“ಆಫ್ ರೋಡಿಂಗ್ ಹೆಸರಿನಲ್ಲಿ ಪಶ್ಚಿಮ ಘಟ್ಟದಲ್ಲಿ ಗದ್ದಲ : ನಿಷೇಧಕ್ಕೆ ಒತ್ತಾಯ.”
1 min read
ಪಶ್ಚಿಮ ಘಟ್ಟಕ್ಕೆ ಈಗ ಆಫ್ ರೋಡಿಂಗ್ ಕಾಟ ಶುರುವಾಗಿದೆ.ಇತ್ತೀಚೆಗಷ್ಟೇ ಸಕಲೇಶಪುರದಲ್ಲಿ ಅರಣ್ಯಾಧಿಕಾರಿಗಳು ಕೆಲವು ಜೀಪುಗಳನ್ನು ವಶಪಡಿಸಿಕೊಂಡಿದ್ದರು.ಈಗ,ಚಿಕ್ಕಮಗಳೂರು ಜಿಲ್ಲೆ ಅಲಗೇಶ್ವರ ಮತ್ತು ಕುದುರೆಮುಖದಲ್ಲಿ ಇದೇ ಸ್ವಾತಂತ್ರ್ಯ ದಿನಾಚರಣೆ ದಿನ ಆಫ್ ರೋಡಿಂಗ್ ಅಂತೆ.ಇದೊಂದು ಶ್ರೀಮಂತರ ಮೋಜು,ಮಸ್ತಿ ಮಾಡುವ ಚಟುವಟಿಕೆ ಆಗಿದ್ದು,ಸ್ಥಳೀಯ ಪರಿಸರದ ಶಾಂತಿ ಮತ್ತು ನೆಮ್ಮದಿಗೆ ಭಂಗ ತರುತ್ತದೆ.

ಅಲಗೇಶ್ವರ ಎಸ್ಟೇಟ್,ಇದು ಹುಲಿ ಕಾರಿಡಾರ್ ವ್ಯಾಪ್ತಿಯಲ್ಲಿ ಬರುತ್ತದೆ.ಭದ್ರಾ ಹುಲಿ ಸಂರಕ್ಷಿತ ಮತ್ತು ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮಧ್ಯದಲ್ಲಿ ಒಂದು ಹುಲಿ ಕಾರಿಡಾರ್ ಇದ್ದು,ಈ ಪ್ರದೇಶವು ಅದರ ವ್ಯಾಪ್ತಿಗೆ ಸೇರುತ್ತದೆ.ಜೊತೆಗೆ,ಅಲಗೇಶ್ವರ ವ್ಯಾಪ್ತಿಯಲ್ಲಿ ಕಾಟಿ(ಕಾಡುಕೋಣಗಳು) ದೊಡ್ಡ ಸಂಖ್ಯೆಯಲ್ಲಿದ್ದು,ಆ ಭಾಗದಲ್ಲಿ ಇತ್ತೀಚೆಗೆ ಆನೆಗಳು ಓಡಾಟ ನಡೆಸಿರುವ ಮಾಹಿತಿ ಕೂಡಾ ಇದೆ.ಇಂತಹ ಸೂಕ್ಷ್ಮ ಪರಿಸರದಲ್ಲಿ, ನೂರಾರು ವಾಹನಗಳು ಸೇರಿ, ಗದ್ದಲ ಎಬ್ಬಿಸುವುದು ಸೂಕ್ಷ್ಮ ಪರಿಸರಕ್ಕೆ, ಅಲ್ಲಿನ ವನ್ಯಜೀವಿಗಳಿಗೆ,ಸ್ಥಳೀಯ ರೈತಾಪಿ ಜನರಿಗೆ ತೊಂದರೆ ಉಂಟುಮಾಡುತ್ತದೆ.
ಆಫ್ ರೋಡಿಂಗ್ ಹೆಸರಿನಲ್ಲಿ ಸೈಲೆನ್ಸರ್ ಮಾರ್ಪಾಡಿಸಿರುವ ಜೀಪುಗಳ ಕರ್ಕಶ ಸದ್ದು ವನ್ಯಜೀವಿಗಳ ವರ್ತನೆಗಳ ಮೇಲೆ ಪರಿಣಾಮ ಬೀರುತ್ತದೆ.ಇದು,ಭವಿಷ್ಯದಲ್ಲಿ ಆ ಭಾಗದಲ್ಲಿ ಮಾನವ-ವನ್ಯಜೀವಿ ಸಂಘರ್ಘವನ್ನು ಹೆಚ್ಚಿಸುವ ಅಪಾಯವನ್ನೂ ತಳ್ಳಿಹಾಕುವಂತಿಲ್ಲ.

ಈಗಾಗಲೇ ಶೃಂಗೇರಿ ಕ್ಷೇತ್ರದಲ್ಲಿ ಕಳೆದ ಒಂದೂವರೆ ವರ್ಷದಲ್ಲಿ,ಆನೆ ದಾಳಿಯಿಂದ 12ಕ್ಕೂ ಹೆಚ್ಚು ಜನ ಪ್ರಾಣ ಕಳೆದುಕೊಂಡಿದ್ದಾರೆ ಹಾಗೂ ಕಾಡುಕೋಣ ದಾಳಿಯಿಂದ ಹಲವು ಜೀವಹಾನಿಯಾಗಿದೆ,ಗಾಯಗಳಾಗಿದೆ.ಹಾಗಾಗಿ, ಸ್ಥಳೀಯ ಜನರ ಭವಿಷ್ಯದ ಸುರಕ್ಷತೆ ಮತ್ತು ವನ್ಯಜೀವಿಗಳ ನೆಮ್ಮದಿಗೆ ಆಗಬಹುದಾದ ಧಕ್ಕೆಯ ಹಿನ್ನೆಲೆಯಲ್ಲಿ ಈ ಅನಧಿಕೃತ ಆಫ್ ರೋಡಿಂಗ್ ಕಾರ್ಯಕ್ರಮಕ್ಕೆ ಜಿಲ್ಲಾಡಳಿತ ನಿಷೇಧ ಹೇರಬೇಕಾದುದು ಅತೀ ಅಗತ್ಯ.

ಇನ್ನೊಂದು ಕಡೆ, ಆಗಸ್ಟ್ 15 ಮತ್ತು 16 ರಂದು Kudremukh Off-road adventure ಎಂಬ ಚಟುವಟಿಕೆ ಆಯೋಜಿಸಿದ್ದಾರೆ.ಇದು ಬೆಂಗಳೂರಿನ ನೆಲಮಂಗಲದಿಂದ,ಚಿಕ್ಕಮಗಳೂರು ಜಿಲ್ಲೆ ಕುದುರೆಮುಖದವರೆಗಿನ ಪ್ರಯಾಣವಂತೆ.
ಜೀಪುಗಳು ಕಡಿದಾದ ರಸ್ತೆಗಳಲ್ಲಿ,ಹಳ್ಳಕೊಳ್ಳಗಳಲ್ಲಿ, ಕಣಿವೆಗಳಲ್ಲಿ ಭಾರೀ ಶಬ್ದ ಮಾಡುತ್ತಾ ಓಡಾಡುವುದು ಸೂಕ್ಷ್ಮ ಪರಿಸರಕ್ಕೆ ಧಕ್ಕೆತರುತ್ತದೆ.ಹಳ್ಳಿಗಳ ರಸ್ತೆಗಳು ಹಾಳಾಗುತ್ತದೆ.ಕುದುರೆಮುಖ ರಾಷ್ಟ್ರೀಯ ಉದ್ಯಾನವನ ಮತ್ತು ಅದರ ಪರಿಸರ ಸೂಕ್ಷ್ಮ ಪ್ರದೇಶದಲ್ಲಿ ಆಫ್ ರೋಡಿಂಗ್ ಹೆಸರಿನಲ್ಲಿ ಗದ್ದಲ ಎಬ್ಬಿಸಲು ಯಾವುದೇ ಕಾರಣಕ್ಕೂ ಅವಕಾಶ ನೀಡಬಾರದು.

ಈ ಆಫ್ ರೋಡಿಂಗ್ ಚಟುವಟಿಕೆಗಳಿಂದ ಸಮಾಜಕ್ಕೆ ಯಾವುದೇ ಉಪಯೋಗವಿಲ್ಲ.ಇಲ್ಲಿ ಹಣವಂತರ ಪಾರ್ಟಿ, ಮೋಜು,ಮಸ್ತಿಗಳು ಸಾಕಷ್ಟು ತ್ಯಾಜ್ಯವನ್ನು ಸೃಷ್ಟಿಸುತ್ತವೆ. ಪ್ಲಾಸ್ಟಿಕ್,ಆಹಾರ ತ್ಯಾಜ್ಯ,ಮದ್ಯದ ಬಾಟಲಿಗಳು ಕಾಡಂಚಿನ ಪ್ರದೇಶಗಳನ್ನು ಹಾಗೂ ಅಲ್ಲಿನ ಮಣ್ಣು ಮತ್ತು ನೀರಿನ ಮೂಲಗಳನ್ನು ಮಲಿನಗೊಳಿಸುತ್ತದೆ.ಅದರ ದುಷ್ಪರಿಣಾಮಗಳನ್ನು ವನ್ಯಜೀವಿಗಳು ಮತ್ತು ಸ್ಥಳೀಯ ಜನರು ಅನುಭವಿಸಬೇಕಾಗುತ್ತದೆ.ಈ ಎಲ್ಲಾ ಕಾರಣಗಳಿಂದ,ಆಫ್ ರೋಡಿಂಗ್ ಚಟುವಟಿಕೆಗಳಿಗೆ ನಿರ್ಬಂಧ ಹೇರಬೇಕಾದುದು ಅತೀ ಅಗತ್ಯ
ಸರ್ಕಾರ ಪಶ್ಚಿಮ ಘಟ್ಟದ ಸೂಕ್ಷ್ಮ ಪ್ರದೇಶಗಳಲ್ಲಿ ಆಫ್ ರೋಡಿಂಗ್ ಚಟುವಟಿಕೆ ಸಂಪೂರ್ಣ ನಿಷೇಧಿಸಬೇಕು. ಅನಧಿಕೃತವಾಗಿ ಆಫ್ ರೋಡಿಂಗ್ ಪ್ರಚಾರ ನಡೆಸುವ ವ್ಯಕ್ತಿಗಳು,ಕ್ಲಬ್ ಗಳು,ರೆಸಾರ್ಟ್ ಗಳ ಮೇಲೆ ಪ್ರಕರಣ ದಾಖಲಿಸಬೇಕು.ನೈಟ್ ಸಫಾರಿ ನಡೆಸುವವರ ಮೇಲೆ ಕಠಿಣ ಕಾನೂನು ಕ್ರಮ ಜರುಗಿಸಬೇಕು.
✍🏻ಬರಹ ಕೃಪೆ.✍🏻

ನಾಗರಾಜ್ ಕೂವೆ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

