ಆದೇಶವನ್ನು ಉಪವಿಭಾಗಾಧಿಕಾರಿಗೆ ತಲುಪಿಸಲು ಕಡೂರಿನ ವಕೀಲ ಹರೀಶ್ ಬುಧವಾರ ಸಂಜೆ ತೆರಳಿದ್ದರು. ಇದಕ್ಕೂ ಮುನ್ನ ಉಪವಿಭಾಗಾಧಿಕಾರಿ ಮಾಡಿದ್ದ ಆದೇಶ ಕಾನೂನಿಗೆ ವಿರುದ್ಧವಾಗಿದೆ ಎಂದು ಹರೀಶ್ ಅವರ ಕಕ್ಷೆದಾರರು ಮುಖ್ಯಮಂತ್ರಿಗೆ ದೂರು ನೀಡಿದ್ದರು. ಇದರಿಂದ ಕೋಪಗೊಂಡಿದ್ದ ಉಪ ವಿಭಾಗಾಧಿಕಾರಿ ಕಾಂತರಾಜ್ ಅವರು ವಕೀಲ ಹರೀಶ್ ಅವರನ್ನು ಮನ ಬಂದಂತೆ ನಿಂದಿಸಿದ್ದಾರೆ ಎಂಬುದು ವಕೀಲರ ಆರೋಪ.
‘ಹೈಕೋರ್ಟ್ ಆದೇಶದ ಪ್ರತಿಯನ್ನು ಮುಖದ ಮೇಲೆ ಎಸೆದು ಅವಾಚ್ಯ ಶಬ್ದಗಳಿಂದ ನಿಂದಿಸಿದರು. ಮೊಬೈಲ್ ಫೋನ್ ಕಸಿದುಕೊಂಡರು. ಬೇರೆ ವ್ಯಕ್ತಿಗಳನ್ನು ಕಚೇರಿಗೆ ಕರೆಸಿಕೊಂಡು ಬೆದ ರಿಸಿದರು. ಪೊಲೀಸರನ್ನೂ ಕರೆಸಿ ದೌರ್ಜನ್ಯ ನಡೆಸಲು ಯತ್ನಿಸಿದರು ಎಂದು ವಕೀಲ ಹರೀಶ್ ಜಿಲ್ಲಾಧಿಕಾರಿಗೆ ವಿವರಿಸಿದರು.
ಉಪವಿಭಾಗಾಧಿಕಾರಿ ಕಾಂತರಾಜ್ ವಿರುದ್ಧ ಕ್ರಮ ಕೈಗೊಳ್ಳುವ ತನಕ ಜಿಲ್ಲೆಯ ಕಂದಾಯ ನ್ಯಾಯಾಲಯದ ಕಲಾಪಗಳಿಗೆ ಹಾಜರಾಗುವುದಿಲ್ಲ’ ಎಂದು ವಕೀಲರು ಹೇಳಿದರು. “ಉಪವಿಭಾಗಾಧಿಕಾರಿಯಿಂದ ವಿವರಣೆ ಕೇಳಲಾಗಿದೆ. ವರದಿಯನ್ನು ಸರ್ಕಾರಕ್ಕೆ ಸಲ್ಲಿಸುತ್ತೇನೆ’ ಎಂದು ಜಿಲ್ಲಾಧಿಕಾರಿ ಮೀನಾ ನಾಗರಾಜ್ ಸ್ಪಷ್ಟಪಡಿಸಿದರು. ಈ ಸಂಧರ್ಭದಲ್ಲಿ ಬಾರ್ ಅಸೋಷಿಯೇಷನ್ ನ ಜಿಲ್ಲಾಧ್ಯಕ್ಷ ಸುಜೇಂದ್ರ ,ಕಾರ್ಯದರ್ಶಿ ಅನಿಲ್‌ಕುಮಾರ್, ಮಾಜಿ ಅಧ್ಯಕ್ಷರಾದ ತರಿಕೆರೆಯ ವಕೀಲ ಸುರೇಶ್ಚಂದ್ರ, ದೂರುದಾರ ವಕೀಲ ಹರೀಶ್ ಸೇರಿದಂತೆ ಸಂಘಟನೆಯ ಪದಾಧಿಕಾರಿಗಳು ಭಾಗವಹಿಸಿದ್ದರು.