ನಂದೀಶ್ ಬಂಕೇನಹಳ್ಳಿ AI ನಿಂದ ನಮ್ಮ ಆಲೋಚನಾ ಶಕ್ತಿಗೆ ಕುತ್ತು?
1 min read
-ನಂದೀಶ್ ಬಂಕೇನಹಳ್ಳಿ
AI ನಿಂದ ನಮ್ಮ ಆಲೋಚನಾ ಶಕ್ತಿಗೆ ಕುತ್ತು?



ಕೃತಕ ಬುದ್ದಿಮತ್ತೆ (Artificial Intelligence) ಇಂದು ಎಲ್ಲರ ಬದುಕಿನ ಭಾಗವೇ ಆಗಿ ಹೋಗಿದೆ. AI ತಂತ್ರಜ್ಞಾನದ ಉಪಯೋಗಗಳು ಅಪಾರವಾಗಿದ್ದರೂ, ಅದು ನಮ್ಮ ಆಲೋಚನಾ ಶಕ್ತಿ ಮತ್ತು ಸೃಜನಶೀಲತೆಯ ಮೇಲೆ ಬೀರಬಹುದಾದ ನಕಾರಾತ್ಮಕ ಪರಿಣಾಮಗಳ ಬಗ್ಗೆಯೂ ಯೋಚಿಸಬೇಕಿದೆ.
ಆರಂಭದಲ್ಲಿ AI ಬಳಕೆದಾರರು ತಮ್ಮದೇ ಆದ ವ್ಯಾಪಕ ಶ್ರೇಣಿಯ ಆಲೋಚನೆಗಳನ್ನು ಪ್ರಸ್ತುತಪಡಿಸುತ್ತಾರೆ. ಆದರೆ ಕ್ರಮೇಣ AI ಮೇಲಿನ ಅತಿಯಾದ ಅವಲಂಬನೆ ರೂಢಿಯಾಗಿ ಬಿಡುತ್ತದೆ. ಮೆದುಳಿನ ಚಟುವಟಿಕೆ ಕಡಿಮೆಯಾದಷ್ಟೂ ನಮ್ಮ ಉತ್ಪಾದಕತೆಯ ಗುಣಮಟ್ಟ ಕಡಿಮೆಯಾಗುತ್ತಾ ಹೋಗುತ್ತದೆ ಎಂಬುದು ಅನೇಕ ಸಂಶೋಧನಾ ಅಧ್ಯಯನಗಳು ಸಾಬೀತುಪಡಿಸಿವೆ.
AI ಹೊರತಾದ ಸಮಾಜವನ್ನು ಕಲ್ಪಿಸಿಕೊಳ್ಳುವುದು ವರ್ತಮಾನದ ಪರಿಸ್ಥಿತಿಯಲ್ಲ ಸಾಧ್ಯವಿಲ್ಲ. ಆದರೆ ಇದು ಮಾನವನ ಚಿಂತನೆಯನ್ನೇ ಬದಲಾಯಿಸುವ ಮಟ್ಟಿಗೆ ಬೆಳೆಯುವುದು ಅಪಾಯಕಾರಿ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. ಅತಿ ಸಾಮಾನ್ಯ ಸಂಗತಿಗಳಿಗೂ AI ನೆರವು ಪಡೆಯುವುದು ಮುಂದೊಂದು ದಿನ ನಮ್ಮನ್ನು ಭಾರೀ ಬೆಲೆ ತೆರುವಂತೆ ಮಾಡಲಿದೆ.
ಸಮಸ್ಯೆ ಏನು?
ವಿಧ್ಯಾರ್ಥಿಗೆ ಪ್ರಬಂಧ ಬರೆದು ತರಲು ಶಾಲೆಯಲ್ಲಿ ಹೇಳಿದ್ದಾರೆ ಎಂದಿಟ್ಟು ಕೊಳ್ಳಿ. ಕೃತಕ ಬುದ್ಧಿಮತ್ತೆ ಇಲ್ಲದಿದ್ದರೆ ಆ ಮಗು ಪ್ರಬಂಧ ರಚನೆಗಾಗಿ ಪೋಷಕರು, ಪುಸ್ತಕಗಳು ಸೇರಿದಂತೆ ಬೇರೆ ಬೇರೆ ಮೂಲಗಳಿಂದ ವಿಷಯ ಸಂಗ್ರಹ ಮಾಡುತ್ತಿತ್ತು. ಅವುಗಳಲ್ಲಿ ಅಗತ್ಯವಾದುದನ್ನು ಬಳಸಿಕೊಂಡು ಉಳಿದುದನ್ನು ದೂರವಿಡುತ್ತಿತ್ತು. ಪ್ರಬಂಧಕ್ಕೆ ಒಂದು ಪೀಠಿಕೆ, ವಿಷಯ ಮಂಡನೆ ಮತ್ತು ಉಪಸಂಹಾರದ ಮೂಲಕ ಸ್ಪಷ್ಟ ಆಕಾರ ಕೊಡುತ್ತಿತ್ತು. ಈ ಎಲ್ಲಾ ಪ್ರಕ್ರಿಯೆಗಳ ಭಿನ್ನ ಭಿನ್ನ ಹಂತದಲ್ಲಿ ಮಗುವಿನ ಮಿದುಳಿನ ಹಲವಾರು ಸಂಪರ್ಕ ಜಾಲಗಳು ಕ್ರಿಯಾಶೀಲ ಗೊಂಡು ಜೀವನ ಪರ್ಯಂತ ಉಪಯುಕ್ತವಾಗುತ್ತಿತ್ತು. ಪ್ರತಿ ಯೊಂದು ಮಗು ಬರೆಯುವ ಪ್ರಬಂಧವೂ ಭಿನ್ನ ಮತ್ತು ವಿಶಿಷ್ಟವಾಗಿ ಇರುತ್ತಿತ್ತು. ಪ್ರಬಂಧವನ್ನು ಯಾರು ಹೊಗಳಲಿ ಬಿಡಲಿ, ಅದನ್ನು ಬರೆದು ಮುಗಿಸಿದಾಗ ಮಗುವಿನಲ್ಲಿ ಒಂದು ರೀತಿ ಸಾಧಕತೆಯ ಭಾವ ಮೂಡುತ್ತಿತ್ತು. ತಾನು ಹೊಸ ದೊಂದನ್ನು ಕಟ್ಟಬಲ್ಲೆ ಎನ್ನುವ ಭರವಸೆಯೇ ಮಗುವಿನಲ್ಲಿ ಮುಂದೆ ಆತ್ಮವಿಶ್ವಾಸವಾಗಿ ಕಾಣಿಸಿ ಕೊಳ್ಳುತ್ತದೆ. ಇದು ಯಾರಿಂದಲೂ ಕಿತ್ತುಕೊಳ್ಳಲಾಗದ ಆಸ್ತಿಯ ರೂಪದಲ್ಲಿ ಮಗುವಿಗೆ ಜೀವನದುದ್ದಕ್ಕೂ ಸಹಾಯ ಮಾಡುತ್ತದೆ.
ಆದರೆ ಈಗ ಎಐ ಬಳಸಿಕೊಂಡು ಪೋಷಕರು ಮಕ್ಕಳಿಗೆ ಪ್ರಬಂಧ ಬರೆಯಲು ಹೇಳುತ್ತಾರೆ. ಅಥವಾ ಅವರೇ ಅದನ್ನು ಬಳಸಿ ಬರೆಸುತ್ತಾರೆ. ಇದರಿಂದ ಮಗುವಿನ ಶ್ರಮ ಕಡಿಮೆ ಆಗಬಹುದು ಮತ್ತು ಅದಕ್ಕೆ ಅತ್ಯುತ್ತಮ ಅಂಕಗಳು ಬರಬಹುದು. ಆದರೆ, ಮಗುವಿನ ಮಿದುಳು ಕ್ರಿಯಾಶೀಲವಾಯಿತೆ? ಕಟ್ಟುವ, ಸೃಷ್ಟಿಸುವ ಕಲೆಯನ್ನು ಮಗು ಕಲಿಯಿತೆ? ಅದರಿಂದ ಸಿಗುವ ಸಾರ್ಥಕತೆಯನ್ನು ಮಗು ಅನುಭವಿಸಲು ಸಾಧ್ಯವಾಯಿತೆ? ಮುಂದೆ ಜೀವನದ ಸಂಕೀರ್ಣ ಸಂದರ್ಭಗಳನ್ನು ತಾನು ನಿಭಾಯಿಸಬಲ್ಲೆ ಎನ್ನುವ ಆತ್ಮವಿಶ್ವಾಸ ಮಗುವಿನೊಳಗೆ ಮೂಡಿತೆ? ಖಂಡಿತಾ ಇಲ್ಲ. ಮಗುವಿನ ಮಿದುಳಿಗೆ ಆಗುತ್ತಿರುವ ಹಾನಿಗಿಂತ ಪೋಷಕರಿಗೆ ಅಂಕಗಳು ಮಾತ್ರ ಹೆಚ್ಚು ಮುಖ್ಯವಾಗಿರುವಾಗ ಕೃತಕ ಬುದ್ಧಿಮತ್ತೆಯ ಮಾರುಕಟ್ಟೆ ಹೆಚ್ಚುವುದರಲ್ಲಿ ಆಶ್ಚರ್ಯವಿಲ್ಲ.
ಮಕ್ಕಳು ಮಾತ್ರವಲ್ಲ. ದೊಡ್ಡವರದ್ದು ಇದೇ ಕತೆ. ಸಣ್ಣ ಪುಟ್ಟ ಮಾಹಿತಿಗೂ ಈಗ ಎಐ ಅವಲಂಬನೆ ಸಾಮಾನ್ಯವಾಗಿದೆ. ಎಐ ಅಪ್ಲಿಕೇಶನ್ಗಳ ಹೆಚ್ಚಿನ ಬಳಕೆ ಮೆದುಳಿಗೆ ಕೆಲಸ ಕಡಿಮೆ ಮಾಡುತ್ತವೆ. ಮನುಷ್ಯನ ಬೌದ್ಧಿಕ ಸಾಮರ್ಥ್ಯವನ್ನು ಕುಂಠಿತಗೊಳ್ಳುವ ಸಾಧ್ಯತೆ ಹೆಚ್ಚಿದೆ. ನಮ್ಮ ಆಲೋಚನಾ ಶಕ್ತಿ, ಸೃಜನಶೀಲತೆ ಮತ್ತು ಮೂಲ ಚಿಂತನೆಗಳ ಮೇಲೆ ನಕಾರಾತ್ಮಕ ಪ್ರಭಾವ ಬೀರುತ್ತದೆ. ಇತ್ತೀಚಿನ ಅಧ್ಯಯನಗಳು AI ಪರಿಕರಗಳಾದ ಚಾಟ್ಜಿಪಿಟಿಯಂತಹ Large Language Models (LLMs) ನಮ್ಮ ಮೆದುಳಿನ ಚಟುವಟಿಕೆಯನ್ನು ಕಡಿಮೆ ಮಾಡಿ, ನಮ್ಮ ಬರಹಗಳನ್ನು ಮತ್ತು ಆಲೋಚನೆಗಳನ್ನು ಏಕರೂಪಗೊಳಿಸುತ್ತಿವೆ ಎಂದು ಸೂಚಿಸಿವೆ.
ಸಾಂಸ್ಕೃತಿಕ ಏಕರೂಪತೆ:
ಕಾರ್ನೆಲ್ ವಿಶ್ವವಿದ್ಯಾನಿಲಯದ ಸಂಶೋಧಕರು ಪ್ರಕಟಿಸಿದ ಪ್ರತ್ಯೇಕ ಅಧ್ಯಯನವು, AI-ಪ್ರೇರಿತ ಏಕರೂಪತೆಗೆ ಪುರಾವೆಗಳನ್ನು ಕಂಡುಹಿಡಿದಿದೆ. ಈ ಸಂಶೋಧನಾ ಅಧ್ಯಯನದಲ್ಲಿ ಅಮೆರಿಕನ್ ಮತ್ತು ಭಾರತೀಯ ಬಳಕೆದಾರರ ಎರಡು ಪ್ರತ್ಯೇಕ ಗುಂಪುಗಳಿಗೆ, ತಮ್ಮ ಸಾಂಸ್ಕೃತಿಕ ಹಿನ್ನೆಲೆಗಳನ್ನು ಆಧರಿಸಿದ ಬರವಣಿಗೆಯ ಪ್ರಶ್ನೆಗಳಿಗೆ ಉತ್ತರಿಸಲು ಕೇಳಲಾಯಿತು. ಆಶ್ಚರ್ಯಕರವಾಗಿ AI ಬಳಸಿದ ಭಾರತೀಯ ಮತ್ತು ಅಮೆರಿಕನ್ ಗುಂಪಿನ ಸದಸ್ಯರು ಪರಸ್ಪರ ಹೋಲಿಕೆಯ ಉತ್ತರವನ್ನು ನೀಡಿದ್ದಾರೆ. ಸಾಂಸ್ಕೃತಿಕವಾಗಿ ಭಾರತ ಮತ್ತು ಅಮೆರಿಕ ಅಪಾರ ಭಿನ್ನತೆಯನ್ನು ಹೊಂದಿದೆ. ಆದರೆ ಈ ಭಿನ್ನತೆಯ ಕುರಿತು ಆಲೋಚಿಸುವ ಮತ್ತು ಅದನ್ನು ಶಬ್ಧಗಳ ರೂಪದಲ್ಲಿ ಹಿಡಿದಿಡುವ ಬುದ್ಧಿಮಟ್ಟ, AIನ ಬಳಕೆಯಿಂದಾಗಿ ಪ್ರಯೋಜನಕ್ಕೆ ಬಾರದಂತಾಗಿರುವುದರತ್ತ ಈ ಸಂಶೋಧನಾ ಅಧ್ಯಯನ ಬೊಟ್ಟು ಮಾಡಿ ತೋರಿಸುತ್ತಿದೆ.
ಸ್ವಂತಿಕೆಗೆ ಕುತ್ತು ತರುತ್ತಿರುವ AI:
AI ಪರಿಕರಗಳ ಅತಿಯಾದ ಬಳಕೆಯಿಂದ ಸಿಕ್ಕ ಕೃತಕ ಮತ್ತು ಸಿದ್ಧ ಸಲಹೆಗಳ ನಿರಂತರ ಹರಿವು, ಬರಹಗಾರನ ಸ್ವಂತ ಧ್ವನಿಯನ್ನು ಅತಿಕ್ರಮಿಸುತ್ತಿವೆ. ಸರಳವಾಗಿ ಹೇಳುವುದಾದರೆ, AI ನಿಮ್ಮ ಬರವಣಿಗೆ ಕಲೆ ಮಾತ್ರವಲ್ಲದೇ, ನಿಮ್ಮ ಯೋಚಿಸುವ ದಿಕ್ಕನ್ನೂ ಬದಲಾಯಿಸುತ್ತಿದೆ ಮತ್ತು ಕುಂಠಿತಗೊಳಿಸುತ್ತಿದೆ. ಇದು ಸಹಜವಾಗಿ ಮಾನವನ ಜೀವನ ಕ್ರಮದ ಎಲ್ಲಾ ರಂಗದಲ್ಲೂ ವ್ಯತಿರಿಕ್ತ ಪರಿಣಾಮವನ್ನೇ ಬೀರುತ್ತದೆ.
ತಂತ್ರಜ್ಞಾನವನ್ನು ಜವಾಬ್ದಾರಿಯುತವಾಗಿ ಬಳಸುವುದು ಮತ್ತು ಅದರ ಮಿತಿಗಳನ್ನು ಅರಿತುಕೊಳ್ಳುವುದು ಅತ್ಯಂತ ಮಹತ್ವದ್ದಾಗಿದೆ. ನಾವೆಲ್ಲರೂ ಒಟ್ಟಾಗಿ AI ಪ್ರಯೋಜನಗಳನ್ನು ಮತ್ತು ಅಪಾಯಗಳನ್ನು ಎದುರಿಸಬೇಕಿದೆ.

