ದಲಿತ ಕುಟುಂಬಕ್ಕೆ ಮಂಜೂರಾಗಿದ್ದ ಐದು ಎಕರೆ ಜಮೀನು ರದ್ದು….
1 min read
ದಲಿತ ಕುಟುಂಬಕ್ಕೆ ಮಂಜೂರಾಗಿದ್ದ ಐದು ಎಕರೆ ಜಮೀನು ರದ್ದು.
ಚಿಕ್ಕಮಗಳೂರು: ಪರಿಶಿಷ್ಟ ಜಾತಿಗೆ ಸೇರಿದ ಬಡ ಕುಟುಂಬಕ್ಕೆ 1974ರಲ್ಲಿ ಸರ್ಕಾರದಿಂದ ಮಂಜೂರಾಗಿದ್ದ ಐದು ಎಕರೆ ಜಮೀನಿನ ಮಂಜೂರಾತಿಯನ್ನು ಸುಮಾರು 45 ವರ್ಷಗಳ ಬಳಿಕ ರದ್ದುಪಡಿಸಿದ ಕ್ರಮವನ್ನು ಪ್ರಶ್ನಿಸಿ ನಡೆಸಿದ ಸುದೀರ್ಘ ಕಾನೂನು ಹೋರಾಟಕ್ಕೆ ಜಯ ದೊರೆತಿದೆ. ಜಮೀನು ಮಂಜೂರಾತಿ ರದ್ದುಪಡಿಸಿದ ಕ್ರಮ ಕಾನೂನುಬಾಹಿರವೆಂದು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್, ಜಮೀನನ್ನು ಮೂಲ ಫಲಾನುಭವಿಗಳ ಹೆಸರಿಗೆ ಮರುಸ್ಥಾಪಿಸುವಂತೆ ಹಾಗೂ ಆರು ತಿಂಗಳೊಳಗೆ ಅಗತ್ಯ ಕ್ರಮ ಕೈಗೊಳ್ಳುವಂತೆ ಆದೇಶಿಸಿದೆ ಎಂದು ವಕೀಲರಾದ ಎಚ್.ಎನ್. ಮಂಜುನಾಥ್ ಪ್ರಸಾದ್ ತಿಳಿಸಿದರು.
ಚಿಕ್ಕಮಗಳೂರು ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ನಡೆದ ಸುದ್ದಿಗೋಷ್ಠಿಯಲ್ಲಿ ಪ್ರಕರಣದ ವಿವರಗಳನ್ನು ಹಂಚಿಕೊಂಡ ಅವರು, ಬಡ ದಲಿತ ಕುಟುಂಬಕ್ಕೆ ನ್ಯಾಯ ದೊರಕಿಸಲು ಹಲವು ವರ್ಷಗಳ ಕಾಲ ಹೋರಾಟ ನಡೆಸಬೇಕಾಯಿತು ಎಂದು ತಿಳಿಸಿದರು.
ಮೂಡಿಗೆರೆ ಕ್ಷೇತ್ರದ ಕಲ್ಮನೆ ಗ್ರಾಮದ ಸರ್ವೆ ನಂ.49ರಲ್ಲಿ ಸಿದ್ದಯ್ಯ ಮತ್ತು ಜಾನಕಿ ದಂಪತಿಗೆ ಸರ್ಕಾರವು 1974ರಲ್ಲಿ ಐದು ಎಕರೆ ಜಮೀನು ಮಂಜೂರು ಮಾಡಿತ್ತು. ಕುಟುಂಬವು ಜಮೀನಿನಲ್ಲಿ ಕೃಷಿ ಮಾಡಿಕೊಂಡು ಜೀವನ ನಡೆಸುತ್ತಿತ್ತು. ಸಾಗುವಳಿ ಚೀಟಿ, ಮಂಜೂರಾತಿ ದಾಖಲೆಗಳು ಹಾಗೂ ಕಾಫಿ ತೋಟಕ್ಕೆ ಸಂಬಂಧಿಸಿದ ದಾಖಲೆಗಳೂ ಇದ್ದವು ಎಂದು ವಕೀಲರು ವಿವರಿಸಿದರು. ಆದರೆ, ಸುಮಾರು 45 ವರ್ಷಗಳ ಬಳಿಕ ಕಂದಾಯ ಇಲಾಖೆಯ ಅಧಿಕಾರಿಗಳು ಜಮೀನು ಮಂಜೂರಾತಿಯನ್ನು ರದ್ದುಪಡಿಸಿದ ಹಿನ್ನೆಲೆಯಲ್ಲಿ ಕುಟುಂಬಕ್ಕೆ ಅನ್ಯಾಯವಾಗಿದೆ ಎಂಬ ಆರೋಪ ಕೇಳಿಬಂದಿತ್ತು. ಜಮೀನಿನ ಹಕ್ಕು ಮತ್ತು ರಕ್ಷಣೆಗಾಗಿ ಸಂತ್ರಸ್ತ ಲೋಕೇಶ್ ನ್ಯಾಯಾಲಯದ ಮೊರೆ ಹೋಗಿದ್ದರು.
ಮಾಜಿ ಶಾಸಕ ಎಂ.ಪಿ. ಕುಮಾರಸ್ವಾಮಿ ಅವರು ಅಧಿಕಾರ ಬಳಸಿಕೊಂಡು ಕುಟುಂಬಕ್ಕೆ ಮಂಜೂರಾಗಿದ್ದ ಜಮೀನನ್ನು ವಶಪಡಿಸಿಕೊಳ್ಳಲು ಪ್ರಯತ್ನಿಸಿದ್ದಾರೆ ಎಂದು ಹೋರಾಟಗಾರರು ಆರೋಪಿಸಿದರು. ಈ ಸಂಬಂಧ ಸಿವಿಲ್ ಎಂದು ನ್ಯಾಯಾಲಯದಲ್ಲಿಯೂ ಪ್ರಕರಣ ನಡೆದಿತ್ತು ಎಂದು ತಿಳಿಸಿದರು. ನ್ಯಾಯಾಲಯದ ವಿಚಾರಣೆಯ ಸಂದರ್ಭದಲ್ಲಿ ಜಮೀನಿನ ಒಂದು ಭಾಗದಲ್ಲಿ ಅಂಬೇಡ್ಕರ್ ಭವನ, ಗಿರಿ-ಜನ ಭವನ, ಅಂಗನವಾಡಿ, ಬಿಸಿಯೂಟದ ವ್ಯವಸ್ಥೆ ಹಾಗೂ ಜನತಾ ಮನೆಗಳನ್ನು ನಿರ್ಮಿಸಿರುವುದಾಗಿ ಸಂಬಂಧಪಟ್ಟವರು ಹೇಳಿದ್ದರು ಎಂದು ವಕೀಲರು ವಿವರಿಸಿದರು.
ದಲಿತರ ಅಭಿವೃದ್ಧಿಗಾಗಿ ಸರ್ಕಾರ ಹಲವು ಯೋಜನೆಗಳನ್ನು ಜಾರಿಗೊಳಿಸುತ್ತಿದ್ದರೂ, ಅವರ ಹಕ್ಕುಗಳ ರಕ್ಷಣೆಯಲ್ಲಿ ಇಂತಹ ಪ್ರಕರಣಗಳು ಗಂಭೀರ ಪ್ರಶ್ನೆಗಳನ್ನು ಎತ್ತುತ್ತವೆ. ನ್ಯಾಯಾಲಯದ ಆದೇಶದ ಅನುಷ್ಠಾನಕ್ಕೆ ಜಿಲ್ಲಾಡಳಿತ ಮುಂದಾಗಬೇಕು. ಈ ಪ್ರಕರಣದಲ್ಲಿ ನಡೆದಿರುವ ಅನ್ಯಾಯದ ಕುರಿತು ಜನಜಾಗೃತಿ ಮೂಡಿಸಬೇಕು ಎಂದು ಮನವಿ ಮಾಡಿದರು. ಸುದ್ದಿಗೋಷ್ಠಿಯಲ್ಲಿ ಸಿಪಿಐ ಮುಖಂಡ ಎಚ್. ಎಂ. ರೇಣುಕಾರಾಧ್ಯ, ಜೀ. ರಘು, ಬಿ.ಕೆ. ಲಕ್ಷ್ಮಣ್ ಕುಮಾರ್, ಸಂತ್ರಸ್ತ ಲೋಕೇಶ್ ಹಾಗೂ ರವಿಸುಂಕಸಾಲೆ ಉಪಸ್ಥಿತರಿದ್ದರು.

