ಪಕ್ಷದ ತೀರ್ಮಾನಕ್ಕೆ ಬದ್ದ.ಅನುಕುಮಾರ್.
1 min read
ಪಕ್ಷದ ತೀರ್ಮಾನಕ್ಕೆ ಬದ್ದ.ಅನುಕುಮರ್.
ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೆ.ವೆಂಕಟೇಶ್ ಗೆಲುವು ಪಡೆದಿದ್ದು, ಬಿಜೆಪಿಗೆ ಮುಖಭಂಗವಾಗಿದೆ. ಸಂಸದರು, ಪರಿಷತ್ ಸದಸ್ಯರು ಮತದಾನಕ್ಕೆ ಬಂದರೂ ಸಹ ಪಕ್ಷದ ಸದಸ್ಯ ಪಿ.ಜಿ. ಅನುಕುಮಾರ್ ಮತದಾನದಿಂದ ಹೊರಗುಳಿದಿದ್ದು, ಮತ್ತೊಬ್ಬ ಹಿರಿಯ ಸದಸ್ಯ ಜಿ.ಬಿ. ಧರ್ಮಪಾಲ್ ಕಾಂಗ್ರೇಸ್ ಪಕ್ಷಕ್ಕೆ ಬಹಿರಂಗವಾಗಿ ಬೆಂಬಲಿಸಿದ್ದರಿಂದ ಪಟ್ಟಣ ಪಂಚಾಯಿತಿಯಲ್ಲಿ ಬಹುಮತವಿದ್ದರೂ ಬಿಜೆಪಿಗೆ ಸೋಲುಂಟಾಗಿದೆ.
ಚುನಾವಣೆಗೆ ಭಾಗವಹಿಸದೇ ಹೊರಗುಳಿದು, ಸ್ನೇಹಿತರೊಂದಿಗೆ ಮಹಾಕುಂಬಮೇಳದಲ್ಲಿ ಭಾಗವಹಿಸಲು ತೆರಳಿ ವಾಪಾಸ್ಸಾಗುತ್ತಿರುವ ಬಿಜೆಪಿ ಸದಸ್ಯ, ಮಾಜಿ ಅಧ್ಯಕ್ಷ ಪಿ.ಜಿ.ಅನುಕುಮಾರ್ (ಪುಟ್ಟದೂರು ಪುಟ್ಟಣ್ಣ) ಅವರನ್ನು ಈ ಬಗ್ಗೆ ವಾಹಿನಿಯೊಂದಿಗೆ ದೂರವಾಣಿ ಮೂಲಕ ಮಾತನಾಡಿದಾಗ ಅವರು ಪಕ್ಷದ ಸ್ಥಳೀಯ ನಾಯಕರ ಬಗ್ಗೆ ತಮ್ಮ ಅಸಮದಾನ ಹೊರಹಾಕಿದ್ದಾರೆ.
ಕಳೆದ ಕೆಲ ದಿನಗಳ ಹಿಂದೆ ಕಾಂಗ್ರೇಸ್ ಅಭ್ಯರ್ಥಿಯೊಂದಿಗೆ ನಮ್ಮ ಪಕ್ಷದ ಸದಸ್ಯೆ ಶ್ರೀಮತಿ ಕಮಲಮ್ಮ ಅವರು ಮಾತನಾಡಿರುವ ಆಡಿಯೋ ಸಂಭಾಷಣೆ ನನಗೆ ಅವಮಾನವಾಗುವ ರೀತಿಯಲ್ಲಿ ಇದೆ. ಪುಟ್ಟಣ ಬಿಜೆಪಿಯಿಂದ ಅಭ್ಯರ್ಥಿಯಾದರೆ ನೀವು ಗೆದ್ದಂತೆಯೇ, ಪುಟ್ಟಣ್ಣ ಯಾವುದೇ ಕಾರಣಕ್ಕೂ ಅಧ್ಯಕ್ಷರಾಗಲು ಬಿಡುವುದಿಲ್ಲ ಎಂದು ಕಾಂಗ್ರೇಸ್ ಅಭ್ಯರ್ಥಿಯೊಂದಿಗೆ ಮಾತನಾಡಿದ್ದಾರೆ. ಇದನ್ನು ಗಮನಿಸಿದರೆ ನನ್ನ ವಿರುದ್ಧ ಪಕ್ಷದಲ್ಲಿ ಕೆಲವರು ಷಡ್ಯಂತ್ರ ನಡೆಸುತ್ತಿರುವುದು ಸ್ಪಷ್ಟವಾಗುತ್ತಿದೆ.
ನಾನು ಪಕ್ಷದ ನಿಷ್ಠಾವಂತ ಕಾರ್ಯಕರ್ತನಾಗಿದ್ದು, ಹಲವಾರು ವರ್ಷಗಳಿಂದ ಪಕ್ಷಕ್ಕಾಗಿ ದುಡಿಯುತ್ತಿದ್ದೇನೆ. ಯಾವುದೇ ಫಲಾಪೇಕ್ಷೆಯಿಲ್ಲದೇ ಪಕ್ಷ ಸಂಘಟನೆ ಮಾಡುತ್ತಿದ್ದೇನೆ. ಪಕ್ಷದ ಕಾರ್ಯಕರ್ತರ ಮತ್ತು ಸಾರ್ವಜನಿಕರ ಸಮಸ್ಯೆಗಳಿಗೆ ಸ್ಪಂದಿಸುತ್ತಿದ್ದೇನೆ. ಆದರೆ ಇತ್ತೀಚೆಗೆ ನನಗೆ ಪಕ್ಷದಲ್ಲಿ ಸತತವಾಗಿ ಅವಮಾನ ಆಗುವಂತಹ ಘಟನಾವಳಿಗಳು ನಡೆಯುತ್ತಿವೆ.
ಚುನಾವಣೆಗೆ ಗೈರಾಗಿರುವುದರಿಂದ ಪಕ್ಷವು ಶಿಸ್ತುಕ್ರಮ ಕೈಗೊಂಡರೆ ಯಾವ ರೀತಿ ಎದುರಿಸುತ್ತೀರಿ ಎಂಬ ಪ್ರಶ್ನೆಗೆ ಉತ್ತರಿಸಿ ; ಪಕ್ಷದ ಪ್ರಧಾನ ಕಾರ್ಯದರ್ಶಿಯೊಬ್ಬರು ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಬಹಿರಂಗವಾಗಿ ಕಾಂಗ್ರೇಸ್ ಅಭ್ಯರ್ಥಿಗೆ ಮತದಾನ ಮಾಡಿದ್ದರೂ ಅವರ ವಿರುದ್ಧ ಯಾವುದೇ ಕ್ರಮವಾಗಿಲ್ಲ. ಕೆಲವರನ್ನು ಮಾತ್ರ ಟಾರ್ಗೆಟ್ ಮಾಡಲಾಗುತ್ತಿದೆ. ಇದು ಮನಸ್ಸಿಗೆ ತುಂಬಾ ನೋವುಂಟುಮಾಡಿದೆ. ಪಕ್ಷದ ನಿಲುವಿಗೆ ಬದ್ಧವಾಗಿದ್ದೇನೆ. ಇದರಿಂದಾಗಿ ಮನನೊಂದು ಚುನಾವಣೆಯಿಂದ ಹೊರಗುಳಿದಿದ್ದೇನೆ ಎಂದಿದ್ದಾರೆ.
ನಾನು ಮುಂದೆಯೂ ಬಿಜೆಪಿಯ ನಿಷ್ಠಾವಂತ ಕಾರ್ಯಕರ್ತನಾಗಿರುತ್ತೇನೆ. ನನಗಾಗಿರುವ ಅವಮಾನಕ್ಕೆ ಸೂಕ್ತವಾಗಿ ಸ್ಪಂದನೆ ಸಿಗದೇ ಇರುವುದರಿಂದ ಚುನಾವಣೆಯಿಂದ ಹೊರಗುಳಿದಿದ್ದೇನೆ ಎಂದು ತಿಳಿಸಿದ್ದಾರೆ.
ಶನಿವಾರ ಮೂಡಿಗೆರೆ ಪಟ್ಟಣ ಪಂಚಾಯಿತಿ ಅಧ್ಯಕ್ಷ ಸ್ಥಾನದ ಚುನಾವಣೆಯಲ್ಲಿ ಕಾಂಗ್ರೇಸ್ ಅಭ್ಯರ್ಥಿ ಕೆ.ವೆಂಕಟೇಶ್ 7 ಮತಗಳನ್ನು ಗಳಿಸಿ ಜಯಗಳಿಸಿದರೆ, ಬಿಜೆಪಿಯ ಆಶಾಮೋಹನ್ 6 ಮಗಳನ್ನು ಗಳಿಸಿ ಪರಾಭವಗೊಂಡರು. ಒಂದು ವೇಳೆ ಬಿಜೆಪಿ ಸದಸ್ಯ ಅನುಕುಮಾರ್ ಬಿಜೆಪಿ ಅಭ್ಯರ್ಥಿ ಪರವಾಗಿ ಮತಚಲಾಯಿಸಿದ್ದರೆ ಚಲಾವಣೆಯಾಗಿ ಲಾಟರಿ ಮೂಲಕ ಅಧ್ಯಕ್ಷ ಆಯ್ಕೆ ನಡೆಯುವ ಸಂಭವವಿತ್ತು.