ಏತಕ್ಕಾಗಿ ಮಹಿಳಾ ದಿನಾಚಾರಣೆ?
1 min read
ಏತಕ್ಕಾಗಿ ಮಹಿಳಾ ದಿನಾಚಾರಣೆ?
ಗಂಡ ಸತ್ತರೆ ಗಂಡನ ಶವವನ್ನು ಸುಡುವಾಗ ಜೀವಂತವಾಗಿ ಅವನ ಹೆಂಡತಿ ಗಂಡನ ಚಿತೆಗೆ ಹಾರಿ ಸುಟ್ಟು ಹೋಗಬೇಕಿದ್ದ “ಸತಿಸಹಗಮನ ಪದ್ಧತಿ” ಜಾರಿಯಲ್ಲಿದ್ದ ಇದ್ದ ಭಾರತದಲ್ಲಿ ಮಹಿಳೆಯನ್ನು ಸುಖಾಸುಮ್ಮನೇ ಹೊಗಳಿ ನೀನು ದೇವತೆ, ನೀನು ಸಂಸಾರದ ಕಣ್ಣು, ನೀನು ಅರ್ಧಾಂಗಿ, ನೀನೇ ನನ್ನ ಪ್ರಾಣ ಎಂಬೆಲ್ಲ ಬೊಗಳೆ ಸ್ಲೂಗನ್ನುಗಳಿಂದ ಹೆಣ್ಣಿನ ಶೋಷಣೆ ನಿಲ್ಲುವುದಿಲ್ಲ….
ಮತ್ತೆ ಏತಕ್ಕಾಗಿ ಮಹಿಳಾ ದಿನಾಚರಣೆಯ?
ಒಬ್ಬ ನನ್ನ ಮೇಲೆ ದೇವರು ಬಂದಿದೆ ಎಂದು ಹೇಳಿ, ಅವನು ಊರಿನೊಳಗೆ ಬಂದು ಒಂದು ಸುಂದರ ಹೆಣ್ಣನ್ನು ಆಯ್ಕೆ ಮಾಡಿ ಈ ಹೆಣ್ಣು ದೇವರಿಗೆ ಎಂದು ಘೋಷಿಸುತ್ತಾನೆ. ಈ ಹೆಣ್ಣೆತ್ತವರು ನನ್ನ ಮಗಳನ್ನು ದೇವರಿಗೆ ಕೊಟ್ಟೆವು ಎಂಬ ಭಾವ ಬರುವಂತೆ ನಂಬಿಸಿ, ಈ ಹೆಣ್ಣನ್ನು ಲೈಂಗಿಕವಾಗಿ ಅನುಭವಿಸುವ “ದೇವದಾಸಿ ಪದ್ದತಿ”ಯಂತಹ ಹೀನ ಸಂಪ್ರದಾಯ ಇದ್ದ ಈ ದೇಶದಲ್ಲಿ ಏತಕ್ಕಾಗಿ ಮಹಿಳಾ ದಿನಾಚಾರಣೆ?
ರಾಕ್ಷಸತನಕ್ಕೂ ಮೀರಿದ “ಕ್ರೂರ ಲೈಂಗಿಕ ಹಸಿವಿಗೆ” ಹೆಣ್ಣೇ ಆಹಾರವಾಗುತ್ತಿರುವ ಭಯಾನಕ ಪರಿಸ್ಥಿತಿ ಇನ್ನೂ ಕಡಿಮೆಯಾಗಿಲ್ಲ ಅಂದ ಮೇಲೆ
ಮತ್ತೆ ಏತಕ್ಕಾಗಿ ಮಹಿಳಾ ದಿನಾಚಾರಣೆ?.
ದೇಹದೊಳಗೆ ನಿಸರ್ಗ ಸಹಜವಾಗಿ ನಡೆಯುವ ಮುಟ್ಟಿನ ಹೆಣ್ಣು ಮಗಳಿಗೆ ಅಸ್ಪೃಶ್ಯತೆಯ ಪಟ್ಟ ಕಟ್ಟಿ, ಪೂಜೆಗೆ ನಿರ್ಬಂದಿಸಿ, ಕೆಲವು ಕಡೆ ಈ ಹೆಣ್ಣು ಜೀವಗಳಿಗೆ ಊಟವೂ ನಿಷಿದ್ದ ಮಾಡಿ, ಮನೆ ಪ್ರವೇಶಕ್ಕೂ ಅಡ್ಡಿ ಮಾಡಿ, ಊರಿನ ಹೊರಗಿಟ್ಟು ಶೋಷಿಸುವ ನಮ್ಮ ಗೊಡ್ಡು ಸಂಪ್ರದಾಯಗಳನ್ನು ಜೀವಂತವಾಗಿ ಇಟ್ಟುಕೊಂಡ ದೇಶಕ್ಕೆ ಏತಕ್ಕಾಗಿ ಮಹಿಳಾ ದಿನಾಚಾರಣೆ?
ಜಾತ್ರೆಯ ನೆಪದಲ್ಲಿ ಒಂದು ಕಪಾಳದಿಂದ ಮತ್ತೊಂದು ಕಪಾಳ ದಾಟಿ ಹೊರಬರುವ ಕಬ್ಬಿಣದ ದಬಳವನ್ನು ಹೆಣ್ಣು ಮಕ್ಕಳಿಗೆ ಚುಚ್ಚಿ ದೇವರ ಹರಕೆ ತೀರಿಸುವ ಹೀನ ಸಂಪ್ರದಾಯದ ಬಗ್ಗೆ ಜಾಗೃತಿ ಮೂಡಿಸದ ಮೇಲೆ ಏತಕ್ಕಾಗಿ ಮಹಿಳಾ ದಿನಾಚಾರಣೆ?
ಗಂಡು ಉಂಡು ತಿರುಗುವುದು. ಹೆಣ್ಣು ಉಪವಾಸವಿದ್ದು ಹಬ್ಬದ ದಿನ ಹಗಲು ಕೆಲಸ ಹೇರಿ, ಹೆಣ್ಣಿಗೆ ರಾತ್ರಿ ಊಟ ಕೊಡುವಂತಹ ಅನೇಕ ಸಾಂಪ್ರದಾಯಿಕ ದಬ್ಬಾಳಿಕೆಗಳು ಇನ್ನೂ ಇರುವಾಗ ಏತಕ್ಕಾಗಿ ಮಹಿಳಾ ದಿನಾಚರಣೆ?
ಹೆಣ್ಣನ್ನು ಹೊರತುಪಡಿಸಿ ಜಗತ್ತಿನ ಎಲ್ಲಾ ಜೀವಗಳಿಗೂ, ಪ್ರಾಣಿಗಳಿಗೂ ಸ್ವಾತಂತ್ರ್ಯವಿದೆ. ಆದರೆ ಒಂದು ಹೆಣ್ಣಿಗೆ ಜುಜುಬಿ ಪಾನಿಪೂರಿ ತಿನ್ನಲು ಹೋಗಲಿಕ್ಕೂ ಇನ್ನೊಬ್ಬರ ಅನುಮತಿ ಬೇಕು. ಪಕ್ಕದ ಮನೆಗೆ ಹೋಗಲಿಕ್ಕೆ ಅನುಮತಿ ಬೇಕು, ಮನೆಯೊಳಗಿನ ಕಿಟಕಿಯಿಂದ ಹೊರಗಡೆ ನೋಡುತ್ತಿದ್ದರೆ ಏನು ನೋಡ್ತಾ ಇದ್ದಿಯೇ ಎಂಬ ಪ್ರಶ್ನೆಗೆ ಆ ಹೆಣ್ಣು ಉತ್ತರ ಕೊಡಬೇಕು?
ಮಹಿಳೆಯನ್ನು ಯಾವ ಸ್ವಾತಂತ್ರ್ಯವೂ ಇಲ್ಲದ ಏಕೈಕ ಪ್ರಾಣಿಯನ್ನಾಗಿಸಿದ ಈ ಸಮಾಜಕ್ಕೆ ಮಹಿಳಾ ದಿನಾಚರಣೆ ಏಕೆ ಬೇಕು?
ಹೆಣ್ಣನ್ನು ದೇವರಿಗೆ ಹೋಲಿಸುವುದು
ಮತ್ತು
ಅದೇ ಹೆಣ್ಣನ್ನು ಕೆಲವು ಕಾರಣಗಳಿಗಾಗಿ ಮಂದಿರಕ್ಕೂ ಪ್ರವೇಶವಿಲ್ಲ, ಮಸೀದಿಗೂ ಪ್ರವೇಶವಿಲ್ಲ. ದೇವತೆಯೆನ್ನುವ ಮಹಿಳೆಗೆ ನಿಷೇದ ಹೇರುವವರ ನಡುವೆ ಏತಕ್ಕಾಗಿ ಮಹಿಳಾ ದಿನಾಚರಣೆ?
ಊಟ ತಿಂಡಿಯೂ ಕೊನೆಗೆ, ಸ್ನಾನವೂ ಕೊನೆಗೆ, ನಿದ್ರೆಯೂ ಕೊನೆಗೆ, ಗಂಡು ತನ್ನೆಲ್ಲಾ ತೀರ್ಮನಗಳನ್ನು ತಿಳಿಸುವುದು ಕೊನೆಗೆ ಹೀಗೆ ಒಂದೇ ಎರಡೇ ಎಲ್ಲದರಲ್ಲೂ ಮಹಿಳೆಯನ್ನು ಕೊನೆಗೆ ನಿಲ್ಲಿಸಿದ ಈ ಸಮಾಜಕ್ಕೆ ಮಹಿಳಾ ದಿನಾಚರಣೆ ಏತಕ್ಕಾಗಿ ಬೇಕು?
ಸಿನಿಮಾ ಕ್ರೀಡೆ ನೌಕರಿ ರಾಜಕಾರಣ ಮಾಡುವಲ್ಲಿ ಅರ್ಹತೆಗಾಗಿ ಲೈಂಗಿಕತೆ ಬಯಸುವ ಬಾಸಿಸಂ ಇಟ್ಟುಕೊಂಡ ಭಾರತದಲ್ಲಿ
ಮತ್ತು ದೇವರು ಧರ್ಮದ ಹೆಸರಲ್ಲಿ ಭಕ್ತಿಮುಕ್ತಿಯ ನೆಪದಲ್ಲಿ ಲೈಂಗಿಕತೆ ಹಸಿವನ್ನು ತೀರಿಸಿಕೊಳ್ಳುವ ಭಾರತದಲ್ಲಿ ಮಹಿಳಾ ದಿನಾಚರಣೆ ಏಕೆ?
ಗಂಡನ ಆಯ್ಕೆಗೆ ಸ್ವಾತಂತ್ರ್ಯ ಇಲ್ಲ,
ಉದ್ಯೋಗದ ಆಯ್ಕೆಗೆ ಸ್ವಾತಂತ್ರ್ಯ ಇಲ್ಲ,
ಎಷ್ಟು ಮಕ್ಕಳಿರಲಿ ಈ ಆಯ್ಕೆಗೂ ಸ್ವಾತಂತ್ರ್ಯ ಇಲ್ಲ,
ಏನನ್ನು ಓದಬೇಕು ಎಂಬ ಆಯ್ಕೆಗೂ ಸ್ವಾತಂತ್ರ್ಯ ಇಲ್ಲ,
ಯಾವ ಶಾಲೆ ಕಾಲೇಜಿಗೆ ಸೇರಬೇಕು ಎಂಬ ಆಯ್ಕೆಗೂ ಸ್ವಾತಂತ್ರ್ಯ ಇಲ್ಲ,
ಇಷ್ಟ ಬಂದ ದಿನ ತವರು ಮನೆಗೆ ಹೋಗಲು ಸ್ವಾತಂತ್ರ್ಯ ಇಲ್ಲ,
ಸ್ನೇಹಿತರನ್ನು ಮಾತನಾಡಿಸಲಿಕ್ಕೆ ಸ್ವಾತಂತ್ರ್ಯ ಇಲ್ಲ,
ಪ್ರವಾಸಕ್ಕೆ ಹೋಗಲು ಸ್ವಾತಂತ್ರ್ಯ ಇಲ್ಲ,
ಸಾಹಿತ್ಯ ಸಂಗೀತ ಕ್ರೀಡೆ ಯಾವುದಕ್ಕೂ ಸೇರಲು ಪೂರ್ಣ ಸ್ವಾತಂತ್ರ್ಯ ಇಲ್ಲ,
ಒಂದು ಮದುವೆ, ನಾಮಕರಣಕೆ ಹೋಗಲು ಸ್ವಾತಂತ್ರ್ಯ ಇಲ್ಲ. ಹೀಗೆ ಹೆಣ್ಣಿಗೆ ಸ್ವಾತಂತ್ರ್ಯ ಇಲ್ಲದ ವಿಚಾರಗಳು
ಒಂದೇ ಎರಡೇ; ಲೆಕ್ಕವಿಲ್ಲದಷ್ಟು ವಿಚಾರಗಳಲ್ಲಿ ಹೆಣ್ಣಿಗೆ ಸ್ವಾತಂತ್ರ್ಯವೇ ಇಲ್ಲ.
ಹೆಜ್ಜೆ ಹೆಜ್ಜೆಗೂ, ನಿಮಿಷ ನಿಮಿಷಕ್ಕೂ ಮತ್ತೊಬ್ಬರ ಅನುಮತಿಯಿಂದಲೇ ಬದುಕುತ್ತಿರುವ ಮಹಿಳೆಯ ಬದುಕು ಬಂಧನ ಬಂಧನ ಬಂಧನ; ಜೀವನವೇ ಬಂಧನ.
ಹೆಣ್ಣು ಜನನವಾದರೆ ಸೂತಕ, ಋತುಮತಿ ಆದರೆ ಸೂತಕ, ಹೆರಿಗೆ ಆದರೆ ಸೂತಕ, ಮುಟ್ಟಾದರೆ ಸೂತಕ. ಇವೆಲ್ಲವೂ ನಿಸರ್ಗ ಸಹಜ ಕ್ರಿಯೆಗಳು. ಇವುಗಳಿಗೆ ಸೂತಕದ ಪಟ್ಟಕಟ್ಟಿ ಸೂತಕ ಸಂತೆಯೊಳಕ್ಕೆ ತಬ್ಬುವ ಗೊಡ್ಡು ಸಂಪ್ರದಾಯಕ್ಕೆ ವಿಧಾಯ ಹೇಳಿದರೆ ಮಹಿಳಾ ದಿನಾಚರಣೆ ಸಾರ್ಥಕವಾದೀತು.
ಹೀಗೆ ಮಹಿಳೆಯನ್ನು ಬಂಧಿಸಿ ಮಹಿಳಾ ದಿನಾಚಾರಣೆಯ ನೆಪದಲ್ಲಿ ಮಹಿಳೆಯರಿಗೆ ಶುಭಾಶಯ ಕೋರುವುದರಿಂದ ಮಹಿಳೆಗೆ ಯಾವ ಪ್ರಯೋಜನವೂ ಆಗುವುದಿಲ್ಲ.
ಗೊಡ್ಡು ಸಂಪ್ರದಾಯಗಳಿಂದ,
ಗಂಡಿನ ಒತ್ತಡಗಳಿಂದ, ಅವಮಾನ + ಅನುಮಾನಿಸುವುದರಿಂದ ಹೆಣ್ಣನ್ನು ಮುಕ್ತಗೊಳಿಸಬೇಕಿದೆ.
“ಮೊಲೆ ಮೂಡಿ ಬಂದರೆ ಹೆಣ್ಣೆಂಬರು,
ಗಡ್ಡ ಮೀಸೆ ಬಂದರೆ ಗಂಡೆಂಬರು,
ಒಳಗೆ ಸುಳಿವ ಆತ್ಮ ಹೆಣ್ಣೂ ಅಲ್ಲ, ಗಂಡೂ ಅಲ್ಲ”
ಎಂದು ಜೇಡರ ದಾಸಿಮಯ್ಯ ಹೇಳುತ್ತಾನೆ. ಮತ್ತೇಕೆ ಭೇದ?
ಮಹಿಳೆಯದ್ದು ಒಂದು ಜೀವ ಎಂದು ತೀರ್ಮಾನಿಸಿ.
ಹೆಣ್ಣಿನ ಸ್ವಾತಂತ್ರ್ಯಗಳನ್ನು ಕಿತ್ತುಕೊಂಡ ಗಂಡು ಮನಸ್ಸುಗಳ, ಗೊಡ್ಡು ಸಂಪ್ರದಾಯಗಳ ಸುಧಾರಣೆಯಲ್ಲಿ ಮಹಿಳಾ ದಿನಾಚಾರಣೆಯ ಸಾರ್ಥಕತೆ ಇದೆ..
ಮಹಿಳೆಗೆ ಶುಭಾಶಯಗಳನ್ನು ಕೋರಲಿಕ್ಕೆ ನಾನೆಷ್ಟು ಅರ್ಹ ಎಂದು ಗಂಡು ಆತ್ಮಾವಲೋಕನ ಮಾಡಿಕೊಳ್ಳುವಲ್ಲಿ ಮಹಿಳಾ ದಿನಾಚರಣೆಯ ಸಾರ್ಥಕತೆ ಇದೆ.
ಮಹಿಳಾ ದಿನಾಚರಣೆಯಲ್ಲಿ ಪುರುಷರ ಮನಸ್ಸನ್ನೇ ಬದಲಾಯಿಸುವ ಕಾರ್ಯಕ್ರಮಗಳನ್ನು ಮಾಡುವಲ್ಲಿ ಮಹಿಳಾ ದಿನಾಚರಣೆಯ ಸಾರ್ಥಕತೆ ಇದೆ. ಎಲ್ಲರ ಆತ್ಮಾವಲೋಕನಕ್ಕೆ ಈ ಮಹಿಳಾ ದಿನಾಚರಣೆ ದಿಕ್ಸೂಚಿ ಆಗಲಿ..
ಮನಸುಳಿ ಮೋಹನ್ ತರೀಕೆರೆ.