“ಅಂಬೇಡ್ಕರ್ ವಸತಿ ಶಾಲೆಯಲ್ಲಿ ಕಳಪೆ ಆಹಾರ ಆರೋಪ : ನ್ಯಾಯಮೂರ್ತಿ ಹನುಮಂತಪ್ಪ ನೇತೃತ್ವದಲ್ಲಿ ಸ್ಥಳ ಪರಿಶೀಲನೆ.”
1 min read
ಚಿಕ್ಕಮಗಳೂರು ನಗರದ ಬೈಪಾಸ್ ಸಮೀಪ ಇರುವ ಡಾ. ಬಿ.ಆರ್. ಅಂಬೇಡ್ಕರ್ ವಸತಿ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಮಾಡಲಾಗುತ್ತಿದೆ ಎಂಬ ಆರೋಪದ ಹಿನ್ನೆಲೆಯಲ್ಲಿ ಮಂಗಳವಾರ ನ್ಯಾಯಮೂರ್ತಿ ಹನುಮಂತಪ್ಪ ಹಾಗೂ ಎಸ್ಸಿ/ಎಸ್ಟಿ ದೌರ್ಜನ್ಯ ನಿಯಂತ್ರಣ ಸಮಿತಿಯ ಸದಸ್ಯರಾದ ಹುಣಸೆಮುಕ್ಕಿ ಲಕ್ಷ್ಮಣ್ ಮತ್ತು ನವೀನ್ ಕುಮಾರ್ ಕೆಂಪನಹಳ್ಳಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಇತ್ತೀಚೆಗೆ ಕೆಲವು ಸಮಾಜದ ಪ್ರಮುಖ ಮುಖಂಡರು ಶಾಲೆಯ ಆಡಳಿತ ಮಂಡಳಿಯ ಕಾರ್ಯವೈಖರಿಯನ್ನು ಪ್ರಶ್ನಿಸಿದ್ದು, ಈ ಕುರಿತು ಪತ್ರಿಕೆ ಮತ್ತು ಮಾಧ್ಯಮಗಳಲ್ಲಿ ವರದಿಗಳು ಪ್ರಕಟವಾಗಿದ್ದವು. ಈ ಹಿನ್ನೆಲೆಯಲ್ಲಿ ವಸತಿ ಶಾಲೆಯ ವಾಸ್ತವ ಸ್ಥಿತಿಯನ್ನು ತಿಳಿದುಕೊಳ್ಳಲು ಅಧಿಕಾರಿಗಳ ತಂಡ ಸ್ಥಳ ಪರಿಶೀಲನೆ ನಡೆಸಿತು.
ಪರಿಶೀಲನೆ ವೇಳೆ ವಿದ್ಯಾರ್ಥಿಗಳೊಂದಿಗೆ ಮುಕ್ತವಾಗಿ ಚರ್ಚಿಸಿ ಅವರ ಸಮಸ್ಯೆಗಳು ಹಾಗೂ ಅಭಿಪ್ರಾಯಗಳನ್ನು ಆಲಿಸಲಾಯಿತು. ಅಲ್ಲದೆ ಸ್ನಾನಗೃಹ, ಅಡಿಗೆಮನೆ, ದವಸ-ಧಾನ್ಯ, ತರಕಾರಿ ಸಂಗ್ರಹ, ಆಹಾರದ ಗುಣಮಟ್ಟ, ಕುಡಿಯುವ ನೀರಿನ ವ್ಯವಸ್ಥೆ ಸೇರಿದಂತೆ ವಿವಿಧ ಮೂಲಸೌಕರ್ಯಗಳನ್ನು ಪರಿಶೀಲಿಸಲಾಯಿತು.
ಈ ಸಂದರ್ಭದಲ್ಲಿ ಹಾಸ್ಟೆಲ್ ಸಿಬ್ಬಂದಿ, ಶಿಕ್ಷಕರು ಹಾಗೂ ವಿದ್ಯಾರ್ಥಿಗಳೊಂದಿಗೆ ಸಭೆ ನಡೆಸಿದ ನ್ಯಾಯಮೂರ್ತಿ ಹನುಮಂತಪ್ಪ ಅವರು ವಿದ್ಯಾರ್ಥಿಗಳ ಕಲ್ಯಾಣಕ್ಕೆ ಅಗತ್ಯ ಕ್ರಮಗಳನ್ನು ಕೈಗೊಳ್ಳುವಂತೆ ಸಿಬ್ಬಂದಿಗೆ ಎಚ್ಚರಿಕೆ ನೀಡಿದರು. ಜೊತೆಗೆ ವಿದ್ಯಾರ್ಥಿಗಳಿಗೆ ಶಿಸ್ತು, ಸ್ವಚ್ಛತೆ ಮತ್ತು ಉತ್ತಮ ಶಿಕ್ಷಣದ ಮಹತ್ವದ ಕುರಿತು ಮಾರ್ಗದರ್ಶನ ನೀಡಿದರು.
✍🏻ಬರಹ ಕೃಪೆ.✍🏻

ರತ್ನ ನಾಗೇಶ್.
ಚಿಕ್ಕಮಗಳೂರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

