“ಮೂಡಿಗೆರೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಟಿ.ಎ.ಪಿ.ಎಂ.ಸಿ ಔಷಧಿ ಅಂಗಡಿ ವಿಚಾರ : ನಿಯಮ ಉಲ್ಲಂಘನೆ ಹಾಗೂ ಕಮಿಷನ್ ಆರೋಪ.”
1 min read
ಮೂಡಿಗೆರೆ:ಬಡ ರೋಗಿಗಳಿಗೆ ಅನುಕೂಲವಾಗಬೇಕು ಎಂಬ ಉದ್ದೇಶದಿಂದ ಮೂಡಿಗೆರೆಯ ಎಂ.ಜಿ.ಎಂ. ಆಸ್ಪತ್ರೆಯ ಆವರಣದಲ್ಲಿ ಔಷಧಿ ಅಂಗಡಿ ತೆರೆಯಲು ಅವಕಾಶ ನೀಡಲಾಗಿತ್ತು. ಆದರೆ, ಪ್ರಸ್ತುತ ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿಯ ಕಾರ್ಯನಿರ್ವಹಣೆ, ಬ್ರಾಂಡೆಡ್ ಔಷಧಿಗಳ ಮಾರಾಟ ಹಾಗೂ ಸರ್ಕಾರಿ ಅನುದಾನದ ಬಳಕೆ ಕುರಿತು ಹಲವು ಪ್ರಶ್ನೆಗಳು ಕೇಳಿಬರುತ್ತಿವೆ.
1984ರಲ್ಲೇ ಔಷಧಿ ಅಂಗಡಿಗೆ ಅವಕಾಶ.
ದಿನಾಂಕ 02-10-1984ರಂದು ಮಾಜಿ ಲೋಕಸಭಾ ಸದಸ್ಯರಾದ ಡಿ.ಎಂ. ಪುಟ್ಟೇಗೌಡರು ಹಾಗೂ ಮಾಜಿ ಸಚಿವರಾದ ಶ್ರೀಮತಿ ಮೋಟಮ್ಮ ಅವರು ಎಂ.ಜಿ.ಎಂ. ಆಸ್ಪತ್ರೆಯ ಆವರಣದಲ್ಲಿ ಬಡ ರೋಗಿಗಳಿಗೆ ತೊಂದರೆಯಾಗಬಾರದು ಎಂಬ ಉದ್ದೇಶದಿಂದ ಔಷಧಿ ಅಂಗಡಿ ತೆರೆಯಲು ಅವಕಾಶ ನೀಡಿದ್ದರು. ಇದು ಬಡ ರೋಗಿಗಳ ಹಿತದೃಷ್ಟಿಯಿಂದ ಮೆಚ್ಚುವಂತಹ ಕ್ರಮವಾಗಿತ್ತು ಎಂದು ಹೇಳಲಾಗಿದೆ.
ಕೋರ್ಟ್ ವಿಚಾರದಲ್ಲಿ ಮೂಡಿಗೆರೆ ಆಸ್ಪತ್ರೆಗೆ ವಿನಾಯಿತಿ.
54588/15 ಸಂಖ್ಯೆಯ ಕೋರ್ಟ್ ವಿಚಾರಕ್ಕೆ ಸಂಬಂಧಿಸಿದಂತೆ, ರಾಜ್ಯದ ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿರುವ ಔಷಧಿ ಅಂಗಡಿಗಳಿಗೆ ನೀಡದಿರುವ ವಿನಾಯಿತಿಯನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿಗೆ ರಾಜ್ಯಪಾಲರು ನೀಡಿರುವುದಾಗಿ ಉಲ್ಲೇಖಿಸಲಾಗಿದೆ. ಈ ವಿಚಾರದಲ್ಲಿ ಕೆಲವು ಪ್ರಭಾವಿ ಶಕ್ತಿಗಳ ಕೈವಾಡವಿದೆ ಎಂಬ ಆರೋಪವೂ ಕೇಳಿಬಂದಿದೆ.
ರಾತ್ರಿ ಪಾಳಿಯಲ್ಲೂ ಔಷಧಿ ನೀಡುವ ಭರವಸೆ.
ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿಯವರು ರಾತ್ರಿ ಪಾಳಿಯಲ್ಲಿಯೂ ರೋಗಿಗಳಿಗೆ ಅಗತ್ಯ ಔಷಧಿಗಳನ್ನು ನೀಡುವುದಾಗಿ ತಿಳಿಸಿದ್ದಾರೆ. ಆದರೆ, ಸರ್ಕಾರವೇ ಸರ್ಕಾರಿ ಆಸ್ಪತ್ರೆಗಳಿಗೆ ಔಷಧಿ ಖರೀದಿಗಾಗಿ ಪ್ರತಿದಿನ ₹10,000 ನೀಡುತ್ತಿರುವಾಗ, ರಾತ್ರಿ ಸಮಯದಲ್ಲಿ ರೋಗಿಗಳನ್ನು ಹೊರಗಿನಿಂದ ಔಷಧಿ ತರಲು ಕಳುಹಿಸುವ ಅಗತ್ಯವೇನು ಎಂಬ ಪ್ರಶ್ನೆ ಎದುರಾಗಿದೆ.
₹10 ಸಾವಿರ ಔಷಧಿ ಖರೀದಿ ಅನುದಾನದ ಬಳಕೆ ಬಗ್ಗೆ ಪ್ರಶ್ನೆ.
ಸರ್ಕಾರ ಪ್ರತಿದಿನ ಔಷಧಿ ಖರೀದಿಗೆ ನೀಡುತ್ತಿರುವ ₹10,000 ಮೊತ್ತವನ್ನು ಆಡಳಿತ ವೈದ್ಯಾಧಿಕಾರಿಗಳು ನಿಜವಾಗಿಯೂ ಔಷಧಿ ಖರೀದಿಗೆ ಬಳಸುತ್ತಿದ್ದಾರೆಯೇ ಎಂಬುದರ ಬಗ್ಗೆ ಸ್ಪಷ್ಟತೆ ಅಗತ್ಯವಾಗಿದೆ ಎಂದು ಆರೋಪಿಸಲಾಗಿದೆ.
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಔಷಧಿ ಅಂಗಡಿ ವಿಚಾರ.
ಚಿಕ್ಕಮಗಳೂರು ಜಿಲ್ಲಾ ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿಯಲ್ಲಿ ಜನೌಷಧಿ ಹೊರತುಪಡಿಸಿ ಬ್ರಾಂಡೆಡ್ ಔಷಧಿಗಳನ್ನು ಮಾರಾಟ ಮಾಡಬಾರದು ಎಂಬ ನಿಯಮವಿದೆ ಎಂದು ಹೇಳಲಾಗಿದೆ.
ದಿನಾಂಕ 08-09-2017ರಂದು ಸರ್ಕಾರ ಹೊರಡಿಸಿರುವ ಆದೇಶದ ಪ್ರಕಾರ, ಜನತಾಬಜಾರ್, ಸಹಕಾರ ಸಂಘ-ಸಂಸ್ಥೆಗಳು ಹಾಗೂ ಖಾಸಗಿ ಔಷಧಿ ಅಂಗಡಿಗಳು ಸರ್ಕಾರಿ ಆಸ್ಪತ್ರೆಗಳ ಆವರಣದಲ್ಲಿ ಕಾರ್ಯನಿರ್ವಹಿಸುತ್ತಿದ್ದರೆ, ಜನರಿಕ್ ಔಷಧಿಗಳನ್ನು ಹೊರತುಪಡಿಸಿ ಬ್ರಾಂಡೆಡ್ ಔಷಧಿಗಳನ್ನು ಮಾರಾಟ ಮಾಡಬಾರದು ಎಂದು ಸೂಚಿಸಲಾಗಿದೆ.
ನಿಯಮ ಉಲ್ಲಂಘಿಸಿ ಬ್ರಾಂಡೆಡ್ ಔಷಧಿ ಮಾರಾಟ ಮಾಡುತ್ತಿರುವುದು ಕಂಡುಬಂದರೆ, ಸಂಬಂಧಪಟ್ಟ ಔಷಧಿ ಅಂಗಡಿಗೆ ನೋಟಿಸ್ ನೀಡಿ ಮುಚ್ಚಳಿಕೆ ಪತ್ರ ಪಡೆಯಬೇಕು. ನಂತರವೂ ಬ್ರಾಂಡೆಡ್ ಔಷಧಿ ಮಾರಾಟ ಮುಂದುವರಿದರೆ ಆಡಳಿತ ವೈದ್ಯಾಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ಆದೇಶದಲ್ಲಿ ತಿಳಿಸಿರುವುದಾಗಿ ಉಲ್ಲೇಖಿಸಲಾಗಿದೆ.
ಮೂಡಿಗೆರೆ ಜನೌಷಧಿ ಅಂಗಡಿ ವಿಚಾರ.
ಮೂಡಿಗೆರೆಯ ಸಾರ್ವಜನಿಕ ಆಸ್ಪತ್ರೆಯ ಆವರಣದಲ್ಲಿದ್ದ ಎಂ.ಎಸ್.ಐ.ಎಲ್. ಔಷಧಿ ಅಂಗಡಿಯವರು ಬ್ರಾಂಡೆಡ್ ಔಷಧಿಗಳನ್ನು ಮಾರಾಟ ಮಾಡುವುದಿಲ್ಲ ಎಂದು ಮುಚ್ಚಳಿಕೆ ಪತ್ರ ಬರೆದುಕೊಟ್ಟಿರುವುದಾಗಿ ಹೇಳಲಾಗಿದೆ.
ಹಾಗಿದ್ದರೆ, ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಟಿಎಪಿಸಿಎಂ ಔಷಧಿ ಅಂಗಡಿಗೂ ಇದೇ ನಿಯಮ ಅನ್ವಯವಾಗುತ್ತದೆಯೇ ಅಥವಾ ಇಲ್ಲವೇ ಎಂಬ ಪ್ರಶ್ನೆ ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿದೆ.
ಸರ್ಕಾರಿ ಔಷಧಿ ಸರಬರಾಜಿನ ಬಳಿಕವೂ ಅಂಗಡಿಗಳಿಗೆ ಅವಕಾಶ ಏಕೆ?
ದಿನಾಂಕ 03-10-2025/26ರಂದು ಸರ್ಕಾರ ಹೊರಡಿಸಿರುವ ಆದೇಶದಲ್ಲಿ, ಸರ್ಕಾರಿ ಆಸ್ಪತ್ರೆಗಳಿಗೆ ಸರ್ಕಾರವೇ ಅಗತ್ಯ ಔಷಧಿಗಳನ್ನು ಸರಬರಾಜು ಮಾಡುತ್ತಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯದ ವಿಚಾರಣೆಯಲ್ಲಿರುವ ಜನೌಷಧಿ ಕೇಂದ್ರಗಳನ್ನು ಹೊರತುಪಡಿಸಿ ಆಸ್ಪತ್ರೆಯ ಆವರಣದಲ್ಲಿರುವ ಇತರ ಔಷಧಿ ಅಂಗಡಿಗಳನ್ನು ತೆರವುಗೊಳಿಸಲು ಗಡುವು ನೀಡಿರುವುದಾಗಿ ಉಲ್ಲೇಖಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಮೂಡಿಗೆರೆ ಸರ್ಕಾರಿ ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿ ಮುಂದುವರಿಯುತ್ತಿರುವುದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಸ್ಪಷ್ಟನೆ ನೀಡಬೇಕೆಂಬ ಆಗ್ರಹ ಕೇಳಿಬರುತ್ತಿದೆ.
ಕಮಿಷನ್ ಆರೋಪ: ತನಿಖೆಗೆ ಆಗ್ರಹ.
ಸರ್ಕಾರ ತಾಲ್ಲೂಕು ಆಸ್ಪತ್ರೆಗೆ ಪ್ರತಿದಿನ ₹10,000 ಔಷಧಿ ಖರೀದಿಗಾಗಿ ನೀಡುತ್ತಿದೆ. ಆದರೆ, ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳು ಅಗತ್ಯ ಔಷಧಿಗಳನ್ನು ಖರೀದಿಸದೆ, ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿಗೆ ಅನುಕೂಲ ಮಾಡಿಕೊಡುತ್ತಿದ್ದಾರೆ ಹಾಗೂ ಇದರಲ್ಲಿ ಕಮಿಷನ್ ವ್ಯವಹಾರ ನಡೆಯುತ್ತಿದೆ ಎಂಬ ಆರೋಪ ಕೇಳಿಬಂದಿದೆ.
ಆಸ್ಪತ್ರೆಯ ಆವರಣದಲ್ಲಿರುವ ಔಷಧಿ ಅಂಗಡಿಯಲ್ಲಿ ನಿಯಮ ಉಲ್ಲಂಘಿಸಿ ಬ್ರಾಂಡೆಡ್ ಔಷಧಿಗಳ ಮಾರಾಟ ನಡೆಯುತ್ತಿದ್ದರೂ ಯಾವುದೇ ಕ್ರಮ ಕೈಗೊಳ್ಳದಿರುವುದಕ್ಕೆ ಕಾರಣವೇನು ಎಂಬ ಪ್ರಶ್ನೆಯೂ ಉದ್ಭವಿಸಿದೆ.
ಈ ಎಲ್ಲಾ ಆರೋಪಗಳ ಕುರಿತು ಜಿಲ್ಲಾಡಳಿತ, ಆರೋಗ್ಯ ಇಲಾಖೆ ಹಾಗೂ ಸಂಬಂಧಪಟ್ಟ ಅಧಿಕಾರಿಗಳು ಸಮಗ್ರ ತನಿಖೆ ನಡೆಸಿ, ಸರ್ಕಾರಿ ಅನುದಾನದ ಬಳಕೆ, ಔಷಧಿ ಖರೀದಿ, ಬ್ರಾಂಡೆಡ್ ಔಷಧಿಗಳ ಮಾರಾಟ ಹಾಗೂ ಔಷಧಿ ಅಂಗಡಿಗೆ ನೀಡಿರುವ ಅನುಮತಿ ಸೇರಿದಂತೆ ಸಂಪೂರ್ಣ ವಿಚಾರವನ್ನು ಸಾರ್ವಜನಿಕರಿಗೆ ಸ್ಪಷ್ಟಪಡಿಸಬೇಕು ಎಂಬ ಆಗ್ರಹ ವ್ಯಕ್ತವಾಗಿದೆ.
ಈ ಸಂದರ್ಭದಲ್ಲಿ ಕೆ.ಡಿ.ದೇವರಾಜ್ ಕಣಚೂರು.
ಕೆ.ಎಂ.ಸುರೇಶ್ ಕಣಚೂರು,ಅರುಣ್ ಕುಮಾರ್ ಕುಂಬರಡಿ ಉಪಸ್ಥಿತರಿದ್ದರು.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ನ್ಯೂಸ್ ಬ್ಯೂರೋ,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

