“ಅವೇಝ್ ನ ಸಾಧನೆ ಆಕಾಶದಿಂದ ನಾಸಾದ ಜೊತೆಗೆ.”
1 min read
ಚಿಕ್ಕಮಗಳೂರು ಜಿಲ್ಲೆಯ ಆಲ್ದೂರಿನ ಯುವಕ ಅವೇಝ್ ಅಹ್ಮದ್ ಸ್ಥಾಪಿಸಿದ ಪಿಕ್ಸೆಲ್ (Pixxel) ಸಂಸ್ಥೆ ಅಮೆರಿಕದ ನಾಸಾ ಜೊತೆ ಬಹುಮಿಲಿಯನ್ ಡಾಲರ್ ಒಪ್ಪಂದ ಮಾಡಿಕೊಂಡಿದೆ. ಸಣ್ಣ ಹಳ್ಳಿಯಿಂದ ಜಾಗತಿಕ ಬಾಹ್ಯಾಕಾಶ ಕ್ಷೇತ್ರದವರೆಗೆ ಬೆಳೆದ ಈ ಕನ್ನಡಿಗನ ಯಶೋಗಾಥೆ ಯುವಜನತೆಗೆ ಸ್ಫೂರ್ತಿಯಾಗಿದೆ.

ಚಿಕ್ಕಮಗಳೂರು: ಇವತ್ತಿನ ಆಧುನಿಕ ಡಿಜಿಟಲ್ ಯುಗದಲ್ಲಿ ಕೈಯಲ್ಲಿ ಒಂದು ಸ್ಮಾರ್ಟ್ ಫೋನ್, ಇಂಟರ್ನೆಟ್ ಇಲ್ಲದೆ ಒಂದು ದಿನವೂ ಬದುಕೋಕೆ ಆಗಲ್ಲ ಅಲ್ವಾ? ಆದ್ರೆ… 8ನೇ ತರಗತಿಗೆ ಬರುವವರೆಗೂ ಇಂಟರ್ನೆಟ್ ಅಂದ್ರೆ ಏನೆಂದೇ ಗೊತ್ತಿಲ್ಲದ ಚಿಕ್ಕಮಗಳೂರಿನ (Chikkamagaluru) ಸಣ್ಣ ಹಳ್ಳಿಯೊಬ್ಬ ಹುಡುಗ, ಇವತ್ತು ಸಾಕ್ಷಾತ್ ಅಮೆರಿಕದ ‘ನಾಸಾ’ ಜೊತೆ ಮಿಲಿಯನ್ ಡಾಲರ್ ಒಪ್ಪಂದ (Agreement) ಮಾಡಿಕೊಂಡಿದ್ದಾನೆ ಅಂದ್ರೆ ನೀವು ನಂಬ್ತೀರಾ?!…
*ಆಲ್ದೂರಿನಿಂದ ಅಮೆರಿಕಾವರೆಗೆ!*
ಹೌದು, ಇದು ಯಾವುದೋ ಸಿನಿಮಾದ ಕಥೆಯಲ್ಲ! ಇದು ಕಾಫಿನಾಡು ಚಿಕ್ಕಮಗಳೂರಿನ ‘ಆಲ್ದೂರು’ ಅನ್ನೋ ಸಣ್ಣ ಹಳ್ಳಿಯಲ್ಲಿ ಹುಟ್ಟಿದ ಅವೇಝ್ ಅಹಮದ್ ಅನ್ನೋ ಯುವಕನ ರಿಯಲ್ ಲೈಫ್ ಮ್ಯಾಜಿಕ್! ಅಪ್ಪ ತಂದುಕೊಡುತ್ತಿದ್ದ ಗ್ಯಾಲಕ್ಸಿ, ಗ್ರಹಗಳು ಮತ್ತು ಬ್ರಹ್ಮಾಂಡದ ರಹಸ್ಯಗಳ ಪುಸ್ತಕ ಓದುತ್ತಾ ವಿಜ್ಞಾನಿಯಾಗುವ ಕನಸು ಕಂಡಿದ್ದ ಈತ, ಗಣಿತಶಾಸ್ತ್ರದ ಉನ್ನತ ವ್ಯಾಸಂಗಕ್ಕಾಗಿ ಪ್ರತಿಷ್ಠಿತ ‘ಬಿಟ್ಸ್ ಪಿಲಾನಿ’ ಸೇರಿದಾಗ ಆಗಿದ್ದೇ ಬೇರೆ!
*ಬೆಳೆಗಳ ಆರೋಗ್ಯಕ್ಕಾಗಿ ಇವರು ಮಾಡಿದ ಉಪಯೋಗವೇನು?*
ಕಾಲೇಜಿನಲ್ಲಿ ಇಸ್ರೋ ಸಹಯೋಗದ ‘ಟೀಮ್ ಅನಂತ್’ ಉಪಗ್ರಹ ಯೋಜನೆ, ಸಾಕ್ಷಾತ್ ಎಲೋನ್ ಮಾಸ್ಕ್ ಅವರ ಸ್ಪೇಸ್‌ಎಕ್ಸ್ ಹೈಪರ್‌ಲೂಪ್ ಸ್ಪರ್ಧೆಯಲ್ಲಿ ‘ಹೈಪರ್‌ಲೂಪ್ ಇಂಡಿಯಾ’ ತಂಡದ ಇಂಜಿನಿಯರಿಂಗ್ ವಿಭಾಗದ ನೇತೃತ್ವ! ಇಷ್ಟೆಲ್ಲಾ ಸಾಧಿಸಿ ಭಾರತವೇ ತನ್ನತ್ತ ತಿರುಗುವಂತೆ ಮಾಡಿದ್ದ ಅವೇಝ್, 2018ರಲ್ಲಿ ತನ್ನ ಸಹಪಾಠಿ ಕ್ಷಿತಿಜ್ ಖಂಡೇಲ್ವಾಲ್ ಜೊತೆ ಐಬಿಎಂ ವಾಟ್ಸನ್ ಎಐ ಚಾಲೆಂಜ್‌ನಲ್ಲಿ ಭಾಗವಹಿಸಿದ. ಬೆಳೆಗಳ ಆರೋಗ್ಯ ಮುನ್ಸೂಚಿಸಲು ಹಾಗೂ ಪರಿಸರ ಮಾಲಿನ್ಯ ಗುರುತಿಸಲು ಸಾಮಾನ್ಯ ಉಪಗ್ರಹಗಳು ವಿಫಲವಾಗುತ್ತಿರುವುದು ಈ ಸ್ನೇಹಿತರಿಗೆ ಅರಿವಾಯ್ತು.
*ತಂದೆಯಿಂದ ಸಾಲ ಪಡೆದು ಕಂಪನಿ ನಿರ್ಮಾಣ!.ಈ ಸಮಸ್ಯೆಗೆ ತಾವೇ ಪರಿಹಾರ ಹುಡುಕಲು ಹೊರಟ ಈ ಇಬ್ಬರು ಮಾಡಿದ್ದೇನು ಗೊತ್ತಾ?.*

ಅವೇಝ್ ಅವರ ತಂದೆಯ ಬಳಿಯೇ ಹಣ ಸಾಲ ಪಡೆದು, ತಿಂಗಳಿಗೆ ಕೇವಲ 10,000 ರೂಪಾಯಿ ವೆಚ್ಚದಲ್ಲಿ ಫೆಬ್ರವರಿ 2019ರಲ್ಲಿ ‘ಪಿಕ್ಸೆಲ್’ (Pixxel) ಅನ್ನೋ ಕಂಪನಿ ಶುರುಮಾಡಿದ್ರು! ಕೇವಲ 20ರ ಹರೆಯದಲ್ಲೇ ಶುರುವಾದ ಈ ಪಿಕ್ಸೆಲ್ ನವೋದ್ಯಮ ಮುಂದೆ ಸೃಷ್ಟಿಸಿದ ಬಾಹ್ಯಾಕಾಶದ ಇತಿಹಾಸ ನೋಡಿದ್ರೆ ಇಡೀ ಜಗತ್ತೇ ಬೆಚ್ಚಿಬೀಳುತ್ತೆ!
*95 ಮಿಲಿಯನ್ ಡಾಲರ್ ಹೂಡಿಕೆ!*

ಇವರ ‘ಹೈಪರ್-ಸ್ಪೆಕ್ಟ್ರಲ್ ಇಮೇಜಿಂಗ್’ ತಂತ್ರಜ್ಞಾನ ನೋಡಿ ದಂಗಾದ ಗೂಗಲ್ ಮತ್ತು ಲೈಟ್‌ಸ್ಪೀಡ್ ಸಂಸ್ಥೆಗಳು ಬರೋಬ್ಬರಿ 95 ಮಿಲಿಯನ್ ಡಾಲರ್ ಹೂಡಿಕೆ ಮಾಡಿದವು! ಇವತ್ತು ಪಿಕ್ಸೆಲ್ ತಯಾರಿಸಿದ ಆರು ‘ಫೈರ್‌ಫ್ಲೈ’ ಉಪಗ್ರಹಗಳು ಭೂಮಿಯ ಕಕ್ಷೆಯಲ್ಲಿದ್ದು, ಮನುಷ್ಯನ ಕಣ್ಣಿಗೆ ಕಾಣಿಸದ ಪರಿಸರದ ಸೂಕ್ಷ್ಮ ಬದಲಾವಣೆಗಳನ್ನು ಪತ್ತೆಹಚ್ಚುತ್ತಿವೆ.

*500 ಮಿಲಿಯನ್ ಡಾಲರ್ ಮೀರಿ ಒಪ್ಪಂದ ಪಡೆದ ಸಂಸ್ಥೆ!*
ಈ ಕನ್ನಡಿಗನ ಅದ್ಭುತ ತಂತ್ರಜ್ಞಾನವನ್ನು ಗುರುತಿಸಿದ ಅಮೆರಿಕದ ‘ನಾಸಾ’, ಬರೋಬ್ಬರಿ 476 ಮಿಲಿಯನ್ ಡಾಲರ್ ಮೌಲ್ಯದ ವಾಣಿಜ್ಯ ಸ್ಮಾಲ್‌ಸ್ಯಾಟ್ ಡೇಟಾ ಅಕ್ವಿಸಿಷನ್ ಪ್ರೋಗ್ರಾಂ ಅಡಿಯಲ್ಲಿ ಪಿಕ್ಸೆಲ್ ಜೊತೆ ಒಪ್ಪಂದ ಮಾಡಿಕೊಂಡಿದೆ! ಅಷ್ಟೇ ಅಲ್ಲ, NRO (ನ್ಯಾಷನಲ್ ರೆಕನೈಸನ್ಸ್ ಆಫೀಸ್) ಜೊತೆಗೂ 5 ವರ್ಷದ ಒಪ್ಪಂದ! ನಾಸಾ ಒಪ್ಪಂದ ಪಡೆದ ‘ಭಾರತದ ಮೊದಲ ಖಾಸಗಿ ಬಾಹ್ಯಾಕಾಶ ಸ್ಟಾರ್ಟ್‌ಅಪ್’ ಕಟ್ಟಿದ ಮಲೆನಾಡಿನ ಈ ಯುವಕನ ಸಾಧನೆ ಇಡೀ ವಿಶ್ವವೇ ಕೊಂಡಾಡುವಂತದ್ದು ಅಲ್ವಾ?….
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ಬ್ಯೂರೋ ನ್ಯೂಸ್,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ಬ್ಯೂರೋ ನ್ಯೂಸ್,ಅವಿನ್ ಟಿವಿ.

