“ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ರೈತಸಂಘದ ಪ್ರತಿಭಟನೆ : ನಗರದಲ್ಲಿ ವಾಹನಗಳ ಜಾಥಾ,ಜಿಲ್ಲಾಧಿಕಾರಿಗಳಿಗೆ ಹಕ್ಕುಒತ್ತಾಯ ಮಂಡನೆ,ಕೇಂದ್ರ-ರಾಜ್ಯ ಸರ್ಕಾರಗಳ ವಿರುದ್ಧ ಆಕ್ರೋಶ.”
1 min read
ಚಿಕ್ಕಮಗಳೂರು:ರೈತ ಹುತಾತ್ಮ ದಿನಾಚರಣೆ ಅಂಗವಾಗಿ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ವಿರುದ್ಧ ಕರ್ನಾಟಕ ರಾಜ್ಯ ರೈತಸಂಘ ಮತ್ತು ಹಸಿರು ಸೇನೆಯ ಕಾರ್ಯಕರ್ತರು ದಿನಾಂಕ 21/07/2026ರ ಮಂಗಳವಾರದಂದು ನಗರದಲ್ಲಿ ಟ್ರ್ಯಾಕ್ಟರ್,ನಾಲ್ಕುಚಕ್ರ, ದ್ವಿಚಕ್ರ ವಾಹನಗಳೊಂದಿಗೆ ಪ್ರತಿಭಟನೆ ನಡೆಸಿದರು.
ಬೆಳಿಗ್ಗೆ 11:00ರ ವೇಳೆಗೆ ಬೋಳ ರಾಮೇಶ್ವರ ದೇವಸ್ಥಾನದಿಂದ ಆರಂಭಗೊಂಡ ಪ್ರತಿಭಟನಾ ಮೆರವಣಿಗೆ ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಆಜಾದ್ ಪಾರ್ಕ್ ವೃತ್ತದಲ್ಲಿ ಸಮಾವೇಶಗೊಂಡಿತು.
ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ಮೈಸೂರು ಪ್ರಕಾಶ್ ಮಾತನಾಡಿ, ಯುವ ಪೀಳಿಗೆ ಹೋರಾಟದಲ್ಲಿ ತಮ್ಮನ್ನು ತೊಡಗಿಸಿಕೊಳ್ಳಬೇಕು. ನಾನೊಬ್ಬನೇ ಏನು ಮಾಡಲು ಸಾಧ್ಯವೆಂದು ಕೃಷಿ ಬಿಟ್ಟು ಕುಳಿತುಕೊಳ್ಳಬಾರದು. ಇಂದು ನಾವು ಬಿತ್ತುವ ಬೀಜ ಹೆಮ್ಮರವಾಗುತ್ತದೆ ಎಂದು ಭಾವಿಸಿ ಸಂಘಟನೆ ಕಟ್ಟಬೇಕು ಎಂದು ಕಿವಿಮಾತು ಹೇಳಿದರು.
ಈ ಹಿಂದೆ ಶಿಸ್ತುಬದ್ಧವಾಗಿ ಕಟ್ಟಿದ ಸಂಘಟನೆ ಶಿಥಿಲವಾಗಿದೆ. ನಮ್ಮ ತತ್ವಸಿದ್ಧಾಂತ, ವಿಚಾರಗಳನ್ನು ಬಲಿಕೊಡದೆ ರೈತರ ಹೋರಾಟದ ವಿಚಾರದಲ್ಲಿ ಎಲ್ಲರೂ ಒಂದಾಗಬೇಕು. ಪ್ರಾಮಾಣಿಕ ಮತ್ತು ಬದ್ಧತೆಯಿಂದ ಸಂಘಟನೆ ಕಟ್ಟಬೇಕು ಎಂದು ಹೇಳಿದರು. ಕರ್ನಾಟಕ ರೈತ ಸಂಘ ಹಾಗೂ ಹಸಿರು ಸೇನೆ ಮುಖಂಡ ವಸಂತಕುಮಾರ್ ಮಾತನಾಡಿ, ನಮ್ಮನ್ನಾಳುವ ಸರ್ಕಾರ ರೈತ ಕಾರ್ಮಿಕರಿಗೆ ಸಂಬಳ ನಿಗದಿ ಮಾಡಬೇಕು. ಇಎಸ್‌ಐ, ಪಿಎಫ್ ನೀಡಬೇಕು. ರೈತರ ಸಾಲವನ್ನು ಮನ್ನಾ ಮಾಡಬೇಕು. ರೈತರ ವಾಹನಗಳಿಗೆ ಟೋಲ್‌ಗಳಲ್ಲಿ ಹಣ ವಸೂಲಿ ಮಾಡುವುದನ್ನು ನಿಲ್ಲಿಸಬೇಕು ಎಂದು ಆಗ್ರಹಿಸಿದರು.
ಜಿಲ್ಲಾಧಿಕಾರಿಗಳು, ಶಾಸಕರು, ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ವಿವಿಧ ಇಲಾಖೆ ಅಧಿಕಾರಿಗಳು ರೈತ ಅದಾಲತ್ ಮಾಡುವ ಮೂಲಕ ಸ್ಥಳದಲ್ಲಿ ರೈತರ ಸಮಸ್ಯೆಗಳನ್ನು ಬಗೆಹರಿಸಬೇಕು. ಈ ನಿಟ್ಟಿನಲ್ಲಿ ಸರ್ಕಾರ ಚಿಂತನೆ ಮಾಡಬೇಕು. ಒಂದು ವೇಳೆ ತಪ್ಪಿದ್ದಲ್ಲಿ ಹೋರಾಟ ಹಮ್ಮಿಕೊಳ್ಳಬೇಕಾಗುತ್ತದೆ ಎಂದು ಎಚ್ಚರಿಸಿದರು.
ಬಹುಜನ ಸಮಾಜ ಪಕ್ಷದ ಕೆ.ಟಿ.ರಾಧಾಕೃಷ್ಣ ಮಾತನಾಡಿ, ರೈತನ ಕೆಲಸ ಪವಿತ್ರವಾದ ಕೆಲಸ. ಆದರೆ, ರೈತರನ್ನು ಕಡೆಗಣಿಸಲಾಗುತ್ತಿದೆ. ರೈತರ ಹೆಸರಿನಲ್ಲಿ, ದಲಿತರ ಹೆಸರಿನಲ್ಲಿ, ಶೋಷಿತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದ ಸರ್ಕಾರ ರೈತ, ದಲಿತ, ಶೋಷಿತರ ಪರವಾಗಿ ಮಾಡಿರುವ ಕೆಲಸ ಶೂನ್ಯವಾಗಿದೆ ಎಂದು ದೂರಿದರು.
ಮಸಗಲಿ ಸಂತ್ರಸ್ತ ಹಾಗೂ ಹೋರಾಟಗಾರ ಎಂ.ಸಿ.ಬಸವರಾಜ್, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ದೌರ್ಜನ್ಯ ತಡೆ ಸಮಿತಿ ಸದಸ್ಯ ಹುಣಸೇಮಕ್ಕಿ ಲಕ್ಷ್ಮಣ್, ರೈತ ಸಂಘದ ಸಂಘಟನಾ ಕಾರ್ಯದರ್ಶಿ ಮಂಡಲ ಸದಸ್ಯ ಸುನಿಲ್‌ಕುಮಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ರೈತಸಂಘದ ಹಿರಿಯಮುಖಂಡ ಕೆ.ಕೆ.ಕೃಷ್ಣೇಗೌಡ ರೈತ ಹುತಾತ್ಮ ದಿನಾಚರಣೆ ಮತ್ತು ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿದ್ದರು. ಸಂಘಟನೆಯ ಮುಖಂಡರಾದ ಡಿ.ರಾಮೇಗೌಡ, ಕಾಂತರಾಜ್, ಎಂ.ಚಂದ್ರಶೇಖರ್, ಕೆ.ಕಿರಣ್, ಲೋಕೇಶ್, ಮುಳ್ಳಂದplural/ಮುಳ್ಳಂದಪ್ಪ, ಬಹುಜನ ಸಮಾಜ ಪಕ್ಷದ ಜಿಲ್ಲಾಧ್ಯಕ್ಷ ಪಿ.ಪರಮೇಶ್ವರ್, ಬಸವರಾಜೇಗೌಡ, ಪ್ರಕಾಶ್, ಗೌರಮ್ಮ, ಪಂಚಾಕ್ಷರಿ, ಮರಚೇಬು ಜಗದೀಶ್, ಗೀತಾ ವೆಂಕಟೇಶ್ ಸೇರಿದಂತೆ ಇತರರು ಇದ್ದರು.
ಈ ಸಂದರ್ಭದಲ್ಲಿ ಚಿಕ್ಕಮಗಳೂರು ಜಿಲ್ಲೆಯ ರೈತರ ಜ್ವಲಂತ ಸಮಸ್ಯೆಗಳ ಬಗ್ಗೆ ಜಿಲ್ಲಾಧಿಕಾರಿಗಳ ಮೂಲಕ ರಾಜ್ಯ ಮತ್ತು ಕೇಂದ್ರ ಸರ್ಕಾರಗಳಿಗೆ ಹಕ್ಕುಒತ್ತಾಯಗಳನ್ನೊಳಗೊಂಡ ಮನವಿಯನ್ನು ಸಲ್ಲಿಸಲಾಯಿತು.
ರೈತರ ಪ್ರಮುಖ ಬೇಡಿಕೆಗಳು (ಹಕ್ಕುಒತ್ತಾಯಗಳು).
* ರಾಜ್ಯ ಸರ್ಕಾರ ಬಲವಂತದ ಭೂಸ್ವಾಧೀನ ಪ್ರಕ್ರಿಯೆ ನಿಲ್ಲಿಸಬೇಕು, ರಾಜ್ಯ ಸರ್ಕಾರ ಭೂ ಸುಧಾರಣೆ ಕಾಯ್ದೆಗೆ ತಂದಿರುವ ತಿದ್ದುಪಡಿಯನ್ನು ಕೈಬಿಡಬೇಕು. ದೇಶದಲ್ಲೆಡೆ ಬರ ನಿಶ್ಚಿತವಾಗಿರುವುದರಿಂದ ಎಸ್ ಡಿ ಆರ್ ಎಫ್ ಮತ್ತು ಎನ್ ಡಿ ಆರ್ ಎಫ್ ನಿಧಿಯನ್ನು ತಕ್ಷಣ ಬಿಡುಗಡೆ ಮಾಡಬೇಕು.
* ರೈತರು ಪಡೆದಿರುವ ಪೂರ್ಣ ಕೃಷಿ ಸಾಲ ಮನ್ನಾ ಮಾಡಬೇಕು. ಕೃಷಿ ಅಭಿವೃದ್ಧಿ ಸಾಲದ ಕಂತನ್ನು ಮುಂದೂಡಬೇಕೆಂದು ಒತ್ತಾಯಿಸಲಾಗುವುದು.
* ಬೆಳೆ ವಿಮೆಯ ಗೊಂದಲ ನಿವಾರಿಸಬೇಕು. ಜನಗಣತಿ ಹಾಗೂ ಐಎಸ್ಆರ್ ಪ್ರಕ್ರಿಯೆಯಂತೆ ಬೆಳೆ ವಿಮೆ ಅಭಿಯಾನ ಜಾರಿಗೊಳಿಸಬೇಕು. ರೈತರ ಎಲ್ಲಾ ಬೆಳೆಗಳಿಗೆ ಎಂ.ಎಸ್.ಪಿ ಬೆಂಬಲ ಬೆಲೆ ನಿಗದಿಪಡಿಸುವುದು. ರೈತ ವಿರೋಧಿ ಎ.ಪಿ.ಎಂ.ಸಿ ಕಾಯ್ದೆಗಳನ್ನು ಹಿಂಪಡೆಯಬೇಕು, ಭಾರತ ಮತ್ತು ಅಮೆರಿಕ ಮುಖ್ಯ ವಾಣಿಜ್ಯ ಒಪ್ಪಂದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ಸಹಿ ಹಾಕಬಾರದೆಂದು ಆಗ್ರಹಿಸಲಾಗುವುದು.
* ಜಿಲ್ಲೆಯಲ್ಲಿ ವಜಾಗೊಂಡಿರುವ ನಮೂನೆ-57 ರ ಪ್ಲಾಂಟೇಷನ್ ಅರ್ಜಿಗಳಿಗೆ ಹಕ್ಕುಪತ್ರ ವಿತರಣೆ, ನಮೂನೆ-50 ಮತ್ತು 53 ರಲ್ಲಿ ಮಂಜೂರಾದ ರೈತರ ಸಾವಿರಾರು ಮಂಜೂರಿ ವಜಾ ಮಾಡಿದ್ದು ಮರು ಸಮೀಕ್ಷೆ ಮಾಡಿ ಆಕಾರ ಬಂದ್ ಪುನರ್ ಸ್ಥಾಪಿಸಬೇಕು, ಕಾಡುಪ್ರಾಣಿಗಳಿಂದ ಬೆಳೆ ಹಾನಿಯಾಗದಂತೆ ಅರಣ್ಯ ಇಲಾಖೆ ಕ್ರಮ ಕೈಗೊಳ್ಳಬೇಕು. ಹಾನಿಯಾದ ಬೆಳೆಗೆ ವೈಜ್ಞಾನಿಕ ಪರಿಹಾರ ನೀಡಬೇಕೆಂದು ನಮ್ಮ ಹಕ್ಕುಒತ್ತಾಯ ಎಂದರು.
* ಮಳೆಗಾಲದ ಮುನ್ನ ನೀರಾವರಿ ಕಾಮಗಾರಿ ಪೂರ್ಣಗೊಳಿಸಿ, ನೀರು ಹರಿಸಬೇಕು. ಮಸಗಲಿ ಅರಣ್ಯ ಸಂತ್ರಸ್ತರಿಗೆ ಪರಿಷ್ಕೃತ ಹೆಚ್ಚಿನ ಪರಿಹಾರ ಪಾವತಿಸಬೇಕು ಮತ್ತು ಇಂದಾವರ ಗ್ರಾಮದ ಸರ್ವೇ ನಂಬರ್ 33 ರಲ್ಲಿ ನಿವೇಶನಕ್ಕಾಗಿ ಕಾಯ್ದಿರಿಸುವ ಭೂಮಿಯಲ್ಲಿ ತಕ್ಷಣ ನಿವೇಶನ ನೀಡಬೇಕು ಎಂದು ಒತ್ತಾಯಿಸಲಾಗುವುದೆಂದರು.
* ಭದ್ರಾ ಹಿನ್ನೀರಿನ ಸಂತ್ರಸ್ತರಿಗೆ ನೀಡಿರುವ ಬದಲಿ ಭೂಮಿ ಅರಣ್ಯ ವ್ಯಾಪ್ತಿಯಲ್ಲಿದ್ದು ಕೂಡಲೇ ಕ್ರಮ ವಹಿಸಿ ಜೀವನ ಭದ್ರತೆ ಕಲ್ಪಿಸಬೇಕು. ಕಾಮೇನಹಳ್ಳಿ, ಚುಟಿಕೇನಹಳ್ಳಿ, ಎಮ್ಮೆದೊಡ್ಡಿ, ಸರ್ವೇ ನಂಬರ್ ಗಳಲ್ಲಿರುವ 25ಕ್ಕೂ ಹೆಚ್ಚು ಗ್ರಾಮಗಳನ್ನು ಕಂದಾಯ ಗ್ರಾಮಗಳಾಗಿ ಘೋಷಿಸಬೇಕು. ಕಾಫಿ ತೋಟಗಳನ್ನು ಸರ್ಫೇಸಿ ಕಾಯ್ದೆಯಿಂದ ಕೈಬಿಡಬೇಕು.
* ಅಡಿಕೆ ಬೆಳೆಗೆ ಎಲೆ ಚುಕ್ಕೆ ರೋಗಕ್ಕೆ ವೈಜ್ಞಾನಿಕ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ರೈತರ ಕೃಷಿ ಪಂಪ್ ಸೆಟ್ ಗಳಿಗೆ ಉಚಿತ ಸಂಪರ್ಕ ಮತ್ತು 12:00 ಗಂಟೆ ವಿದ್ಯುತ್ ನೀಡಬೇಕು. ಅಗತ್ಯಕ್ಕೆ ತಕ್ಕಂತೆ ಟ್ರಾನ್ಸ್‌ಫಾರ್ಮರ್‌ಗಳನ್ನು ಅಳವಡಿಸಬೇಕು. ಕಾಫಿ ಬೆಳೆಗಾರರಿಗೆ 10 ಹೆಚ್ ಪಿ ವರೆಗಿನ ಪಂಪ್ ಸೆಟ್ ಗಳಿಗೆ ಉಚಿತ ವಿದ್ಯುತ್ ಜಾರಿಯಾಗಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ

