AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

“ಡೇ ಕೇರ್……..ಮುದ್ದು ಕಂದಮ್ಮಗಳ ಹೊಣೆ  ಕೆಲಸಗಾರರದ್ದೋ, ನಮ್ಮದೋ.????”

1 min read

ಬೆಂಗಳೂರಿನಲ್ಲಿ ಪುಟ್ಟ ಮಕ್ಕಳನ್ನು ಆರೈಕೆ ಮಾಡುವ ಡೇಕೇರ್ ಎಂಬ ಪರಿಕಲ್ಪನೆಯ ಕೆಲವು ಕೇಂದ್ರಗಳಲ್ಲಿ ಮಕ್ಕಳನ್ನು ಅತ್ಯಂತ ನಿಕೃಷ್ಟವಾಗಿ, ಕ್ರೂರವಾಗಿ, ಹಿಂಸಾತ್ಮಕವಾಗಿ, ಹೆದರಿಸುವುದು, ಬೆದರಿಸುವುದು, ವಾಷಿಂಗ್ ಮೆಷೀನಿನಲ್ಲಿ ಹಾಕಿರುವುದು, ಕೆಲವು ಕಡೆ ಬೆಂಕಿ ತೋರಿಸುವುದು, ಮತ್ತೆ ಕೆಲವು ಸಂದರ್ಭಗಳಲ್ಲಿ ನಿದ್ರೆ ಮಾತ್ರೆ ಹಾಕಿ ಮಕ್ಕಳನ್ನು ಮಲಗಿಸುವುದು ಹೀಗೆ ನಾನಾ ರೀತಿಯ ಹೇಯ ಚಟುವಟಿಕೆಗಳು ನಡೆಯುತ್ತಿರುವ ಬಗ್ಗೆ ಆಗಾಗ ವರದಿಯಾಗುತ್ತಲೇ ಇರುತ್ತದೆ. ಇದೀಗ ಸುದ್ದಿಯಾಗುತ್ತಿರುವುದು ಅಂತಹ ಒಂದು ಕೃತ್ಯವಷ್ಟೇ.

ಪುಟ್ಟ ಮಕ್ಕಳು ಬಹುತೇಕ ಮೂಕ ಪ್ರಾಣಿಗಳಂತೆ. ಅವುಗಳಿಗೆ ಏನು ನಡೆಯುತ್ತದೆ ಎಂಬುದು ಅಷ್ಟಾಗಿ ಅರಿವಾಗುವುದಿಲ್ಲ, ಹೇಳಿಕೊಳ್ಳಲು ಬರುವುದಿಲ್ಲ. ಆದ್ದರಿಂದ ಚಿಕ್ಕ ಮಕ್ಕಳನ್ನು ನೋಡಿಕೊಳ್ಳಲು ನೇಮಿಸಿಕೊಳ್ಳುವ ಕೆಲವೇ ಕೆಲವು ದುಷ್ಟರು ಈ ರೀತಿ ಮಾಡುವುದು ಆಗಾಗ ಬಯಲಾಗುತ್ತಿದೆ. ಇತ್ತೀಚೆಗೆ ಒಬ್ಬ ಹೆಂಗಸು ತಾನು ಆರೈಕೆ ಮಾಡುತ್ತಿದ್ದ ನಾಯಿಮರಿಯನ್ನು ಸಹ ಮಾಲೀಕರಿಗೆ ಗೊತ್ತಾಗದಂತೆ ನೆಲಕ್ಕೆ ಬಡಿದು ಕೊಂದಿದ್ದು ಸಿಸಿಟಿವಿ ದೃಶ್ಯಾವಳಿಯಲ್ಲಿ ದಾಖಲಾಗಿ ಎಲ್ಲಾ ಕಡೆ ವೈರಲ್ ಆಗಿತ್ತು.

 

ಹೀಗೆ ಆಗಾಗ ಕೆಲವು ಈ ರೀತಿಯ ಘಟನೆಗಳು ವರದಿಯಾಗುತ್ತದೆ. ವೇಗ, ಸ್ಪರ್ಧೆ, ದುರಾಸೆ, ಜನಸಂಖ್ಯೆ ಒತ್ತಡ, ಕೆಲಸ ಕಾರ್ಯದ ಒತ್ತಡದ ಪರಿಣಾಮ ಇವುಗಳು ಅತ್ಯಂತ ಸಹಜವಾಗಿ ನಡೆಯುತ್ತಿದೆ. ಇದು ತಪ್ಪು ಮತ್ತು ಆರೋಪಿಗಳಿಗೆ ಶಿಕ್ಷೆಯಾಗಬೇಕು ಎಂಬುದು ಒಂದು ವಾದ. ಅದಕ್ಕೆ ಸಹಮತವನ್ನು ವ್ಯಕ್ತಪಡಿಸುತ್ತಾ….

ಇನ್ನೊಂದು ವಾದವೂ ಇದೆ. ಅದನ್ನು ಆತ್ಮಸಾಕ್ಷಿಗೆ ಅನುಗುಣವಾಗಿ ಅವಲೋಕನ ಮಾಡಿಕೊಳ್ಳೊಣ.ಎಷ್ಟೋ ಬಾರಿ ನಮ್ಮ ಮನೆಯಲ್ಲೇ ನಮ್ಮ ಮಕ್ಕಳನ್ನೇ ನಾವು ನೋಡಿಕೊಳ್ಳುವುದು ತುಂಬಾ ಕಷ್ಟವಾಗುತ್ತದೆ, ಕೋಪ ಬರುತ್ತದೆ, ಮಾನಸಿಕ ದೈಹಿಕ ಹಿಂಸೆಯಾಗುತ್ತದೆ, ಕೆಲವು ತುಂಟ ಮಕ್ಕಳಿದ್ದರಂತೂ ತುಂಬಾ ತುಂಬಾ ಕಷ್ಟ. ಎಷ್ಟೋ ತಾಯಂದಿರು ಮಕ್ಕಳನ್ನು ಸಾಕುವಾಗ ಅತಿಯಾದ ಬಿಪಿ ಖಾಯಿಲೆಗೆ ತುತ್ತಾಗುವುದು ಇದೆ.

 

ಮಕ್ಕಳನ್ನು ಮುದ್ದು ಮಾಡುವುದು, ಪ್ರೀತಿಸುವುದು ಇದ್ದೇ ಇದೆ. ಅದರಲ್ಲಿ ಯಾವುದೇ ಸಂದೇಹ ಬೇಡ. ಆದರೆ ನಿರಂತರವಾಗಿ ಒಬ್ಬರೇ ಮಗುವನ್ನು ಸಾಕುವುದು ಈ ಕಾಲದಲ್ಲಿ ಸ್ವಲ್ಪ ಒತ್ತಡದ ಬದುಕೆಂಬುದು ನಿಜ. ಅಕ್ಕಪಕ್ಕದವರು ಸಹ ಏನೋ ಸ್ವಲ್ಪ ಸಮಯ ನೋಡಿಕೊಳ್ಳಬಹುದೇ ಹೊರತು ಅವರಿಗೂ ಕಿರಿಕಿರಿಯಾದರೆ ಮಗುವನ್ನು ಕಾಟಾಚಾರಕ್ಕೆ ನೋಡಿಕೊಂಡು ಹೆದರಿಸಿ ಸುಮ್ಮನಾಗಿಸುತ್ತಾರೆ.

 

ಅಂತಹ ವಾತಾವರಣ ಇರುವಾಗ

ಗಂಡ ಹೆಂಡತಿ ದುಡಿಯಲು ಹೋಗಿ, ನಾವು ನಮ್ಮ ಮಕ್ಕಳನ್ನು ಹಣ ನೀಡಿ, ಡೇಕೇರಿನ ಸುಪರ್ದಿಯಲ್ಲಿ ಇಡೀ ದಿನ ಬಿಟ್ಟಾಗ ಅವರು ಎಷ್ಟು ಚೆನ್ನಾಗಿ ನೋಡಿಕೊಳ್ಳಬಹುದು ಒಮ್ಮೆ ಊಹಿಸಿಕೊಳ್ಳಿ.

 

ಹೌದು, ಪ್ರತಿಯೊಂದು ಜೀವಿಯು ಇನ್ನೊಂದು ಜೀವಿಯನ್ನು ಪ್ರೀತಿ, ಗೌರವ, ಅಭಿಮಾನದಿಂದಲೇ ನೋಡಬೇಕು, ಎಲ್ಲರೂ ತಮ್ಮ ಕೆಲಸವನ್ನು ನಿಷ್ಠೆ, ಪ್ರಾಮಾಣಿಕವಾಗಿಯೇ ಮಾಡಬೇಕು, ಅದು ಮಾನವೀಯ ಸಮಾಜದ, ನಾಗರಿಕ ಸಮಾಜದ ಆದರ್ಶ. ಆದರೆ ಭಾರತದ ಮಟ್ಟಿಗೆ ಎಷ್ಟು ಜನ ತಮ್ಮ ತಮ್ಮ ಕೆಲಸವನ್ನು ಅತ್ಯಂತ ಶ್ರದ್ಧೆಯಿಂದ, ಕಾನೂನಾತ್ಮಕವಾಗಿ, ದೇಶಭಕ್ತಿಯ ಉದ್ದೇಶದಿಂದ, ಧರ್ಮದ ಮೌಲ್ಯಗಳ ಅಡಿಯಲ್ಲಿ ಕೆಲಸ ಮಾಡುತ್ತಿದ್ದಾರೆ ಒಮ್ಮೆ ಯೋಚಿಸಿ ನೋಡಿ.

 

ಯಾವುದೇ ಅಧಿಕಾರಿ ಇರಲಿ, ಯಾವುದೇ ವೃತ್ತಿಪರರಿರಲಿ, ಯಾರೇ ವ್ಯಾಪಾರಸ್ಥರಿರಲಿ, ಯಾರೇ ಕೂಲಿಕಾರ್ಮಿಕರಿರಲಿ ಅಥವಾ ಇತರೇ ಯಾರೇ ಆಗಿರಲಿ ನಿಜಕ್ಕೂ ಕನಿಷ್ಠ ಶೇಕಡ 60% ರಷ್ಟಾದರೂ ತುಂಬಾ ಪ್ರಾಮಾಣಿಕವಾಗಿ ತಮ್ಮ ಕೆಲಸವನ್ನು ನಿರ್ವಹಿಸುತ್ತಿದ್ದಾರೆಯೇ? ಹೌದು, ಶೇಕಡಾ 20% ರಿಂದ 30ರಷ್ಟು ಜನರನ್ನು ಹೊರತುಪಡಿಸಿ ಬಹುತೇಕರು ತಮ್ಮ ಕೆಲಸದಲ್ಲಿ ಪ್ರಾಮಾಣಿಕರಾಗಿಲ್ಲ, ಮಾಲೀಕರು ಆದಾಯದ ಕಾರಣಕ್ಕಾಗಿ ಮಾಡುವ ಲಾಭಕೋರತನ, ಕೆಲಸಗಾರರು ಸಂಬಳಕ್ಕಾಗಿ ಮಾಡುವ ಕೆಲಸ ಕಾರ್ಯಗಳು ಎಷ್ಟರಮಟ್ಟಿಗೆ ನಿಯತ್ತಾಗಿರುತ್ತದೆ ಎಂಬುದು ಅವರವರ ಆತ್ಮವಲೋಕನಕ್ಕೆ ಬಿಡುತ್ತಾ, ಡೇಕೇರ್ ವಿಷಯಕ್ಕೆ ಬರುತ್ತೇನೆ….

 

ಡೇಕೇರಲ್ಲಿ ನಾವು ಒಂದಷ್ಟು ಹಣವನ್ನು ನೀಡುತ್ತೇವೆ. ಅದರಲ್ಲಿ ಬಹುತೇಕ ಹಣ ಅದನ್ನು ನಡೆಸುವ ಮಾಲೀಕರಿಗೆ ಹೋಗುತ್ತದೆ. ಆ ಮಾಲೀಕರು ಒಂದಷ್ಟು ಕೆಲಸಗಾರರನ್ನು ನೇಮಿಸಿಕೊಳ್ಳುತ್ತಾರೆ. ಆ ಕೆಲಸಗಾರರು ಶ್ರೀಮಂತರಾಗಲಿ, ವಿದ್ಯಾವಂತರಾಗಲಿ,

ಅನುಭವಿಗಳಾಗಲಿ, ಈ ವಿಷಯದಲ್ಲಿ ಪರಿಣಿತಿ ಹೊಂದಿರುವವರಾಗಲಿ, ಬುದ್ಧಿವಂತರಾಗಲಿ ಆಗಿರುವುದಿಲ್ಲ. ಬಹುತೇಕ ಬಡವರು. ಹೊಟ್ಟೆಪಾಡಿನ ಅನಿವಾರ್ಯತೆಗೆ ಸಣ್ಣ ಸಂಬಳಕ್ಕಾಗಿ ಇಲ್ಲಿ ಕೆಲಸ ಮಾಡುತ್ತಾರೆ.

 

ನಾವು ಗಂಡ ಹೆಂಡತಿಯರು ದುಡಿಯುತ್ತಾ, ದೊಡ್ಡ ಹಣವನ್ನು ಸಂಪಾದಿಸುತ್ತಾ, ತಮ್ಮದೇ ಸ್ವಂತ ಮಕ್ಕಳನ್ನು ನೋಡಿಕೊಳ್ಳಲು ಸಣ್ಣ ಹಣ ನೀಡಿ ಅಲ್ಲೀ ಸೇರಿಸಿದರೆ, ಈ ಹಣಕ್ಕಾಗಿ, ಆ ಮಕ್ಕಳನ್ನು, ಆ ಕೆಲಸಗಾರರು, ತುಂಬಾ ಪ್ರೀತಿಯಿಂದ, ತಾಯಿ ಮಮತೆಯಿಂದ, ತಂದೆ ಜವಾಬ್ದಾರಿಯಿಂದ, ಅಜ್ಜ ಅಜ್ಜಿಯ ಕಾಳಜಿಯಿಂದ ನೋಡಿಕೊಳ್ಳಲು ಸಾಧ್ಯವೇ? ಅದನ್ನು ನಾವು ನಿರೀಕ್ಷಿಸಬಹುದೇ?

 

ಕೆಲವು ಆಧುನಿಕ ಪೋಷಕರು ತಾವು ತಮ್ಮ ಕಂಪನಿಯ ಪಾರ್ಟಿಗಳಿಗಾಗಿ, ಮೋಜು ಮಸ್ತಿಯ ಪ್ರವಾಸಗಳಿಗೆ, ಮತ್ಯಾವುದೋ ಕಾರ್ಯಕ್ರಮಗಳಿಗೆ ದಿನ ಗಟ್ಟಲೆ ಅಥವಾ ಎರಡು ಮೂರು ದಿನ ಹೋಗುವಾಗ ಮಕ್ಕಳನ್ನು ಕೆಲವು ಬಾರಿ ಇದೇ ಡೇಕೇರಿನಲ್ಲಿ ಬಿಟ್ಟು ಹೋಗುತ್ತಾರೆ. ಆಗ ಕೆಲಸಗಾರರು ಎಷ್ಟರಮಟ್ಟಿಗೆ ಮಕ್ಕಳನ್ನು ನೋಡಿಕೊಳ್ಳಬಹುದು ಊಹಿಸಿ ನೋಡಿ.

 

ನಮ್ಮ ಬಳಿ ದೊಡ್ಡಮೊತ್ತದ ಹಣವಿದೆ ಅಥವಾ ನಾವು ಹೆಚ್ಚು ಹಣ ಗಳಿಸಬೇಕು/ಗಳಿಸುತ್ತೇವೆ, ನಮಗೆ ಅದು ಅನಿವಾರ್ಯ, ಆ ಹಣವನ್ನೂ ಸಹ ಮಕ್ಕಳಿಗಾಗಿಯೇ ದುಡಿಯುವುದು ಎಂಬೆಲ್ಲಾ ನೆಪಗಳ ನಡುವೆಯೂ, ನಿಜವಾದ ಕರುಳ ಬಳ್ಳಿಯ ಸಂಬಂಧ ಇರುವುದಾದರೆ ಮಕ್ಕಳು ಒಂದು ಹಂತಕ್ಕೆ ಬರುವವರೆಗೂ ಅದರ ಪಾಲನೆ, ಪೋಷಣೆಯನ್ನು ತೀರಾ ಹತ್ತಿರದಿಂದ ತಂದೆ ಅಥವಾ ತಾಯಿ ಅಥವಾ ಇಬ್ಬರು ನೋಡಿಕೊಳ್ಳಬೇಕಾದ ಜವಾಬ್ದಾರಿ ಮರೆಯಬಾರದು. ನಮಗೆ ಸಮಯದ ಒತ್ತಡ, ಶಿಫ್ಟಲ್ಲಿ ಕೆಲಸ ಮಾಡುತ್ತೇವೆ ಇತ್ಯಾದಿ ಇತ್ಯಾದಿ ಕಾರಣಗಳನ್ನು ಹುಡುಕಿಕೊಂಡು ಮಗುವನ್ನು ಆಯಾ ಕೈಯಲ್ಲಿ ಬೆಳೆಸುವಂತೆ ಮಾಡುವುದರ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ ಬಂದಿದೆ.

 

ಮಕ್ಕಳು ಈ ಜಗತ್ತನ್ನು ಮುಖ್ಯವಾಗಿ ಸಮಾಜವನ್ನು ಗ್ರಹಿಸುವ ಪ್ರಾರಂಭಿಕ ಹಂತದಲ್ಲಿ ಅಪ್ಪ-ಅಮ್ಮ, ಅಜ್ಜ ಅಜ್ಜಿ, ಅಣ್ಣ ತಮ್ಮ, ಅಕ್ಕ ತಂಗಿಯ ಅಂತಃಕರಣದ ಮಾತು, ಕೃತಿ, ನಡೆಗಳನ್ನು ಬೆಳೆಸಿಕೊಳ್ಳುವ ಅತ್ಯದ್ಭುತ ಮತ್ತು ಅತ್ಯಂತ ಮಹತ್ವದ ಸಮಯದಲ್ಲಿ ಅವರನ್ನು ಅವರಿಗೆ ಸಂಬಂಧವೇ ಇಲ್ಲದ ಯಾರೋ ಕೆಲಸಗಾರರು ನೋಡಿಕೊಳ್ಳುವ ಜಾಗದಲ್ಲಿ ಬೆಳೆಯುವಂತೆ ಮಾಡುವುದು ಆ ಮಕ್ಕಳಿಗೆ ನಾವು ಮಾಡುತ್ತಿರುವ ವಂಚನೆ ಎನಿಸುವುದಿಲ್ಲವೇ….

 

ಹೌದು, ಗಂಡ ಹೆಂಡತಿ ಇಬ್ಬರ ಸಂಪಾದನೆ ಅನಿವಾರ್ಯವೇನೋ ನಿಜ. ಆದರೆ ಮಕ್ಕಳ ಭವಿಷ್ಯವೂ ಅಷ್ಟೇ ಮುಖ್ಯ. ಆದ್ದರಿಂದ ಹಿಂದಿನಂತೆ ನಮ್ಮ ರಕ್ತ ಸಂಬಂಧಿಕರಲ್ಲಿ ಒಬ್ಬರನ್ನು ತಾತ್ಕಾಲಿಕವಾಗಿ ಇದಕ್ಕಾಗಿ ನೇಮಿಸಿಕೊಳ್ಳುವುದು ಅಥವಾ ನಮ್ಮದೇ ಹಳ್ಳಿಯ ಬಡವರನ್ನು ಮನೆಯಲ್ಲೇ ಕುಟುಂಬದ ಸದಸ್ಯರಂತೆ ಸಾಕಿ ಮಕ್ಕಳನ್ನು ನೋಡಿಕೊಳ್ಳುವ ವ್ಯವಸ್ಥೆ ಮಾಡುವುದು ಅಥವಾ ತಾವೇ ಎಷ್ಟು ಸಾಧ್ಯವೋ ಅಷ್ಟು ಮಕ್ಕಳ ನಿರಂತರ ಸಂಪರ್ಕದಲ್ಲಿರುವಂತೆ ನೋಡಿಕೊಳ್ಳುವುದು ಹೀಗೆ ಅವರವರ ಅಗತ್ಯ, ಅವಶ್ಯಕತೆ, ಅನಿವಾರ್ಯಗಳಿಗೆ ತಕ್ಕಂತೆ ಒಟ್ಟಾರೆಯಾಗಿ ಮಕ್ಕಳ ಪಾಲನೆ ಪೋಷಣೆಯನ್ನು ಡೇಕೇರ್ ಗಿಂತ ಹೆಚ್ಚು ಸುರಕ್ಷಿತವಾದ ಸ್ಥಳವೇ ಆಗಲಿ ಅಥವಾ ಡೇಕೇರೇ ಆದರೂ, ನಾವು ನಿರಂತರವಾಗಿ ಸಿಸಿಟಿವಿ ಮೂಲಕ ಮೇಲ್ವಿಚಾರಣೆ, ಪೋಷಕರಲ್ಲಿ ಯಾರಾದರೂ ಒಬ್ಬರು ಸರತಿಯಂತೆ ಅದರ ಪರಿಶೀಲನೆ ಮಾಡುವುದು ಹೀಗೆ ನಾನು ರೀತಿಯ ಎಚ್ಚರಿಕೆ ಕ್ರಮಗಳನ್ನು ತೆಗೆದುಕೊಳ್ಳಲೇಬೇಕು.

 

ಮಕ್ಕಳ ಪಾಲನೆಯ ವಿಷಯದಲ್ಲಿ ಯಾರನ್ನೋ ಹೊಣೆ ಮಾಡಿ ಅವರನ್ನು ಜೈಲಿಗೆ ಕಳಿಸಬಹುದು. ಆದರೆ ನಮ್ಮ ಮಕ್ಕಳ ಭವಿಷ್ಯ ನಮಗೆ ಮುಖ್ಯವಾಗಬೇಕು. ಹಣ ಕೇಂದ್ರೀಕೃತ ಸಮಾಜದಲ್ಲಿ ನಮ್ಮ ಮಕ್ಕಳನ್ನು ನಾವೇ ಬೆಳೆಸುವ ವ್ಯವಸ್ಥೆಯ ಅಗತ್ಯತೆಯನ್ನು ಸಹ ಮನನ ಮಾಡಿಕೊಳ್ಳಬೇಕು.

 

ಇದು ಸಮಸ್ಯೆಯ ಇನ್ನೊಂದು ಮುಖ. ಡೇ ಕೇರ್ ತೀರಾ ಅನಿವಾರ್ಯ ಎಂಬುವವರು ಇನ್ನೊಮ್ಮೆ ಪರ್ಯಾಯ ವ್ಯವಸ್ಥೆಯ ಬಗ್ಗೆ ಅಥವಾ ಹೆಚ್ಚು ಸುರಕ್ಷತೆಯ ಬಗ್ಗೆಯೂ ಯೋಚಿಸಲಿ ಎನ್ನುವ ಕಾರಣದಿಂದ ಮಾತ್ರ ಇದನ್ನು ಹೇಳಲಾಗಿದೆ……

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ – ಮನೆಗಳಲ್ಲಿ – ಮತಗಳಲ್ಲಿ – ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

✍🏻ಬರಹ ಕೃಪೆ.✍🏻

ವಿವೇಕಾನಂದ.ಎಚ್.ಕೆ.

9663750451.

9844013068.

🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.

ಸ್ಥಾನಿಕ ಸಂಪಾದಕರು.

ಬ್ಯೂರೋ ನ್ಯೂಸ್, ಅವಿನ್ ಟಿವಿ.

About Author

Leave a Reply

Your email address will not be published. Required fields are marked *