ದಿಢೀರ್ ಕಾಫಿದರ ಕುಸಿತದಿಂದ ಬೆಳೆಗಾರರಿಗೆ ವಂಚನೆ
1 min read
ದಿಢೀರ್ ಕಾಫಿದರ ಕುಸಿತದಿಂದ ಬೆಳೆಗಾರರಿಗೆ ವಂಚನೆ
ಚಿಕ್ಕಮಗಳೂರು, ಮಾ.04: ಅಂತ ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗೆ ಹೆಚ್ಚು ಬೇಡಿಕೆ ಇದ್ದರೂ, ರಫ್ತುದಾರರು ಮತ್ತು ಕ್ಯೂರರ್‌ಗಳ ಕುತಂತ್ರದಿಂದಾಗಿ ಸ್ಥಳೀಯ ಮಾರುಕಟ್ಟೆಯಲ್ಲಿ ಕಾಫಿ ದರ ದಿಢೀರ್ ಕುಸಿತ ಕಂಡು ಬೆಳೆಗಾರರು ವಂಚನೆಗೀಡಾಗುತ್ತಿದ್ದಾರೆ ಎಂದು ಕಾಫಿ ಬೆಳೆಗಾರರ ಹಿತರಕ್ಷಣಾ ವೇದಿಕೆ ಜಿಲ್ಲಾ ಅಧ್ಯಕ್ಷ ಉತ್ತಮ್ ಹುಲಿಕೆರೆ ಹಾಗೂ ಕಾರ್ಯದರ್ಶಿ ಹೊಲದಗದ್ದೆ ಗಿರೀಶ್ ಆರೋಪಿಸಿದ್ದಾರೆ.
ಒಂದುರೀತಿಯಲ್ಲಿ ರಫ್ತುದಾರರು ಮತ್ತು ಕ್ಯೂರರ್‌ಗಳೇ ಕಾಫಿ ಮಾರುಕಟ್ಟೆಯನ್ನು ನಿಯಂತ್ರಣದಲ್ಲಿಟ್ಟುಕೊಂಡು ಬೇಕಾಬಿಟ್ಟ ಬೆಲೆ ನಿಗದಿ ಮಾಡಿಕೊಂಡು ಹೆಚ್ಚು ಲಾಭ ಗಳಿಸುವ ಹಗಲು ದರೋಡೆಗಿಳಿದಿದ್ದಾರೆ. ಇದರ ವಿರುದ್ಧ ಬೆಳೆಗಾರರ ಸಂಘಟನೆಗಳು, ಬೆಳೆಗಾರರು ಧ್ವನಿ ಎತ್ತಬೇಕಿದೆ. ಅಲ್ಲದೆ, ಬೆಳೆಗಾರರಿಗಾಗುತ್ತಿರುವ ವಂಚನೆಗೆ ಕಡಿವಾಣ ಹಾಕುವ ಸಲುವಾಗಿ ಕಾಫಿ ಮಂಡಳಿ ಮತ್ತು ಜಿಲ್ಲಾಡಳಿತ ಸೂಕ್ತ ಕ್ರಮಕ್ಕೆ ಮುಂದಾಗಬೇಕಿದೆ ಎಂದು ಒತ್ತಾಯಿಸಿದ್ದಾರೆ.
ರಫ್ತುದಾರರು ಮತ್ತು ಕ್ಯೂರರ್‌ಗಳು ಅಂತರಾಷ್ಟ್ರೀಯ ಮಾರುಕಟ್ಟೆ ಹಾಗೂ ಸ್ಥಳೀಯ ಬೆಳೆಗಾರರ ನಡುವಿನ ಸೇತುವೆಯಾಗಿ ಕೆಲಸ ಮಾಡುವ ಹಿನ್ನೆಲೆಯಲ್ಲಿ ಬೆಳೆಗಾರ ಸಮುದಾಯವು ಅವರನ್ನೇ ನಂಬಿ ಅವರ ಮೇಲೆಯೇ ಅವಲಂಬಿತರಾಗಿರುತ್ತಾರೆ.
ಇದನ್ನೇ ದುರುಪಯೋಗಪಡಿಸಿಕೊಳ್ಳುತ್ತಿರುವ ರಫ್ತುದಾರರು ದಿಢೀರ್ ಹಣಗಳಿಸುವ ದುರಾಸೆಯಿಂದ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಾಫಿಗಿರುವ ಬೇಡಿಕೆ ಹಾಗೂ ನಿಜವಾದ ದರವನ್ನು ಮುಚ್ಚಿಟ್ಟು, ಕಡಿಮೆ ಬೆಲೆ ನಿಗದಿಪಡಿಸಿ ಬೆಳಗಾರರನ್ನು ವಂಚಿಸುತ್ತಿದ್ದಾರೆ. ಜೊತೆಗೆ ಹೇಚ್ಚು ಬೆಲೆಗೆ ಬೆಲೆಗೆ ಮಾರಾಟ ಮಾಡಿಕೊಂಡು ಹಣ ಮಾಡಿಕೊಳ್ಳುತ್ತಿದ್ದಾರೆ ಎಂದು ದೂರಿದ್ದಾರೆ.
ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಇಂದಿನ ಬೆಲೆ ಪ್ರಕಾರ 375 ಸೆಂಟ್ಸ್‌ಗಳಿದ್ದರೂ ಪಾರ್ಚ್‌ಮೆಂಟ್ ಬೆಲೆಯಲ್ಲಿ ಭಾರೀ ಇಳಿಕೆ ಮಾಡಲಾಗಿದೆ. ಕಳೆದ ಒಂದು ವಾರದ ಹಿಂದೆ ಕಾಫಿ ಬೆಲೆ 410 ಸೆಂಟ್‌ಗಳಿದ್ದಾಗ 50 ಕೆ.ಜಿ. ಅರೇಬಿಕ ಪಾರ್ಚ್‌ಮೆಂಟಿಗೆ 29 ಸಾವಿರ ರೂ.ಬೆಲೆ ಇತ್ತು. ನಂತರ ಒಂದೆರಡು ಸೆಂಟ್‌ಗಳು ಕಡಿಮೆ ಆಗಿದ್ದನ್ನೇ ನೆಪವಾಗಿಟ್ಟುಕೊಂಡು ಒಂದೇ ವಾರದಲ್ಲಿ ದಿನೇ ದಿನೇ 500 ರಿಂದ 1000 ರೂ.ಗಳನ್ನು ಕಡಿಮೆ ಮಾಡಿ ಇಂದಿಗೆ ಬೆಲೆಯನ್ನು 25000 ರೂ. ಗಳಿಗೆ ಇಳಿಸಲಾಗಿದೆ. ಈ ಬಗ್ಗೆ ಪ್ರಶ್ನಿಸಿದರೆ ಕ್ಲೀನ್ ಕಾಫಿಗೆ ಬೇಡಿಕೆ ಇಲ್ಲ ಎಂಬ ಸಬೂಬು ಹೇಳುತ್ತಿದ್ದಾರೆ. ರೋಬಸ್ಟ ಕಾಫಿಗೂ 1500 ರಿಂದ 2000 ರೂ ವೆರೆಗೆ ಬೆಲೆ ಇಳಿಸಲಾಗಿದೆ ಎಂದಿದ್ದಾರೆ.
ಇದರ ನಡುವೆ ಅರೇಬಿಕ ಚೆರಿ ಕಾಫಿಗೆ ಏನೇ ಬೆಲೆ ಕುಸಿತಗೊಂಡರೂ ಇವತ್ತಿನ ಬೆಲೆ ಐವತ್ತು ಕೆ.ಜಿ.ಗೆ 15000 ದಿಂದ 16000 ಸಾವಿರ ರೂ.ವರೆಗೆ ಮಾರಾಟವಾಗುತ್ತಿದೆ. ಸಾಮಾನ್ಯವಾಗಿ ಆರೆಬಿಕಾ ಚೆರಿ ಕಾಫಿಯು ಬೆಳೆಗಾರರ ಮನೆಯಲ್ಲಿರುವುದು ಕಾರಣವಾಗಿದೆ.
ಬಹುತೇಕ ಬೆಳೆಗಾರರು ಆರೇಬಿಕ ಪಾರ್ಚ್ ಮೆಂಟ್ ಕಾಫಿಯನ್ನು ಕ್ಯೂರಿಂಗ್ ವರ್ಕ್ ಗಳಲ್ಲಿ ಇಟ್ಟಿರುತ್ತಾರೆ. ಇದನ್ನೂ ದುರುಪಯೋಗಪಡಿಸಿಕೊಳ್ಳುವ ಕ್ಯೂರರ್ ಮತ್ತು ರಫ್ತುದಾರರು ಬೇಕಾಬಿಟ್ಟಿ ಬೆಲೆ ನಿಗದಿಪಡಿಸಿಕೊಂಡು ಕಾಫಿಯನ್ನು ತಾವೇ ಖರೀದಿಸುತ್ತಿದ್ದಾರೆ. ಹಾಗಾಗಿ ಬೆಳೆಗಾರರಿಗೆ ಉತ್ತಮ ಬೆಲೆ
ಸಿಗುತ್ತಿಲ್ಲ ಎಂದು ದೂರಿದ್ದಾರೆ. ಇಂದಿನ ಡಾಲರ್ ಬೆಲೆ 87 ರೂ.ಗಳಿದೆ.
ಅದಕ್ಕೆ ಅನುಗುಣವಾಗಿ ಕಾಫಿ ಬೆಲೆಯನ್ನು ಲೆಕ್ಕ ಹಾಕಿದರೆ 375 ಸೆಂಟ್ ಸೆಂಟ್ಸ್ ದರದಲ್ಲಿ ಲೆಕ್ಕ ಹಾಕಿದರೆ ಇವತ್ತಿನ ಬೆಲೆ 30,000 ಕ್ಕೂ ಹೆಚ್ಚಿನ ಬೆಲೆಗೆ ಕಾಫಿ ಮಾರಾಟವಾಗಬೇಕಿದೆ. ಆದರೆ ರಫ್ತುದಾರರ ಕುತಂತ್ರದಿಂದಾಗಿ ಸುಮಾರು 5 ರಿಂದ 6 ಸಾವಿರ ರೂ. ಕಡಿಮೆ ಬೆಲೆಗೆ ಸ್ಥಳೀಯ ಮಾರುಕಟ್ಟೆಯಲ್ಲಿ ಬಿಕರಿಯಾಗುತ್ತಿದೆ ಎಂದು ದೂರಿದ್ದಾರೆ.
ಈ ಹಿಂದೆ ಕಾಫಿ ಡೇ ಕಂಪನಿಯ ಮಾಲೀಕ ಸಿದ್ದಾರ್ಥ ಹೆಗಡೆಯವರು ಇದ್ದಾಗ ಬೆಳೆಗಾರರಿಗೆ ಉತ್ತಮ ಬೆಲೆ ಸಿಗುತ್ತಿತ್ತು. ಏಕೆಂದರೆ ಅವರು ಸ್ವತಃ ಕ್ಯೂರಿಂಗ್ ವರ್ಕ್ಸ್ ಮಾಲೀಕರು ಹಾಗೂ ರಫ್ತುದಾರರು ಕೂಡ ಕೂಡ ಆಗಿದ್ದರು. ಅವರು ನಿಗದಿ ಪಡಿಸಿದ ಬೆಲೆಯನ್ನೆ ಉಳಿದ ರಫ್ತುದಾರರು ನಿಗದಿಪಡಿಸುತ್ತಿದ್ದರು. ಈಗ ಅವರಿಲ್ಲದೆ ಪ್ರತಿಯೊಬ್ಬ ಬೆಳೆಗಾರ ಅನಾಥರಂತಾಗಿದ್ದಾರೆ ಎಂದಿದ್ದಾರೆ.
ಈ ವಂಚನೆ ವಿಚಾರದಲ್ಲಿ ಸ್ಥಳೀಯ ಕಾಫಿ ವ್ಯಾಪಾರಸ್ಥರ ಪಾತ್ರ ಇರುವುದಿಲ್ಲ. ರಫ್ತುದಾರರಿಂದ ಬೆಳೆಗಾರರಿಗೆ ವಂಚನೆ ಆಗುತ್ತಿರುವುದು ರ್ಕಬ್ಬಂದೆ ಕಾಣುತ್ತಿದ್ದರೂ ವ್ಯಾಪಾರಸ್ಥರು ಅಸಹಾಯಕರಾಗಿದ್ದಾರೆ. ರಫ್ತುದಾರರು ಮತ್ತು ಕ್ಯೂರರ್‌ಗಳು ನಿಗಧಿಪಡಿಸಿದ ಬೆಲೆಯ ಮೇಲೆ 50 ರಿಂದ 100 ರೂ. ಲಾಭಾಂಶ ಇಟ್ಟು ವ್ಯಾಪಾರಸ್ಥರು ಕಾಫಿ ಖರೀದಿ ಮಾಡಬೇಕಿದೆ ಎಂದಿದ್ದಾರೆ.
ಈ ಎಲ್ಲಾ ಕಾರಣದಿಂದಾಗಿ ರಾಷ್ಟ್ರೀಯ ಕಾಫಿ ಮಂಡಳಿ ಕೂಡಲೇ ಮಧ್ಯ ಪ್ರವೇಶ ಮಾಡ ಬೇಕು ಎಂದಿದ್ದಾರೆ.