ಮನದಾಳದ ಮಾತುಗಳು…..
1 min read
ಮನದಾಳದ ಮಾತುಗಳು…..
ಶೀ ವಿಕ್ಟರಿ ವೀರೇಶ್ ಮತ್ತು
ಶ್ರೀ ಅಯ್ಯಪ್ಪ ಭಜಂತ್ರಿ……
ಸಾಮಾಜಿಕ ಜಾಲತಾಣಗಳ ಮುಖಾಂತರ ಏಳೆಂಟು ವರ್ಷಗಳ ಹಿಂದೆ ನನಗೆ ಪರಿಚಯವಾದವರು ದೃಶ್ಯ ಕಾಣದ ದಿವ್ಯಾಂಗ ಚೇತನರಾದ ಶ್ರೀ ವಿಕ್ಟರಿ ವೀರೇಶ್ ಅವರು. ಪ್ರಾರಂಭದಲ್ಲಿ ನನಗೂ ಆಶ್ಚರ್ಯವಾಯಿತು, ನಮ್ಮ ಬರಹಗಳನ್ನು ಹೇಗೆ ಓದುತ್ತಾರೆ ಎಂದು. ಆದರೆ ಇಂದಿನ ಆಧುನಿಕ ತಂತ್ರಜ್ಞಾನದ ಕಾಲದಲ್ಲಿ ಅವರ ಓದು, ಬರಹ, ಮಾತುಕತೆ, ಸಂವಾದ, ಸಂವೇದನಾಶೀಲತೆ ಎಲ್ಲವೂ ಸಹಜವಾಗಿ ನಮ್ಮಂತೆಯೇ ಇರುತ್ತದೆ ಎಂದು ತಿಳಿದು ತುಂಬಾ ಸಂತೋಷವಾಯಿತು. ಎಲ್ಲೋ ಪ್ರಕೃತಿ ತಾನು ಮಾಡಿದ ತಪ್ಪಿಗೆ ಪ್ರಾಯಶ್ಚಿತ್ತವಾಗಿ ಈ ರೀತಿಯ ಅನುಕೂಲಗಳನ್ನು ಕಲ್ಪಿಸಿಕೊಟ್ಟಿರಬೇಕು ಎಂದೆನಿಸುತ್ತದೆ. ಈಗಲೂ ಸಾಕಷ್ಟು ದೃಷ್ಠಿ ಕಾಣದ ಬಹುತೇಕರು ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿದ್ದಾರೆ ಮತ್ತು ನಮ್ಮ ಬರಹಗಳಿಗೆ ಪ್ರತಿಕ್ರಿಯಿಸುತ್ತಾರೆ……
ವೀರೇಶ್ ಅವರು ಸುಮಾರು ನಾಲ್ಕು ವರ್ಷದ ಹಿಂದೆ ಅವರ ಮೊದಲ ಮಗುವಿನ ನಾಮಕರಣ ಕಾರ್ಯಕ್ರಮಕ್ಕೆ ನನ್ನನ್ನು ಕರೆದಿದ್ದರು. ಆಗ ಗೆಳೆಯರೊಂದಿಗೆ ಭಾಗವಹಿಸಿದ್ದೆ. ಹಾಗೆಯೇ ಇತ್ತೀಚೆಗೆ ತಮ್ಮ ಎರಡನೆಯ ಮಗುವಿನ ನಾಮಕರಣಕ್ಕೆ ಕರೆದರೂ ನಾನು ಅನಿವಾರ್ಯ ಕಾರಣದಿಂದ ಆ ಕಾರ್ಯಕ್ರಮದಲ್ಲಿ ಭಾಗವಹಿಸಲು ಸಾಧ್ಯವಾಗಿರಲಿಲ್ಲ. ಅದಕ್ಕಾಗಿ ವೀರೇಶ್ ಅವರು ವೈಯಕ್ತಿಕವಾಗಿ ಅವರ ಮನೆಗೆ ನನ್ನನ್ನು ಊಟಕ್ಕೆ ಆಹ್ವಾನಿಸಿದರು. ಜೊತೆಗೆ ಅವರು ನನ್ನ ಇಷ್ಟದ ಆಯ್ಕೆಯ ಆಹಾರವನ್ನು ಕೇಳಿ ತಿಳಿದುಕೊಂಡು ಅದನ್ನೇ ಉಣಬಡಿಸಲು ಸಜ್ಜಾಗಿದ್ದರು……
ಅವರು ಊಟಕ್ಕೆ ಮನೆಗೆ ಆಹ್ವಾನಿಸಿದಾಗ ಅವರ ಮನೆಯಲ್ಲಿ ಅಡುಗೆ ಕೆಲಸದವರು ಇರಬಹುದು ಅಥವಾ ಅವರ ತಂದೆ ತಾಯಿ, ಅತ್ತೆ ಮಾವ ಯಾರಾದರೂ ಇರಬಹುದು ಎಂದು ಭಾವಿಸಿ ಅದಕ್ಕಾಗಿಯೇ ನನ್ನ ಆಯ್ಕೆಯ ಊಟವನ್ನು ಅವರಿಗೆ ಹೇಳಿದ್ದೆ. ಆದರೆ ಅಲ್ಲಿ ಹೋದ ಮೇಲೆ ನನಗೆ ತಿಳಿಯಿತು, ನಾನು ಹೇಳಿದ ಅಷ್ಟೂ ಆಯ್ಕೆಯ ಅಡುಗೆಯನ್ನು ವಿಶೇಷ ಚೇತನರಾದ ಕಣ್ಣು ಕಾಣದ ಅವರ ಪತ್ನಿಯೇ ಮಾಡುತ್ತಿದ್ದಾರೆ ಎಂದು. ಅದನ್ನು ನೊಡಿ ನನಗೆ ನನ್ನ ಬಗ್ಗೆಯೇ ಬೇಸರವಾಯಿತು……
ನಾನು ಆತ್ಮೀಯರಾದ ಆಹಾರ ಸಂರಕ್ಷಣಾ ಜಾಗೃತಿ ಅಭಿಯಾನದ ಶ್ರೀ ಯುವರಾಜ್ ಅವರೊಂದಿಗೆ ವೀರೇಶ್ ಅವರ ಮನೆಗೆ ಭೇಟಿ ನೀಡಿದೆನು. ವೀರೇಶ್ ಅವರು ಕೆಲವು ವರ್ಷಗಳಿಂದ ದಿವ್ಯಾಂಗ ಚೇತನರ ಆರ್ಕೆಸ್ಟ್ರಾಗಳಲ್ಲಿ ಭಾಗವಹಿಸುತ್ತಿದ್ದು ಈಗ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಬರೆದು ಕೇಂದ್ರ ರೈಲ್ವೆ ಇಲಾಖೆಯಲ್ಲಿ ಉದ್ಯೋಗದಲ್ಲಿದ್ದಾರೆ. ಆರ್ಕೆಸ್ಟ್ರಾ ಸಂದರ್ಭದಲ್ಲಿ ಈ ಸಮಾಜದಿಂದ ಅವರಿಗಾದ ಅನೇಕ ಅವಮಾನಕರ ಕಹಿ ಘಟನೆಗಳನ್ನು ನನ್ನೊಂದಿಗೆ ಹಂಚಿಕೊಂಡಿದ್ದರು. ಈ ಸಮಾಜದ ಮುಖವಾಡಗಳನ್ನು ತೆರೆದಿಟ್ಟಿದ್ದರು….
ಆತ್ಮವಂಚಕ ಮನಸ್ಥಿತಿಯ ಕೆಲವು ಜನ ಕೇವಲ ಮೇಲ್ನೋಟಕ್ಕೆ ಮಾತ್ರ ದಿವ್ಯಾಂಗ ಚೇತನರಿಗೆ ಸಹಾನುಭೂತಿ ತೋರಿಸಿದ್ದರು. ಆದರೆ ಅಂತರ್ಯದಲ್ಲಿ ಇವರ ಬಗ್ಗೆ ದಿವ್ಯ ನಿರ್ಲಕ್ಷ, ಅಹಂಕಾರ, ಅಮಾನವೀಯ ನಡವಳಿಕೆ ಹೊಂದಿರುವುದನ್ನು ಘಟನೆಗಳ ಉದಾಹರಣೆ ಮೂಲಕ ಹೇಳುತ್ತಿದ್ದರು. ನಮಗೆ ಸಹಾನುಭೂತಿಗಿಂತ ಅವಕಾಶ ಮತ್ತು ಗೌರವ ಮುಖ್ಯ ಎಂದು ಸದಾ ಒತ್ತಿ ಹೇಳುತ್ತಿದ್ದರು…..
ನಾನು ಮತ್ತು ಯುವರಾಜ್ ಒಂದು ಸಂಜೆ ದೃಷ್ಟಿ ಕಾಣದ ದಿವ್ಯಾಂಗ ಚೇತನರ ಮನೆಗೆ ಭೇಟಿ ನೀಡಿದಾಗ ಅವರ ಮನೆಯ ಆತಿಥ್ಯಕ್ಕೆ ಮನಸೋತು ಹೋದೆವು. ಮನೆಯನ್ನು ಅತ್ಯಂತ ಚೊಕ್ಕಟವಾಗಿ ಇಟ್ಟುಕೊಂಡಿದ್ದರು. ಎಲ್ಲಾ ವಸ್ತುಗಳನ್ನು ನೀಟಾಗಿ ಜೋಡಿಸಿಟ್ಟಿದ್ದರು. ನಮಗೆ ಬಿಸಿಬಿಸಿಯಾದ ಮುದ್ದೆ ಬಡಿಸಲು ನಾವು ಹೋದ ನಂತರವೇ ದೃಷ್ಟಿ ಕಾಣದ ಅವರ ಪತ್ನಿ ನಮ್ಮ ಮುಂದೆ ಮುದ್ದೆ ಮಾಡಿದರು. ನಮಗೆ ಬೇಕಾದ ಎಲ್ಲಾ ಆಹಾರ ಪದಾರ್ಥಗಳನ್ನು ತಯಾರಿಸಿ ಇಟ್ಟಿದ್ದರು. ತರಕಾರಿಗಳನ್ನು ಒಪ್ಪವಾಗಿ ಹಚ್ಚಿಟ್ಟಿದ್ದರು. ಅವರ ಮಗು ಮೂರುವರೆ ವರ್ಷದ ಮಗು ಸಹಜವಾಗಿ ತುಂಟಾಟವಾಡುತ್ತಾ ಊಟ ಮಾಡುತ್ತಿತ್ತು. ಆ ದೃಶ್ಯ ಸ್ವಲ್ಪ ನಮಗೆ ಮನಕಲುಕಿತು….
ಅವರು ಪ್ರಾರಂಭದ ನಿಂಬೆಹಣ್ಣಿನ ಪಾನಕದಿಂದ ಎಲ್ಲವನ್ನು ನಮಗೆ ಬಡಿಸಿದ ರೀತಿ ನಿಜಕ್ಕೂ ನಮ್ಮಿಬ್ಬರನ್ನು ದಂಗುಬಡಿಸಿತು. ಊಟದ ನಂತರ ವೀರೇಶ್ ಅವರು ಮಗನೊಂದಿಗೆ ವಾಕಿಂಗ್ ಸ್ಟಿಕ್ ಇಲ್ಲದೆ ಮರೆತಿದ್ದ ಬಾಳೆಹಣ್ಣನ್ನು ತರಲು ಹೊರಗೆ ಹೋಗಿ ಅದನ್ನು ಸಹ ತಂದು ನಮಗೆ ನೀಡಿದರು….
ಅವರು ವಾಸವಾಗಿರುವ ಬಾಡಿಗೆ ಮನೆ ಅತ್ಯಂತ ಜನನಿಬಿಡ ಮತ್ತು ಕಿರಿದಾದ ಓಣಿ. ಅನೇಕ ವಾಹನಗಳು ಓಡಾಡುತ್ತಲೇ ಇರುತ್ತದೆ. ಅಂತಹ ಇಕ್ಕಟ್ಟಾದ ಜಾಗದಲ್ಲಿ ಸಹ ಅವರು ತಮ್ಮ ಮಗುವನ್ನು ಅತ್ಯಂತ ಜಾಗರೂಕತೆಯಿಂದ ನೋಡಿಕೊಳ್ಳುತ್ತಿದ್ದಾರೆ. ಆ ಮಗುವಿನ ಮನಸ್ಸಿಗೆ ಇನ್ನೂ ತಂದೆ ತಾಯಿ ದಿವ್ಯಾಂಗ ಚೇತನರು ಎನ್ನುವ ಅಂಶ ಒಳಗೆ ಇಳಿದಿಲ್ಲ ಎನಿಸುತ್ತದೆ. ಅವರ ಪತ್ನಿ ಸಹ ಉದ್ಯೋಗಿಯಾಗಿದ್ದು ಅವರು ಸಹ ದಿನ ಉದ್ಯೋಗಕ್ಕೆ ಹೋಗಿ ಬರುತ್ತಾರೆ. ಮಗುವನ್ನು ವೀರೇಶ್ ಅವರೇ ಜೊತೆಯಲ್ಲಿ ಶಿಶುವಿಹಾರಕ್ಕೆ ಕರೆದೊಯ್ಯುತ್ತಾರೆ. ಸಂಜೆ ಜೊತೆಯೇ ವಾಪಸ್ಸು ಕರೆತರುತ್ತಾರೆ….
ಮೊದಲು ತುಂಬಾ ದೂರದಲ್ಲಿ ಮನೆ ಮಾಡಿದ್ದ ಇವರು ಎರಡೆರಡು ಬಸ್ ಹತ್ತಿ, ಮೆಟ್ರೋ ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದರು. ಇದೀಗ ಉದ್ಯೋಗಕ್ಕೆ ಹತ್ತಿರವಾಗಿ ಮನೆ ಮಾಡಿಕೊಂಡಿದ್ದಾರೆ. ತಮ್ಮ ಇನ್ನೊಂದು 8/10 ತಿಂಗಳ ಮಗುವನ್ನು ಪತ್ನಿ ಆರು ತಿಂಗಳ ಆರೈಕೆಯ ನಂತರ ತಮ್ಮ ತಾಯಿ ಮನೆಯಲ್ಲಿ ಬಿಟ್ಟಿದ್ದಾರೆ. ಏಕೆಂದರೆ ಮಗು ಮಾತನಾಡುವುದು ಮತ್ತು ಕೇಳಿಸಿಕೊಳ್ಳುವುದು ಬಂದ ನಂತರವೇ ಅವರನ್ನು ಇವರೊಂದಿಗೆ ಸಾಕುವುದು ಸುಲಭವಾಗುತ್ತದೆ. ಇಲ್ಲದಿದ್ದರೆ ಒಂದಷ್ಟು ಅಪಾಯವಾಗುವ ಸಾಧ್ಯತೆ ಇದೆ….
ವೀರೇಶ್ ಅವರು ಆ ಸಂದರ್ಭದ ಮಾತುಕತೆಯಲ್ಲಿ, ಭವಿಷ್ಯದಲ್ಲಿ ಒಂದು ಸ್ವಂತ ಮನೆ ಮಾಡುವ ಆಸೆಯನ್ನು ಸಹ ವ್ಯಕ್ತಪಡಿಸಿದರು…..
ಈ ದಿನ ಈ ವಿಷಯವನ್ನು ಲೇಖನವಾಗಿ ಮಾಡಲು ಕಾರಣ ಅವರ ಜೀವನೋತ್ಸಾಹ ಮಾತ್ರವಲ್ಲ ಎಷ್ಟೋ ಜನ ತೀರ ಕ್ಷುಲ್ಲಕವಾದ ಕಾರಣದಿಂದ ಆತ್ಮಹತ್ಯೆ ಮಾಡಿಕೊಳ್ಳುವುದು, ಬದುಕಲು ಸಾಧ್ಯವಾಗದೆ ಖಿನ್ನತೆಗೆ ಒಳಗಾಗುವುದು, ತಮ್ಮ ನೋವು ಸಂಕಟಗಳಿಂದ ನರಳಿ ಬದುಕಿನ ಬಗ್ಗೆ ಜಿಗುಪ್ಸೆ ಹೊಂದುವುದು, ಎಲ್ಲವೂ ಇದ್ದು ಏನನ್ನೂ ಅನುಭವಿಸಲಾರದ ಮನಸ್ಥಿತಿಯವರಿಗೆ ಇವರ ಬದುಕು ಒಂದು ಸ್ಪೂರ್ತಿಯಾಗಲಿ, ಇವರ ಎದುರಿಸುತ್ತಿರುವ ಜೀವನದ ಸವಾಲುಗಳ ಮುಂದೆ ನಮಗೆ ಎದುರಾಗುವ ಸವಾಲುಗಳು ಯಾವ ಲೆಕ್ಕಕ್ಕೂ ಇಲ್ಲ ಎಂಬ ಮನೋಭಾವ ಹೆಚ್ಚಾಗಿ ಬದುಕಲು ದೃಢಸಂಕಲ್ಪ ಮಾಡಿಕೊಳ್ಳಲಿ ಎನ್ನುವ ಆಶಯದಿಂದ…
ಕಣ್ಣು ಕಾಣದ ಇಬ್ಬರು ದಿವ್ಯಾಂಗ ಚೇತನರು ಹೇಗೆ ಒಂದು ಕುಟುಂಬ ವ್ಯವಸ್ಥೆಯನ್ನು ಅತ್ಯಂತ ಖುಷಿಯಿಂದ ನಿರ್ವಹಿಸುತ್ತಿದ್ದಾರೆ ಎಂದು ಎಲ್ಲರಿಗೂ, ಎಲ್ಲರ ಗಮನಕ್ಕೂ ಬರಲಿ ಎಂದು ಇದನ್ನು ದಾಖಲಿಸುತ್ತಿದ್ದೇನೆ. ಈ ರೀತಿಯ ಅನೇಕ ಕುಟುಂಬಗಳು ಇವೆ. ಆ ಎಲ್ಲದರ ಸಾಂಕೇತಿಕ ಉದಾಹರಣೆ ವೀರೇಶ್ ಅವರ ಕುಟುಂಬ….
ವೀರೇಶ್ ಅವರು ಮೊದಲಿನಿಂದಲೂ ಸಮಕಾಲಿನ ಸಮಸ್ಯೆಗಳ ಬಗ್ಗೆ ಸಾಕಷ್ಟು ಅಭಿಪ್ರಾಯಗಳನ್ನು ಹಂಚಿಕೊಳ್ಳುತ್ತಾರೆ. ಜೊತೆಗೆ ಕೆಲವು ಸಂಘಟನಾತ್ಮಕ ಚಟುವಟಿಕೆಗಳಲ್ಲೂ ಭಾಗವಹಿಸುತ್ತಿದ್ದಾರೆ….
ನನ್ನ ಪಾದಯಾತ್ರೆಯ ಸಮಯದಲ್ಲಿ ನನಗೆ ನನ್ನ ದೂರವಾಣಿಯಲ್ಲಿ ನಿರಂತರ ಸಂಪರ್ಕದಲ್ಲಿದ್ದು ಏನಾದರೂ ಸಹಾಯ ಬೇಕೆ ಎಂದು ಸದಾ ನನ್ನನ್ನು ವಿಚಾರಿಸಿಕೊಳ್ಳುತ್ತಿದ್ದರು. ದೃಷ್ಟಿ ಇಲ್ಲದಿದ್ದರೂ ನಿಮ್ಮ ಬಟ್ಟೆ ನನಗೆ ಕೊಡಿ ನಾನು ಅದನ್ನು ಸ್ವಚ್ಛ ಮಾಡಿ ಕೊಡುತ್ತೇನೆ ಎಂದು ಹೇಳುತ್ತಿದ್ದರು. ಅಷ್ಟರಮಟ್ಟಿಗೆ ಕಾಳಜಿ ವಹಿಸುತ್ತಿದ್ದ ವೀರೇಶ್ ಮತ್ತು ಅವರ ಕುಟುಂಬ ನಮಗೆಲ್ಲ ಸ್ಪೂರ್ತಿಯಾಗಲಿ ಎಂದು ಹಾರೈಸುತ್ತಾ…..
ಬದುಕೇನು ಭಾರವಲ್ಲ ಅದನ್ನು ಅನುಭವಿಸಿ, ಸಾಯುವ ಕ್ಷಣದವರೆಗೂ…..
ಅವರ ಸಂಪರ್ಕ ಸಂಖ್ಯೆ
ವಿಕ್ಟರಿ ವೀರೇಶ್
99004 90718…..
***********************
ಇನ್ನೊಬ್ಬ ದಿವ್ಯಾಂಗ ಚೇತನರು ಶ್ರೀ ಅಯ್ಯಪ್ಪ ಎನ್ ಭಜಂತ್ರಿ. ರಾಯಚೂರು ಜಿಲ್ಲೆಯ ಮಾನ್ವಿ ತಾಲ್ಲೂಕಿನ ಒಂದು ಗ್ರಾಮ ಪಂಚಾಯಿತಿಯಲ್ಲಿ ಪಿಡಿಓ ಅಂದರೆ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2016 ರಲ್ಲಿ ” Spinal muscular atrophy type -3 gene 1 ಎಂಬ ಖಾಯಿಲೆಗೆ ತುತ್ತಾಗಿ 2019 ರಿಂದ ವೀಲ್ಚೇರಿನಲ್ಲಿಯೇ ಕುಳಿತು ತಮ್ಮ ಸರ್ಕಾರಿ ಕೆಲಸ ನಿರ್ವಹಿಸುತ್ತಿದ್ದಾರೆ….
ಈ ಖಾಯಿಲೆ ಅನುವಂಶೀಯವಾಗಿ ಹುಟ್ಟಿನಿಂದ ಅಥವಾ ಯಾವುದೇ ವಯೋಮಾನದಲ್ಲಿ ಬರಬಹುದು. ಕರ್ನಾಟಕದಲ್ಲಿ 2016 ರಲ್ಲಿ 12 ಜನರಿಗೆ ಈ ಖಾಯಿಲೆ ಇತ್ತು. ಈಗ ಸುಮಾರು 50 ಜನರಿಗೆ ಇರಬಹುದು. ಈ ಖಾಯಿಲೆಯಿಂದ ಬಳಲುತ್ತಿರುವವರ ಬಗ್ಗೆ ಕಾಳಜಿಯಿಂದ ನನ್ನೊಂದಿಗೆ ಕೆಲವು ಮಾತುಗಳನ್ನು ಹಂಚಿಕೊಂಡರು….
ಈ ಅಪರೂಪದ ಖಾಯಿಲೆಗೆ ತುತ್ತಾಗಿರುವ ನಮ್ಮಂತಹವರಿಗೆ ಸಹಾನುಭೂತಿ ಬೇಡ. ಆದರೆ ಅವಕಾಶ ಮತ್ತು ಗೌರವ ಬೇಕಾಗುತ್ತದೆ. ಹೌದು, ವೀಲ್ ಚೇರಿನಲ್ಲಿ ಕುಳಿತುಕೊಂಡ ನಮ್ಮಂತ ಅಧಿಕಾರಿಗಳಿಂದ ಸ್ಥಳೀಯ ಮುಖಂಡರು ಮತ್ತು ಜನರು ಸಹಜವಾಗಿಯೇ ಎಲ್ಲರಂತೆ ಕೆಲವು ಕೆಲಸಗಳನ್ನು ನಿರೀಕ್ಷಿಸುತ್ತಾರೆ. ಆದರೆ ನಮ್ಮ ಪರಿಸ್ಥಿತಿಗೆ ಸ್ವಲ್ಪಮಟ್ಟಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಅಸಹನೆ ವ್ಯಕ್ತಪಡಿಸುವುದು ನೋವಿನ ವಿಷಯ ಎಂದು ಹೇಳಿದರು. ಅವರು ಈ ಬಗ್ಗೆ ನನ್ನೊಂದಿಗೆ ಹಂಚಿಕೊಂಡ ಒಂದಷ್ಟು ಮಾಹಿತಿಗಳೆಂದರೆ,..
* ವೀಲ್ ಚೇರ್ ಜೀವನ ಮನುಷ್ಯನ ದೌರ್ಬಲ್ಯವಲ್ಲ. ಮನುಷ್ಯನನ್ನು ಬಾಹ್ಯವಾಗಿ ಅಳೆಯುವುದಕ್ಕಿಂತ ಬೌದ್ಧಿಕವಾಗಿ ಅಳೆಯುವುದು ಮುಖ್ಯ.
ವೀಲ್ಚೇರ್ ನಲ್ಲಿರುತ್ತಾರೆ ಎಂದು ಕಡೆಗಣಿಸುವುದಕ್ಕಿಂತ, ಅವರು ಬುದ್ಧಿಶಕ್ತಿಯನ್ನು ಉಪಯೋಗಿಸಿ ಮಾಡುವ ಕರ್ತವ್ಯಕ್ಕೆ ಬೆಲೆ ಕೊಡಿ….
*Spinal muscular atrophy type -3 gene 1 ಪ್ರಕರಣಗಳು ಇಡೀ ರಾಜ್ಯದಲ್ಲಿ ಇರುವುದು ಬಹುಶಃ 50. ಅದರಲ್ಲಿ ಇಂತಹ ಪ್ರಕರಣಗಳಿರುವ ಸರಕಾರಿ ನೌಕರರು ಒಂದು ಅಥವಾ ಎರಡು ಇರಬಹುದು. ದೈಹಿಕವಾಗಿ ಸಮಸ್ಯೆ ಇದ್ದರೂ ಬೌದ್ಧಿಕವಾಗಿ ಎಲ್ಲರಿಗಿಂತ ಅಚ್ಚುಕಟ್ಟಾಗಿ ಕರ್ತವ್ಯ ನಿರ್ವಹಿಸುವ ಇಂತಹ ಪಂಚಾಯತ್ ಅಭಿವೃದ್ಧಿ ಅಧಿಕಾರಿಗಳಿಗೆ ದೈಹಿಕವಾಗಿ ತೊಂದರೆಯಾಗುವ ವಿಷಯಗಳಿಗೆ ಸರ್ಕಾರವು ನೆರವಾಗಿ ನಿಲ್ಲಬೇಕು. ದೈಹಿಕವಾಗಿ ಇವರಿಗೆ ಅಟೆಂಡರ್ ಬೇಕೆ ಬೇಕು. Sma ಭಾದಿತರಿಗೆ ಸರ್ಕಾರವೇ ದೈಹಿಕ ಸಹಾಯಕರನ್ನು ನೇಮಕ ಮಾಡಬೇಕು…
ಇವರಿಗೆ ಅತ್ಯಗತ್ಯವಿರುವ ವೀಲ್ ಚೇರ್ ಅಟೆಚೆಬಲ್ ಸೌಲಭ್ಯವಿರುವ ಕಾರುಗಳನ್ನು ಒದಗಿಸುವ ವ್ಯವಸ್ಥೆಯನ್ನು ಸರ್ಕಾರವೇ ಮಾಡಬೇಕು..
ಈ ಬಗ್ಗೆ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಾರೆ ಎಂಬ ಆಶಾಭಾವನೆಯಿಂದ….
ಇವರ ಸಂಪರ್ಕ ಸಂಖ್ಯೆ
ಶ್ರೀ ಅಯ್ಯಪ್ಪ ಎನ್ ಭಜಂತ್ರಿ
96320 45563….
ನೋಡಿ ದಿವ್ಯಾಂಗ ಚೇತನರು ಎನ್ನುವ ಪದದ ಅರ್ಥಕ್ಕೆ ಸಾರ್ಥಕವಾಗಿ ಬದುಕುತ್ತಿರುವ ಕೆಲವು ವಿರಳ ವ್ಯಕ್ತಿಗಳಲ್ಲಿ ಇವರು ಒಬ್ಬರು. ದಕ್ಷಿಣ ಭಾರತದ ಮೊದಲ ಐಎಎಸ್ ದಿವ್ಯಾಂಗ ಚೇತನರಾಗಿ ಪಶ್ಚಿಮ ಬಂಗಾಳದ ಮಿಡ್ನಾಪುರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಶ್ರೀ ಕೆಂಪ ಹೊನ್ನಯ್ಯನವರನ್ನು ಇತ್ತೀಚೆಗೆ ತಾನೇ ಭೇಟಿ ಮಾಡಿ ಅವರ ಬಗ್ಗೆ ಒಂದಷ್ಟು ಮಾಹಿತಿ ಹಂಚಿಕೊಂಡಿದ್ದೆನು. ಸಮಾಜದಲ್ಲಿ ನಮ್ಮ ಧ್ವನಿ ಸದಾ ಅವಶ್ಯಕತೆ ಇರುವವರ ಬಗ್ಗೆ ಇರಬೇಕಾಗುತ್ತದೆ. ಸಬಲರು, ಪ್ರಬಲರು ಹೇಗೋ ಬದುಕುತ್ತಾರೆ. ನಮ್ಮ ಕಾಳಜಿ, ಸರ್ಕಾರದ ಕಾಳಜಿ ಹೆಚ್ಚಾಗಿ ಇರಬೇಕಾದದ್ದು ಅವಶ್ಯಕತೆ ಮತ್ತು ಅನಿವಾರ್ಯ ಇರುವವರ ಬಗ್ಗೆ……..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನ ಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ, ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068…….