“ಕಾಫಿ….ರೈತರಿಗೆ ಸಿಹಿಯೋ.? ಅಥವಾ ಕಹಿಯೋ.? ಯಾರಿಗೆ ಲಾಭ..ಯಾರಿಗೆ ನಷ್ಟ..???”
1 min read
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿ ಬೆಲೆ ಗಗನಕ್ಕೇರುತ್ತಿದೆ, ಆದರೆ ಕ್ಯೂರರ್ಸ್, ಟ್ರೇಡರ್ಸ್ ಬೆಲೆ ನೀಡುತ್ತಿಲ್ಲ ಎಂದು ಮೈ ಪರಚಿಕೊಳ್ಳುತ್ತಿರುವ ನಾವು ವರ್ಷವೆಲ್ಲ ಕಷ್ಟಪಟ್ಟು ಬೆಳೆಯುತ್ತೇವೆ. ಆದರೆ ಮಾರಾಟ ಮಾಡುವಾಗ ನಮಗೆ ಸಮಯವಿರುವುದಿಲ್ಲ, ತುಂಬಾ ಬ್ಯುಸಿಯಾಗುತ್ತೇವೆ. ಕ್ಯೂರಿಂಗ್ ಗೆ ಕಳುಹಿಸಿದ ಕಾಫಿ ಗುಣಮಟ್ಟ ಪರೀಕ್ಷಿಸುವ ತನಕ ಕಾಯುವುದಿಲ್ಲ.ಆಮೇಲೆ OT ಎಲ್ಲಾ ಚೆಕ್ ಮಾಡಿ ವಾಟ್ಸಪ್ಪ್ ಮಾಡು ಎಂದು ಅವರಿಗೆ ಹೇಳುತ್ತೇವೆ.

ಯಾರಾದರೂ ಈ ಕ್ಯೂರಿಂಗ್ ನಲ್ಲಿ ಗುಣಮಟ್ಟ ಪರಿಶೀಲನೆ ಸರಿಯಿಲ್ಲ ಎಂದು ನಮ್ಮ ಕಾಫಿ ವಾಪಾಸ್ ತಂದ ಉದಾಹರಣೆ ಇದಿಯೇ..? ಖಂಡಿತ ಇಲ್ಲಾ.
ನಾವುಗಳು ನಮ್ಮ ಕಣದಿಂದ ಕಾಫಿ ಮಾರಾಟ ಮಾಡುವ ವ್ಯವಸ್ಥೆಗೆ ಬರಬೇಕು. ಯಾವ ಕಂಡೀಷನ್ ಇದ್ದರೂ ಅದು ನಮ್ಮ ಕಣದಲ್ಲೇ ಇರಬೇಕು. ಗುಣಮಟ್ಟ ಪರೀಕ್ಷಿಸುವ ಎಲ್ಲಾ ಸಾಧನಗಳನ್ನು ನಮ್ಮ ಕಣಕ್ಕೆ ತರುವಂತಾಗಬೇಕು. ಹಣ ನಮ್ಮ ಖಾತೆಗೆ ಜಮಾ ಮಾಡಿ ಕಾಫಿ ತೆಗೆದುಕೊಂಡು ಹೋಗುವಂತಾಗಬೇಕು.ಕಾಫಿ ಮಾರಾಟ ಮಾಡಿ, ವಾರಗಟ್ಟಲೆ ಹಣಕ್ಕೆ ಕಾಯುವ ಪರಿಸ್ಥಿತಿಯಲ್ಲಿ ನಾವಿದ್ದೇವೆ.ಟ್ರೇಡರ್ಗಳಿಂದ ನಾವು ಪಡೆಯುವ ಸಾಲದ ಹಣಕ್ಕೆ ಎಲ್ಲಾ ದಾಖಲೆಗಳನ್ನು ಪಡೆಯುವ ಟ್ರೇಡರ್ ಗಳು ಅವರ ಬಳಿ , ನಾವು ಇಡುವ ಕಾಫಿಗೆ ಯಾವ ದಾಖಲೆ ನೀಡುತ್ತಾರೆ…? ಜುಟ್ಟು, ಜನಿವಾರ ಎಲ್ಲವನ್ನೂ ಅವರ ಕೈಗಿಟ್ಟು ಪರಿತಪಿಸುತ್ತೇವೆ.ಅನೇಕ ಬೆಳೆಗಾರರು ನಂಬಿ ಮೋಸಹೋಗಿ ಬೀದಿಗೆ ಬಂದ ಉದಾಹರಣೆಗಳು ನಮ್ಮ ಮುಂದಿವೆ.
ಕಾಫಿ ಬೆಳೆಯುವವರು ಎಷ್ಟು ಕಷ್ಟಪಡುತ್ತಿದ್ದಾರೋ, ಕಾಫಿ ಕುಡಿಯುವವರು ಬೆಲೆ ಹೆಚ್ಚಳಕ್ಕೆ ಪರಿತಪಿಸುತ್ತಿದ್ದಾರೆ, ಆದರೆ ಅದರ ಮದ್ಯದಲ್ಲಿ ಇರುವವರಿಗೆ ನಷ್ಟಕ್ಕಿಂತ ಲಾಭವೇ ಹೆಚ್ಚು.

*ಕಾರು ಕೊಳ್ಳುವುದಕ್ಕೆ ಆತುರ ಬೇಡ*.
ನಮ್ಮ ಬೆಳೆಗಾರರಿಗೆ ಒಂದಿಷ್ಟು ಪುಡಿಗಾಸು ಆದರೆ ಸಾಕು ನಮ್ಮ ಮೊದಲ ಆದ್ಯತೆ ಕಾರು ಕೊಳ್ಳುವುದು, (ಕಾರು ಯಾವಾಗ ಬೇಕಾದರೂ ಕೊಳ್ಳಬಹುದು.)ಇಲ್ಲಾ ಮನೆ ಕಟ್ಟುವುದು, ಹಾಸಿಕೆ ಇದ್ದಷ್ಟು ಕಾಲು ಚಾಚುವುದಿಲ್ಲ, ಏನೋ ಮಾಡಲು ಹೋಗಿ ಸಾಲದ ಸುಳಿಗೆ ಸಿಲುಕುತ್ತೇವೆ.(ಒಂದಷ್ಟು ಬೆಳೆಗಾರರು ಪ್ರಕೃತಿ ವಿಕೋಪ, ನೈಜ ಸಮಸ್ಯೆಗಳಿಂದ ಆರ್ಥಿಕ ಸಂಕಷ್ಟಕ್ಕೆ ಸಿಲುಕುವುದು ಉಂಟು,ಇಲ್ಲಾ ಎನ್ನಲಾಗುವುದಿಲ್ಲ)ಸಾಲ ಮಾಡಿದ್ದೇವೆಂದು ಹೇಳಲು ಹಿಂಜರಿಕೆ, ಮರ್ಯಾದೆ ಪ್ರಶ್ನೆ. ಆಸ್ತಿ ಹರಾಜಿಗೆ ಬಂದಾಗ ಬೆಳೆಗಾರ ಸಂಘಟನೆಗಳು, ಕಾಫೀಮಂಡಳಿ ಅಧ್ಯಕ್ಷರು ನೆನಪಿಗೆ ಬರುತ್ತಾರೆ. ಅಲ್ಲಿಯವರೆಗೆ ಬೆಳೆಗಾರನಾಗಿ ಸಂಘಟನೆಗೆ ನನ್ನ ಕೊಡುಗೆ ಏನು.. ಎಂದು ಯೋಚಿಸುವುದಿಲ್ಲ. ಕೇವಲ ವಾಟ್ಸಪ್ಪ್ ನಲ್ಲಿ ಪ್ರಶ್ನೆ ಕೇಳಿ, ವಾಟ್ಸಪ್ಪ್ ನಲ್ಲಿ ಉತ್ತರ ಹುಡುಕಲು ಸಾಧ್ಯವಿಲ್ಲ.
ಬೆಳೆಗಾರರೇ, ನಾವು ಮೊದಲು ಮಾಡಬೇಕಾದದ್ದು ಕಾಫಿ ಒಣಗಿಸಲು ಸಿಮೆಂಟ್ ಕಣ, ಕಾಫಿ ದಾಸ್ತಾನು ಇಡಲು ಅವಶ್ಯಕತೆಗೆ ತಕ್ಕಷ್ಟು ಗೋಡೌನ್ ನಿರ್ಮಾಣ, ಸ್ವಂತ ಪಲ್ಪರ್ ನಿರ್ಮಾಣ, ಕೂಲಿ ಲೈನ್ ಇವುಗಳಿಗೆ ಮೊದಲ ಆದ್ಯತೆ ನೀಡಿ.ಇವಿಷ್ಟು ಮಾಡಿ ನಮ್ಮ ಕಾಫೀಯಲ್ಲಿ ಗುಣಮಟ್ಟ ಕಾಯ್ದುಕೊಂಡಿದ್ದೇ ಆದಲ್ಲಿ ಭಾರತದ ಕಾಫಿ ವಿಶ್ವದಲ್ಲೇ ನಂ 01ಕಾಫಿ ಆಗುವುದರಲ್ಲಿ ಯಾವುದೇ ಅನುಮಾನವಿಲ್ಲ.
ಯಾವುದೇ ಕಾರಣಕ್ಕೂ ನಿಮ್ಮ ಕಾಫೀಯನ್ನು ಕ್ಯೂರಿಂಗ್ ಗೆ ಹಾಕಬೇಡಿ, ಮನೆಯಲ್ಲೇ ಇಟ್ಟುಕೊಳ್ಳಿ. ಮಾರಾಟ ಮಾಡುವ ಸಂಧರ್ಭದಲ್ಲಿ ನಿಮ್ಮ ಕಾಫಿಯ ಗುಣಮಟ್ಟಕ್ಕೆ ಯೋಗ್ಯ ಬೆಲೆ ನೀಡುವ ವ್ಯಾಪಾರಸ್ತರಿಗೆ ನಿಮ್ಮ ಕಾಫಿ ಮಾರಾಟ ಮಾಡಿ.

ಪ್ರಸಕ್ತ 80%ಬೆಳೆಗಾರರು ಯಾರು ಕಾಫಿ ಮಾರಾಟ ಮಾಡಿಲ್ಲ. ಕಾಫಿ ದಾಸ್ತಾನು ಇದ್ದಷ್ಟು ಬೆಲೆ ಏರಿಕೆ ಸಾಧ್ಯವಿಲ್ಲ.
ಟ್ರೇಡರ್ಸ್, ಕ್ಯೂರರ್ಸ್ ಹಿಡಿತದಲ್ಲಿ ನಾವು ಬೆಳೆಗಾರರಿದ್ದೇವೆ. ನಮ್ಮ ಹಿಡಿತದಲ್ಲಿ ಟ್ರೇಡರ್ಸ್, ಕ್ಯೂರರ್ಸ್ ಗಳು ಇರುವಂತೆ ಬದಲಾವಣೆ ತರಬೇಕಾಗಿದೆ.
ಮುಂಬರುವ ಎಲ್ಲಾ ದಿನಗಳು ಕಾಫೀಬೆಳೆಗಾರರಿಗೆ ಸವಾಲಿನ ದಿನಗಳು, ಆ ದಿನಗಳನ್ನು ಎದುರಿಸಲು ಈಗಿನಿಂದಲೇ ಸಜ್ಜಾಗಿ. ಎಲ್ಲಾ ಸಮಸ್ಯೆಗಳಿಗೂ ಪರಿಹಾರವಿದೆ.
ಆತ್ಮವಿಶ್ವಾಸದಿಂದ ಎಲ್ಲವನ್ನೂ ಎದುರಿಸೋಣ…. 🙏
✍🏻ಬರಹ ಕೃಪೆ.✍🏻

ಕೆರೆಮಕ್ಕಿ ಮಹೇಶ್.
ಜಿಲ್ಲಾ ಪ್ರಧಾನ ಕಾರ್ಯದರ್ಶಿ.
ಚಿಕ್ಕಮಗಳೂರು ಜಿಲ್ಲಾ ಬೆಳೆಗಾರರ ಸಂಘ(ರಿ ).
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ಬ್ಯೂರೋ ನ್ಯೂಸ್,ಅವಿನ್ ಟಿವಿ.

