ಬೆಂಗಳೂರು ಅಂತರಾಷ್ಠ್ರೀಯ ಚಲನಚಿತ್ರೋತ್ಸವ, ನಟ್ಟು – ಬೋಲ್ಟು, ಟೈಟ್
1 min read
ನಟ್ಟು – ಬೋಲ್ಟು – ಸಿನಿಮಾ – ಜನ – ಸಮಾಜ – ಮನಸ್ಸು..
ಬೆಂಗಳೂರು ಅಂತರಾಷ್ಠ್ರೀಯ ಚಲನಚಿತ್ರೋತ್ಸವ,
ನಟ್ಟು – ಬೋಲ್ಟು,
ಕನ್ನಡ ಚಿತ್ರರಂಗದವರ ಬೇಜವಾಬ್ದಾರಿ, ಉಪಮುಖ್ಯಮಂತ್ರಿ ಶಿವಕುಮಾರ್ ಅವರ ದುರಹಂಕಾರ,
ಚಲನಚಿತ್ರ ವಾಣಿಜ್ಯ ಮಂಡಳಿ ಮತ್ತು ಸರ್ಕಾರದ ನಡುವೆ ಸಂಪರ್ಕ ಸೇತುವೆಯ ಕೊರತೆ…….
ಭಾರತದ ಮಟ್ಟಿಗೆ ರಾಜಕೀಯ, ಧರ್ಮ, ಸಿನಿಮಾ ಮತ್ತು ಕ್ರಿಕೆಟ್ ಒಂದು ರೀತಿಯಲ್ಲಿ ತೀವ್ರ ಭಾವೋತ್ಕರ್ಷ ಅಥವಾ ಭಾವನೆಗಳ ಉತ್ತುಂಗ ಅಥವಾ ಅತಿರೇಕಕ್ಕೆ ಕೊಂಡೊಯ್ಯುವ ಕ್ಷೇತ್ರಗಳಾಗಿವೆ. ಸಾಮಾನ್ಯ ಜನರ ಭಾವೋದ್ವೇಗವನ್ನು ಈ ವಿಷಯಗಳಲ್ಲಿ ತಡೆಯುವುದು ತುಂಬಾ ಕಷ್ಟ…..
ಸ್ವಾತಂತ್ರ್ಯ ಬಂದ ಪ್ರಾರಂಭದಲ್ಲಿ ಸೇವೆಯಾಗಿದ್ದ ರಾಜಕೀಯ, ಮೌಲ್ಯವಾಗಿದ್ದ ಧರ್ಮ, ಕ್ರಿಯಾತ್ಮಕ ಮತ್ತು ಮಾನವೀಯ ಸಂಬಂಧಗಳಾಗಿದ್ದ ಸಿನಿಮಾ ಹಾಗು ಸ್ಪರ್ಧಾತ್ಮಕವಾಗಿದ್ದ ಕ್ರಿಕೆಟ್ ಇತ್ತೀಚಿನ ದಶಕಗಳಲ್ಲಿ ಸಂಪೂರ್ಣ ವ್ಯಾಪಾರೀಕರಣವಾಗಿದೆ. ಹಣ ಕೇಂದ್ರೀಕೃತವಾಗಿಯೇ ಎಲ್ಲವನ್ನು ನೋಡಲಾಗುತ್ತಿದೆ…..
ರಾಜಕೀಯ ಜಾತಿ ಮತ್ತು ಭ್ರಷ್ಟಾಚಾರದಿಂದ ತುಂಬಿ ತುಳುಕುತ್ತಿದ್ದರೆ, ಧರ್ಮ ಅಸಹಿಷ್ಣುತೆಯ, ಗಲಭೆಗಳ ಗೂಡಾಗಿದ್ದರೆ, ಕ್ರಿಕೆಟ್ ಹರಾಜಿಗೆ ನಿಂತು ಬುಕ್ಕಿಗಳ ಜೂಜಾಟವಾಗಿದ್ದರೆ, ಸಿನಿಮಾ ದ್ವೇಷ, ಹಿಂಸೆ, ಕೂಲೆ ಮತ್ತು ಸಂಪೂರ್ಣ ವಿರುದ್ಧ ಮೌಲ್ಯಗಳ ಪ್ರತಿಪಾದನೆಗೆ ಇಳಿದಿದೆ…….
ಇಂತಹ ಸಂದರ್ಭದಲ್ಲಿ ಅಂತರಾಷ್ಟ್ರೀಯ ಚಲನಚಿತ್ರೋತ್ಸವಗಳು ಸಿನಿಮಾ ರಂಗದ ಜೀವನಾಡಿಯಂತೆ, ಉತ್ಸಾಹದ ಚಿಲುಮೆಯಂತೆ, ಸಿನಿಮಾ ನಿರ್ಮಾಣ – ನಿರ್ದೇಶನದ ಪುನರುಜ್ಜೀವನ ಪ್ರಕ್ರಿಯೆಯ ಭಾಗದಂತೆ, ನಿರ್ದೇಶಕ – ನಿರ್ಮಾಪಕರ ಕ್ರಿಯಾತ್ಮಕತೆಯ ಸರಕಿನಂತೆ ಕೆಲಸ ಮಾಡಬೇಕಾದ ಸನ್ನಿವೇಶದಲ್ಲಿ ನಿಜಕ್ಕೂ ವಿವಾದವಾಗುತ್ತಿರುವುದು ಒಳ್ಳೆಯ ಲಕ್ಷಣವಲ್ಲ…..
ಮೊನ್ನೆ ನಡೆದ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವದ ಉದ್ಘಾಟನಾ ಕಾರ್ಯಕ್ರಮದಲ್ಲಿ ಕನ್ನಡ ಚಿತ್ರರಂಗದ ನಟ ನಟಿಯರು, ತಂತ್ರಜ್ಞರು ಇತ್ಯಾದಿಗಳು ಅದರಲ್ಲಿ ಸರಿಯಾಗಿ ಭಾಗವಹಿಸದೆ ಬೇರೆ ನೆಪಗಳನ್ನು ಹೇಳಿಕೊಂಡು ನಿರ್ಲಕ್ಷ ತೋರಿದ್ದು ಅತ್ಯಂತ ಬೇಜವಾಬ್ದಾರಿ. ಇರುವ ಕೆಲವೇ ಸಂಖ್ಯೆಯ ಚಿತ್ರೋದ್ಯಮಿಗಳು ಕನಿಷ್ಠ ಎಲ್ಲಾ ಅಸಮಾಧಾನ, ಅಪಸ್ವರಗಳ ನಡುವೆಯೂ ಆ ಕಾರ್ಯಕ್ರಮದಲ್ಲಿ ಭಾಗವಹಿಸಬೇಕಾಗಿದ್ದು ಅವರ ಕರ್ತವ್ಯ. ಅದನ್ನು ಅವರು ಮಾಡಲಿಲ್ಲ……
ಸೈದ್ಧಾಂತಿಕ ವಿರೋಧಕ್ಕಾಗಿಯೋ, ತಮಗೆ ಪ್ರಾಮುಖ್ಯತೆ ನೀಡಲಿಲ್ಲ ಎನ್ನುವ ಸ್ವಯಂ ಅಹಂನಿಂದಲೂ ಅಥವಾ ಚಿತ್ರೋತ್ಸವಗಳಿಗೂ ನಮಗೂ ಸಂಬಂಧವೇ ಇರುವುದಿಲ್ಲ ಅದು ಕೇವಲ ಬುದ್ಧಿಜೀವಿಗಳ ಕಾರ್ಯಕ್ರಮ ಎನ್ನುವ ದಾರ್ಷ್ಟ್ಯದಿಂದಲೋ ಒಟ್ಟಿನಲ್ಲಿ ಕೆಲವೇ ಕೆಲವು ನಟ ನಟಿಯರು ತಂತ್ರಜ್ಞರು ಮಾತ್ರ ಭಾಗವಹಿಸಿದ್ದು ನಿಜಕ್ಕೂ ಬೇಜವಾಬ್ದಾರಿಯ ಪರಮಾವಧಿ. ಚಿತ್ರರಂಗವೇ ಮುಂದಿನ ದಿನಗಳಲ್ಲಿ ಇದನ್ನು ಸರಿಪಡಿಸಿಕೊಂಡು ಹೋಗಬೇಕು ಮತ್ತು ಸರ್ಕಾರದೊಡನೆ ಸರಿಯಾದ ಹೊಂದಾಣಿಕೆ ಮತ್ತು ಸಂಪರ್ಕ ಸಾಧಿಸಬೇಕು. ಇಲ್ಲದಿದ್ದರೆ ಬೆಂಗಳೂರು ಅಂತರಾಷ್ಟ್ರೀಯ ಚಲನಚಿತ್ರೋತ್ಸವಕ್ಕೆ ಯಾವುದೇ ಮಹತ್ವವಿರುವುದಿಲ್ಲ…..
ಹಾಗೆಯೇ ಆ ಕಾರ್ಯಕ್ರಮದಲ್ಲಿ ಸಭ್ಯತೆಯ ಗೆರೆಯನ್ನು ಮೀರಿ ಚಿತ್ರರಂಗಕ್ಕೆ ನಟ್ಟು ಬೋಲ್ಟು ಭಾಷೆ ಉಪಯೋಗಿಸಿದ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರ ಮಾತುಗಳು ಸಹ ಸಹನೀಯವಲ್ಲ. ಅವರ ಮೇಲಿನ ಅಹಂಕಾರಿ ಎನ್ನುವ ಆರೋಪವನ್ನು ದೃಢಪಡಿಸುವಂತಿತ್ತು. ಇದೇ ಚಲನಚಿತ್ರರಂಗದವರ ಮೇಲಿನ ಅಸಮಾಧಾನವನ್ನು, ಕೋಪವನ್ನು ಬೇರೆ ಶಬ್ದಗಳಲ್ಲಿ ಇನ್ನಷ್ಟು ಸಂಯಮದಿಂದ, ವಿನಯ ಪೂರ್ವಕವಾಗಿ ಹೇಳಬಹುದಾಗಿತ್ತು. ಕೆಲವು ನಟ ನಟಿಯರ ಮುಖವಾಡವನ್ನು ಕಳಚಬಹುದಿತ್ತು. ಅವರ ಡಬಲ್ ಗೇಮ್ ಗಳನ್ನು, ಸ್ವಾರ್ಥವನ್ನು, ಭ್ರಮೆಗಳನ್ನು ತೆರೆದಿಡಬೇಕಿತ್ತು, ಖಂಡಿಸಬೇಕಿತ್ತು. ಅದನ್ನು ಅವರು ದುರಹಂಕಾರದಿಂದ ಪ್ರತಿಕ್ರಿಯಿಸಿದ್ದು ಒಪ್ಪುವ ಮಾತಲ್ಲ. ಮುಖ್ಯಮಂತ್ರಿ ಅಪೇಕ್ಷಿತ ಶ್ರೀ ಡಿಕೆ ಶಿವಕುಮಾರ್ ಇನ್ನಾದರೂ ಒಂದಷ್ಟು ಪ್ರಬುದ್ಧವಾಗಿ ಸಾರ್ವಜನಿಕವಾಗಿ ಮಾತನಾಡುವುದನ್ನು ರೂಢಿಸಿಕೊಂಡರೆ ಉತ್ತಮ……
ಇದೀಗ ಈ ಎರಡರ ಮಧ್ಯೆ ಅಂದರೆ ಬೇಜವಾಬ್ದಾರಿ ಮತ್ತು ಅಹಂಕಾರದ ಮಧ್ಯೆ ಒಂದಷ್ಟು ಸಂಪರ್ಕ ಸಾಧಿಸಿ ಮುಂದಿನ ವರ್ಷದ ಚಿತ್ರೋತ್ಸವವನ್ನಾದರೂ ಉತ್ತಮ ರೀತಿಯಲ್ಲಿ ನಡೆಸಿಕೊಂಡು ಹೋಗಲಿ ಎಂದು ಆಶಿಸೋಣ…….
ಸಿನಿಮಾ, ಅಭಿನಯ ಮತ್ತು ಸಮಾಜದ ಬಗ್ಗೆ ಸಣ್ಣ ಅನಿಸಿಕೆ….
ಭಾರತೀಯ ಚಿತ್ರರಂಗದ ಚಿತ್ರಕಥೆ ಮತ್ತು ಅಭಿನಯ ಶೈಲಿಯಲ್ಲಿ ಸ್ವಾತಂತ್ರ್ಯ ನಂತರದಿಂದ ಇಲ್ಲಿಯವರೆಗೂ ಆದ ಬದಲಾವಣೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಿದಾಗ ನಮ್ಮ ಸಮಾಜದ ಸಾಮಾಜಿಕ ವ್ಯವಸ್ಥೆ ಮತ್ತು ವೀಕ್ಷಕರ ಮಾನಸಿಕ ಸ್ಥಿತಿಯು ಹೇಗೆ ಪರಿವರ್ತನೆ ಹೊಂದಿದೆ ಮತ್ತು ಯಾವ ದಿಕ್ಕಿನತ್ತ ಸಾಗಿದೆ ಎಂಬುದರ ಒಳನೋಟ ಗೋಚರಿಸುತ್ತದೆ…..
ತೀರಾ ಆಳಕ್ಕೆ ಇಳಿಯದೆ ಸರಳವಾಗಿ ಕೆಲವೇ ವಾಕ್ಯಗಳಲ್ಲಿ ಅದನ್ನು ಹಿಡಿದಿಡುವ ಒಂದು ಸಣ್ಣ ಪ್ರಯತ್ನ…….
ಪ್ರಾರಂಭದ ಪೌರಾಣಿಕ, ಐತಿಹಾಸಿಕ, ಕೌಟುಂಬಿಕ, ಗ್ರಾಮೀಣ ಹಿನ್ನೆಲೆಯ ಚಿತ್ರಕಥೆಗಳಿಂದ ಇಂದಿನ ತಾಂತ್ರಿಕ ಪ್ರಾವಿಣ್ಯತೆಯ ಆಧುನಿಕ ಚಿತ್ರಗಳವರೆಗೆ ಪ್ರೀತಿ, ಪ್ರೇಮ, ಪ್ರಣಯ, ರಾಜಕೀಯ, ಹಾಸ್ಯ, ನಿಗೂಢ, ಫ್ಯಾಂಟಸಿ, ವಿಡಂಬನೆ, ಮಕ್ಕಳು, ಪ್ರಕೃತಿ, ಪರಿಸರ, ಭಯಾನಕ ಮುಂತಾದ ಎಲ್ಲಾ ಪ್ರಕಾರದ ಚಿತ್ರಗಳು ಆಯಾ ಕಾಲದ ಜನರ ಜೀವನಶೈಲಿಯನ್ನು ಪ್ರತಿನಿಧಿಸುತ್ತದೆ……
ಎರಡು ಮೂರು ಗಂಟೆ ಸಮಯದ ಚಲನಚಿತ್ರ ಸಂಪೂರ್ಣ ಕಾಲ್ಪನಿಕತೆಯನ್ನು ಸಾಂಕೇತಿಕವಾಗಿ ಹೊಂದಿದ್ದರೂ ವಾಸ್ತವದ ನೆಲೆಯ ಮೇಲೆಯೇ ನಿಂತಿರುತ್ತದೆ. ಸಾಹಿತ್ಯದಂತೆ ನಿರ್ದೇಶಕನ ಕಲ್ಪನೆಗೆ ತಕ್ಕಂತೆ ಚಿತ್ರಕಥೆ ವಿಜೃಂಭಿಸಿದರೂ, ಹಾಡು ಸಂಗೀತ ಸಂಕಲನ ಹೊಡೆದಾಟಗಳಿದ್ದರೂ, ಒಟ್ಟು ಆಶಯ ಸಾಮಾಜಿಕ ವ್ಯವಸ್ಥೆಯ ಪ್ರತಿಫಲನವೇ ಆಗಿರುತ್ತದೆ….
ಇಂದಿನ ದಿನಮಾನದ ಮೌಲ್ಯಗಳ ಕುಸಿತ, ಆಧುನಿಕತೆಯಿಂದಾದ ಮಾನಸಿಕ ತಳಮಳ, ಸಂಬಂಧಗಳ ಹುಡುಕಾಟ, ಎಲ್ಲವನ್ನೂ ತಮ್ಮ ತಿಳುವಳಿಕೆ ಮತ್ತು ಸ್ವಾರ್ಥದಿಂದ ಸಮರ್ಥಿಸಿಕೊಳ್ಳುವ ಜಾಣತನ ಎಲ್ಲವೂ ಹೇಗೆ 80 ವರ್ಷಗಳಷ್ಟು ಸಮಯದಲ್ಲಿ ಸೂಕ್ಷ್ಮವಾಗಿ ಬದಲಾಗುತ್ತಾ ಸಾಗುತ್ತಿದೆ ಎಂಬುದನ್ನು ಗಮನಿಸಿಬಹುದು…..
ಹಾಗೆಯೇ ನಟರ ಅಭಿನಯ ಶೈಲಿಯೂ, ಭಾವನೆಗಳನ್ನು ವ್ಯಕ್ತಪಡಿಸುವ ರೀತಿಯಲ್ಲಿಯೂ ತೀವ್ರ ಸ್ವರೂಪದ ಬದಲಾವಣೆಗಳನ್ನು ಗುರುತಿಸಬಹುದು.
ಉದಾಹರಣೆಗೆ ತಮಿಳಿನ ಶಿವಾಜಿ ಗಣೇಶನ್, ಕನ್ನಡದ ಕಲ್ಯಾಣ್ ಕುಮಾರ್ ಉದಯ್ ಕುಮಾರ್, ತೆಲುಗಿನ ನಾಗೇಶ್ವರರಾವ್, ಮಲೆಯಾಳಂ ಪ್ರೇಮ್ ನಜೀರ್, ಹಿಂದಿಯ ದಿಲೀಪ್ ಕುಮಾರ್ ಮುಂತಾದವರು ತೀವ್ರ ಭಾವನಾತ್ಮಕ ಸನ್ನಿವೇಶಗಳಲ್ಲಿ ಅದರಲ್ಲೂ ತನ್ನ ತಾಯಿ ಅಥವಾ ತಂದೆಯ ಅಥವಾ ಪ್ರೇಯಸಿಯ ಸಾವಿನ ದೃಶ್ಯಗಳಲ್ಲಿ ಆಕಾಶದೆತ್ತರಕ್ಕೆ ಧ್ವನಿ ಕೇಳುವಂತೆ ಕಿರುಚುತ್ತಾ ಗೋಳಾಡುತ್ತಿದ್ದರು…..
ಮುಂದೆ ಕಮಲಹಾಸನ್, ಮಮ್ಮೂಟಿ, ಚಿರಂಜೀವಿ, ವಿಷ್ಣುವರ್ಧನ್, ಅಮಿತಾಭ್ ಬಚ್ಚನ್ ಮುತಾಂದವರು ಕೆಲವು ಸಿನಿಮಾಗಳಲ್ಲಿ ಒಂದು ಪರಿವರ್ತನೆಯಾಗಿ ಕಣ್ಣ ಹನಿಯನ್ನು ಜಾರಿಸುವ ಮುಖಾಂತರ ಮೌನ ರೋದನೆಯನ್ನು ಮುಖಭಾವದಲ್ಲಿ ವ್ಯಕ್ತಪಡಿಸಿದರು. ಇದೀಗ ಸುದೀಪ್, ಮಹೇಶ್ ಬಾಬು, ಅಲ್ಲು ಅರ್ಜುನ್, ತಮಿಳು ವಿಜಯ್ ರಣಧೀರ್ ಕಪೂರ್ ಮುಂತಾದವರು ಸಾವು ಸಹಜ ಕ್ರಿಯೆ , ಸಾವಿನ ನಂತರದ ನೋವನ್ನು ಹೆಚ್ಚು ತೋರ್ಪಡಿಸುವುದಕ್ಕಿಂತ ಬದುಕಿರುವಾಗ ತಾವು ತಮ್ಮ ಪ್ರೀತಿ ಪಾತ್ರರಿಗೆ ತೋರಿಸುವ ನಮ್ಮ ಜವಾಬ್ದಾರಿ ಮುಖ್ಯವಾಗಿರುತ್ತದೆ. ಅದು ಸರಿಯಾಗಿದ್ದಲ್ಲಿ ಸಾವಿನ ತೀವ್ರತೆ ನಮಗೆ ಅಷ್ಟಾಗಿ ಕಾಡುವುದಿಲ್ಲ ಎಂಬ ಅರ್ಥದಲ್ಲಿ ಭಾವನೆಗಳನ್ನು ನಿಯಂತ್ರಿಸುವುದನ್ನು ಕಾಣಬಹುದು…….
ಹಾಗೆಯೇ ಪ್ರೀತಿ, ಪ್ರೇಮ ರಸಿಕತೆಯ ದೃಶ್ಯಗಳಲ್ಲಿ ರಾಜ್ ಕುಮಾರ್, ಎನ್ ಟಿ ಆರ್, ಎಂ ಜಿ ಆರ್ ಮೋಹನ್ ಲಾಲ್ ರಾಜೇಶ್ ಖನ್ನ ಮುಂತಾದವರು ವ್ಯಕ್ತಪಡಿಸುವ ಭಾವನೆಗಳಿಗೂ ಶಾರುಕ್ ಖಾನ್, ಅಜಿತ್, ವಿಕ್ರಂ, ಪ್ರಭಾಸ್, ಮುಂತಾದ ನಟರ ಕಿಲ್ಲಿಂಗ್ ದೃಷ್ಟಿಗೂ ಬಹಳಷ್ಟು ವ್ಯತ್ಯಾಸ ಗಮನಿಸಬಹುದು….
ಇನ್ನೂ ಮುಂದುವರಿದು ಯಶ್, ವಿಜಯ್, ದುಲ್ಷನ್, ನಾಗ ಚೈತನ್ಯ ಮುಂತಾದವರು ಹಾಸ್ಯ ಮತ್ತು ತಿರಸ್ಕಾರದಿಂದಲೇ ತೀವ್ರ ಪ್ರೀತಿ ವ್ಯಕ್ತಪಡಿಸುವ ರೀತಿ ನಮ್ಮ ಯುವ ಪ್ರೇಮಿಗಳ ಭಾವನೆಯ ಪ್ರತಿಬಿಂಬದಂತೆಯೇ ಇದೆ….
ಇನ್ನು ಸಂಪೂರ್ಣ ತಲೆಗೆ ಸೆರಗು ಹೊದ್ದು, ಕಾಸಿನಗಲ ಕುಂಕುಮವಿಟ್ಟು ಗಂಡಸನ್ನು ನೇರವಾಗಿ ದೃಷ್ಟಿಸಿಯೂ ನೋಡದ ಅಂದಿನ ಕಾಲದ ಮಹಿಳಾ ಪಾತ್ರಧಾರಿಗಳಿಗೂ – ಒಳ ಉಡುಪು ಕಾಣುವ ಮತ್ತು ಅದನ್ನು ಉದ್ದೇಶಪೂರ್ವಕವಾಗಿ ಪ್ರದರ್ಶಿಸಲೇ ಹೊಸ ಹೊಸ ಫ್ಯಾಷನ್ ಟೆಕ್ನಾಲಜಿಯ ಮೊರೆ ಹೋಗಿ ಅದನ್ನೇ ಅಭಿನಯವೆಂದು ಭಾವಿಸುವ ಮಟ್ಟದ ಬದಲಾವಣೆ ಇಂದಿನ ನಟಿಯರಲ್ಲಿ ಕಾಣಬಹುದು…..
ಇದು ಮಹಿಳಾ ಪಾತ್ರಗಳ ಒಂದು ಮುಖವಾದರೆ ಪುರುಷ ಸಾಮ್ರಾಜ್ಯದ ಒಳನುಗ್ಗಿ ಅದನ್ನು ತನ್ನ ಪ್ರತಿಭೆ, ಧೈರ್ಯ, ಚಾಕಚಕ್ಯತೆಯಿಂದ ಗಂಡಸನ್ನೇ ತನ್ನ ಅಡಿಯಾಳಾಗಿ ಮಾಡಿಕೊಳ್ಳುವ ಕೆಚ್ಚೆದೆಯ ಪಾತ್ರಗಳ ಇನ್ನೊಂದು ಮುಖ ಕೂಡ ಅನಾವರಣಗೊಳ್ಳುತ್ತಿದೆ.
ಅಂದಿನ ಪಂಡರೀಬಾಯಿಗೂ – ಇಂದಿನ ರಶ್ಮಿಕಾ ಮಂದಣ್ಣವರೆಗೂ – ಅಂದಿನ ವಹಿದಾ ರೆಹಮಾನ್ ಗೂ – ಇಂದಿನ ಶ್ರದ್ಧಾ ಕಪೂರ್ ಗೂ ಇರಬಹುದಾದ ಅಜಗಜಾಂತರ ವ್ಯತ್ಯಾಸ ಸ್ಪಷ್ಟವಾಗಿ ಗುರುತಿಸಬಹುದು…….
ಹೀಗೆ ಸಿನಿಮಾ ನಮ್ಮ ವ್ಯವಸ್ಥೆಯ ಭಾಗವಾಗಿ ನಮ್ಮೊಂದಿಗೆ ಚಲಿಸುತ್ತಿರುವುದು ಮನರಂಜನೆಯನ್ನೂ ಮೀರಿದ ಅರ್ಥ ಮೂಡಿಸುತ್ತದೆ.
ಚಿತ್ರರಂಗವೆಂಬ ಸಾಗರದಲ್ಲಿ ಒಂದು ಬೊಗಸೆ ನೀರನ್ನು ಕೈಯಲ್ಲಿ ಹಿಡಿದು ಅದರ ರೂಪ ವರ್ಣಿಸಿದ್ದೇನೆ. ಇನ್ನೂ ಅರಿಯಲಾಗದ ಅಸಂಖ್ಯ ವಿಷಯಗಳನ್ನು ನಿಮ್ಮ ಆಯ್ಕೆ, ವಿವೇಚನೆಗೆ ಬಿಡುತ್ತಾ….
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..