ರಾಜ್ಯದ ಆನೆ ಕಾರಿಡಾರ್‌ಗಳ ಮರುಸ್ಥಾಪನೆಗೆ ನ್ಯಾಯಾಲಯ ಮಧ್ಯಪ್ರವೇಶಿಸಲಿ: ನಾಗೇಶ್ ಅಂಗಿರಸ ಆಗ್ರಹ….
1 min read
ರಾಜ್ಯದ ಆನೆ ಕಾರಿಡಾರ್‌ಗಳ ಮರುಸ್ಥಾಪನೆಗೆ ನ್ಯಾಯಾಲಯ ಮಧ್ಯಪ್ರವೇಶಿಸಲಿ: ನಾಗೇಶ್ ಅಂಗಿರಸ ಆಗ್ರಹ
ಚಿಕ್ಕಮಗಳೂರು: ರಾಜ್ಯದ ಅಳಿದುಳಿದ ಅರಣ್ಯ ಸಂಪತ್ತು ಮತ್ತು ವನ್ಯಜೀವಿಗಳ ಸಂರಕ್ಷಣೆಯ ದೃಷ್ಟಿಯಿಂದ ಆನೆಗಳ ಪಾರಂಪರಿಕ ಸಂಚಾರ ಮಾರ್ಗಗಳನ್ನು ಗುರುತಿಸಿ, ಆನೆ ಕಾರಿಡಾರ್‌ಗಳನ್ನು ಮರುಸ್ಥಾಪಿಸಬೇಕು. ಈ ಸಂಬಂಧ ಈ ಹಿಂದೆ ಸಿದ್ಧಪಡಿಸಿರುವ ವೈಜ್ಞಾನಿಕ ವರದಿಯನ್ನು ಜಾರಿಗೊಳಿಸಲು ಘನ ನ್ಯಾಯಾಲಯ ಮಧ್ಯಪ್ರವೇಶಿಸಬೇಕು ಎಂದು ಪ್ರಜಾಪ್ರಭುತ್ವ ಉಳಿಸಿ ಆಂದೋಲನ ವೇದಿಕೆ (ಎಸ್‌ಡಿಎಫ್) ಕಾರ್ಯಕರ್ತ ನಾಗೇಶ್ ಅಂಗಿರಸ ಆಗ್ರಹಿಸಿದರು.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಬುಧವಾರ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದ ಅರಣ್ಯ ಪ್ರದೇಶಗಳು ಹಾಗೂ ವನ್ಯಜೀವಿ ಸಂಪತ್ತು ಅಕ್ರಮ ಚಟುವಟಿಕೆಗಳು ಮತ್ತು ವಿವಿಧ ಮಾಫಿಯಾಗಳ ಹಿಡಿತಕ್ಕೆ ಸಿಲುಕಿ ನಲುಗುತ್ತಿವೆ. ಅರಣ್ಯ ಇಲಾಖೆ ಹಾಗೂ ವನ್ಯಜೀವಿ ಮಂಡಳಿ ಇಂತಹ ಬೆಳವಣಿಗೆಗಳನ್ನು ತಡೆಯುವಲ್ಲಿ ನಿರೀಕ್ಷಿತ ಕ್ರಮ ಕೈಗೊಳ್ಳುತ್ತಿಲ್ಲ ಎಂದು ಆರೋಪಿಸಿದರು.
ಪಶ್ಚಿಮ ಘಟ್ಟಗಳ ಸಂರಕ್ಷಣೆಗೆ ಸಂಬಂಧಿಸಿದ ಮಾಧವ ಗಾಡೀಳ್ ವರದಿಯ ಆಶಯಗಳನ್ನು ದುರ್ಬಲಗೊಳಿಸುವ ಪ್ರಯತ್ನಗಳು ನಡೆದಿವೆ. ಜನರಿಗೆ ತಪ್ಪು ಮಾಹಿತಿ ನೀಡಿ ಬೀದಿಗಿಳಿಸುವ ಮೂಲಕ ಪರಿಸರ ಸಂರಕ್ಷಣೆಯ ಮಹತ್ವದ ಉದ್ದೇಶಕ್ಕೆ ಧಕ್ಕೆಯಾಗಿದೆ ಎಂದು ಅಭಿಪ್ರಾಯಪಟ್ಟರು.
ಹಿಂದೆ ಹೈಕೋರ್ಟ್ ಆದೇಶದ ಹಿನ್ನೆಲೆಯಲ್ಲಿ ಆನೆಗಳ ಮುಕ್ತ ಸಂಚಾರಕ್ಕೆ ಅನುಕೂಲವಾಗುವಂತೆ “ ಅವುಗಳ ಸಾಂಪ್ರದಾಯಿಕ ಓಡಾಟದ ಮಾರ್ಗಗಳನ್ನು ಗುರುತಿಸಿ, ಆನೆ ಕಾರಿಡಾರ್‌ಗಳ ಕುರಿತು ವೈಜ್ಞಾನಿಕ ವರದಿ ಸಿದ್ಧಪಡಿಸಲಾಗಿದೆ. ಆದರೆ ಈ ವರದಿ ಅರಣ್ಯ ಇಲಾಖೆಯ ಕಡತದಲ್ಲೇ ಉಳಿದಿದ್ದು, ಅನುಷ್ಠಾನಕ್ಕೆ ಬಂದಿಲ್ಲ ಎಂದು ಆರೋಪಿಸಿದರು.
ನ್ಯಾಯಾಲಯ ಮಧ್ಯಪ್ರವೇಶಿಸಿ, ಜಿಪಿಎಸ್ ನಕ್ಷೆ ಸೇರಿದಂತೆ ವೈಜ್ಞಾನಿಕ ದಾಖಲೆಗಳನ್ನು ಒಳಗೊಂಡ ವರದಿಯನ್ನು ಜಾರಿಗೊಳಿಸಲು ಸರ್ಕಾರಕ್ಕೆ ಸೂಕ್ತ ನಿರ್ದೇಶನ ನೀಡಬೇಕು.



ರಾಜ್ಯದ ಎಲ್ಲ ಆನೆ ಕಾರಿಡಾರ್‌ಗಳ ಭೌಗೋಳಿಕ ನಕ್ಷೆ ಮತ್ತು ಸಂಬಂಧಿತ ಅಂಕಿ-ಅಂಶಗಳನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು. ಆ ಮೂಲಕ ಆನೆಗಳ ಪಾರಂಪರಿಕ ಸಂಚಾರ ಮಾರ್ಗಗಳನ್ನು ಮರುಸ್ಥಾಪಿಸಿ, ಮಾನವ-ವನ್ಯಜೀವಿ ಸಂಘರ್ಷಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮ ಕೈಗೊಳ್ಳಬೇಕು ಎಂದು ಮನವಿ ಮಾಡಿದರು.

