“ಅಧಿಕಾರಕ್ಕಿಂತ ಆದರ್ಶ ಮುಖ್ಯ ಎಂದು ನಂಬಿದ್ದ ಸಜ್ಜನ ರಾಜಕಾರಣಿ ಬಿ.ಸಿ.ನಾಗೇಶ್ ನಿಧನ.”
1 min read
ಅವಿನ್ ಟಿವಿ ಸುದ್ದಿಜಾಲ:ಬೆಂಗಳೂರು ಆ 18: ತುಮಕೂರು ಜಿಲ್ಲೆ ತಿಪಟೂರು ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ ಹಾಗೂ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಸರಳತೆ ಮತ್ತು ಸಜ್ಜನತೆಗೆ ಹೆಸರಾಗಿದ್ದ ಮಾಜಿ ಸಚಿವರಾದ ಬಿ.ಸಿ.ನಾಗೇಶ್ (67) ಅವರು ತೀವ್ರ ಅನಾರೋಗ್ಯದಿಂದ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ.
ಕಳೆದ ಒಂದು ವರ್ಷದಿಂದ ಬ್ರೈನ್ ಟ್ಯೂಮರ್ನಿಂದ ಬಳಲುತ್ತಿದ್ದ ಅವರಿಗೆ ಎರಡು ಬಾರಿ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು. ಬೆಂಗಳೂರಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಗಂಭೀರಗೊಂಡ ಹಿನ್ನೆಲೆಯಲ್ಲಿ ಕೊನೆಯುಸಿರೆಳೆದಿದ್ದಾರೆ.
ಬಿ.ಸಿ. ನಾಗೇಶ್ ಅವರು 2008 ಮತ್ತು 2018ರಲ್ಲಿ ತಿಪಟೂರು ವಿಧಾನಸಭಾ ಕ್ಷೇತ್ರದಿಂದ ಬಿಜೆಪಿಯಿಂದ ಶಾಸಕರಾಗಿ ಆಯ್ಕೆಯಾಗಿದ್ದರು. ಬಳಿಕ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು.
1959ರಲ್ಲಿ ಜನಿಸಿದ ನಾಗೇಶ್ ಅವರು ಇಂಜಿನಿಯರಿಂಗ್ ಪದವೀಧರರು,ವಿದ್ಯಾರ್ಥಿ ದೆಸೆಯಲ್ಲಿಯೇ ಎಬಿವಿಪಿ ಮೂಲಕ ವಿದ್ಯಾರ್ಥಿ ನಾಯಕರಾಗಿ ಗುರುತಿಸಿಕೊಂಡವರು, ರಾಜಕೀಯವಾಗಿ 1984ರಲ್ಲಿ ಬಿಜೆಪಿ ಸೇರ್ಪಡೆಗೊಂಡ ನಾಗೇಶ್ ಅವರು ಪಕ್ಷದ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದರು, ಮತ್ತು ನಿನಗಿಂತ ನಾನೇ ದೊಡ್ಡವನು ಎಂಬ ಸಣ್ಣತನಕ್ಕಿಂತ ಸಣ್ಣವರನ್ನು ಸಮಾನರು ಎಂದು ಪರಿಗಣಿಸಿ ಅವರನ್ನು ವಿಶ್ವಾಸಕ್ಕೆ ತೆಗೆದುಕೊಳ್ಳುವ ಗುಣ ಇವರಿಗಿತ್ತು, ಬಸವರಾಜ್ ಬೊಮ್ಮಾಯಿ ಅವರ ಸರ್ಕಾರದಲ್ಲಿ 2021 ಆಗಸ್ಟ್ 4ರಿಂದ 2023 ಮೇ 20ರವರೆಗೆ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾಗಿ ಪಠ್ಯಪುಸ್ತಕ ಮತ್ತು ವಿವೇಕ ಶಾಲಾ ಕೊಠಡಿ ಸೇರಿದಂತೆ ಹಲವಷ್ಟು ಚರ್ಚೆಗೆ ಒಳಪಟ್ಟಿದ್ದರು, ಜೊತೆಗೆ ಸಚಿವರಾಗಿ ಅಧಿಕಾರವಿದ್ದಾಗಲೂ ಕೂಡ ಒಂದಿಂಚು ಕೂಡ ಬೀಗದೆ, ಗೂಟದ ಸರ್ಕಾರಿ ಕಾರುಗಳನ್ನು ಬಿಟ್ಟು ಒಂಟಿಯಾಗಿ ತಮ್ಮ ಫೈಲನ್ನು ತಾವೇ ಹಿಡಿದುಕೊಂಡು ಸಾಮಾನ್ಯರಂತೆ ರೈಲಿನಲ್ಲಿ ಓಡಾಡಿದ ಆ ದಿನಗಳು ರಾಜ್ಯದ ಜನತೆಗೆ ಈಗ ನೆನಪು ಮಾತ್ರ.
ರಾಜಕಾರಣದಲ್ಲಿ ಯಾರಿಗೆ ಯಾರು ಶತ್ರು ಅಲ್ಲ ಮಿತ್ರನು ಅಲ್ಲ ಎಂಬಂತೆ ಎಲ್ಲ ಪಕ್ಷದವರೊಂದಿಗೂ ವಿಶ್ವಾಸವನ್ನು ಗಳಿಸಿಕೊಂಡಿದ್ದ ನಾಗೇಶ್ ಅವರು ಪತ್ನಿ, ಒಬ್ಬ ಪುತ್ರ ಹಾಗೂ ಒಬ್ಬ ಪುತ್ರಿ ಸೇರಿದಂತೆ ದೊಡ್ಡ ಸಂಖ್ಯೆಯ ಅಭಿಮಾನಿಗಳನ್ನು ಅಗಲಿದ್ದಾರೆ.
ಅವರ ಪಾರ್ಥಿವ ಶರೀರವನ್ನು ಬೆಂಗಳೂರಿನಿಂದ ಹುಟ್ಟುರಾದ ತಿಪಟೂರಿಗೆ ತರಲಾಗಿದೆ,ತಿಪಟೂರಿನಲ್ಲಿ ಅಂತಿಮ ಸಂಸ್ಕಾರ ನಡೆಯಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
•••••••••••••••••
✍🏻ಬರಹ ಕೃಪೆ.✍🏻

ಡಿ.ಎಂ.ಮಂಜುನಾಥಸ್ವಾಮಿ.
ಅವಿನ್ ಟಿವಿ ಸುದ್ದಿಜಾಲ.
ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

