“ಪಾಗಲ್ ಪ್ರೇಮಿಯಿಂದ ಯುವತಿ ಮೇಲೆ ಹಲ್ಲೆ…ಆರೋಪಿ ಅಂದರ್….”
1 min read
ಚಿಕ್ಕಮಗಳೂರು: ಪ್ರೀತಿ ನಿರಾಕರಿಸಿದ ಕಾರಣಕ್ಕೆ ಉನ್ಮಾದಕ್ಕೊಳಗಾದ ‘ಪಾಗಲ್ ಪ್ರೇಮಿ’ಯೊಬ್ಬ ಅಪ್ರಾಪ್ತ ಬಾಲಕಿಯ ಮೇಲೆ ಆಟದ ಮೈದಾನದಲ್ಲೇ ಹಲ್ಲೆ ನಡೆಸಿದ ಆಘಾತಕಾರಿ ಘಟನೆ ಚಿಕ್ಕಮಗಳೂರು ಜಿಲ್ಲಾ ಕ್ರೀಡಾಂಗಣದಲ್ಲಿ ನಡೆದಿದೆ. ಸಾರ್ವಜನಿಕ ಸ್ಥಳದಲ್ಲೇ ನಡೆದ ಈ ದೃಶ್ಯವನ್ನು ಕಂಡು ಸ್ಥಳೀಯರು ಬೆಚ್ಚಿಬಿದ್ದಿದ್ದಾರೆ.
ಹಾಸನ ಜಿಲ್ಲೆ ಅರಸೀಕೆರೆ ತಾಲೂಕಿನ ಬಾಣಾವರ ಮೂಲದ ಪುನೀತ್ ಎಂಬಾತನೇ ಈ ಕೃತ್ಯ ಎಸಗಿದ ಆರೋಪಿ ಎಂದು ಗುರುತಿಸಲಾಗಿದೆ.
ನಿರಂತರ ಕಿರುಕುಳ, ಪೋಷಕರಿಗೂ ಬೆದರಿಕೆ!
ಕಡೂರು ಮೂಲದ ಅಪ್ರಾಪ್ತ ಬಾಲಕಿಯೊಬ್ಬಳು ಚಿಕ್ಕಮಗಳೂರಿನ ಹಾಸ್ಟೆಲ್ನಲ್ಲಿದ್ದುಕೊಂಡು ವಿದ್ಯಾಭ್ಯಾಸ ಮಾಡುತ್ತಿದ್ದಳು. ಈಕೆಯ ಮೇಲೆ ಕಣ್ಣು ಹಾಕಿದ್ದ ಆರೋಪಿ ಪುನೀತ್, “ನೀನೇ ನನ್ನ ಮನಸೆಲ್ಲಾ” ಎಂದು ಬಾಲಕಿಯ ಬೆನ್ನುಬಿದ್ದಿದ್ದ. ಅಪ್ರಾಪ್ತೆಯಾಗಿದ್ದ ಬಾಲಕಿ ಇವನ ಕಾಟಕ್ಕೆ ಬೇಸತ್ತು ಅಸಹಾಯಕಳಾಗಿದ್ದಳು. ಈತನ ಕಿರುಕುಳಕ್ಕೆ ಹೆದರಿ ಬಾಲಕಿ ಹಾಸ್ಟೆಲ್ನಿಂದ ಹೊರಬರುವುದನ್ನು ನಿಲ್ಲಿಸಿದ್ದರೂ, ಪ್ರತಿದಿನ ಹಾಸ್ಟೆಲ್ ಬಳಿಯೇ ಬಂದು ಆರೋಪಿ ರಂಪಾಟ ಮಾಡುತ್ತಿದ್ದ. ಇದರಿಂದ ಬೇಸತ್ತ ಹಾಸ್ಟೆಲ್ ವಾರ್ಡನ್ ಬಾಲಕಿಗೆ ಎಚ್ಚರಿಕೆಯನ್ನೂ ನೀಡಿದ್ದರು ಎನ್ನಲಾಗಿದೆ.
ಕೊನೆಗೆ ಈತನ ಕಾಟ ತಾಳಲಾರದೆ ಬಾಲಕಿ ಕೆಲ ದಿನಗಳ ಕಾಲ ತನ್ನ ಸ್ವಗ್ರಾಮಕ್ಕೆ ತೆರಳಿದ್ದಳು. ಆದರೆ ಅಲ್ಲಿಯೂ ಬಿಡದ ಆರೋಪಿ, ಬಾಲಕಿಯ ಪೋಷಕರ ಮೊಬೈಲ್ ಸಂಖ್ಯೆ ಪತ್ತೆಹಚ್ಚಿ ಅವರಿಗೂ ಬೆದರಿಕೆ ಹಾಕಿದ್ದ. ಇದರಿಂದ ಇಡೀ ಕುಟುಂಬವೇ ದಂಗಾಗಿ ಹೋಗಿತ್ತು.
ಜಿಲ್ಲಾ ಕ್ರೀಡಾಂಗಣದಲ್ಲೇ ಹಲ್ಲೆ.
ಚಿಕ್ಕಮಗಳೂರು ನಗರದ ಎಸ್ಪಿ ಮತ್ತು ಡಿಸಿ ಕಚೇರಿ ಬಳಿಯೇ ಇರುವ ಜಿಲ್ಲಾ ಕ್ರೀಡಾಂಗಣದಲ್ಲಿ ಅಪ್ರಾಪ್ತ ಬಾಲಕಿ ಸಿಕ್ಕಿದ್ದಾಳೆ. ಅಲ್ಲಿಗೂ ಬೆನ್ನಟ್ಟಿ ಬಂದ ಆರೋಪಿ, ತನ್ನನ್ನು ಪ್ರೀತಿಸುವಂತೆ ಬಾಲಕಿಗೆ ಮತ್ತೆ ಧಮ್ಕಿ ಹಾಕಿದ್ದಾನೆ. ಬಾಲಕಿ ಎಂದಿನಂತೆ ಪ್ರೀತಿಯನ್ನು ನಿರಾಕರಿಸಿದಾಗ ಕುಪಿತಗೊಂಡ ಪುನೀತ್, ಏಕಾಏಕಿ ಆಕೆಯ ಮೇಲೆ ಎರಗಿ ಮನಬಂದಂತೆ ಥಳಿಸಿದ್ದಾನೆ. ಅಷ್ಟೇ ಅಲ್ಲದೆ, ಬಾಲಕಿಯನ್ನು ನೆಲಕ್ಕೆ ತಳ್ಳಿ ಕಾಲಿನಿಂದ ತುಳಿದು ಕ್ರೂರವಾಗಿ ವರ್ತಿಸಿದ್ದಾನೆ. ಇವನ ಅನಿರೀಕ್ಷಿತ ದಾಳಿಯಿಂದ ಅಪ್ರಾಪ್ತೆ ತೀವ್ರ ಭಯಭೀತಳಾಗಿದ್ದಾಳೆ.
ಸಾರ್ವಜನಿಕರಿಂದ ಹಿಡಿದು ಮುಖಭಂಗ
ಬಾಲಕಿಯ ಮೇಲಿನ ಹಲ್ಲೆಯನ್ನು ಕಂಡು ಕ್ರೀಡಾಂಗಣದಲ್ಲಿದ್ದ ಸ್ಥಳೀಯರು ತಕ್ಷಣವೇ ಆಕೆಯ ರಕ್ಷಣೆಗೆ ಓಡಿ ಬಂದಿದ್ದಾರೆ. ಜನ ಹಿಡಿಯಲು ಬರುತ್ತಿರುವುದನ್ನು ಗಮನಿಸಿದ ಆರೋಪಿ ಅಲ್ಲಿಂದ ಪರಾರಿಯಾಗಲು ಯತ್ನಿಸಿದ್ದಾನೆ. ಆದರೆ ಜಾಗೃತರಾದ ಸ್ಥಳೀಯರು ಆತನನ್ನು ಬೆನ್ನಟ್ಟಿಕೊಂಡು ಹೋಗಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳ (SP) ನಿವಾಸದ ಮುಂದೆಯೇ ಹಿಡಿದು ಧರ್ಮದೇಟು ನೀಡಿದ್ದಾರೆ. ತಕ್ಷಣವೇ ‘ಅಕ್ಕ ಪಡೆ’ (ಮಹಿಳಾ ಪೊಲೀಸ್ ಸಿಬ್ಬಂದಿ) ಗೆ ಕರೆ ಮಾಡಿ ಆರೋಪಿಯನ್ನು ಪೊಲೀಸರ ವಶಕ್ಕೆ ಒಪ್ಪಿಸಿದ್ದಾರೆ.
ಘಟನೆಗೆ ಸಂಬಂಧಿಸಿದಂತೆ ನಗರ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ. ಎಸ್.ಪಿ ಕಚೇರಿ ಮುಂಭಾಗದಲ್ಲೇ ಇಂತಹ ಘಟನೆ ನಡೆದಿರುವುದು ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
✍🏻ಬರಹ ಕೃಪೆ.✍🏻

ಸಿದ್ದಿಕ್ ಚಕ್ಕಮಕ್ಕಿ.
ಬ್ಯೂರೋ ನ್ಯೂಸ್,ಅವಿನ್ ಟಿವಿ.
🎙️ವರದಿ.🎙️

ಮಗ್ಗಲಮಕ್ಕಿ ಗಣೇಶ್.
ಸ್ಥಾನಿಕ ಸಂಪಾದಕರು.
ಬ್ಯೂರೋ ನ್ಯೂಸ್,ಅವಿನ್ ಟಿವಿ.

