ಇತಿಹಾಸ ಸಂಶೋಧಕ ಹೆಚ್.ಆರ್. ಪಾಂಡುರಂಗಗೆ ಕಳಸ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ…..
1 min read
ಇತಿಹಾಸ ಸಂಶೋಧಕ ಹೆಚ್.ಆರ್. ಪಾಂಡುರಂಗಗೆ
ಕಳಸ ತಾಲ್ಲೂಕು ಕನ್ನಡ ರಾಜ್ಯೋತ್ಸವ ಪ್ರಶಸ್ತಿ.
ಕಳಸ: ಕಳಸ ಸೀಮೆಯ ಇತಿಹಾಸ ಮತ್ತು ಪುರಾತತ್ವ ಸಂಶೋಧನಾ ಕ್ಷೇತ್ರದಲ್ಲಿ ಅವಿರತವಾಗಿ ಸೇವೆ ಸಲ್ಲಿಸುತ್ತಿರುವ ಖ್ಯಾತ ಸಂಶೋಧಕ ಹೆಚ್.ಆರ್. ಪಾಂಡುರಂಗ ಅವರಿಗೆ ಕಳಸ ತಾಲ್ಲೂಕು ಆಡಳಿತದ ವತಿಯಿಂದ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಕಳಸದ ಕರ್ನಾಟಕ ಪಬ್ಲಿಕ್ ಪ್ರೌಢಶಾಲಾ ಆವರಣದಲ್ಲಿ ನಡೆದ ಕನ್ನಡ ರಾಜ್ಯೋತ್ಸವ ಸಮಾರಂಭದಲ್ಲಿ ಅವರ ಇತಿಹಾಸ ಸಂಶೋಧನಾ ಕ್ಷೇತ್ರದ ಅಮೂಲ್ಯ ಕೊಡುಗೆಯನ್ನು ಗುರುತಿಸಿ ಪ್ರಶಸ್ತಿ ಪ್ರದಾನ ಮಾಡಿ ಸನ್ಮಾನಿಸಲಾಯಿತು.
ಸನ್ಮಾನ ಸ್ವೀಕರಿಸಿ ಮಾತನಾಡಿದ ಹೆಚ್.ಆರ್. ಪಾಂಡುರಂಗ, “ಈ ಅಮೂಲ್ಯ ಪ್ರಶಸ್ತಿ ನನಗೆ ಇನ್ನಷ್ಟು ಇತಿಹಾಸ ಸಂಶೋಧನೆಗಳನ್ನು ಕೈಗೊಳ್ಳಲು ಹೊಸ ಹುಮ್ಮಸ್ಸು ನೀಡಿದೆ. ಅದೇ ರೀತಿ ನನ್ನ ಜವಾಬ್ದಾರಿಯನ್ನೂ ಹೆಚ್ಚಿಸಿದೆ. ಮುಂದಿನ ದಿನಗಳಲ್ಲಿಯೂ ಕಳಸ ಸೀಮೆಯ ಇತಿಹಾಸ ಮತ್ತು ಪುರಾತತ್ವಕ್ಕೆ ಸಂಬಂಧಿಸಿದ ಸಂಶೋಧನಾ ಕಾರ್ಯಗಳನ್ನು ಮತ್ತಷ್ಟು ಉತ್ಸಾಹದಿಂದ ಮುಂದುವರಿಸುತ್ತೇನೆ” ಎಂದರು.ಇದೇ ಸಂದರ್ಭದಲ್ಲಿ ಆರೋಗ್ಯ ಇಲಾಖೆಯ ಸಿಬ್ಬಂದಿ ದುಂಡಿಗೆ ಶ್ರೀನಿವಾಸ್ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ತಹಸೀಲ್ದಾರ್ ಎನ್.ಕೆ. ಮಂಜುನಾಥ್ ವಹಿಸಿದ್ದರು. ಕಳಸ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಅಂಬಿನಕೊಡಿಗೆ ಸತೀಶ್ ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದರು.
ಸಮಾರಂಭದಲ್ಲಿ ಅಜಿತ್ ಪ್ರಸಾದ್ “ಇಂದ್ರ, ಹೆಚ್.ಡಿ. ಜ್ವಾಲನಯ್ಯ, ವಿಶ್ವನಾಥ್ ಮರಸಣಿಗೆ, ಗಣೇಶ ಭಟ್, ಅಬ್ದುಲ್ ಶುಕೂರ್, ರಜಿತ್ ತೋರಣಮಕ್ಕಿ, ಕಳಸ ತಾಲ್ಲೂಕು ಮಹಿಳಾ ಕನ್ನಡ ಸಾಹಿತ್ಯ ಪರಿಷತ್ ಬಳಗದ ಮುಲ್ತಾಜ್ ಬೇಗಂ, ಜಾನಕಿ ಸುಂದರೇಶ್, ಗೀತಾ ಮಕ್ಕಿಮನೆ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು, ಶಾಲಾ ಶಿಕ್ಷಕರು ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

