ಮೌಢ್ಯದ ಹೆಸರಿನಲ್ಲಿ ಜಗತ್ತಿನ ಜನರ ವಶೀಕರಣವಾಗುತ್ತಿದೆ: ಮಂಜುನಾಥಸ್ವಾಮಿ*
1 min read
*ಮೌಢ್ಯದ ಹೆಸರಿನಲ್ಲಿ ಜಗತ್ತಿನ ಜನರ ವಶೀಕರಣವಾಗುತ್ತಿದೆ: ಮಂಜುನಾಥಸ್ವಾಮಿ*
*ಅಜ್ಜಂಪುರ01:* ವಿಜ್ಞಾನ ಎಂಬುದು ನಾಗಾಲೋಟದಿಂದ ಜಗತ್ತಿನದ್ದಕ್ಕೂ ಅದೆಷ್ಟೇ ಎತ್ತರಕ್ಕೆ ಚೆಂಡಿನಂತೆ ಪುಟದೇಳುತ್ತಾ ಮುಂದುವರಿಯುತ್ತಿದ್ದರೂ ಕೂಡ, ವೈಚಾರಿಕತೆ ಮತ್ತು ವೈಜ್ಞಾನಿಕತೆ ಪ್ರತಿ ವ್ಯಕ್ತಿಯೊಳಗೆ ನೆಲೆಗೊಳ್ಳದಿದ್ದರೆ ಯಾವುದೇ ದೇಶಕ್ಕೆ ಉತ್ತಮ ಭವಿಷ್ಯ ಇರುವುದಿಲ್ಲ. ಮೌಢ್ಯ ಮತ್ತು ಕಂದಾಚಾರಗಳು ನೇರವಾಗಿ ದೇಶದ ಆರ್ಥಿಕತೆಯ ಮೇಲೆ ದುಷ್ಪರಿಣಾಮ ಬೀರುತ್ತಿವೆ, ಮೂಢನಂಬಿಕೆಗಳು ರೂಢನಂಬಿಕೆಗಳಾಗಿ,ಅವು ನಂಬಿಕೆಯ ಜಾಡಿಯೊಳಗೆ ವೈಚಾರಿಕತೆ ಮತ್ತು ವೈಜ್ಞಾನಿಕತೆಯನ್ನು ಮುಚ್ಚಿಡುವ ಕೆಲಸಮಾಡುತ್ತಿವೆ ಎಂದು ಲೇಖಕ ಹಾಗೂ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಡಿ.ಎಂ ಮಂಜುನಾಥಸ್ವಾಮಿ ಅಭಿಪ್ರಾಯ ಪಟ್ಟರು.
ಅಜ್ಜಂಪುರ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್ಎಸ್ಎಸ್ ಘಟಕ ಮತ್ತು ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಜಿಲ್ಲಾ ಘಟಕವು ಜಂಟಿಯಾಗಿ ಕಾಲೇಜಿನ ಕುವೆಂಪು ಸಭಾಂಗಣದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಸಮಾರಂಭವನ್ನು ಉದ್ದೇಶಿಸಿ ಮಾತನಾಡುತ್ತಾ, ನೊಬೆಲ್ ಪಾರಿತೋಷಕ ವಿಜೇತ ಸರ್ ಸಿ ವಿ ರಾಮನ್ ಮತ್ತು ಇತರೆ ಶ್ರೇಷ್ಠ ವಿಜ್ಞಾನಿಗಳ ಬದುಕು ಬರಹ ಸಂಶೋಧನೆ ಕುರಿತು ಮಾತನಾಡಿದರು. ಗುರು ಪಾಂಡಿತ್ಯದ ಪ್ರತಿರೂಪವಾದರೆ, ಶಿಷ್ಯ ಕುತೂಹಲ ಮತ್ತು ಆಸಕ್ತಿಯ ಪ್ರತಿನಿಧಿಯಾಗಿರಬೇಕು, ಗುರು ತಿಳಿಸಿದ ವಿಷಯವನ್ನು ಕಂಠಪಾಠ ಮಾಡಿ ಒಪ್ಪಿಸುವ ಶಿಷ್ಯನಿಗಿಂತ, ಅದೇ ಗುರುವಿಗೆ ಹತ್ತು ಹಲವು ತನ್ನದೇ ಆದ ಆರೋಗ್ಯಕರವಾದ ಅನುಮಾನದ ಪ್ರಶ್ನೆಗಳನ್ನು ಮುಂದಿಟ್ಟು ಉತ್ತರ ಪಡೆಯುವ ಸ್ವಭಾವ ಪ್ರತಿ ವಿದ್ಯಾರ್ಥಿಗಳಿದ್ದಾಗಬೇಕು, 95 ವರ್ಷಗಳ ಹಿಂದೆ ಭೌತಶಾಸ್ತ್ರದ ವಿಷಯದಲ್ಲಿ ಸರ್ ಸಿ ವಿ ರಾಮನ್ ಅವರಿಗೆ ನೊಬೆಲ್ ಪಾರಿತೋಷಕ ಬಂದಿತ್ತು. ಈ 95 ವರ್ಷಗಳ ನಂತರವೂ ಭಾರತಕ್ಕೆ ಮತ್ತೊಂದು ನೊಬೆಲ್ ಪಾರಿತೋಷಕ ಬರದೇ ಇರುವುದು ಯೋಚಿಸಬೇಕಾದ ಸಂಗತಿಯಾಗಿದೆ. ಮೂಢನಂಬಿಕೆ ಮತ್ತು ಕಂದಾಚಾರಗಳು ಶತಶತಮಾನಗಳ ಹಿಂದಿನಿಂದಲೂ ಇದ್ದರೂ ಕೂಡ, ಅವು ಈಗ ಹಿಂದೆಂದಿಗಿಂತಲೂ ಹೆಚ್ಚು ವ್ಯಾಪಕವಾಗಿ ಧರ್ಮದ ಹೆಸರಿನಲ್ಲಿ ಸಂಸ್ಕೃತಿ ಹೆಸರಿನಲ್ಲಿ ವಿಚಿತ್ರ ಸ್ವರೂಪ ಪಡೆದುಕೊಳ್ಳುತ್ತಿವೆ, ಮೂಢನಂಬಿಕೆ ಮತ್ತು ಕಂದಾಚಾರಗಳನ್ನು ವ್ಯಾಪಕವಾಗಿ ಬೆಳೆಸುವಲ್ಲಿ ದೃಶ್ಯ ಮಾಧ್ಯಮಗಳ ಪಾತ್ರ ಗಣನೀಯವಾಗಿದೆ ಎಂದು ಮಂಜುನಾಥಸ್ವಾಮಿ ವಿಷಾದಿಸಿದರು.
ಕಾರ್ಯಕ್ರಮದ ಉದ್ಘಾಟನೆ ಮಾಡಿ ಅಧ್ಯಕ್ಷತೆ ವಹಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಕೆ. ರಾಜಣ್ಣ ಅವರು, ವೈಚಾರಿಕತೆ ಮತ್ತು ವೈಜ್ಞಾನಿಕತೆಯೊಂದಿಗೆ ದೇಶದ ಉನ್ನತೊನ್ನತವಾದ ಹೊಸ ಹೊಸ ಚಿಂತನೆಗಳಿಗೆ ವಿದ್ಯಾರ್ಥಿಗಳು ತೆರೆದುಕೊಳ್ಳಬೇಕು. ವೈಚಾರಿಕ ಚಿಂತನೆಗಳ ಅಳವಡಿಕೆಗಾಗಿ ಶಿಕ್ಷಣ ತಜ್ಞ ಡಾ. ಹೆಚ್ ನರಸಿಂಹಯ್ಯನವರ ತೆರೆದ ಮನಸ್ಸು ವಿನಂಥಹ ಪುಸ್ತಕಗಳನ್ನು ಓದುವ ಅಭ್ಯಾಸ ರೂಢಿ ಮಾಡಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಕಿವಿ ಮಾತು ಹೇಳಿದರು.
ಅಜ್ಜಂಪುರ ತಾಲೂಕು ಪಂಚಾಯಿತಿ ತರಬೇತಿ ಸಂಯೋಜಕ ಬೇಗೂರು ಮಲ್ಲಿಕಾರ್ಜುನಪ್ಪ ಸರ್ ಸಿ ವಿ ರಾಮನ್ ಅವರ ಜೀವನ ಮತ್ತು ಸಂಶೋಧನೆ ಕುರಿತು ರಾಮನ್ ಬೆಳಕಿನ ಪರಿಣಾಮದ ಬಗ್ಗೆ ಬೆಳಕು ಚೆಲ್ಲಿದರು.
ಎನ್ಎಸ್ಎಸ್ ಕಾರ್ಯಕ್ರಮಾಧಿಕಾರಿ ಆರ್. ಆನಂದ್ ಪ್ರಸ್ತಾವಿಕವಾಗಿ ಮಾತನಾಡಿ , ರಾಷ್ಟ್ರೀಯ ವಿಜ್ಞಾನ ದಿನಾಚರಣೆಯ ಮಹತ್ವ ಮತ್ತು ಮೌಲ್ಯ ಹಾಗೂ ಸಂವಿಧಾನದ ಪ್ರಸ್ತಾವನೆಯಲ್ಲಿ ಅಡಕವಾಗಿರುವ ವೈಚಾರಿಕ ಚಿಂತನೆಯನ್ನು ವಿವರಿಸಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳೊಂದಿಗೆ ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಕುರಿತು ಸಂವಾದ ಮಾಡಿ, ರಸಪ್ರಶ್ನೆ ನೆಡಸಿ, ವಿಜೇತ ವಿದ್ಯಾರ್ಥಿಗಳಿಗೆ ಬಹುಮಾನ ನೀಡಲಾಯಿತು.
ಸಮಾರಂಭದಲ್ಲಿ ಎನ್ಎಸ್ಎಸ್ ಅಧಿಕಾರಿಗಳು ಮತ್ತು ಕಾಲೇಜಿನ ಪ್ರಾಧ್ಯಾಪಕರಾದ ಸತೀಶ್. ಉಮೇಶ್. ಮಂಜುನಾಥ. ನಾಗೇಶ್. ಮೋಹನ್ ಕುಮಾರ್. ಶಿವಮೂರ್ತಿ ಮುಂತಾದವರು ಉಪಸ್ಥಿತರಿದ್ದರು .
ಉಪನ್ಯಾಸಕ ಡಾ. ಆನಂದ್ ವೈಚಾರಿಕ ಚಿಂತನೆಯ ಪ್ರತಿಜ್ಞಾವಿಧಿ ಬೋಧಿಸಿ ಎಲ್ಲರಿಗೂ ಸ್ವಾಗತ ಬಯಸಿದರು. ವಿದ್ಯಾರ್ಥಿಗಳಾದ ಅಶ್ವಿನಿ ಕಾರ್ಯಕ್ರಮವನ್ನು ನಿರೂಪಿಸಿ, ಧನ್ಯ ಪ್ರಾರ್ಥಿಸಿ.ಅಭಿಷೇಕ್ ವಂದಿಸಿದರು.