लाइव कैलेंडर

August 2026
M T W T F S S
 12
3456789
10111213141516
17181920212223
24252627282930
31  
24/08/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಹಳೆ ಬೇರು ಹೊಸ ಚಿಗುರು ಕೂಡಿರಲು ಮರ ಸೊಬಗು……

ಯುವಪಡೆಗೊಂದಿಷ್ಟು ಮಾರ್ಗದರ್ಶನ ಬೇಕಿದೆ….

 

ಒಂದು ಕಡೆ ಕೆಲವು ಪ್ರಜ್ಞಾವಂತ, ವಿದ್ಯಾವಂತ, ಹೃದಯವಂತ ಝೆನ್-ಜೀ ಎಂಬ ಯುವಪಡೆ ದೇಶದ ಸಮಕಾಲೀನ ಸಮಸ್ಯೆಗಳ ಬಗ್ಗೆ, ಮುಖ್ಯವಾಗಿ ಶಿಕ್ಷಣ, ಆರೋಗ್ಯ ಮತ್ತು ಭ್ರಷ್ಟಾಚಾರದ ಬಗ್ಗೆ ಜಾಗೃತಗೊಂಡು ದೇಶದಲ್ಲಿ ಬದಲಾವಣೆ ತರಲು ಪ್ರಯತ್ನಿಸುತ್ತ, ಸಾಮಾಜಿಕ ಜಾಲತಾಣಗಳನ್ನು ಅತ್ಯಂತ ಪರಿಣಾಮಕಾರಿ ರೀತಿಯಲ್ಲಿ ಉಪಯೋಗಿಸಿಕೊಂಡು ಸಾಕಷ್ಟು ಕೆಲಸ ಮಾಡುತ್ತಿದೆ. ಕೇಂದ್ರ ಮತ್ತು ಎಲ್ಲಾ ರಾಜ್ಯ ಸರ್ಕಾರಗಳು ಈ ಝಂಜಿಗಳ ಬಗ್ಗೆ ಒಂದಷ್ಟು ಆತಂಕಗೊಂಡಿರುವುದು ವಾಸ್ತವಿಕ ಸತ್ಯ. ಝಂಜಿಗಳ ಧೈರ್ಯ, ಅವರ ಬುದ್ಧಿಶಕ್ತಿ, ಅವರ ಸಂಘಟನಾ ಸಾಮರ್ಥ್ಯ ಆಳುವ ಸರ್ಕಾರಗಳಲ್ಲಿ ಭೀತಿ ಹುಟ್ಟಿಸಿರುವುದು ನಿಜ.

 

ಇನ್ನೊಂದು ಕಡೆ ಮತ್ತೆ ಕೆಲವು ಇದೇ ಝೆನ್-ಜಿಗಳು ಸೀಡ್ಲೆಸ್ ಗಳೆಂದು ಕರೆಸಿಕೊಂಡು ಅವಶ್ಯಕತೆಗಿಂತ ಹೆಚ್ಚಾಗಿ ಸಾಮಾಜಿಕ ಜಾಲತಾಣಗಳ ಅಡಿಯಾಳುಗಳಾಗಿ, ಬದುಕಿನ ಆಳ ಅಗಲಗಳನ್ನು ಅರಿಯದೆ, ತಮ್ಮ ವಿವೇಚನೆಯನ್ನು ಉಪಯೋಗಿಸಿಕೊಳ್ಳದೆ ಉಡಾಫೆಯಾಗಿ ವರ್ತಿಸುತ್ತಾ, ಅನೇಕ ಕೆಟ್ಟ ಅಭ್ಯಾಸಗಳ ದಾಸರಾಗಿ, ಮನುಷ್ಯ ಸಂಬಂಧಗಳಿಗೆ ಬೆಲೆ ಕೊಡದೆ, ಹಣದ ಹಿಂದೆ ಬಿದ್ದು, ಎಲ್ಲಾ ಸೂಕ್ಷ್ಮತೆಗಳನ್ನು ಕಳೆದುಕೊಂಡು, ಹೊಸ ಪೀಳಿಗೆಯ ಬಗ್ಗೆ, ಅವರ ಭವಿಷ್ಯದ ಬಗ್ಗೆ ಆತಂಕ ಮೂಡಿಸುತ್ತಿದ್ದಾರೆ.

 

ಮತ್ತೊಂದು ಕಡೆ ಕೆಲವು ಇದೇ ಝೆನ್-ಜಿಗಳು, ಇವರ ಸಂಖ್ಯೆ ಕಡಿಮೆ ಇರಬಹುದು, ಆದರೆ ಮತಿಹೀನರಾಗಿ, ಅತಿ ಹೆಚ್ಚು ಅಪರಾಧ ಕ್ರಿಯೆಗಳಲ್ಲಿ ಭಾಗವಹಿಸುತ್ತಿದ್ದಾರೆ. ಸಣ್ಣಪುಟ್ಟ ವಿಷಯಗಳಿಗೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಬೇಜವಾಬ್ದಾರಿಯಿಂದ ಅಪಘಾತಗಳಿಗೆ ಒಳಗಾಗುತ್ತಿದ್ದಾರೆ. ಅನಾರೋಗ್ಯಕ್ಕೆ ತುತ್ತಾಗುತ್ತಿದ್ದಾರೆ. ಮದ್ಯ, ಮಾದಕ ದ್ರವ್ಯಗಳಿಗೆ ಬಲಿಯಾಗುತ್ತಿದ್ದಾರೆ. ಬೆಟ್ಟಿಂಗ್ ದಂಧೆಗೆ ಇಳಿದಿದ್ದಾರೆ. ಇದು ಸಹ ದೇಶ ತಲೆ ಕೆಡಿಸಿಕೊಳ್ಳಬಹುದಾದ ವಿಷಯವಾಗಿದೆ.

 

ಈ ಮೂರು ರೀತಿಯ ಝೆನ್-ಜಿ ಗಳ ಯುವ ಪೀಳಿಗೆ ದೇಶದ ಮುಂದಿನ ಭವಿಷ್ಯವನ್ನು ನಿರ್ಧರಿಸಬೇಕಾಗಿದೆ. ಇವುಗಳ ಜೊತೆಗೆ ಗುಲಾಮಿತನದ ಯುವಶಕ್ತಿ, ಅಂಧಭಕ್ತಿಯ ಯುವಶಕ್ತಿ, ಸಂಕುಚಿತ ಮನೋಭಾವದ ಯುವಶಕ್ತಿ, ಸೋಮಾರಿತನದ ಯುವಶಕ್ತಿ ಮಗದೊಂದು ಕಡೆ ಕಾರ್ಯನಿರತವಾಗಿದ್ದರೆ, ಇದೆಲ್ಲವನ್ನು ಮೀರಿ ಅತ್ಯಂತ ಬುದ್ಧಿವಂತ, ಚಾಣಾಕ್ಷ, ವಿಶ್ವ ದರ್ಜೆಯ ಪ್ರತಿಭೆಯನ್ನು ಹೊಂದಿರುವ ಮತ್ತೊಂದು ಝೆನ್-ಜಿ ಕೂಡ ಈ ದೇಶದಲ್ಲಿ ಅತ್ಯಂತ ಕ್ರಿಯಾಶೀಲವಾಗಿದೆ ಅತಿ ಚಿಕ್ಕ ವಯಸ್ಸಿಗೆ ದೊಡ್ಡ ದೊಡ್ಡ ಸಾಧನೆ ಮಾಡುತ್ತಿದ್ದಾರೆ.

 

ಈಗ ನಾವು ಪ್ರತಿಭಾವಂತ ಝೆನ್-ಜಿಗಳನ್ನು ಪ್ರೋತ್ಸಾಹಿಸುತ್ತಾ, ಅದೇ ಸಮಯದಲ್ಲಿ ದೇಶಕ್ಕೆ ಅಪಾಯಕಾರಿಯದ ಜಂಜಿಗಳ ನಿಯಂತ್ರಣವನ್ನು ಮಾಡಬೇಕಿದೆ. ಮಾರ್ಗದರ್ಶನವನ್ನು ಮಾಡಬೇಕಿದೆ.

ಅದಕ್ಕೆ ಪೂರಕ ವಾತಾವರಣ ನಿರ್ಮಿಸಬೇಕಿದೆ. ನಮ್ಮ ತಿಳುವಳಿಕೆಯನ್ನು ಮಾತಿನ ಮೂಲಕ ವ್ಯಕ್ತಪಡಿಸುವುದಕ್ಕಿಂತ ಹೆಚ್ಚಾಗಿ ನಡವಳಿಕೆಯಾಗಿ ಅವರಿಗೆ ಮನವರಿಕೆ ಮಾಡಿಕೊಡಬೇಕಿದೆ. ಏಕೆಂದರೆ ಇವತ್ತಿನ ಸಂದರ್ಭದಲ್ಲಿ ಬಹುತೇಕ ಬುದ್ಧಿವಂತ ವರ್ಗ,

 

ಗೆಲ್ಲುತ್ತಲೇ ಇದೆ ವಾಕ್ಚಾತುರ್ಯ,

ಗೆಲ್ಲುತ್ತಿದೆ ಮೆದುಳಿನ ಭಾಷೆ…….

ಗೆಲುವಿನಲ್ಲಿ ಭಾವನೆಗಳದೇ ಕಾರುಬಾರು,

ಗೆಲುವು ತೋರಿಕೆಯನ್ನು ಆಕರ್ಷಿಸುತ್ತಿದೆ,

ಗೆಲುವಿನಲ್ಲಿ ನಂಬಿಕೆಯದೇ ಬಹುದೊಡ್ಡ ಪಾತ್ರ…..

ಸೋಲುತ್ತಿದೆ ಮೌನ ಸಂಯಮ,

ಸೋಲುತ್ತಿದೆ ಹೃದಯದ ಭಾಷೆ….

ಸೋಲುತ್ತಿದೆ ಮಾನವೀಯತೆ,

ಸೋಲುತ್ತಿದೆ ಸತ್ಯ ಮತ್ತು ವಾಸ್ತವ,

ಸೋಲುತ್ತಲೇ ಇದೆ ಪ್ರೀತಿಸುವ ಮನಸ್ಸುಗಳು……

ಸಂಗೀತವೇ ಇರಲಿ, ಸಾಹಿತ್ಯವೇ ಇರಲಿ, ರಾಜಕೀಯ, ಸಮಾಜ ಸೇವೆ, ವ್ಯಾಪಾರ, ಮಾಧ್ಯಮ, ಊಟ ಬಟ್ಟೆ, ಪ್ರೀತಿ ಏನೇ ಇರಲಿ,

ಗೆಲ್ಲುತ್ತಿರುವುದು ಆಡಂಬರ,

ಸೋಲುತ್ತಿರುವುದು ಸಹಜತೆ……

ನಾಗರಿಕವಾಗಬೇಕಿದ್ದ ಅಕ್ಷರ ಜ್ಞಾನ,

ಕರೆದೊಯ್ಯುತ್ತಿದೆ ಅಜ್ಞಾನದತ್ತ,

ಮುನ್ನಡೆಸಬೇಕಾಗಿದ್ದ ಅನುಭವ ಜ್ಞಾನ, ಕೊಚ್ಚಿ ಹೋಗುತ್ತಿದೆ ಅಕ್ಷರ ಜ್ಞಾನದಲ್ಲಿ,……..

ನಯ, ವಿನಯ, ಸಂಯಮ, ತಾಳ್ಮೆ, ಸತ್ಯ, ಸಭ್ಯತೆ, ಸರಳತೆಯದು ಮೂಕ ರೋದನ,

ಬಡಾಯಿ, ದೊಡ್ಡ ಕಂಠ, ಆಕರ್ಷಕ ಮಾತು, ಮೊಸಳೆ ಕಣ್ಣೀರು, ದೂರ್ತ ವಿನಯಗಳದು ಮುಖ್ಯವಾಹಿನಿಯ ವಿಜೃಂಭಣೆ…..

ಎತ್ತ ಸಾಗುತ್ತಿದ್ದೇವೆ ನಾವು…….

ಹೊಸ ಬೇರು ಹಳೆ ಚಿಗುರು,

ಕೂಡಿರಲು ಮರ ಸೊಬಗು,

ಆದರೆ ಹೊಸ ಚಿಗುರು ಆಕಾಶದತ್ತ,

ಹಳೆ ಬೇರು ಭೂಮಿಯತ್ತ ಮುಖ ಮಾಡಿದೆ…………

ಒಂದಕ್ಕೊಂದು ವಿರುದ್ಧವಾಗಿ ಚಲಿಸುತ್ತಿವೆ,

ಇದನ್ನು ಬೆಸೆಯುವವರಾರು…….

ಇಲ್ಲದಿದ್ದರೆ ಹೊಸ ಝೆನ್-ಜಿ ಪಡೆ, ಮುಂದೆ ಬರುವ ಅಲ್ಟ್ರಾಜೆಂಜಿ, ಎಲ್ಲವೂ ದಾರಿ ತಪ್ಪಬಹುದು. ಎಚ್ಚರಿಕೆ ವಹಿಸಬೇಕಾದದ್ದು ನಮ್ಮೆಲ್ಲರ ಕರ್ತವ್ಯ…..

ತಿಳಿದವರಾದರೂ

ಹಂಚೋಣ ಪ್ರೀತಿಯನ್ನು ,

ನುಡಿಯೋಣ ಸತ್ಯವನ್ನು,

ಬೆಸೆಯೋಣ ಮನುಜರನ್ನು…….

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

✍🏻ಬರಹ ಕೃಪೆ.✍🏻

 

ವಿವೇಕಾನಂದ.ಎಚ್.ಕೆ.

9663750451

9844013068.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ನ್ಯೂಸ್ ಬ್ಯೂರೋ,ಅವಿನ್ ಟಿವಿ.

About Author

More Stories

Leave a Reply

Your email address will not be published. Required fields are marked *

You may have missed