लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
09/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸರ್ಕಾರಿ ಶಾಲೆಗಳು ಉಳಿಯಲಿ, ಅಭಿವೃದ್ಧಿಗೊಳ್ಳಲಿ: ಒತ್ತಡದ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ ಸಿಗಲಿ

1 min read

ಸರ್ಕಾರಿ ಶಾಲೆಗಳು ಉಳಿಯಲಿ, ಅಭಿವೃದ್ಧಿಗೊಳ್ಳಲಿ: ಒತ್ತಡದ ಕೆಲಸಗಳಿಂದ ಶಿಕ್ಷಕರಿಗೆ ಮುಕ್ತಿ ಸಿಗಲಿ

ದೇಶದಾದ್ಯಂತ ಸರ್ಕಾರಿ ಶಾಲೆಗಳು ಉಳಿಯಬೇಕಾದರೆ ಮತ್ತು ಅಭಿವೃದ್ಧಿಯತ್ತ ಸಾಗಬೇಕಾದರೆ ಅದಕ್ಕಾಗಿ ಸರ್ಕಾರಗಳು ಅಧಿಕ ಪ್ರಮಾಣದ ಅನುದಾನವನ್ನು ಮೀಸಲಿಡಬೇಕಾಗಿದೆ. ಮೀಸಲಿಟ್ಟ ಅನುದಾನವನ್ನು ಸರಿಯಾದ ರೀತಿಯಲ್ಲಿ ಸದ್ಬಳಕೆ ಮಾಡಿಕೊಳ್ಳಬೇಕಾಗಿದೆ. ಗಿಡಗಳು ಉತ್ತಮವಾಗಿ ಬೆಳೆಯಬೇಕಾದರೆ ಅದಕ್ಕೆ ಮಣ್ಣು, ನೀರು, ಗೊಬ್ಬರ ಎಷ್ಟು ಅವಶ್ಯಕತೆಯಾಗಿ ಬೇಕಾಗಿದೆಯೋ ಮತ್ತು ಅವುಗಳನ್ನು ರಕ್ಷಣೆ ಮಾಡುವುದು ಎಷ್ಟು ಮುಖ್ಯವಾಗಿದೆಯೋ, ಅದೇ ರೀತಿಯಲ್ಲಿ ಸರ್ಕಾರಿ ಶಾಲೆಗಳಿಗೆ ಅನುದಾನವನ್ನು ನೀಡಿ, ಸಮರ್ಪಕವಾದ ಮೂಲಸೌಕರ್ಯದ ವ್ಯವಸ್ಥೆಗಳನ್ನು ಮಾಡಿಕೊಟ್ಟಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಿಕೊಳ್ಳುವುದು. ಅಭಿವೃದ್ಧಿಗೊಳಿಸಲು ಸಾಧ್ಯವಾಗುತ್ತದೆ.

ಖಾಸಗೀ ಶಾಲೆಗಳಲ್ಲಿ ಇರುವಂತೆ ಸರ್ಕಾರಿ ಶಾಲೆಗಳಲ್ಲಿ ಉತ್ತಮವಾದ ಕಟ್ಟಡ, ಸುಸಜ್ಜಿತವಾದ ಕೊಠಡಿಗಳು, ಸಭಾಂಗಣ, ಶುದ್ಧ ಕುಡಿಯುವ ನೀರಿನ ಘಟಕ, ಶಾಲೆಗೆ ಪಿಠೋಪಕರಣ, ಕಂಪ್ಯೂಟರ್ ಹಾಗೂ ಅದನ್ನು ಬಳಸಲು ಬೇಕಾಗಿರುವ ಮೇಜಿನ ವ್ಯವಸ್ಥೆ ಇರಬೇಕಾಗಿದೆ. ಅಷ್ಟೇ ಅಲ್ಲದೆ, ಶಿಕ್ಷಕರ ಕೊರತೆ ಇಲ್ಲದಂತಾಗಬೇಕಾಗಿದೆ. ಶಾಲೆಗಳಲ್ಲಿ ಮಕ್ಕಳಿಗೆ ಸ್ಮಾರ್ಟ್ ಕ್ಲಾಸ್ ಸೌಲಭ್ಯ ಹಾಗೂ ಸ್ಪೋಕನ್ ಇಂಗ್ಲಿಷ್ ತರಬೇತಿ ವ್ಯವಸ್ಥೆಯನ್ನು ಸಹ ಮಾಡಬೇಕಾಗಿದೆ. ಶಾಲೆಯಲ್ಲಿ ಸಿಸಿಟಿವಿ ಕ್ಯಾಮೆರಾ ಅಳವಡಿಸಬೇಕಾಗಿದೆ. ಉತ್ತಮವಾದ ಬಿಸಿಯೂಟದ ಅಡುಗೆ ಮನೆ ಮತ್ತು ಉತ್ತಮವಾದ ಬಿಸಿಯೂಟದ ವ್ಯವಸ್ಥೆ, ಆಟದ ಮೈದಾನ ಇರಬೇಕಾಗಿದೆ. ಮಕ್ಕಳಿಗೆ, ಶಿಕ್ಷಕರಿಗೆ ಸಂದೇಶದ ಮಾಹಿತಿ ನೀಡಲು ಮೈಕ್ ಹಾಗೂ ಸ್ಪೀಕರ್‌ಗಳ ವ್ಯವಸ್ಥೆ ಸಹ ಮಾಡಬೇಕಾಗಿದೆ. ಬಹುಮುಖ್ಯವಾಗಿ ಖಾಸಗಿ ಶಾಲೆಗಳಲ್ಲಿರುವ ಸೌಲಭ್ಯದಂತೆ ಸರ್ಕಾರಿ ಶಾಲೆಯ ಮಕ್ಕಳಿಗೂ ಶಾಲಾ ಬಸ್ ಸೌಲಭ್ಯದ ವ್ಯವಸ್ಥೆಯನ್ನು ಕಡ್ಡಾಯವಾಗಿ ಕಲ್ಪಿಸಿಕೊಡಬೇಕಾಗಿದೆ. ಜೊತೆಗೆ ಗ್ರಾಮಗಳಿಗೆ ಬಸ್ ತೆರಳಲು ರಸ್ತೆ ಸಂಪರ್ಕಗಳನ್ನು ಸರಿಪಡಿಸಬೇಕಾಗಿದೆ. ಸರಿಯಾದ ಸಮಯಕ್ಕೆ ಸಮವಸ್ತ್ರಗಳು, ಪಠ್ಯಪುಸ್ತಕಗಳನ್ನು ವಿತರಿಸಬೇಕಾಗಿದೆ. ವಿದ್ಯಾರ್ಥಿ ವೇತನಗಳನ್ನು ನೀಡಬೇಕಾಗಿದೆ. ಹೀಗೆ ಇನ್ನೂ ಮುಂತಾದ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಒದಗಿಸಿಕೊಟ್ಟಾಗ ಮಾತ್ರ ಸರ್ಕಾರಿ ಶಾಲೆಗಳನ್ನು ಉಳಿಸಲು. ಅಭಿವೃದ್ಧಿಗೊಳಿಸಲು ಸಾಧ್ಯವಾಗಿದೆ.

ಈ ರೀತಿಯಲ್ಲಿ ಶಾಲೆಗೆ ಬೇಕಾಗಿರುವ ಸಮರ್ಪಕವಾದ ವ್ಯವಸ್ಥೆ ಇದ್ದಾಗ ಮಾತ್ರ ಮಕ್ಕಳು ಆ ಶಾಲೆಯಲ್ಲಿ ಉತ್ತಮವಾದ ಮತ್ತು ಗುಣಮಟ್ಟದ ಶಿಕ್ಷಣವನ್ನು ನೀಡಲು ಸಾಧ್ಯವಾಗುತ್ತದೆ. ಇಂತಹ ಉತ್ತಮವಾದ ವ್ಯವಸ್ಥೆ ನಿರ್ಮಾಣವಾದಲ್ಲಿ ಯಾವುದೇ ಸೌಲಭ್ಯಗಳಿಂದ ಮತ್ತು ಶಿಕ್ಷಣದಿಂದ ಮಕ್ಕಳು ವಂಚಿತರಾಗುವುದಿಲ್ಲ. ಇದರಿಂದ ಮಕ್ಕಳಿಗೆ ವಿದ್ಯಾಭ್ಯಾಸವನ್ನು ನಡೆಸಲು ಉತ್ತಮವಾದ ವಾತಾವರಣ ನಿರ್ಮಾಣವಾಗುತ್ತದೆ. ಮಕ್ಕಳು ಸಹ ಶಾಲೆಯಿಂದ ಹೊರಗುಳಿಯಲು ಬಯಸುವುದಿಲ್ಲ. ಈ ರೀತಿಯಲ್ಲಿ ಸರ್ಕಾರಿ ಶಾಲೆಗಳನ್ನು ಉಳಿಸಿ, ಉತ್ತಮವಾಗಿ ಅಭಿವೃದ್ಧಿ ಪಡಿಸಬೇಕಾಗಿರುವುದು ಮತ್ತು ಮಕ್ಕಳಿಗೆ ಗುಣಮಟ್ಟದ ಶಿಕ್ಷಣವನ್ನು ಒದಗಿಸಿಕೊಡಬೇಕಾಗಿರುವುದು ಸರ್ಕಾರಗಳ ಆದ್ಯ ಜವಾಬ್ದಾರಿ ಮತ್ತು ಕರ್ತವ್ಯ ಸಹ ಆಗಿದೆ.

ಒಂದು ಕಡೆ ವಿದ್ಯಾರ್ಥಿಗಳ ಕೊರತೆಯ ನೆಪಯೊಡ್ಡಿ ರಾಜ್ಯದಲ್ಲಿ ಸಾವಿರಾರು ಸರ್ಕಾರಿ ಶಾಲೆಗಳನ್ನು ಮುಚ್ಚಲಾಗಿದೆ ಮತ್ತು ಇಂದಿಗೂ ಸಹ ಶಾಲೆಗಳು ಮುಚ್ಚಲ್ಪಡುತ್ತಿವೆ. ಮಾತ್ರವಲ್ಲದೇ, ಶಾಲೆಯ ತರಗತಿ ಕೊಠಡಿಗಳಲ್ಲಿ ವಿದ್ಯಾರ್ಥಿಗಳು ಇಲ್ಲದೇ ಕೊಠಡಿಗಳೆಲ್ಲ ಖಾಲಿ ಖಾಲಿ ಆಗಿರುವ ಘಟನೆಗಳು ಕಂಡುಬಂದರೆ, ಮತ್ತೊಂದು ಕಡೆ ಸರ್ಕಾರಿ ಶಾಲೆಗಳಲ್ಲಿ ವಿದ್ಯಾರ್ಥಿಗಳ ಉತ್ತಮವಾದ ದಾಖಲಾತಿಯಿದ್ದರು ಸಮರ್ಪಕವಾದ

ಮೂಲಸೌಲಭ್ಯಗಳಿಲ್ಲದೆ, ವಿದ್ಯಾರ್ಥಿಗಳು ಪ್ರತಿನಿತ್ಯ ಶಾಲೆಯ ಆವರಣದೊಳಗಿನ ಗಿಡಮರಗಳ ನೆರಳಲ್ಲಿ, ಬಯಲಲ್ಲಿ ಕುಳಿತು ಪಾಠ ಆಲಿಸಬೇಕಾದ, ಅಲ್ಲಿಯೇ ಊಟ ಮಾಡಬೇಕಾಗಿರುವ ಪರಿಸ್ಥಿತಿ ನಿರ್ಮಾಣವಾಗಿರುವ ಘಟನೆ ಕಂಡುಬಂದಿದೆ. ಉದಾಹರಣೆಗೆ, ಇತ್ತೀಚಿಗೆ ಬಳ್ಳಾರಿ ಜಿಲ್ಲೆ ತೆಕ್ಕಲಕೋಟೆಯ ಬಲಕುಂಬಿ ಗ್ರಾಮದ ಸರ್ಕಾರಿ ಪ್ರೌಢಶಾಲೆಯಲ್ಲಿ ನಡೆದಿರುವ ಘಟನೆಯನ್ನು ನಾವು ನೋಡಬಹುದು.

ಕೇವಲ ಇದು ಒಂದು ಜಿಲ್ಲೆಯ, ಒಂದು ಶಾಲೆಯ ಸಮಸ್ಯೆ ಮಾತ್ರವಾಗಿಲ್ಲ, ರಾಜ್ಯದಾದ್ಯಂತ ಸರ್ಕಾರಿ ಶಾಲೆಗಳಲ್ಲಿ ಇಂತಹ ಸಮಸ್ಯೆಗಳನ್ನು ಎದುರಿಸಲಾಗುತ್ತಿದೆ. ತರಗತಿಯ ಕೊಠಡಿಗಳ ಸಮಸ್ಯೆ ಮಾತ್ರವಲ್ಲ. ಇದರೊಂದಿಗೆ ಶೌಚಾಲಯಗಳ ಕೊರತೆ, ಕುಡಿಯುವ ನೀರಿನ ಸಮಸ್ಯೆ, ರಸ್ತೆ, ಸಾರಿಗೆ-ಸಂಪರ್ಕದ ಸಮಸ್ಯೆ, ಆಟದ ಮೈದಾನಗಳ ಕೊರತೆ, ಗುಣಮಟ್ಟದ ಶಿಕ್ಷಣದ ಕೊರತೆ, ಶಿಕ್ಷಕರ ಸಮಸ್ಯೆ. ಶಿಥಿಲಗೊಂಡು ತುಂಬಾ ಅಪಾಯವಿರುವಂತಹ ವಾತಾವರಣದಲ್ಲಿ ಶಾಲೆಗಳನ್ನು ನಡೆಸಲಾಗುತ್ತಿದೆ. ಹೀಗೆ ಇನ್ನೂ ಹಲವಾರು ಸಮಸ್ಯೆಗಳು ಇವೆ. ಸರ್ಕಾರಿ ಶಾಲೆಗಳಲ್ಲಿ ಓದುತ್ತಿರುವವರು ಬಡವರ ಮಕ್ಕಳು. ಶಾಲೆ ಮುಚ್ಚಿದರೆ ಬಡ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಾರೆ. ಜೊತೆಗೆ ಶಾಲೆಗಳಲ್ಲಿ ಮೂಲಸೌಕರ್ಯಗಳು ಇಲ್ಲದಿದ್ದರೂ ಸಹ ಬಡವರ ಮಕ್ಕಳೆ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗಿದೆ. ಶಾಲೆಗಳಲ್ಲಿ ಸಮರ್ಪಕವಾದ ಮೂಲಸೌಲಭ್ಯಗಳ ವ್ಯವಸ್ಥೆ ಇಲ್ಲದೇ ಮಕ್ಕಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ ಮತ್ತು ವಂಚಿತರಾಗುತ್ತಿದ್ದಾರೆ. ಆದ್ದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚಬಾರದು. ಅವುಗಳ ಉಳಿವಿಗಾಗಿ ಮತ್ತು ಅವುಗಳ ಅಭಿವೃದ್ಧಿಗಾಗಿ ಸರ್ಕಾರಗಳು ಆದ್ಯತೆ ನೀಡಬೇಕಾಗಿದೆ.

ಮಕ್ಕಳ ದಾಖಲಾತಿ ಕಡಿಮೆ ಇರುವ ಸರ್ಕಾರಿ ಶಾಲೆಯನ್ನು ಮುಚ್ಚಿ, ಸಮೀಪದ ಶಾಲೆಗಳಿಗೆ ವಿಲೀನಗೊಳಿಸಲಾಗುತ್ತದೆ. ಆದರೆ ಕಡಿಮೆ ಸಂಖ್ಯೆ ಇರುವ ವಿದ್ಯಾರ್ಥಿ ಶಾಲೆಯಲ್ಲಿ ವಿದ್ಯಾರ್ಥಿಗಳನ್ನು ಹೆಚ್ಚಿಸುವಂತೆ ಮಾಡಲು ಆಗುತ್ತಿಲ್ಲ. ಖಾಸಗೀ ಶಾಲೆಗಳು ಮಾತ್ರ ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳನ್ನು ಎದುರಿಸುತ್ತ ಮುಚ್ಚಲ್ಪಡದೆ, ಇನ್ನೂ ಹೆಚ್ಚಿನ ಸಂಖ್ಯೆಯಲ್ಲಿ ಸ್ಥಾಪಿಸಲ್ಪಡುತ್ತಿವೆ. ಏಕೆಂದರೆ ಖಾಸಗೀ ಶಾಲೆಗಳು ದೊಡ್ಡ-ದೊಡ್ಡ ಪ್ರಭಾವಿ ರಾಜಕಾರಣಿಗಳ, ಆರ್ಥಿಕವಾಗಿ ಸದೃಢವಾಗಿರುವ ಜನರ, ಬಂಡವಾಳಿಗಾರ ಕೈಯಲ್ಲಿವೆ. ಆದ್ದರಿಂದ ಅವುಗಳು ಇನ್ನೂ ಹೆಚ್ಚು-ಹೆಚ್ಚು ಅಭಿವೃದ್ಧಿ ಹೊಂದುತ್ತ ಹೋಗುತ್ತಿವೆ. ಆದರೆ ಸರ್ಕಾರಿ ಶಾಲೆಗಳು ಮಾತ್ರ ಸರ್ಕಾರಗಳ ಕೈಯಲ್ಲಿರುವುದರಿಂದ ಆ ಶಾಲೆಗಳು ಮಾತ್ರ ನಾನಾ ಕಾರಣಗಳಿಂದ ಮುಚ್ಚಲ್ಪಡುತ್ತಿವೆ. ಸರ್ಕಾರಗಳು ದೇವಾಲಯಗಳಿಗೆ, ಮಠ ಮಾನ್ಯಗಳಿಗೆ ಮತ್ತು ಜಿಲ್ಲಾ, ತಾಲ್ಲೂಕು ಉತ್ಸವಗಳಿಗೆ ಹೀಗೆ ಇನ್ನೂ ಮುಂತಾದವುಗಳಿಗೆ ಕೋಟಿ-ಕೋಟಿ ಅನುದಾನವನ್ನು ನೀಡುತ್ತಿವೆ. ಅದೇ ರೀತಿಯಲ್ಲಿ ಸರ್ಕಾರಿ ಶಾಲೆಗಳ ಅಭಿವೃದ್ಧಿಗಾಗಿ ಹೆಚ್ಚಿನ ಅನುದಾನವನ್ನು ನೀಡಬೇಕಾಗಿದೆ. ಸರ್ಕಾರಿ ಶಾಲೆಗಳು ಎದುರಿಸುತ್ತಿರುವ ಎಲ್ಲಾ ಮೂಲಸೌಲಭ್ಯಗಳ ಸಮಸ್ಯೆಗಳನ್ನು ಬಗೆಹರಿಸುವ ಮೂಲಕ ವಿದ್ಯಾರ್ಥಿಗಳ ಉತ್ತಮವಾದ ಭವಿಷ್ಯವನ್ನು ರೂಪಿಸಲು ಸರ್ಕಾರ ಮುಂದಾಗಬೇಕಾಗಿದೆ.

ಇತ್ತೀಚಿಗೆ ರಾಜ್ಯದಲ್ಲಿ ಸುದ್ದಿಯಾದ ಸಂಗತಿ ಎಂದರೆ, ಮಕ್ಕಳ ಕೊರತೆಯ ನೆಪಯೊಡ್ಡಿ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಿರುವ ಹಾಗೂ ತಮ್ಮ ಮಕ್ಕಳನ್ನು ಉತ್ತಮವಾದ ಖಾಸಗೀ ಶಾಲೆಯಲ್ಲಿಯೇ ಓದಿಸಬೇಕು ಎಂದು ಚಿಂತಿಸುವವರ ಜನರ ಇಂದಿನ ಮನಸ್ಥಿತಿಯಲ್ಲಿ ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲ್ಲೂಕಿನ ಮುತ್ತಿಗೆಪುರದಲ್ಲಿ ಮುದ್ರಮನೆ ಕಾಫಿ ಕ್ಯೂರಿಂಗ್ ಸಂಸ್ಥೆಯ ಮಾಲೀಕರೊಬ್ಬರು ತಮ್ಮ ಘಟಕದ ಸಮೀಪದಲ್ಲಿರುವ ಸರ್ಕಾರಿ ಶಾಲೆಯ ಅಭಿವೃದ್ಧಿಗೆ ಆರ್ಥಿಕ ನೆರವು ನೀಡಿ, ತಮ್ಮ ಪುತ್ರನನ್ನು ಅದೇ ಸರ್ಕಾರಿ ಶಾಲೆಗೆ ಸೇರಿಸಿ ಶಿಕ್ಷಣ ಕೊಡಿಸಿ ಇನ್ನೊಬ್ಬರಿಗೆ ಮಾದರಿಯಾಗಿರುವುದು ಮತ್ತು ಇವರು ಮಾತ್ರವಲ್ಲದೆ ಇದೇ ಶಾಲೆಗೆ ಸ್ಥಳೀಯರಾದ ಸೌದಿ ಅರೇಬಿಯಾದಲ್ಲಿರುವ ಉದ್ಯಮಿ, ಶರ್ಲಿನ್ ವಿಲಿಯಮ್ಸ್ ಕಂಪನಿ, ಯೂತ್ ಫಾರ್ ಸೇವಾ ಸಂಸ್ಥೆಗಳು ಸರ್ಕಾರಿ ಶಾಲೆಗೆ ವಿವಿಧ ರೀತಿಯಲ್ಲಿ ದಾನ ಮಾಡಿ ಶಾಲೆಯನ್ನು ರಾಜ್ಯ ಮತ್ತು ಜಿಲ್ಲೆಗೆ ಮಾದರಿಯಾಗಿರುವುದು ಮತ್ತು ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೆರವು ನೀಡಿ ಸಹಕರಿಸಿರುವುದು ಸಂತಸದ ಹಾಗೂ ಹೆಮ್ಮೆಯ ಸಂಗತಿ. ಸರ್ಕಾರಿ ಶಾಲೆಯ ಅಭಿವೃದ್ಧಿಗೆ ನೆರವು ನೀಡಲು ಶ್ರಮಿಸಿರುವ ಎಲ್ಲ ದಾನಿಗಳಿಗೂ ಈ ಮೂಲಕ ಧನ್ಯವಾದಗಳು. ಅದೇ ರೀತಿಯಲ್ಲಿ ಈ ಶಾಲೆಯಲ್ಲಿ ಬಡ

ಮತ್ತು ಕಡು ಬಡವರ ಮಕ್ಕಳು ಕಲಿಯಲು ಮೊದಲು ಆದ್ಯತೆ ನೀಡಬೇಕಾಗಿದೆ. ಜೊತೆಗೆ ಎಲ್ಲ ವರ್ಗದವರಿಗೂ ಶಿಕ್ಷಣ ಕಲಿಯುವ ಅವಕಾಶ ಸಿಗುವಂತಾಗಬೇಕಾಗಿದೆ.

ಇದು ವಿದ್ಯಾರ್ಥಿಗಳು ಎದುರಿಸುತ್ತಿರುವ ಸಮಸ್ಯೆಗಳು ಒಂದೆಡೆಯಾದರೆ, ಮತ್ತೊಂದೆಡೆ ಸರ್ಕಾರಿ ಶಾಲೆಯ ಶಿಕ್ಷಕರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಶಿಕ್ಷಕರು ವಿದ್ಯಾರ್ಥಿಗಳಿಗೆ ಉತ್ತಮವಾದ ಬೋಧನೆಯನ್ನು ಮಾಡುವುದರ ಮೂಲಕ ಉತ್ತಮವಾದ ವಿದ್ಯಾರ್ಥಿಗಳನ್ನಾಗಿ ರೂಪಿಸುವುದು ಮತ್ತು ಶಾಲೆಗಳಿಗೆ ಉತ್ತಮವಾದ ಫಲಿತಾಂಶ ಬರುವಂತೆ ಮಾಡುವುದು ಶಿಕ್ಷಕರ ಆದ್ಯ ಕರ್ತವ್ಯವಾಗಿದೆ. ಅದಕ್ಕಾಗಿಯೇ ಶಿಕ್ಷಕರು ತಮ್ಮ ಸಮಯವನ್ನೆಲ್ಲ ವಿದ್ಯಾರ್ಥಿಗಳಿಗೆ ಕಲಿಸುವುದಾಗಿಯೇ ಮೀಸಲಿಡಬೇಕಾಗುತ್ತದೆ. ಆದರೆ ಅದು ಸಾಧ್ಯವಾಗುತ್ತಿಲ್ಲ. ಏಕೆಂದರೆ, ಶಿಕ್ಷಕರು ವಿದ್ಯಾರ್ಥಿಗಳಿಗೆ ಬೋಧನೆ ಮಾಡುವುದರ ಜೊತೆಗೆ ಬೇರೆ-ಬೇರೆ ಕೆಲಸವನ್ನು ಮಾಡಬೇಕಾಗಿರುವ ಒತ್ತಡವು ಸಹ ಇದೆ. ಏನೆಂದರೆ, ಶಿಕ್ಷಕರೆ ಶಾಲೆಯಲ್ಲಿ ಮೊಟ್ಟೆ, ಬಾಳೆಹಣ್ಣು, ಶೇಂಗಾ ಚಿಕ್ಕಿಯನ್ನು ವಿತರಿಸಬೇಕಾಗಿದೆ. ಬಿಸಿಯೂಟದ ತಯಾರಿಕೆ ನಿರ್ವಹಣೆ ಮಾಡಬೇಕಾಗಿದೆ. ಪೌಷ್ಟಿಕ ಆಹಾರ ಪಡೆದ ಮಕ್ಕಳ ಮಾಹಿತಿಯನ್ನು ಕಡ್ಡಾಯವಾಗಿ ಎಸ್‌ಎಟಿಎಸ್‌ನಲ್ಲಿ ನಮೂದಿಸುವ ಜವಾಬ್ದಾರಿಯನ್ನು ನಿರ್ವಹಿಸಬೇಕಾಗಿದೆ. ಇದರೊಂದಿಗೆ ಸರ್ಕಾರ ರೂಪಿಸುವಂತಹ ಎಲ್ಲಾ ಯೋಜನೆಗಳನ್ನು ಸಮರ್ಪಕವಾಗಿ ಅನುಷ್ಠಾನಗೊಳಿಸಬೇಕಾದ ಹೊಣೆಗಾರಿಕೆ ಇದೆ.

ಹೀಗೆ ಇನ್ನೂ ಕೆಲವು ಕೆಲಸಗಳನ್ನು ಶಿಕ್ಷಕರೆ ನಿರ್ವಹಿಸಬೇಕಾದ ಪರಿಸ್ಥಿತಿ ಇದೆ. ಇದರಿಂದ ಮಕ್ಕಳಿಗೆ ಗುಣಾತ್ಮಕ ಶಿಕ್ಷಣ ನೀಡಲು ಕಷ್ಟವಾಗುತ್ತಿದೆ. ಜೊತೆಗೆ ಬೋಧನೆಯೊಂದಿಗೆ ಬೇರೆ-ಬೇರೆ ಕೆಲಸಗಳ ಒತ್ತಡದಿಂದ ಶಿಕ್ಷಕರು ಅನೇಕ ಕಾಯಿಲೆಗಳಿಗೆ ತುತ್ತಾಗುತ್ತಿರುವುದು ಹಾಗೂ ಹೃದಯಘಾತದಿಂದ ಸಾವನ್ನಪ್ಪಿರುವುದನ್ನು ಇತ್ತೀಚಿಗೆ ನಡೆದ ಅಧ್ಯಯನದಿಂದ ತಿಳಿದುಬಂದಿರುವುದನ್ನು ನಾವು ಗಮನಿಸಿದ್ದೇವೆ. ಆದ್ದರಿಂದ ಸರ್ಕಾರಿ ಶಾಲೆಗಳಲ್ಲಿ ಶಿಕ್ಷಕರನ್ನು ಪ್ರಧಾನವಾಗಿ ಕಲಿಕೆಗೆ ಮಾತ್ರ ತೊಡಗಿಸಿಕೊಂಡು ಎಲ್ಲಾ ರೀತಿಯ ಕಲಿಕೇತರ ಕೆಲಸಗಳಿಂದ ಅವರನ್ನು ಮುಕ್ತಗೊಳಿಸಬೇಕಾಗಿದೆ. ಇಂತಹ ಹೊಣೆಗಾರಿಕೆಯಿಂದ ಶಿಕ್ಷಕರನ್ನು ಮುಕ್ತಿಗೊಳಿಸಿ, ಅವರ ಆರೋಗ್ಯದ ಸುರಕ್ಷತೆಗೆ ಮತ್ತು ಮಕ್ಕಳ ಕಲಿಕೆಗೆ ಹೆಚ್ಚು ಆದ್ಯತೆಯನ್ನು ನೀಡಬೇಕಾಗಿದೆ. ಮೊದಲೇ ಶಿಕ್ಷಕರ ಕೊರತೆಯಿಂದ ತತ್ತರಿಸಿರುವ ಸರ್ಕಾರಿ ಶಾಲೆಗಳಲ್ಲಿ ಇರುವ ಅಲ್ಪ ಶಿಕ್ಷಕರಿಗೆ ಎಲ್ಲಾ ಕೆಲಸವನ್ನು ನಿರ್ವಹಿಸುವಂತೆ ಮಾಡಿದರೆ ಅವರು ಆ ಕಲಿಕೇತರ ಕೆಲಸವನ್ನು ಅವರು ನಿರ್ವಹಿಸುವಾಗಲೇ ಶಾಲಾ ಸಮಯ ಮುಗಿದು ಹೋಗುತ್ತದೆ. ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣ ನೀಡಲು ಸಾಧ್ಯವಾಗುತ್ತಿಲ್ಲ. ಆದುದರಿಂದ ಕಲಿಕೇತರ ಕೆಲಸಕ್ಕಾಗಿಯೇ ಸರ್ಕಾರ ಕೂಡಲೇ ಬೇರೆ. ಸಿಬ್ಬಂದಿಗಳನ್ನು ನೇಮಕ ಮಾಡುವುದರ ಮೂಲಕ ಅವರಿಗೆ ಈ ಜವಾಬ್ದಾರಿಯನ್ನು ವಹಿಸಿ ಶಿಕ್ಷಕರನ್ನು ಇಂತಹ ಒತ್ತಡದ ಕೆಲಸಗಳಿಂದ ಮುಕ್ತಿಗೊಳಿಸಬೇಕಾಗಿರುವುದು ತುರ್ತಿನ ಕಾರ್ಯವಾಗಬೇಕಾಗಿದೆ.

ಈ ಹಿನ್ನೆಲೆಯಲ್ಲಿ ಸರ್ಕಾರಿ ಶಾಲೆಗಳು ಮುಚ್ಚದಂತೆ ಹಾಗೂ ಇದರಿಂದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕಾಗಿದೆ. ಶಾಲೆಗಳಲ್ಲಿ ಅಸ್ಪೃಶ್ಯತೆ ಆಚರಣೆ ಇನ್ನೂ ಜೀವಂತವಾಗಿದ್ದು, ಅದನ್ನು ಸಂಪೂರ್ಣವಾಗಿ ನಿರ್ಮೂಲನೆ ಮಾಡಬೇಕಾಗಿದೆ. ಆದುದರಿಂದ ಸರ್ಕಾರಿ ಶಾಲೆಗಳ ಉಳಿವಿಗಾಗಿ ಮತ್ತು ಅಭಿವೃದ್ಧಿಗಾಗಿ ಸರ್ಕಾರ ಮುಂದಾಗಬೇಕಾಗಿದೆ. ಜೊತೆಗೆ ಜನಪ್ರತಿನಿಧಿಗಳನ್ನೊಳಗೊಂಡಂತೆ ಸಾಮಾಜಿಕ ಕಳವಳಿ ಇರುವ ಎಲ್ಲರೂ ಸಹ ಸರ್ಕಾರಿ ಶಾಲೆಯನ್ನು ಉಳಿಸುವ, ಬೆಳೆಸುವ ಮತ್ತು ಅಭಿವೃದ್ಧಿಗೊಳಿಸುವ ಮನೋಭಾವನೆಯನ್ನು ಬೆಳೆಸಿಕೊಳ್ಳಬೇಕಾಗಿರುವುದು ಇಂದು ಅತ್ಯಗತ್ಯವಾಗಿದೆ.

ಡಾ.ಮಹೇಶ್.ಕೂದುವಳ್ಳಿ.

About Author

Leave a Reply

Your email address will not be published. Required fields are marked *