“ಓದುವ ದೇಶ,ಓಡುವ ದೇಶ’ ಆಶಯದೊಂದಿಗೆ ಪುಸ್ತಕ ಹಸ್ತಾಂತರ.”
1 min read
ಚಿಕ್ಕಮಗಳೂರು: ‘ಓದುವ ದೇಶ ಓಡುವ ದೇಶ, ಓಡುವ ದೇಶ ಓದುವ ದೇಶ’ ಎಂಬ ಆಶಯದಡಿ ಕುಂಭಕ ಸಾಂಸ್ಕೃತಿಕ ಪ್ರತಿಷ್ಠಾನ (ಕುಂದೂರು ಭದ್ರಮ್ಮ ಕಲ್ಲೇಗೌಡ ಸಾಂಸ್ಕೃತಿಕ ಪ್ರತಿಷ್ಠಾನ) ಹಾಗೂ ಕರ್ನಾಟಕ ವಿಕಾಸ ರಂಗ, ಚಿಕ್ಕಮಗಳೂರು ಇವರ ಆಶ್ರಯದಲ್ಲಿ ಪುಸ್ತಕ ಹಸ್ತಾಂತರ ಕಾರ್ಯಕ್ರಮ ನಡೆಯಿತು.
ಪ್ರತಿವರ್ಷ ಗೃಹ ಗ್ರಂಥಾಲಯದಲ್ಲಿರುವ ಪುಸ್ತಕಗಳ ಪೈಕಿ ಸುಮಾರು 40ರಿಂದ 50 ಪುಸ್ತಕಗಳನ್ನು ಶಾಲಾ-ಕಾಲೇಜುಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳಿಗೆ ನೀಡಲಾಗುತ್ತಿತ್ತು. ಆದರೆ, ಈ ಬಾರಿ ವಿಭಿನ್ನವಾಗಿ ಚಿಂತನೆ ನಡೆಸಿ, ಪ್ರತಿನಿತ್ಯ ಹತ್ತಾರು ಮಂದಿ ಬಂದು ಕನಿಷ್ಠ ಅರ್ಧ ಗಂಟೆ ಕಾಲ ಕಳೆಯುವ ಹೇರ್ ಕಟಿಂಗ್ ಸಲೂನ್ಗೂ ಪುಸ್ತಕಗಳನ್ನು ನೀಡುವ ಮೂಲಕ ಓದುವ ಸಂಸ್ಕೃತಿಯನ್ನು ಬೆಳೆಸುವ ಪ್ರಯತ್ನ ಮಾಡಲಾಗಿದೆ.
ಈ ಹಿನ್ನೆಲೆಯಲ್ಲಿ ಚಿಕ್ಕಮಗಳೂರು ತಾಲ್ಲೂಕಿನ ಚಿಕ್ಕಗೌಜ ಗ್ರಾಮದ ದರ್ಶನ್ ಅವರ ಡಿ.ಡಿ.ಸಲೂನ್ಗೆ ಪುಸ್ತಕಗಳನ್ನು ಹಸ್ತಾಂತರಿಸಲಾಯಿತು.
ಕಾರ್ಯಕ್ರಮದ ಕುರಿತು ಮಾತನಾಡಿದ ಕುಂದೂರು ಅಶೋಕ್,“ಸಲೂನ್ಗೆ ಬರುವವರು ತಮ್ಮ ಸಮಯವನ್ನು ವ್ಯರ್ಥ ಮಾಡದೆ,ಸ್ವಲ್ಪ ಹೊತ್ತು ಪುಸ್ತಕ ಓದಿ ಜ್ಞಾನಾಭಿರುಚಿ ಬೆಳೆಸಿಕೊಳ್ಳಲಿ ಎಂಬ ಉದ್ದೇಶದಿಂದ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ನನ್ನ ಹಳೆಯ ವಿದ್ಯಾರ್ಥಿ ರಾಕೇಶ್ ಕಳುಹಿಸಿದ ಛಾಯಾಚಿತ್ರಗಳನ್ನು ಗಮನಿಸಿದಾಗ, ಸಲೂನ್ಗೆ ಬಂದವರು ಪುಸ್ತಕ ಹಿಡಿದು ಓದುವ ಆಸಕ್ತಿ ತೋರಿರುವುದು ಕಂಡುಬಂದಿದೆ.ಇದರಿಂದ ಕಾರ್ಯಕ್ರಮ ಸಾರ್ಥಕವಾಗಿದೆ ಎಂಬ ಆತ್ಮತೃಪ್ತಿ ದೊರೆತಿದೆ,”ಎಂದರು.

“ತಲೆಬಾಗಿ ಪುಸ್ತಕ ಓದಿದರೆ,ಮುಂದೊಂದು ದಿನ ತಲೆ ಎತ್ತಿ ಬದುಕಲು ಸಾಧ್ಯ.ತಲೆ ಎತ್ತುವುದು ಮತ್ತು ತಲೆಬಾಗುವುದು ಸ್ವಾಭಿಮಾನದ ಸಂಕೇತವಾಗಿದ್ದು,ಪುಸ್ತಕ ಪ್ರೀತಿ ಹಾಗೂ ಓದುವ ಸಂಸ್ಕಾರವನ್ನು ಬೆಳೆಸುವಲ್ಲಿ ಇಂತಹ ಪ್ರಯತ್ನಗಳು ಮಹತ್ವದ್ದಾಗಿವೆ,” ಎಂದು ಅವರು ಅಭಿಪ್ರಾಯಪಟ್ಟರು.
ಯಾವುದೇ ದೇಶ ಅಭಿವೃದ್ಧಿಯತ್ತ ಸಾಗಬೇಕಾದರೆ ಅಲ್ಲಿನ ಸಾಕ್ಷರತೆ ಹಾಗೂ ಓದುವ ಸಂಸ್ಕೃತಿ ಪ್ರಮುಖ ಪಾತ್ರ ವಹಿಸುತ್ತದೆ. ಓದುವ ಅಭ್ಯಾಸದಿಂದ ಜ್ಞಾನ, ಕೌಶಲ್ಯ ಹಾಗೂ ಶಿಕ್ಷಣದ ಮಟ್ಟ ಹೆಚ್ಚುತ್ತದೆ. ಇದರಿಂದ ದೇಶದ ಆರ್ಥಿಕ ಮತ್ತು ಸಾಮಾಜಿಕ ಅಭಿವೃದ್ಧಿಗೂ ಸಹಕಾರಿಯಾಗುತ್ತದೆ.
ಅಮೆರಿಕಾ, ಇಂಗ್ಲೆಂಡ್, ಫ್ರಾನ್ಸ್, ಜಪಾನ್ ಹಾಗೂ ಜರ್ಮನಿಯಂತಹ ರಾಷ್ಟ್ರಗಳು ವಿವಿಧ ಕ್ಷೇತ್ರಗಳಲ್ಲಿ ಅಭಿವೃದ್ಧಿ ಹೊಂದಿ ವಿಶ್ವದ ಮುಂಚೂಣಿಯಲ್ಲಿವೆ. ಓದು ಮತ್ತು ಅಭಿವೃದ್ಧಿಯ ನಡುವೆ ನಿಕಟ ಸಂಬಂಧವಿದ್ದು, **“Reading nations are leading nations; leading nations are reading nations”** ಎಂಬ ಮಾತು ಇದನ್ನೇ ಪ್ರತಿಬಿಂಬಿಸುತ್ತದೆ ಎಂದು ಕುಂದೂರು ಅಶೋಕ್ ಹೇಳಿದರು.
ಎಲ್ಲಿ ಲಕ್ಷ್ಮೀ ಒಲಿಯುತ್ತಾಳೋ,ಅಲ್ಲಿ ಸರಸ್ವತಿ ನೆಲೆಸುತ್ತಾಳೆ,ಸರಸ್ವತಿ ಒಲಿದರೆ ಲಕ್ಷ್ಮೀ ಒಲಿಯುತ್ತಾಳೆ ಎಂಬ ಆಶಯದೊಂದಿಗೆ ಓದುವ ಸಂಸ್ಕೃತಿಯನ್ನು ಪ್ರತಿಯೊಬ್ಬರೂ ಬೆಳೆಸಿಕೊಳ್ಳಬೇಕು ಎಂದು ಅವರು ಕರೆ ನೀಡಿದರು.
✍ಬರಹ ಕೃಪೆ.✍

ಕುಂದೂರು ಅಶೋಕ್.
ಸಾಹಿತಿಗಳು.ಚಿಕ್ಕಮಗಳೂರು.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ನ್ಯೂಸ್ ಬ್ಯೂರೋ,ಅವಿನ್ ಟಿವಿ.

