लाइव कैलेंडर

November 2026
M T W T F S S
 1
2345678
9101112131415
16171819202122
23242526272829
30  
15/11/2026

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಶ್ರೀಮತಿ ಸೋನಿಯಾ ಗಾಂಧಿ…. ಆತ್ಮಕಥೆಯೋ, ಜೀವನಗಾಥೆಯೋ, ಮನಸ್ಸಿನ ವ್ಯಥೆಯೋ, ಬದುಕಿನ ಗ್ರಹಿಕೆಯ ಅಭಿವ್ಯಕ್ತಿಯೋ……..

1 min read

ಶ್ರೀಮತಿ ಸೋನಿಯಾ ಗಾಂಧಿ….

ಆತ್ಮಕಥೆಯೋ,
ಜೀವನಗಾಥೆಯೋ,
ಮನಸ್ಸಿನ ವ್ಯಥೆಯೋ,
ಬದುಕಿನ ಗ್ರಹಿಕೆಯ ಅಭಿವ್ಯಕ್ತಿಯೋ……..

Edvige Antonio Albina Maino ಎಂಬ ಶ್ರೀಮತಿ ಸೋನಿಯಾ ಗಾಂಧಿಯವರ ಆತ್ಮಕಥೆ ಬಿಡುಗಡೆಯಾಗಿ ಬಹು ಚರ್ಚಿತ ವಿಷಯವಾಗುತ್ತಿರುವಾಗ ಆತ್ಮಕಥೆಗಳ ಬಗ್ಗೆ ಒಂದು ಅವಲೋಕನ……

ಬಾಂಧವ್ಯದ ಒಂದು ಪ್ರೀತಿಯ ಪಯಣ….
( Belonging, a journey of love…., )

ಶ್ರೀಮತಿ ಸೋನಿಯಾ ಗಾಂಧಿಯವರು ಬರೆದ ಆತ್ಮಕಥೆ ಪುಸ್ತಕ ಓದುವವರು ಅವರದೇ ರೀತಿಯ ಅರಿವಿನ ಅಂಚಿನಲ್ಲಿ ತಮ್ಮ ಅಭಿಪ್ರಾಯ ರೂಪಿಸಿಕೊಳ್ಳುತ್ತಾರೆ. ಆದರೆ ಬಹು ಮುಖ್ಯವಾಗಿ ಆತ್ಮಕಥೆಗಳನ್ನು ಅರ್ಥಮಾಡಿಕೊಳ್ಳುವ ವಿಧಾನಗಳ ಬಗ್ಗೆ ಒಂದು ದೃಷ್ಟಿಕೋನ……

ಜಗತ್ತಿನ ವಿಧ ವಿಧವಾದ ಕೆಲವು ವ್ಯಕ್ತಿಗಳ ಆತ್ಮಕಥೆಗಳನ್ನು ಓದಿದ್ದೇನೆ. ಸ್ಥಳೀಯ ಬರಹಗಾರರಿಂದ, ಅಂತರಾಷ್ಟ್ರೀಯ ಮಟ್ಟದ ಅನೇಕ ಬರಹಗಾರರು, ಸಾಧಕರು, ಜನಪ್ರಿಯರು, ದಾರ್ಶನಿಕರು, ಚಿಂತಕರು ಆತ್ಮಕಥೆಗಳನ್ನು ಬರೆದಿದ್ದಾರೆ. ಬರೆಯದೇ ಬದುಕು ಮುಗಿಸಿದ ಅನೇಕ ಮಹಾತ್ಮರು ಇದ್ದಾರೆ. ಹಾಗೆಯೇ ಬರೆದು ನಾವು ಓದದ ಅಥವಾ ಅಜ್ಞಾತವಾಗಿ ಉಳಿದ ಆತ್ಮಕಥೆಗಳೂ ಇವೆ.

ಮೊದಲಿಗೆ ಆತ್ಮಕಥೆ ಎಂಬ ಪದವೇ ಒಂದಷ್ಟು ಚರ್ಚಾಸ್ಪದ. ಈ ಆಧುನಿಕ ಕಾಲಘಟ್ಟದಲ್ಲಿ ಆತ್ಮ ಎಂಬುದು ಒಂದು ಅದೃಶ್ಯ, ಕಣ್ಣಿಗೆ ಕಾಣದ ಭಾವನಾತ್ಮಕವಾದ ನಂಬಿಕೆ. ಅದನ್ನು ವಾಸ್ತವಗೊಳಿಸುವುದು ಅಷ್ಟು ಸೂಕ್ತವಲ್ಲ. ಅದಕ್ಕೆ ಬದಲಾಗಿ ನಮ್ಮ ಜೀವನಾನುಭವವನ್ನು ವ್ಯಕ್ತಪಡಿಸುವಿಕೆ ಎಂದೇ ಕರೆಯಬಹುದು. ಅದನ್ನು ಆತ್ಮಕಥೆಗಿಂತ ಜೀವನಗಾಥೆ ಎಂದರೆ ಹೆಚ್ಚು ಸೂಕ್ತವಾಗಬಹುದೇನೋ. ಏಕೆಂದರೆ ಆತ್ಮ ನಂಬಿಕೆಯಾದರೆ ಮನಸ್ಸು ವಾಸ್ತವ. ಮನಸ್ಸು ಸಹ ಅದೃಶ್ಯವಾದರೂ ಚಿಂತನೆಯ ಮೂಲ ಮನಸ್ಸೇ ಎಂಬುದು ವೈಜ್ಞಾನಿಕ ಸತ್ಯ.
ಕೆಲವು ಆತ್ಮ ಕಥೆಗಳನ್ನು ಓದಿದಾಗ ಅದು ಮನಸ್ಸಿನ ವ್ಯಥೆ ಎಂದೆನಿಸುತ್ತದೆ.

ಜೀವನ ಚರಿತ್ರೆ – ಆತ್ಮಕಥೆ… (Biography – Autobiography)

ಕೆಲವರು ಅವರೇ ಅವರ ಜೀವನದ ಅನುಭವಗಳನ್ನು ಬರೆದುಕೊಂಡರೆ, ಇನ್ನೂ ಕೆಲವೆಡೆ ಬೇರೆಯವರು ಅವರ ಜೀವನಗಾಥೆಯನ್ನು ವಿವರಣೆಯೊಂದಿಗೆ, ನಿರೂಪಣೆಯೊಂದಿಗೆ, ಅವರ ಅನುಮತಿಯೊಂದಿಗೆ ದಾಖಲಿಸುತ್ತಾರೆ. ಇದು ಬಹುತೇಕ ಒಂದೇ ರೀತಿಯಾದರೂ ಸ್ವಲ್ಪ ವ್ಯತ್ಯಾಸಗಳು ಕೂಡ ಕಂಡುಬರುತ್ತದೆ. ನಿರೂಪಕರು ಅವರ ಬರವಣಿಗೆಯ ಶೈಲಿಯಲ್ಲಿ ಒಂದಷ್ಟು ಸಣ್ಣ ವ್ಯತ್ಯಾಸ ಮಾಡಬಹುದು. ಏನೇ ಆಗಲಿ ಈ ಜೀವನಗಾಥೆಗಳು ಅಥವಾ ಜೀವನ ಚರಿತ್ರೆಗಳು ಸಾಮಾಜಿಕ, ವೈಯಕ್ತಿಕ ಬದುಕಿನ ಅನೇಕ ಮುಖಗಳನ್ನು ತೆರೆದಿಡುತ್ತದೆ, ಕೆಲವೊಮ್ಮೆ ನೋವನ್ನೂ ಉಂಟು ಮಾಡಬಹುದು……

ಆತ್ಮಕಥೆಗಳಲ್ಲಿ ಆತ್ಮ ವಂಚನೆಯೂ ಇರುತ್ತದೆ, ಮುಖವಾಡವೂ ಇರುತ್ತದೆ, ಶಿಷ್ಟಾಚಾರವೂ ಇರುತ್ತದೆ, ವಾಸ್ತವವೂ ಇರುತ್ತದೆ, ಸತ್ಯವೂ ಇರುತ್ತದೆ, ಅಜ್ಞಾನವು ಇರುತ್ತದೆ, ತ್ಯಾಗವೂ ಇರುತ್ತದೆ, ಜೊತೆಗೆ ಇನ್ನೂ ಅನೇಕ ಭಾವಗಳ ಮಿಶ್ರಣವೂ ಇರುತ್ತದೆ. ಕೆಲವೊಮ್ಮೆ ಕೋಪ, ಅಸೂಯೆ, ಸ್ವಾರ್ಥ ಸಹ ಸೇರಿರುವ ಸಾಧ್ಯತೆಯೂ ಇರುತ್ತದೆ.

ಆತ್ಮಕಥೆ ಎಂಬುದು ಇತಿಹಾಸವಲ್ಲ, ಅಧಿಕೃತವೂ ಅಲ್ಲ. ಅದು ವ್ಯಕ್ತಿಯ ದೃಷ್ಟಿಕೋನದ ಜೀವನಗಾಥೆ. ಅದರಲ್ಲಿ ಸಮಕಾಲಿನವಾಗಿ ಒಂದಷ್ಟು ವಿಷಯಗಳು, ಮಾಹಿತಿಗಳು ದೊರೆಯಬಹುದೇ ಹೊರತು ಅದು ಸಂಪೂರ್ಣ ಸತ್ಯವೆಂದು ಹೇಳಲು ಸಾಧ್ಯವಿಲ್ಲ. ಏಕೆಂದರೆ ನೀವೇ ಒಮ್ಮೆ ಊಹಿಸಿಕೊಂಡು ನೋಡಿ. ನಾವು ಹೇಳುವ ಜೀವನಗಾಥೆಯಲ್ಲಿ ನಡೆದ ಕೆಲವು ಘಟನೆಗಳಲ್ಲಿ ನಮ್ಮ ಅಭಿಪ್ರಾಯ ವ್ಯಕ್ತಪಡಿಸುವಂತೆ ನಮ್ಮ ಹಿತೈಷಿಗಳು, ವಿರೋಧಿಗಳು, ಭಿನ್ನಾಭಿಪ್ರಾಯ ಹೊಂದಿರುವವರು ಸಹ ನಮ್ಮ ಬಗ್ಗೆ ಬೇರೆಯದೇ ಆದ ಅಭಿಪ್ರಾಯ ಹೊಂದಿರುತ್ತಾರೆ. ಒಂದು ವೇಳೆ ಅವರು ಆತ್ಮಕಥೆ ಬರೆದರೆ ಅದರಲ್ಲಿ ನಮ್ಮನ್ನು ಕೆಟ್ಟದಾಗಿಯೂ ಚಿತ್ರಿಸಬಹುದು. ಆದ್ದರಿಂದ ಆತ್ಮಕಥೆಗಳು ಆ ವ್ಯಕ್ತಿಯು ನೋಡಿದ, ಅನುಭವಿಸಿದ, ಗ್ರಹಿಸಿದ ಜೀವನ ಚರಿತ್ರೆಯೇ ಹೊರತು ಇತಿಹಾಸವಲ್ಲ.

ನಾನು ಓದಿದ ಜಗತ್ತಿನ ಅತ್ಯಂತ ಪಾರದರ್ಶಕ, ಅತ್ಯದ್ಭುತ, ಆತ್ಮಕಥೆ ಎಂದರೆ ಅದು ಮಹಾತ್ಮ ಗಾಂಧಿಯವರ ಸತ್ಯದೊಂದಿಗೆ ನನ್ನ ಪ್ರಯೋಗ ಎಂಬ ಆತ್ಮ ಕಥೆ. ಹೌದು ಅದು ಸಂಪೂರ್ಣವೂ ಅಲ್ಲ, ಪರಿಪೂರ್ಣವೂ ಅಲ್ಲ, ಕನ್ನಡಿಯಷ್ಟು ಪಾರದರ್ಶಕವೂ ಅಲ್ಲ. ಆದರೆ ಅತ್ಯುತ್ತಮ ಜೀವನ ಗಾಥೆ. ಆದರೆ ಸಾಧ್ಯವಾದಷ್ಟು ಪಾರದರ್ಶಕತೆಯಿಂದ “ನನ್ನ ಜೀವನವೇ ನನ್ನ ಸಂದೇಶ” ಎನ್ನುವ ಘೋಷ ವಾಕ್ಯದೊಂದಿಗೆ ಜನರ ಮುಂದಿಡುವ ಪ್ರಯತ್ನ ಸ್ಪಷ್ಟವಾಗಿ ಕಾಣುತ್ತದೆ. ಆದರೆ ಮೊದಲೇ ಹೇಳಿದಂತೆ ಅದು ಕೂಡ ಇತಿಹಾಸವಲ್ಲ, ಅಧಿಕೃತವಲ್ಲ. ಕೇವಲ ಒಬ್ಬ ವ್ಯಕ್ತಿಯ ಜೀವನಗಾಥೆ ಮಾತ್ರ

ಇಂದಿನ ಸಂಕೀರ್ಣ ಜೀವನಶೈಲಿ, ಪ್ರಕ್ಷ್ಯುಬ್ಧ ಮನಸ್ಥಿತಿ, ವೇಗ ಮತ್ತು ಸ್ಪರ್ಧೆಯ ಕಲುಷಿತ ಭಾವನೆಗಳ ಯುಗದಲ್ಲಿ ಪ್ರತಿಯೊಬ್ಬರು ತಮ್ಮ ಚಿಂತನೆಗಳಿಗೆ ವಕೀಲಿಕೆಯ ರೂಪ ಕೊಡುವುದರಿಂದ ಮತ್ತು ಈಗಾಗಲೇ ನಮ್ಮ ಮನಸ್ಸುಗಳು ವಿಧವಿಧವಾಗಿ, ಸಂಕುಚಿತವಾಗಿ ವಿಭಜನೆಯಾಗಿರುವುದರಿಂದ ಯಾವುದೇ ಆತ್ಮಕತೆಯೂ, ಅದರಲ್ಲೂ ರಾಜಕಾರಣಿಗಳ ಆತ್ಮಕಥೆ ತಟಸ್ಥ ಮನಸ್ಥಿತಿಯಿಂದ ಓದುವುದು ಸಾಧ್ಯವಿಲ್ಲವಾಗಿದೆ. ಪ್ರೀತಿಯ, ಪ್ರೇಮದ, ನೋವಿನ, ಅಸಹಾಯಕತೆಯ ಭಾವಗಳು ನಮ್ಮನ್ನು ಒಂದಷ್ಟು ಕಾಡಬಹುದು. ಶ್ರೀಮತಿ ಸೋನಿಯಾ ಗಾಂಧಿ ಅಥವಾ ಆ ರೀತಿಯ ಯಾರೇ ಪ್ರಖ್ಯಾತರ ಆತ್ಮ ಕಥೆಗಳು ಒಂದಷ್ಟು ಮಾಹಿತಿ ನೀಡಬಹುದೇ ಹೊರತು ನಮ್ಮನ್ನು ತುಂಬಾ ಕಾಡುವುದಿಲ್ಲ. ಏಕೆಂದರೆ ಅವರ ಬಹುತೇಕ ಜೀವನ ಅತ್ಯಂತ ಉನ್ನತ ಮಟ್ಟದಲ್ಲಿ ನಡೆದಿರುತ್ತದೆ.

ಅವರ ಪ್ರಾರಂಭದ ದಿನಗಳನ್ನು ಹೊರತುಪಡಿಸಿದರೆ ಹಣ, ಅಧಿಕಾರ, ಅಂತಸ್ತು, ಊಟ, ಬಟ್ಟೆ, ವಸತಿ, ಸಂಬಂಧಗಳು ಎಲ್ಲವೂ ಅತ್ಯುತ್ತಮ ಮಟ್ಟದಲ್ಲಿ ಇರುತ್ತದೆ. ಅವರು ಸಮಾಜದ ಬಹುದೊಡ್ಡ ವ್ಯಕ್ತಿಗಳು ವ್ಯಕ್ತಿಗಳು. ನಾವು ಅವರ ಹತ್ತಿರಕ್ಕೂ ಸುಳಿಯಲು ಸಾಧ್ಯವಾಗದ ಅತ್ಯಂತ ಕೆಳ ವರ್ಗದ ಜನ. ನಮ್ಮ ಆತ್ಮಕಥೆಗಳು ಬಹುತೇಕ ಬದುಕಿನ ಸಂಘರ್ಷಗಳನ್ನೇ, ಬದುಕಿಗಾಗಿ ಹೋರಾಟವನ್ನೇ ಪ್ರತಿನಿಧಿಸುತ್ತದೆ ಮತ್ತು ಪ್ರತಿಧ್ವನಿಸುತ್ತದೆ. ನಮ್ಮ ಪ್ರೇಮ ಕಾಮಗಳು ಇನ್ನೇನೋ ಹೇಳಬಯಸುತ್ತವೆ. ನಮ್ಮ ನೋವು ನಲಿವುಗಳನ್ನು ಹಂಚಿಕೊಳ್ಳಲು ಅಲ್ಲೂ ಸಾಧ್ಯವಾಗುವುದಿಲ್ಲ.

ಇದು ಕೇವಲ ಸೋನಿಯಾ ಗಾಂಧಿ ಅವರಿಗೆ ಮಾತ್ರವಲ್ಲ, ಅದು ಲಾಲ್ ಕೃಷ್ಣ ಅಡ್ವಾನಿವರೇ ಇರಬಹುದು, ನರೇಂದ್ರ ಮೋದಿಯವರೇ ಇರಬಹುದು, ದೇವೇಗೌಡರೇ ಇರಬಹುದು, ಸಿದ್ದರಾಮಯ್ಯನವರೇ ಇರಬಹುದು, ಯಾರದೇ ಆತ್ಮ ಕಥೆಗಳು ನಮ್ಮಂತ ಸಾಮಾನ್ಯ ಜನರಿಗೆ ನಿಲುಕುವುದು ತುಂಬಾ ಕಷ್ಟ.

ನಮ್ಮದೇನಿದ್ದರೂ ತರಕಾರಿ ಮುನಿಯಮ್ಮ, ಬೋಂಡಾ ಸರೋಜಮ್ಮ, ದರ್ಜಿ ಇಮಾಮ್ ಸಾಬಿ, ಟೀಚರ್ ಮೇರಿ, ಬಟ್ಟೆ ಅಂಗಡಿ ಮಹಾವೀರ್ ಜೈನ್, ಆಂಜನೇಯ ಗುಡಿಯ ವೆಂಕಟೇಶ ಪೂಜಾರಿ, ಚಪ್ಪಲಿ ಹೊಲೆಯುವ ನಾರಾಯಣಸ್ವಾಮಿ, ಗೂಡಂಗಡಿಯ ಮಹದೇವ, ಸರ್ಕಾರಿ ಆಸ್ಪತ್ರೆಯ ಡಾ. ಸುನಿತ್, ಆಚೆ ಕಡೆ ಬೀದಿಯ ರೌಡಿ ನಾಗ, ಈ ಕಡೆ ದಾರಿಯ ಬಡ್ಡಿ ಮುನಿಯ, ಅಪ್ಪನ ತಮ್ಮ ಸಂಜೀವಪ್ಪ, ಅಮ್ಮನ ಅಕ್ಕ ರಾಮಕ್ಕ, ಸಹೋದ್ಯೋಗಿ ಹೊಟ್ಟೆ ರಂಗ ಹೀಗೆ ನಮ್ಮ ಬದುಕು ಇಲ್ಲಿಯೇ ಬೆಸೆದುಕೊಂಡಿರುತ್ತದೆ ನಾವು ಅವರಂತೆ ಅವರು ನಮ್ಮಂತೆ. ನಾವೆಲ್ಲ ಆತ್ಮಕಥೆ ಬರೆದರೆ ಅದು ಇವರ ಸುತ್ತಲೇ ಸುತ್ತುತ್ತದೆ.

ಇದರ ಮಧ್ಯೆ ಒಂದಷ್ಟು ಪ್ರೀತಿ, ಪ್ರೇಮ ವೈಫಲ್ಯದ ಮಂಜುಳಾ, ಈಗಿನ ಪತ್ನಿ ವಿಮಲಾ, ಅತ್ತೆ, ಮಾವ, ಮಕ್ಕಳು, ಅಳಿಯ, ಸೊಸೆ, ಒಂದಷ್ಟು ಜಮೀನಿನ ಗಲಾಟೆ, ಇನ್ನೊಂದಿಷ್ಟು ಅನಾರೋಗ್ಯ, ಅಪಘಾತ, ಕಳ್ಳತನ, ಪೊಲೀಸ್, ಮತ್ತೊಂದಿಷ್ಟು ದೇವಸ್ಥಾನಗಳ ಪ್ರವಾಸ ಇಷ್ಟಕ್ಕೆ ಮುಗಿಯುವ ಬದುಕು ನಮ್ಮದು.

ನಮ್ಮ ಜೀವನ ಖಾತೆಯಲ್ಲಿ ವಿದ್ಯುತ್ ಇಲಾಖೆಯ ಕರಿಯಣ್ಣ, ಅಂಚೆ ಕಚೇರಿಯ ಪಾಲಾಕ್ಷ, ಬ್ಯಾಂಕಿನ ನರೇಶ್ ಮುಂತಾದವರೊಂದಿಗಿನ ಒಡನಾಟ, ಸಂಘರ್ಷಗಳೇ ಹೆಚ್ಚು ತುಂಬಿರುತ್ತದೆ. ದೊಡ್ಡವರಂತೆ ದೇಶ ವಿದೇಶಗಳು, ವಿಶ್ರಾಂತಿ ಅವಧಿಗಳು, ಭಕ್ಷ ಭೋಜನಗಳು, ಔತಣ ಕೂಟಗಳು, ವಿಮಾನ ಹಾರಾಟಗಳು, ದೊಡ್ಡ ಬಂಗಲೆ, ಕಾರುಗಳು ಇವುಗಳ ಪ್ರಸ್ತಾಪವೇ ಇರುವುದಿಲ್ಲ. ನಮ್ಮದೇನಿದ್ದರೂ ಬದುಕಲೇ ಸಂಘರ್ಷಿಸುತ್ತಾ ಸಾಯುವುದು ನಮ್ಮೆಲ್ಲರ ಜೀವನ ಗಾಥೆ.

ಆದರೂ ಸೋನಿಯಾ ಗಾಂಧಿಯವರು ಈ ದೇಶದ ಅನೇಕ ಮಹಿಳಾ ರಾಜಕಾರಣಿಗಳಿಗಿಂತ ಹೆಚ್ಚಾಗಿ ಒಂದಷ್ಟು ಸಭ್ಯತೆ, ಸಂಯಮ ತೋರಿದವರು. ಪಾಶ್ಚಾತ್ಯ ಸಂಸ್ಕೃತಿಯಿಂದ ಬೆಳೆದರೂ, ರಾಜೀವ್ ಗಾಂಧಿ ಅವರನ್ನು ಮದುವೆಯಾದ ನಂತರ ಇಲ್ಲಿನ ಸಂಸ್ಕೃತಿಗೆ ಹೊಂದಿಕೊಳ್ಳುತ್ತಾರೆ.

ರಾಜೀವ್ ಗಾಂಧಿ ಹತ್ಯೆಯ ನಂತರ ಅವರು ಬರೆದ ನನ್ನ ರಾಜೀವ ಕೃತಿಯಲ್ಲಿ ಪ್ರೀತಿ ಪ್ರೇಮದ ಬಾಂಧವ್ಯ ನಿಜಕ್ಕೂ ಒಂದು ರೀತಿ ಮಂತ್ರ ಮುಗ್ಧತೆಯನ್ನು ಉಂಟುಮಾಡುತ್ತದೆ.

ಇರಲಿ, ಆತ್ಮಕಥೆಗಳನ್ನು ಓದುವವರು ಅದರಲ್ಲೂ ಈಗಿನ ಸೋನಿಯಾ ಗಾಂಧಿ ಆತ್ಮಕಥೆ ಓದುವವರು ಒಂದಷ್ಟು ಮೆಚ್ಚುಗೆ, ಒಂದಷ್ಟು ವಿರೋಧಗಳ ನಡುವೆ ಸಿಲುಕದೆ No Man’s Land ಅಂದರೆ ಯಾರಿಗೂ ಸೇರದ ಜಾಗದಲ್ಲಿ ನಿಂತು ವಿಮರ್ಶಿಸುವ ಮನೋಭಾವ ಬೆಳೆಸಿಕೊಳ್ಳಿ. ಪ್ರೀತಿ ಮತ್ತು ದ್ವೇಷದ ನಡುವೆ, ಧ್ಯಾನಸ್ಥ ಮತ್ತು ಪ್ರಕ್ಷ್ಯುಬ್ಧ ಮನಸ್ಥಿತಿಯ ನಡುವೆ ಒಂದಷ್ಟು ಸಮಾಧಾನಕರ ಭಾವವನ್ನು ವ್ಯಕ್ತಪಡಿಸಿದರೆ ಉತ್ತಮ.

ರಾಜಕೀಯ ಪಕ್ಷಗಳವರು ಪೂರ್ವಾಗ್ರಪೀಡಿತರಾಗಿ ಹೇಳಿಕೆಗಳನ್ನು ನೀಡುತ್ತಾರೆ. ಆದರೆ ಸಾಮಾನ್ಯ ಜನರಾದ ನಾವು ಒಂದು ಜೀವನಗಾಥೆಯನ್ನು ಕೇವಲ ತಿಳುವಳಿಕೆಗಾಗಿ ಮಾತ್ರವಲ್ಲ ನಡವಳಿಕೆಗಾಗಿ, ನಮ್ಮ ಬದುಕಿನ ಮಾರ್ಗದ ಸರಿಯಾದ ದಿಕ್ಕಿನ ಪರಿವರ್ತನೆಗಾಗಿ ಓದಿದರೆ ಅದು ಹೆಚ್ಚು ಅರ್ಥಪೂರ್ಣವಾಗುತ್ತದೆ. ಘಟನೆಗಳು ಏನೇ ಅರ್ಥ ನೀಡಿದರು, ಬದುಕಿನ ಅರ್ಥ ಮಾತ್ರ ಒಂದೇ. ನಮ್ಮ ಮನಸ್ಸಿನ ವ್ಯಥೆಗಳು.

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9663750451…….
9844013068…….

About Author

Leave a Reply

Your email address will not be published. Required fields are marked *

You may have missed