लाइव कैलेंडर

March 2025
M T W T F S S
 12
3456789
10111213141516
17181920212223
24252627282930
31  
09/03/2025

AVIN TV Latest Breaking News

ಇತ್ತೀಚಿನ ಬಿಸಿ ಬಿಸಿ ಸುದ್ದಿ ಅವಿನ್ ಟಿವಿ ಸುದ್ದಿ ನಿಮ್ಮದು ಪ್ರಸಾರ ನಮ್ಮದು Avin Tv the news is yours the broadcast is ours.

ಸದ್ಗುರು ಜಗ್ಗಿ ವಾಸುದೇವ್……..

ಜಗತ್ತಿನ ಇತಿಹಾಸದಲ್ಲಿ ಭಾರತದ ಆಧ್ಯಾತ್ಮಿಕತೆಗೆ ಸಾಕಷ್ಟು ತೂಕವಿದೆ. ಇಲ್ಲಿ ಬೆಳೆದ ಆಧ್ಯಾತ್ಮಿಕ ಚಿಂತಕರು ಬದುಕಿನ ನೆಮ್ಮದಿಗೆ, ಸಾರ್ಥಕತೆಗೆ ಸಾಕಷ್ಟು ದಾರಿಗಳನ್ನು ತಿಳಿಸಿಕೊಟ್ಟಿದ್ದಾರೆ…..

ಬುದ್ಧರಿಂದ ಸಿದ್ದೇಶ್ವರ ಸ್ವಾಮಿಗಳವರೆಗೆ, ಹಾಗೆಯೇ ಪೌರಾಣಿಕ ರಾಮ, ಕೃಷ್ಣ ಮುಂತಾದ ಹಲವಾರು ವ್ಯಕ್ತಿಗಳ ಮೂಲಕ ಆಧ್ಯಾತ್ಮಿಕವನ್ನು ಅರ್ಥ ಮಾಡಿಕೊಳ್ಳಲು ಪ್ರಯತ್ನಿಸಲಾಗುತ್ತದೆ…..

ರಾಮಕೃಷ್ಣ ಪರಮಹಂಸ, ರಮಣ ಮಹರ್ಷಿಗಳು ಮತ್ತು ಸ್ವಾಮಿ ವಿವೇಕಾನಂದರು ಆ ಸಾಲಿನಲ್ಲಿ ಅತಿ ಎತ್ತರದಲ್ಲಿ ಕಾಣುತ್ತಾರೆ…..

ಇತ್ತೀಚಿನ ವರ್ಷಗಳಲ್ಲಿ ಹೆಚ್ಚು ಜನಪ್ರಿಯರಾದ ಅಧ್ಯಾತ್ಮ ಗುರು ಜಗ್ಗಿ ವಾಸುದೇವ್….

ಅಧ್ಯಾತ್ಮಿಕ ಚಿಂತಕರಲ್ಲಿ ವಿವಿಧ ರೀತಿಯ ಜನರಿದ್ದಾರೆ.

ನಮ್ಮ ನಿಮ್ಮ ನಡುವೆ ದೇವಸ್ಥಾನದ ಪೂಜೆ ಪುನಸ್ಕಾರ ಮಾಡುವ ಪೂಜಾರಿಗಳು, ಮಸೀದಿಗಳ ಮುಲ್ಲಾ ಮೌಲ್ವಿಗಳು, ಚರ್ಚುಗಳ ಫಾದರ್ ಸಿಸ್ಟರುಗಳು, ಬೌದ್ದ ಸನ್ಯಾಸಿಗಳು, ಜೈನ ಮುನಿಗಳು, ಸಿಖ್ ಗುರುಗಳು, ಲಿಂಗಾಯತ ಸ್ವಾಮೀಜಿಗಳು ಮತ್ತು ಇನ್ನೂ ಈ ರೀತಿಯ ಅದಕ್ಕೆ ಸಂಬಂಧಿಸಿದ ಚಿಂತಕರು, ಗುರುಗಳು, ವ್ಯಕ್ತಿಗಳು ಇತ್ಯಾದಿ ಇತ್ಯಾದಿ…..

ಆಶ್ರಮಗಳು, ಮಠಗಳು, ಧಾರ್ಮಿಕ ಕೇಂದ್ರಗಳು, ಯೋಗ ಧ್ಯಾನ ಶಿಬಿರಗಳು, ಚರ್ಚುಗಳು, ಮಸೀದಿಗಳು, ಪ್ರಾರ್ಥನಾ ಮಂದಿರಗಳು ಇತ್ಯಾದಿಗಳನ್ನು ಸ್ಥಾಪಿಸಿಕೊಂಡು ಜನರಿಗೆ ಅನ್ನ, ವಿದ್ಯೆ, ಆಶ್ರಯ ನೀಡುತ್ತಾ ತನ್ನ ಕಾರ್ಯ ಚಟುವಟಿಕೆಗಳನ್ನು ನಿರ್ವಹಿಸುತ್ತಿರುವ ಕೇಂದ್ರಗಳು ಅಧ್ಯಾತ್ಮ ತಿಳಿಸಿ ಕೊಡುತ್ತವೆ.

ಮಾಧ್ಯಮಗಳ ಜನಪ್ರಿಯತೆಯ ಲಾಭ ಪಡೆದು ಜ್ಯೋತಿಷ್ಯ, ಭವಿಷ್ಯ, ಸಂಖ್ಯಾಶಾಸ್ತ್ರ, ವಾಸ್ತು, ಯಂತ್ರ ಮಂತ್ರ, ಹೋಮ ಹವನಗಳು ಮುಂತಾದ ಆಚರಣೆಗಳ ಮುಖಾಂತರ ಅಧ್ಯಾತ್ಮಿಕ ಚಿಂತನೆಗಳನ್ನು ಹೇಳುವುದು….

ಕೆಲವರು ತಮ್ಮ ಅಧ್ಯಯನ, ಜ್ಞಾನ, ಅನುಭವಗಳಿಂದ ದೊರೆತ ಮಾಹಿತಿಯ ಆಧಾರದ ಮೇಲೆ ಅಧ್ಯಾತ್ಮಿಕ ಚಿಂತನೆಗಳನ್ನು ಬೋಧಿಸುವ ಸಂತರು……

ಇನ್ನು ಕಾರ್ಪೊರೇಟ್ ಶೈಲಿಯ ಅಧ್ಯಾತ್ಮಿಕ ಚಿಂತಕರುಗಳಾದ
ಬಾಬಾ ರಾಮದೇವ್ – ಶ್ರೀ ರವಿಶಂಕರ್ ಗುರೂಜಿ – ಕಲ್ಕಿ ಭಗವಾನ್ – ನಿತ್ಯಾನಂದ ಸ್ವಾಮಿ – ಉತ್ತರ ಭಾರತದ ಸಾಕಷ್ಟು ದೇವಮಾನವರು ಇನ್ನೂ ಹಲವಾರು ಭಾರತೀಯ ಸಮಾಜದ ಬಹಳಷ್ಟು ಜನರ ಮೇಲೆ ಪ್ರತ್ಯಕ್ಷ ಮತ್ತು ಪರೋಕ್ಷ ಪರಿಣಾಮ ಬೀರುತ್ತಿದ್ದಾರೆ…..

ಮನುಷ್ಯನ ಬದುಕು ಸಂಕೀರ್ಣ – ಸಂಘರ್ಷ – ಒತ್ತಡಕ್ಕೆ ಒಳಗಾದಂತೆ, ಮಾನಸಿಕ, ದೈಹಿಕ ದುರ್ಬಲತೆ ಉಂಟಾಗುತ್ತಿರುವುದರಿಂದ ಅಧ್ಯಾತ್ಮಿಕತೆಗೆ ಹೆಚ್ಚಿನ ಮಹತ್ವ ಬರತೊಡಗಿದೆ…..

ಅಧ್ಯಾತ್ಮ ವೈಜ್ಞಾನಿಕವಾಗಿರಲಿ, ವೈಚಾರಿಕವಾಗಿರಲಿ, ನಂಬಿಕೆಯಾಗಿರಲಿ, ಧಾರ್ಮಿಕ ಆಚರಣೆಯಾಗಿರಲಿ ಅದನ್ನು ಕಲಿಯುವುದರಿಂದ, ಅರ್ಥಮಾಡಿಕೊಳ್ಳುವುದರಿಂದ, ಅನುಸರಿಸುವುದರಿಂದ ಅಂತಹ ಹೆಚ್ಚಿನ ತೊಂದರೆ ಏನೂ ಇಲ್ಲ. ಬದಲಾಗಿ ಒಂದಷ್ಟು ಲಾಭವೇ ಉಂಟು…..

ಆದರೆ ತೊಂದರೆ ಇರುವುದು ಅಧ್ಯಾತ್ಮಿಕ ಗುರುಗಳಿಂದ ಮತ್ತು ಅಧ್ಯಾತ್ಮಿಕತೆಯನ್ನು ಆ ಗುರುಗಳು ವ್ಯಾಪಾರಿಕರಣ ಮಾಡಿ, ಶೋಷಣೆಯ ಅಸ್ತ್ರವಾಗಿ ಉಪಯೋಗಿಸಿ, ಅದನ್ನು ತಪ್ಪಾಗಿ ಅರ್ಥೈಸಿ ಜನರನ್ನು ದಾರಿ ತಪ್ಪಿಸಿ, ದೇವ ಮಾನವರೆಂದು ತಮ್ಮನ್ನು ತಾವೇ ಕರೆದುಕೊಂಡು ಸಮಾಜದ ನಿಯಂತ್ರಣ ಸಾಧಿಸಲು ಪ್ರಯತ್ನಿಸುವುದರಲ್ಲಿ…..

ಅಧ್ಯಾತ್ಮ ತುಂಬಾ ಸರಳ, ಸಹಜ, ಸಾಮಾನ್ಯವಾಗಿದ್ದಾಗ, ಸರ್ವರ ಒಳಿತಿಗಾಗಿ ಉಪಯೋಗಿಸಿದಾಗ, ನಿರಪೇಕ್ಷ ಸ್ಥಿತಿ ತಲುಪಿದಾಗ ಮತ್ತು ಅದರಲ್ಲಿ ಒಂದಷ್ಟು ನಿಯಂತ್ರಣ ಸಾಧಿಸಿದಾಗ ಅದರ ಲಾಭ ಸಿಗಬಹುದು. ಅದು ತೀರಾ ವೈಯಕ್ತಿಕ…..

ಆದರೆ ಅಧ್ಯಾತ್ಮ ಇದನ್ನು ಹೊರತುಪಡಿಸಿ ಇತರ ಚಟುವಟಿಕೆಯಾದಾಗ…..

ಈ ಹಿನ್ನೆಲೆಯಲ್ಲಿ ಜಗ್ಗಿ ವಾಸುದೇವ್ ಅವರನ್ನು ನೋಡೋಣ…..

ಆಕರ್ಷಕ ನಿಲುವಿನ, ಕಂಚಿನ ಕಂಠದ, ಉತ್ತಮ ಭಾಷಾ ಹಿಡಿತದ, ನೋಡುವ, ಕೇಳುವ ಭಕ್ತರಿಗೆ ಸಮ್ಮೋಹನ ಗೊಳಿಸುವ ವಾಕ್ಚಾತುರ್ಯದ ವಾಸುದೇವ್ ಈಶಾ ಫೌಂಡೇಶನ್ ಹೆಸರಿನಲ್ಲಿ ಬಹುದೊಡ್ಡ ಆಶ್ರಮ ಸ್ಥಾಪಿಸಿದ್ದಾರೆ. ಅಪಾರ ಜನಪ್ರಿಯತೆ ಗಳಿಸಿದ್ದಾರೆ. ತುಂಬಾ ಸಂತೋಷ ಮತ್ತು ಅವರ ಸ್ವಾತಂತ್ರ್ಯ – ಸಾಧನೆ. ಅದನ್ನು ಗೌರವಿಸುತ್ತಾ…..

ಸದ್ಗುರುಗಳೇ, ಜಗದ್ಗುರುಗಳೇ, ಶ್ರೀಶ್ರೀಶ್ರೀಗಳೇ, ಮಹರ್ಷಿಗಳೇ,
ಸ್ವಾಮೀಜಿಗಳೇ,

ಮೋಕ್ಷದ ಮಾರ್ಗದಲ್ಲಿ ಈಗಾಗಲೇ ಜ್ಞಾನ ಯೋಗ, ಭಕ್ತಿ ಯೋಗ, ಕರ್ಮ ಯೋಗ, ರಾಜ ಯೋಗ ಬಹಳ ಹಿಂದಿನಿಂದಲೇ ಅಸ್ತಿತ್ವದಲ್ಲಿದೆ. ಅದನ್ನು ಅಸಂಖ್ಯಾತ ಚಿಂತಕರು ನಾನಾ ರೀತಿಯ ಪ್ರಯೋಗಕ್ಕೆ ಒಳಪಡಿಸಿ ವಿವಿಧ ಅರ್ಥಗಳನ್ನು ನೀಡಿದ್ದಾರೆ. ಅರಿಷಡ್ವರ್ಗಗಳ ನಿಯಂತ್ರಣಕ್ಕೆ ಸಾಕಷ್ಟು ಮಾರ್ಗಗಳನ್ನು ತಿಳಿಸಿದ್ದಾರೆ. ಏನೇ ಆಗಲಿ ಅಂತಿಮವಾಗಿ ಅದೊಂದು ಇಡೀ ಬದುಕಿನ ನಿರಂತರ ಕ್ರಿಯೆ. ಅದು ಯಾವುದೇ 24 ಗಂಟೆಗಳ ಅಥವಾ ಒಂದು ವಾರದ ಅಥವಾ ಒಂದು ತಿಂಗಳ ಅಥವಾ ಒಂದು ವರ್ಷದ ಕೋರ್ಸ್ ಆಗಲು ಸಾಧ್ಯವಿಲ್ಲ. ಅದನ್ನು ಸಾವಿರದಿಂದ ಲಕ್ಷಾಂತರ ರೂಪಾಯಿ ಹಣ ನೀಡಿ ಕಲಿಯಲೂ ಆಗುವುದಿಲ್ಲ ಮತ್ತು ಹಣ ಪಡೆದು ಕಲಿಸಲೂ ಆಗುವುದಿಲ್ಲ…..

ಸಾಮಾನ್ಯ ಜನ ನಿಮ್ಮಂತೆ ಪ್ರಶಾಂತ ಪರಿಸರದಲ್ಲಿ, ಸೇವಕ ಸೇವಕಿಯರ ಸಹಾಯದ ನೆರಳಲ್ಲಿ, ಯಾವುದೇ ಜವಾಬ್ದಾರಿ ನಿರ್ವಹಿಸದೆ ಕಲಿಯಲು ಅರ್ಥಮಾಡಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ದೇಶದಲ್ಲಿ ಕೋಟ್ಯಂತರ ಜನರಿಗೆ ಮೂಲಭೂತ ಅವಶ್ಯಕತೆಗಳನ್ನು ಪೂರೈಸಿಕೊಳ್ಳಲೇ ಸಾಧ್ಯವಾಗುತ್ತಿಲ್ಲ…..

ಇಂತಹ ಸನ್ನಿವೇಶದಲ್ಲಿ ಅಧ್ಯಾತ್ಮನ್ನು ಹೈಜಾಕ್ ಮಾಡಿರುವ ನೀವು ಕಾರ್ಪೊರೇಟ್ ಶೈಲಿಯಲ್ಲಿ ವಾಣಿಜ್ಯೀಕರಣ ಮಾಡಿರುವಿರಿ. ಅಧ್ಯಾತ್ಮಿಕತೆಯ ಹೆಸರಿನಲ್ಲಿ ಭಕ್ತರನ್ನು ಸೆಳೆದು ನಂತರ ಆ ಜನಪ್ರಿಯತೆಯನ್ನು ಬೇರೆ ವಿಷಯಗಳಿಗೆ ಉಪಯೋಗಿಸಿಕೊಳ್ಳುತ್ತಿರುವಿರಿ. ನಿಮ್ಮ ಸಂಸ್ಥೆಗಳನ್ನು ದೊಡ್ಡ ಮಟ್ಟದಲ್ಲಿ ಬೆಳೆಸುತ್ತಿರುವಿರಿ…

ಅದು ನಿಮ್ಮ ಸಂವಿಧಾನಾತ್ಮಕ ಹಕ್ಕು ನಿಜ. ಹಾಗೆಯೇ ನಿಮ್ಮ ಸ್ವಾರ್ಥದ ಹುನ್ನಾರಗಳನ್ನು ಜನರಿಗೆ ಮನವರಿಕೆ ಮಾಡಿಕೊಡುವುದು ನಮ್ಮ ಸಂವಿಧಾನಾತ್ಮಕ ಕರ್ತವ್ಯ ಕೂಡ……

ಇಡೀ ಜಗತ್ತು ಹಣದ ಹಿಂದೆ ಬಿದ್ದು ಮಾನವೀಯ ಮೌಲ್ಯಗಳು ಅವಸಾನದ ಅಂಚಿನಲ್ಲಿ ಇರುವಾಗ ಅಧ್ಯಾತ್ಮ ಮನುಷ್ಯರನ್ನು ಮಾನವೀಯ ನಡವಳಿಕೆಗೆ ಸೆಳೆಯುವ ಮಾರ್ಗವಾಗಿ ಬಳಸುವ ಬದಲಾಗಿ ನೀವು ಸಹ ಅಧ್ಯಾತ್ಮವನ್ನು ಹಣ ಮಾಡುವ, ಪ್ರಚಾರ ಪಡೆಯುವ ಸಲುವಾಗಿ ಉಪಯೋಗಿಸಿದರೆ ಜಗತ್ತಿನ ಮುಂದಿನ ಗತಿಯೇನು ?….

ಅಲ್ಲದೆ ಅಧ್ಯಾತ್ಮ ಬಿಟ್ಟು ಸಮಾಜ ಸೇವೆ ಮತ್ತು ವ್ಯಾಪಾರದ ಮುಖವಾಡ ಧರಿಸಿದರೆ ಅಧ್ಯಾತ್ಮದ ಆಳ ಅರಿವಾಗುವುದು ಮತ್ತು ಅದನ್ನು ಸಾಮಾನ್ಯ ಜನರಿಗೆ ತಲುಪಿಸುವವರು ಯಾರು. ಯಾವುದೇ ಕಾರಣದಿಂದ ಖಾಸಗಿ ಸಂಸ್ಥೆ ಮತ್ತು ವ್ಯಕ್ತಿಗಳು ಜನರಿಂದ ಹಣ ವಸೂಲಿ ಮಾಡುವುದು ಈ ದೇಶದಲ್ಲಿ ಎಷ್ಟೊಂದು ಅಪಾಯಕಾರಿ ನಿಮಗೆ ತಿಳಿದಿಲ್ಲವೇ……

ಒಂದು ವೇಳೆ ನಿಮಗೆ ಸಾರ್ವಜನಿಕ ಸೇವೆ ಮಾಡಬೇಕೆಂಬ ಬಯಕೆ ಇದ್ದರೆ ನಿಮ್ಮ ಹಣಕಾಸಿನ ಮಿತಿಯಲ್ಲಿ ಅಥವಾ ನೀವು ಸರ್ಕಾರದ ಮೇಲೆ ಪ್ರಭಾವ ಬೀರಿ ಸಲಹೆ ನೀಡಿ ಅಥವಾ ಹಣಕಾಸು ರಹಿತ ಸೇವೆ ಮಾಡಿ. ಇಲ್ಲದಿದ್ದರೆ……

ಉದಾಹರಣೆಗೆ,
ಪತ್ರಿಕೋದ್ಯಮಿಗಳು ಪತ್ರಿಕಾ ಧರ್ಮ ಬಿಟ್ಟು ರಿಯಾಲಿಟಿ ಎಕ್ಸ್ಪೋ, ಫರ್ನಿಚರ್ ಎಕ್ಸ್ಪೋ, ಪುಡ್ ಮೇಳ ಮುಂತಾದ ಕೆಲಸಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತಮ್ಮ ಮೂಲ ವೃತ್ತಿಗೆ ನ್ಯಾಯ ಸಲ್ಲಿಸದೆ ಇನ್ನೇನೋ ಹಣ ಮಾಡಲು ಹೋಗಿ ಈಗಾಗಲೇ ಬೆಲೆ ಕಳೆದುಕೊಂಡಿಲ್ಲವೇ ?….

ಆದ್ದರಿಂದ ಅಧ್ಯಾತ್ಮ ಗುರುಗಳು ಕೇವಲ ಅಧ್ಯಾತ್ಮಿಕ ಚಿಂತನೆಗಳನ್ನು ಸಾಮಾನ್ಯ ಜನರ ಬಳಿಗೆ ಕೊಂಡೊಯ್ಯುವ ಮತ್ತು ಅವರ ನೋವುಗಳನ್ನು ಕಡಿಮೆ ಮಾಡಲು ಪ್ರಯತ್ನಿಸುವುದು ಉತ್ತಮ….

ಜನರೂ ಸಹ ಯಾವುದೇ ಸದ್ಗುರುಗಳನ್ನು ಅತಿಮಾನುಷರೆಂದು ಭಾವಿಸದೆ, ಒಬ್ಬ ವ್ಯಕ್ತಿ ಎಲ್ಲಾ ಸಮಸ್ಯೆಗಳಿಗೂ ಉತ್ತರಿಸುತ್ತೇನೆ – ಪರಿಹರಿಸುತ್ತೇನೆ ಎಂಬುದನ್ನು ನಂಬದೆ ಅವರ ಮಿತಿಗಳನ್ನು ಸಹ ಅರಿಯುವ ಪ್ರಬುದ್ದತೆ ಬರಲಿ ಎಂದು ಆಶಿಸುತ್ತಾ….

ಈಗ ನಾವು ಇರುವ ಸ್ಥಾನದಿಂದಲೇ, ನಮಗೆ ಸಿಗುತ್ತಿರುವ ಮಾಹಿತಿಗಳಿಂದಲೇ, ನಮ್ಮ ಜೀವನದ ಅನುಭವದಿಂದಲೇ, ನಮ್ಮ ಗೆಳೆಯರು, ಹಿತೈಷಿಗಳ, ಪರಿಚಯದಿಂದಲೇ ವೈಚಾರಿಕ ಅಧ್ಯಾತ್ಮದ ಸಾಧನೆ ಮಾಡಬಹುದು…..

ಆರೋಗ್ಯವಂತ, ಪ್ರೌಢಾವಸ್ಥೆ ತಲುಪಿದ ಪ್ರತಿ ಮನುಷ್ಯನಿಗೂ ಮೆದುಳಿದೆ ಮತ್ತು ಅದು ಎಲ್ಲಾ ಆಗುಹೋಗುಗಳನ್ನು ಗ್ರಹಿಸುತ್ತದೆ. ಗ್ರಹಿಕೆಗಳು ಮನಸ್ಸಿನಲ್ಲಿ ಮೂಡಿ ಚಿಂತನೆಯನ್ನು ಹುಟ್ಟುಹಾಕುತ್ತದೆ. ಅದರ ಜೊತೆ ದೇಹವೂ ಪ್ರತಿಕ್ರಿಯಿಸುತ್ತದೆ…..

ಇದು ಮನುಷ್ಯ ಪ್ರಾಣಿಯ ಸಹಜ ಕ್ರಿಯೆ ಮತ್ತು ಎಲ್ಲರಲ್ಲಿಯೂ ಕಂಡುಬರುವ ಗುಣಲಕ್ಷಣ. ಆದರೆ ಗ್ರಹಿಕೆ ಮತ್ತು ಚಿಂತನೆಯಲ್ಲಿ ಮನುಷ್ಯರಲ್ಲಿ ಸಾಕಷ್ಟು ವೈವಿಧ್ಯತೆ ಇದೆ. ಅನುವಂಶೀಯ ಗುಣಗಳಿಂದ ಹಿಡಿದು, ಪ್ರೌಢಾವಸ್ಥೆ ತಲುಪುವವರೆಗೆ ಅನೇಕ ಅಂಶಗಳು ನಮ್ಮನ್ನು ಪ್ರಭಾವಿಸುತ್ತವೆ ಮತ್ತು ನಿಯಂತ್ರಿಸುತ್ತವೆ. ಜೊತೆಗೆ ಬದುಕಿನ ಅನಿವಾರ್ಯತೆ ನಮ್ಮ ತನವನ್ನು ಸಹಜವಾಗಿ ಬೆಳೆಯಲು ಬಿಡುವುದಿಲ್ಲ….

ಇಂತಹ ಬದುಕಿನಲ್ಲೂ ನಾವು ಅಧ್ಯಾತ್ಮದ ಸಾಧನೆ ಖಂಡಿತ ಮಾಡಬಹುದು. …

ಅಧ್ಯಾತ್ಮ ಎಂದರೇನು ?

ಸರಳವಾಗಿ ಹೇಳುವುದಾದರೆ,
ಅರಿವಿನ ಜೊತೆ ನಾವು ಸಾಧಿಸಬಹುದಾದ ಮಾನಸಿಕ ನಿಯಂತ್ರಣವೇ ಅಧ್ಯಾತ್ಮ. ಆ ಅರಿವು ಒಂದು ನಿರ್ದಿಷ್ಟ ವಿಷಯಕ್ಕಲ್ಲದೆ ನಮ್ಮ ಇಡೀ ವ್ಯಕ್ತಿತ್ವದ ಸಂಪೂರ್ಣ ಭಾಗವಾಗಿರಬೇಕು. ಅರಿವಿನಲ್ಲಿ ಅನೇಕ ಮಿತಿಗಳು ಇರುತ್ತವೆ. ಆದರೆ ಯಾವುದೇ ಪರಿಸ್ಥಿತಿಯಲ್ಲಿ ಅದಕ್ಕೆಲ್ಲ ಒಂದು ಪರಿಹಾರಾತ್ಮಕ ಉತ್ತರ ಹುಡುಕಿಕೊಂಡು ಮಾನಸಿಕ ನಿಯಂತ್ರಣ ಸಾಧಿಸುವುದು ಅಧ್ಯಾತ್ಮ ಸಾಧಕರಿಗೆ ಸಿದ್ದಿಸಿರುತ್ತದೆ. ( ಧಾರ್ಮಿಕ ಹಿನ್ನೆಲೆಯ ವ್ಯಕ್ತಿಗಳು ಅಧ್ಯಾತ್ಮಕ್ಕೆ ಇನ್ನೂ ವಿಶಾಲ ಮತ್ತು ಅಗೋಚರ ಅರ್ಥ ಕೊಡುತ್ತಾರೆ )….

ಹುಟ್ಟು ಸಾವು ಸಂಸಾರ ಅನಾರೋಗ್ಯ ಅಪಘಾತ ಆಕಸ್ಮಿಕ ವ್ಯವಹಾರ ಆಡಳಿತ ಸೋಲು ಗೆಲುವು ಎಲ್ಲವನ್ನೂ ಸಹಜ ಪರಿಸ್ಥಿತಿಯಲ್ಲಿ ಅವಲೋಕನ ಮಾಡಿ ಗ್ರಹಿಸಿ ಅದರ ಆಧಾರದ ಮೇಲೆ ನಮ್ಮ ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸುವುದೇ ವೈಜ್ಞಾನಿಕ ಅಧ್ಯಾತ್ಮ ಎಂದು ಕರೆಯಬಹುದು. ಇಲ್ಲಿ ಅಳುವು ಇದೆ, ನಗುವೂ ಇದೆ, ಕಷ್ಟ ಸುಖಗಳು ಇವೆ, ಮೋಸ ವಂಚನೆಗಳು ಇವೆ, ಸಾವು ನೋವುಗಳು, ಸೋಲು ವಿಫಲತೆಗಳು ಅದೃಷ್ಟ ದುರಾದೃಷ್ಟಗಳು, ತ್ಯಾಗ ಬಲಿದಾನಗಳು ಇವೆ. ಆದರೆ ಅದನ್ನು ಸಹಜವಾಗಿ ಸ್ವೀಕರಿಸುವ ಮನೋ ಭೂಮಿಕೆಯೇ ವೈಚಾರಿಕ ಅಧ್ಯಾತ್ಮ…….

ನಾವೆಲ್ಲರೂ ಎಂದಿನ ದಿನನಿತ್ಯದ ಚಟುವಟಿಕೆಗಳನ್ನು ಮಾಡುತ್ತಾ ಅದರ ಅನುಭವದ ಆಧಾರದಲ್ಲಿಯೇ ನಮ್ಮ ಅರಿವಿನ ಮಿತಿಯಲ್ಲಿಯೇ ಇದನ್ನು ಸಾಧಿಸಬಹುದು ಆ ಮುಖಾಂತರ ನಮ್ಮ ಮಾನಸಿಕ ಜೀವನಮಟ್ಟವನ್ನು ಉತ್ತಮಪಡಿಕೊಳ್ಳಬಹುದು. ನಮ್ಮ ಬದುಕಿನ ಮೇಲೆ ನಿಯಂತ್ರಣ ಸಾಧಿಸಬಹುದು. ನೆಮ್ಮದಿಯ ಮಟ್ಟವನ್ನು ಹೆಚ್ಚಿಸಿಕೊಳ್ಳಬಹುದು…..

ಸಾವು ಸಹಜ ಎಂಬ ಅರಿವು, ಸೋಲು ಗೆಲುವ ಸಾಮಾನ್ಯ ಎಂಬ ತಿಳಿವಳಿಕೆ, ಅಧಿಕಾರ ಹಣ ಆಸ್ತಿ ಶಾಶ್ವತವಲ್ಲ ಎಂಬ ಭಾವನೆ, ಅರಿಷಡ್ವರ್ಗಗಳು ಮಾನವನ ಸಹಜ ಸ್ವಭಾವಗಳು ಎನ್ನುವ ಅರ್ಥ,
ನಗು ಬಂದಾಗ ನಗುವುದು, ಅಳು ಬಂದಾಗ ಅಳುವುದು, ರೋಗ ಬಂದಾಗ ನರಳುವುದು ಎಲ್ಲವೂ ಬದುಕಿನ ಭಾಗ ಎಂದು ಸ್ವೀಕರಿಸುವ ಮನೋಭಾವವೇ ವೈಜ್ಞಾನಿಕ ಅಧ್ಯಾತ್ಮ……

ಜನ ಸಾಮಾನ್ಯರು ಸಹ ಮನೋ ನಿಯಂತ್ರಣದ ಈ ಆಧ್ಯಾತ್ಮಿಕ ಸಾಧಕರಾದಾಗ ಖಂಡಿತ ಈ ಸಮಾಜ ಈಗಿನ ಪರಿಸ್ಥಿತಿಗಿಂತ ಉತ್ತಮ ಗುಣಮಟ್ಟದ ಶಾಂತಿ ಸೌಹಾರ್ದತೆ ಸಮಾನತೆಯ ಸಮಾಜ ನಿರ್ಮಾಣ ಆಗುವ ಸಾಧ್ಯತೆ ಇದೆ. ನಿಮ್ಮ ಯೋಚಿಸುವ ಸ್ವಾತಂತ್ರ್ಯವನ್ನು ಪ್ರೋತ್ಸಾಹಿಸುತ್ತಾ ಮತ್ತು ಗೌರವಿಸುತ್ತಾ….

ನಿಸ್ವಾರ್ಥ – ನಿಷ್ಕಲ್ಮಶ – ನಿರಪೇಕ್ಷ
ಕಾರ್ಯಗಳನ್ನು ಪ್ರೋತ್ಸಾಹಿಸೋಣ.
ಆಡಂಬರದ, ತೋರಿಕೆಯ, ಪ್ರದರ್ಶನದ,
ಪ್ರಚಾರದ, ಆಸೆಯ ಕೆಲಸಗಳನ್ನು ತಿರಸ್ಕರಿಸೋಣ.
ಯಾರೇ ಮಾಡಿದರೂ…….

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ.
9844013068……..

About Author

Leave a Reply

Your email address will not be published. Required fields are marked *