ಮುಂಡಗೋಡು ಕೆ. ಶ್ರೀನಿವಾಸ್ ಮೂರ್ತಿ ಅವರ ಬಾಳಗಾಥೆ “ಖಾಲಿಯೇ ಉಳಿದ ದಿನಚರಿಯ ಹಾಳೆಗಳು” ಲೋಕಾರ್ಪಣೆಗೆ ಸಿದ್ಧತೆ :
1 min read
ಅವಿನ್ ಟಿವಿ ಸುದ್ದಿಜಾಲ ✍️: ಮುಂಡಗೋಡು ಕೆ. ಶ್ರೀನಿವಾಸ್ ಮೂರ್ತಿ ಅವರ ಬಾಳಗಾಥೆ “ಖಾಲಿಯೇ ಉಳಿದ ದಿನಚರಿಯ ಹಾಳೆಗಳು” ಲೋಕಾರ್ಪಣೆಗೆ ಸಿದ್ಧತೆ : ಬದುಕು ಸಾಹಿತ್ಯವಾದ ಈ ಪುಸ್ತಕವನ್ನು ಕುರಿತು ಇಂದು ಶೃಂಗೇರಿಯಲ್ಲಿ ಸಂವಾದ.
ಶೃಂಗೇರಿ ಆ 26: ನಮ್ಮೊಳಗಿನ ಚಿಂತನೆಗಳು ಯಾವಾಗ ಬತ್ತಿ ಹೋಗುತ್ತದೆಯೋ ಆಗ ನಾವು ದಿನಾ ಸಾಯುತ್ತಲೇ ಸಾಗುತ್ತೇವೆ,,,
ಒಳಗಿನ ತುಮಲಗಳು ಯಾರಿಗೂ ಹೇಳಿಕೊಳ್ಳಲಾಗದ ಸೋಲುಗಳು ಬಿಡಿಸಿಕೊಳ್ಳಲಾಗದ ಗೊಂದಲಗಳನ್ನೆಲ್ಲ ಮೆಟ್ಟಿ,ಒಂದರಿಂದ ಇನ್ನೊಂದನ್ನು ಕಲಿತು, ಅವಮಾನದಿಂದ ಆತ್ಮವಿಶ್ವಾಸವನ್ನು ಗಳಿಸಿಕೊಂಡು ಜೀವನವನ್ನು ಗೆದ್ದೆ ಅನ್ನುವ ಹೊತ್ತಿನಲ್ಲಿಯೇ ಮಹಾಮಾರಿಯೊಂದು ಬೆನ್ನೆಲುಬನ್ನು ತಿಂದು ಬದುಕನ್ನು ಬಾಳಗಾಥೆಯಾಗಿ ಮಾಡಿದ ಜೀವನ ದರ್ಶನವೇ “ಖಾಲಿಯೇ ಉಳಿದ ದಿನಚರಿಯಾ ಹಾಳೆಗಳು” ಎಂಬ ಪುಸ್ತಕ. ಈ ಪುಸ್ತಕದ ಕೇಂದ್ರ ಬಿಂದು ಮುಂಡಗೋಡು ಶ್ರೀನಿವಾಸ ಮೂರ್ತಿಯವರು, ಮೂರ್ತಿಯವರ ಬದುಕು ಮತ್ತು ಬರಹ ಇಲ್ಲಿ ಒಂದು ಸಮೃದ್ಧ ಸಾಹಿತ್ಯವಾಗಿ ಹೊರಹಮ್ಮಿದೆ.
ಎಣ್ಣೆ ತೀರಿದ ಬತ್ತಿ ತಣ್ಣಗಾದ ಹಾಗೆ ಇದೇ ಆಗಸ್ಟ್ 02ಕ್ಕೆ ಶ್ರೀನಿವಾಸಮೂರ್ತಿ ಅವರು ಕಾಲ ಗರ್ಭದೊಳಗೆ ಕಾಲವಾಗಿ ಒಂದು ವರ್ಷ ಸಂದಾಯವಾಗಿದೆ, ಈ ಒಂದು ವರ್ಷದ ಸಂಸ್ಮರಣೆಯ ಹಿನ್ನೆಲೆಯಲ್ಲಿ ಇಂದು 26 ಆಗಸ್ಟ್ 2026ರಂದು ಲೋಕಾರ್ಪಣೆಯಾಗುತ್ತಿರುವ ಮುಂಡಗೋಡು ಶ್ರೀನಿವಾಸಮೂರ್ತಿ ಅವರ ಬಾಳಗಾಥೆ “ಖಾಲಿಯೇ ಉಳಿದ ದಿನಚರಿಯ ಹಾಳೆಗಳು” ಎಂಬ ಪುಸ್ತಕವನ್ನು ಅಹರ್ನಿಶಿ ಪ್ರಕಾಶನದ ಪ್ರಕಾಶಕಿ ಅಕ್ಷತಾ ಹುಂಚನಕಟ್ಟೆ ಅವರು ಅಂಚೆ ಮೂಲಕ ಲೋಕಾರ್ಪಣೆಗೆ ಮೊದಲೇ ಕಳಿಸಿಕೊಟ್ಟಿದ್ದರು.
ಅಭ್ಯಾಸದಲ್ಲಿ, ಪ್ರಕ್ರಿಯೆಯಲ್ಲಿ, ಶ್ರಮದಲ್ಲಿ, ಶ್ರದ್ದೆಯಲ್ಲಿ ಒಂದರಿಂದ ಇನ್ನೊಂದನ್ನು ಕಲಿಯುವುದರಲ್ಲಿ, ಕಲಿತಿದ್ದನ್ನು ತೂಕ ತಪ್ಪದೆ ಅಕ್ಷರರೂಪಕ್ಕೆ ಇಳಿಸಿ ಧ್ಯಾನಸ್ಥ ಸ್ಥಿತಿಯಲ್ಲಿ ಓದುವಂತೆ ಮಾಡಿ, ತನ್ನ ಬರಹದ ಪ್ರತಿ ಓದುಗರನ್ನು ಶ್ರೀನಿವಾಸ್ ಮೂರ್ತಿಯವರು ಕಾಪಿಟ್ಟುಕೊಂಡಿದ್ದ ಬಗೆ ಇದಿಯಲ್ಲ ಅದು ಒಂದು ಬೆಡಗು ಮಾತ್ರವಲ್ಲ ಬದುಕಿನ ಮಾರ್ಗ ಕೂಡ ಆಗಿದೆ ಎಂಬುದನ್ನು ಈ ಪುಸ್ತಕ ವಿಸ್ತರಿಸಿ ಓದುಗರನ್ನು ಮಾತನಾಡಿಸುತ್ತದೆ, ಮಾತನಾಡಿಸುತ್ತಾ ಮಾತನಾಡಿಸುತ್ತಾ ಸಂಕಟ ಮತ್ತು ಸಂಭ್ರಮ ಈ ಎರಡನ್ನೂ ಏಕಕಾಲಕ್ಕೆ ನೀಡುತ್ತಾ ಹೋಗುತ್ತದೆ.
ಹಲವಷ್ಟು ಪ್ರಸಿದ್ಧ ಬರಹಗಾರರ ಬರಹಗಳಲ್ಲಿ ಘಟನೆಗಳು ಕಲ್ಪನೆಗಳತ್ತ ತಿರುಗುತ್ತವೆ, ಆದರೆ ಇಲ್ಲಿ ಹಸಿ ಸಗಣಿಯ ನೀರನ್ನು ನೆಲಕ್ಕೆ ಚಿಮುಕಿಸಿದಂತೆ ಶ್ರೀನಿವಾಸಮೂರ್ತಿಯವರು ಬದುಕಿನಲ್ಲೂ ಸಾವಿನಲ್ಲೂ ಅವರು ಕಂಡುಕೊಂಡ ಸ್ಪಷ್ಟತೆ, ಪ್ರಾಯೋಗಿಕತೆ ಮತ್ತು ಘನತೆ ಈ ಬಾಳಗಾಥೆಯಲ್ಲಿ ಹರವಿಕೊಂಡಿದೆ.
ನೋವುಂಡವರ ಬರಹಗಳೇ ಹಾಗೆ,
ಶಾಹಿಯ ಬಣ್ಣದಿಂದಷ್ಟೇ ಅಲ್ಲ
ಕಣ್ಣ ಹನಿಗಳ ತೇವದಿಂದಲೂ ಓದಿಸಿಕೊಂಡು ಬಿಡುತ್ತವೆ ಎಂಬ ಪುಸ್ತಕದ ಈ ಮೊದಲ ಮಾತೆ ನಮ್ಮ ಕಣ್ಣಂಚನ್ನು ತೇವ ಮಾಡಿ ಓದಿನ ಆಳಕ್ಕೆ ಇಳಿಸಿ, ನದಿಯ ದಡದಲ್ಲಿ ತಂಗಾಳಿಗೆ ಅಲುಗಾಡುವ ಮರಗಳ ಸದ್ದಿನಂತೆ ನಮ್ಮ ಮೈಮನಗಳನ್ನು ಬೆರಗಿನಿಂದ ಕುಲುಕಿಸುತ್ತದೆ ಈ ಪುಸ್ತಕ.
ಮುಂಡಗೋಡು ಶ್ರೀನಿವಾಸ ಮೂರ್ತಿಯವರ ಒಟ್ಟು ಸಂಪಾದನೆಯಲ್ಲಿ ಅವರು ಹೆಚ್ಚು ಸಂಪಾದಿಸಿಕೊಂಡಿದ್ದು ಸ್ನೇಹ ಬಳಗವನ್ನು, ಈ ಸ್ನೇಹ ಬಳಗಕ್ಕೆ ಯಾವುದೇ ಜಾತಿ ಮತ ಧರ್ಮದ ಶ್ರೇಷ್ಠತೆಯ ವ್ಯಸನಗಳಿರಲಿಲ್ಲ, ಕೇವಲ ಮಾನವೀಯತೆ ಮತ್ತು ಮನುಷ್ಯತ್ವ ಅಷ್ಟೇ ಇವರ ಸನಿಹಕ್ಕೆ ಬಂದ ಸ್ನೇಹಿತರ ಸುತ್ತಾ ಸುಳೆದಾಡುತ್ತಿದ್ದವು, ಇಂದು ಈ ಎಲ್ಲ ಸ್ನೇಹಿತರು ಒಟ್ಟುಗೂಡಿ ಇಂದು ಅಂದರೆ 26 ಆಗಸ್ಟ್ 2026ರ ಬುಧವಾರ ಮಧ್ಯಾಹ್ನ ಘಂಟೆ 2:30ಕ್ಕೆ ಶೃಂಗೇರಿಯ ಬಿಜಿಎಸ್ ಆಡಿಟೋರಿಯಂ ನಲ್ಲಿ “ಖಾಲಿಯೇ ಉಳಿದ ದಿನಚರಿಯ ಹಾಳೆಗಳು” ಪುಸ್ತಕ ಲೋಕಾರ್ಪಣೆ ಮತ್ತು ಶ್ರೀನಿವಾಸಮೂರ್ತಿ ಅವರ ಬದುಕು ಬರಹ ಕುರಿತು ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.
ಶ್ರೀನಿವಾಸಮೂರ್ತಿ ಅವರ ಒಡನಾಡಿಗಳು ಮತ್ತು ಸ್ನೇಹಿತರು ಸೇರಿ ಆಯೋಜಿಸಿರುವ ಈ ಕಾರ್ಯಕ್ರಮ ಹಳೆಯ ಗಾಯಗಳನ್ನು ಒಣಗಿಸಿ, ಹೊಸ ಪ್ರಶ್ನೆಗಳನ್ನು ಹುಟ್ಟು ಹಾಕುವಂತಾಗಲಿ, ಮನುಷ್ಯತ್ವಕ್ಕಾಗಿ ಮಾನವೀಯತೆಗಾಗಿ ಪ್ರಕೃತಿ ಧರ್ಮಕ್ಕೆ ಪೂರಕವಾಗಿ ಮನುಷ್ಯ ಬದುಕುವುದನ್ನು ಮರೆತು ಶ್ರೇಷ್ಠತೆಯ ವ್ಯಸನಗಳಿಗೆ ಬಲಿಯಾದರೆ , ಜನಮುಖಿ ಸಮಾಜವೊಂದು ಬದಲಾದ ಕಾಲಘಟ್ಟದಲ್ಲಿ ಆ ಕೆಲಸವನ್ನು ಹೇಗೆಲ್ಲ ಮಾಡಲು ನಾವುಗಳು ಮುಂದಾಗಬೇಕು ಎಂಬುದರ ಬಗ್ಗೆ ಈ ಸಂವಾದ ಬೆಳಕು ಚೆಲ್ಲುವಂತಾದರೆ ಶ್ರೀನಿವಾಸ ಮೂರ್ತಿಯವರ ಚಿಂತನೆಗೆ ನೀರೆದಂತಾಗುತ್ತದೆ .
•••••••••••••
ಡಿ ಎಂ ಮಂಜುನಾಥಸ್ವಾಮಿ
ಅವಿನ್ ಟಿವಿ ಸುದ್ದಿಜಾಲ ….. ✍️
ಚಿಕ್ಕಮಗಳೂರು

