ದಯವಿಟ್ಟು ಒಮ್ಮೆ ಯೋಚಿಸಿ ನೋಡಿ……
1 min read
ದಯವಿಟ್ಟು ಒಮ್ಮೆ ಯೋಚಿಸಿ ನೋಡಿ……
ಆಲೋಚನೆಗೆ ಅತ್ಯಂತ ಅರ್ಹವಾಗಿದೆ…….
ಭಾರತದಲ್ಲಿ ರಕ್ತ ಸಂಬಂಧಿಗಳ ನಡುವಿನ ಸಿವಿಲ್ ದಾವೆಗಳನ್ನು ತಮ್ಮೊಳಗೇ ಬಗೆಹರಿಸಿಕೊಳ್ಳುವ ಸಾಧ್ಯತೆಗಳನ್ನು ಪರಿಶೀಲಿಸಬೇಕು ಎಂದು ಕಳಕಳಿಯ ಮನವಿ…….
ಸುಮಾರು ನಾಲ್ಕೈದು ದಶಕಗಳಿಂದ ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ದಾಖಲಾಗುತ್ತಿರುವ ಸಿವಿಲ್ ವ್ಯಾಜ್ಯಗಳಲ್ಲಿ ಹೆಚ್ಚಾಗಿ ಸ್ನೇಹಿತರು, ಪರಿಚಿತರ, ವ್ಯಾಪಾರ ವ್ಯವಹಾರಗಳಲ್ಲಿ ಒಂದಷ್ಟು ಮೋಸ ವಂಚನೆಗೆ ಒಳಗಾದವರ ಮೊಕದ್ದಮೆಗಳು ನ್ಯಾಯಾಲಯಗಳಲ್ಲಿ ದಾಖಲಾಗುತ್ತಿದೆ. ಆದರೆ ಅದನ್ನು ಮೀರಿ ಕಳೆದ ಎರಡು ದಶಕಗಳಲ್ಲಿ ರಕ್ತ ಸಂಬಂಧಿಗಳ ನಡುವೆ ಅಂದರೆ ಅಪ್ಪ ಮಕ್ಕಳು, ಅಣ್ಣ ತಂಗಿ, ಅಕ್ಕ ತಮ್ಮ, ಅಣ್ಣ ತಮ್ಮ, ಅಕ್ಕ ತಂಗಿ, ಗಂಡ ಹೆಂಡತಿ, ಮಗಳು ಅಳಿಯ, ಸೊಸೆ, ಅಜ್ಜ ಅಜ್ಜಿ, ಚಿಕ್ಕಪ್ಪ ದೊಡ್ಡಪ್ಪ, ಮಾವ ಹೀಗೆ ಒಡಹುಟ್ಟಿದವರು ಮತ್ತು ತೀರಾ ಹತ್ತಿರದ ಸಂಬಂಧಿಗಳ ನಡುವೆ ಸಾಕಷ್ಟು ಈ ರೀತಿಯ ಜಮೀನು, ಮನೆ ಮತ್ತು ಹಣಕಾಸಿನ ವಿಷಯಕ್ಕೆ ಸಂಬಂಧಿಸಿದಂತೆ ಹೆಚ್ಚು ಹೆಚ್ಚು ಮೊಕದ್ದಮೆಗಳು ದಾಖಲಾಗುತ್ತಿವೆ….
ನಿಜಕ್ಕೂ 50/60 ವರ್ಷದ ಹಿಂದಿನ ಭಾರತದ ಸಾಮಾಜಿಕ ಮತ್ತು ಕೌಟುಂಬಿಕ ವ್ಯವಸ್ಥೆಯನ್ನು ನೆನಪು ಮಾಡಿಕೊಂಡರೆ ಈಗಿನ ವ್ಯಾಜ್ಯಗಳ ಸಂಖ್ಯೆಯಲ್ಲಿ ಒಂದು ರೀತಿಯ ಆಘಾತಕಾರಿ ಅಂಕಿ ಅಂಶಗಳು ಹೊರಬೀಳುತ್ತಿವೆ. ಇದರಲ್ಲಿ ಬಹುತೇಕ ಮೊಕದ್ದಮೆಗಳನ್ನು ಕೇವಲ ಮಾನವೀಯ ಸಂಬಂಧಗಳ, ಮಾನವೀಯ ಮೌಲ್ಯಗಳ ಆಧಾರದ ಮೇಲೆ ನಾವುಗಳೇ ಕುಳಿತು ಬಗೆಹರಿಸಿಕೊಳ್ಳಬಹುದಾದ ಸಾಕಷ್ಟು ವಿವಾದಗಳು ಇವೆ. ಕೇವಲ ಹಠ, ಅಹಂಕಾರ, ದುರಾಸೆ, ಅಜ್ಞಾನ, ಪ್ರದರ್ಶಕ ಮನೋಭಾವ, ಸ್ವಾರ್ಥ ಮುಂತಾದ ಸಣ್ಣತನದಿಂದಾಗಿ ಇವು ನ್ಯಾಯಾಲಯಗಳಲ್ಲಿ ದೀರ್ಘಕಾಲದಿಂದ ಎಳೆದುಕೊಂಡು ಹೋಗಲಾಗುತ್ತಿದೆ.
ಸಾಮಾನ್ಯವಾಗಿ ನಮ್ಮ ನಡುವಿನ ವ್ಯವಹಾರಗಳೆಲ್ಲವೂ ಆಗ ಸಾಕ್ಷಿ ದಾಖಲೆಗಳಿಗಿಂತ ಹೆಚ್ಚಾಗಿ ಮನುಷ್ಯ ನಡುವಿನ ಸಂಬಂಧ, ನಂಬಿಕೆಗಳ ನಡುವೆಯೇ ನಡೆಯುತ್ತಿತ್ತು. ಜಾಗತೀಕರಣದ ನಂತರ, ಹಣಕಾಸು ಕೇಂದ್ರೀಕೃತ ಸಮಾಜ ನಿರ್ಮಾಣವಾದ ಮೇಲೆ ಸಂಬಂಧಗಳು ಶಿಥಿಲವಾದವು. ಸಹಜವಾಗಿಯೇ ಈ ರೀತಿಯ ಘಟನೆಗಳು ನ್ಯಾಯಾಲಯದ ಮೆಟ್ಟಿಲೇರಿದವು.
ಮೂಲಭೂತವಾಗಿ ನಾವು ಅರ್ಥಮಾಡಿಕೊಳ್ಳಬೇಕಾಗಿರುವುದೇನೆಂದರೆ, ಈ ಹಣಕಾಸಿನ ವ್ಯವಹಾರ ನಮ್ಮ ಸಂಬಂಧಿಕರ ನಡುವೆಯೇ ನಡೆದಿದೆ ಮತ್ತು ಒಂದಷ್ಟು ತಪ್ಪು ಗ್ರಹಿಕೆ ಅಥವಾ ಇನ್ನೊಬ್ಬರ ದುರಾಸೆಯಿಂದ ಈ ಸಮಸ್ಯೆ ಉದ್ಭವವಾಗಿದೆ. ಇದನ್ನು ಬಗೆಹರಿಸಿಕೊಳ್ಳಬೇಕು ಎನ್ನುವ ಮನೋಭಾವ ನಮ್ಮೊಳಗೆ ಸೃಷ್ಟಿಸಿಕೊಳ್ಳಬೇಕು. ಅಳಿಯ, ಸೊಸೆ, ಮಗ ಅಥವಾ ಮೊಮ್ಮಗ, ಮೊಮ್ಮಗಳ ಈಗಿನ ಮನೋಭಾವದ ದುರಾಸೆಗೆ ಒಂದಷ್ಟು ಕಡಿವಾಣ ಹಾಕಬೇಕು. ಅವರ ಪೂರ್ವಾಗ್ರಹ ಪೀಡಿತ ಮಾತುಗಳನ್ನು ಕೇಳಬಾರದು. ರಕ್ತ ಸಂಬಂಧ ಗಾಢವಾದದ್ದು ಮತ್ತು ಬೆಲೆಯುಳ್ಳದ್ದು ಎನ್ನುವುದನ್ನು ಅರ್ಥ ಮಾಡಿಕೊಳ್ಳಬೇಕು.
ನ್ಯಾಯಾಲಯದ ನ್ಯಾಯಾಧೀಶರುಗಳಿಗಾಗಲಿ, ನಮ್ಮ ನಮ್ಮ ವಕೀಲರುಗಳಿಗಾಗಲಿ ಈ ವಿವಾದ ನಮಗೆ ತಿಳಿದಷ್ಟು ಆಳವಾಗಿ, ತೀಕ್ಷ್ಣವಾಗಿ ತಿಳಿದಿರುವುದಿಲ್ಲ. ಅವರು ತಮ್ಮ ವಾಕ್ಚಾತುರ್ಯ, ಬುದ್ಧಿವಂತಿಕೆ ಮತ್ತು ಸಾಕ್ಷಿಗಳು, ದಾಖಲೆಗಳ ಆಧಾರಗಳ ಮೇಲೆ ಮಾತ್ರ ತೀರ್ಮಾನ ಕೊಡುತ್ತಾರೆ. ಜೊತೆಗೆ ತುಂಬಾ ದೀರ್ಘಕಾಲ ವಾದ ಮಾಡಿ, ಹಣ ಖರ್ಚು ಮಾಡಿ, ಕೆಳ ಕೋರ್ಟು ಅಥವಾ ಶ್ರೇಷ್ಠ ನ್ಯಾಯಾಲಯದಲ್ಲಿ ಏನಾದರೂ ಒಂದು ತೀರ್ಪು ಹೊರಬಿದ್ದೇ ಬೀಳುತ್ತದೆ. ಆಗಲಾದರೂ ನಾವು ಅದನ್ನು ಒಪ್ಪಿಕೊಳ್ಳಲೇಬೇಕು. ಅದನ್ನು ಹೊರತುಪಡಿಸಿ ನಮಗೆ ಬೇರೆ ದಾರಿ ಇರುವುದಿಲ್ಲ.
ಇದನ್ನು ಆಗ ತೀರ್ಮಾನಿಸುವ ಅಥವಾ ಒಪ್ಪಿಕೊಳ್ಳುವ ಬದಲು ಸಾಕಷ್ಟು ಹಣ ಖರ್ಚು ಮಾಡಿ, ಸಮಯವನ್ನು ವ್ಯರ್ಥ ಮಾಡಿ, ನೋವು, ಆಕ್ರೋಶ, ಅಸೂಯೆಗಳಿಂದ ಬಳಲಿ, ನಮ್ಮ ಆರೋಗ್ಯವನ್ನು ಕೆಡಿಸಿಕೊಂಡು, ಯಾರೋ ನ್ಯಾಯಾಧೀಶರು ಕೊಡುವ ತೀರ್ಪನ್ನು ಒಪ್ಪಿಕೊಳ್ಳುವುದಕ್ಕಿಂತ ಎಷ್ಟು ಸಾಧ್ಯವೋ ಅಷ್ಟು ಕೊಡು – ಕೊಳ್ಳುವ ಕ್ರಿಯೆಯ ಮುಖಾಂತರ ಒಂದಷ್ಟು
ಸ್ಥಿತಪ್ರಜ್ಞೆಯನ್ನು ಬೆಳೆಸಿಕೊಂಡು ನಾವು ನಾವೇ ಅದನ್ನು ಬಗೆಹರಿಸಿಕೊಂಡರೆ ಎಷ್ಟೊಂದು ನೆಮ್ಮದಿ, ಸಂತೋಷ, ಬದುಕಿನ ಸಾರ್ಥಕತೆ ನಮಗೆ ಸಿಗುವುದಿಲ್ಲವೇ……
ಹೌದು, ತೀರಾ ಕ್ರಿಮಿನಲ್ ವ್ಯವಹಾರಗಳು ಅಥವಾ ಕೆಟ್ಟ ಕಾಠಿಣ್ಯ ಮನಸ್ಥಿತಿಯ ಸಂದರ್ಭದಲ್ಲಿ ಇದನ್ನು ಪಾಲಿಸಲು ಸಾಧ್ಯವಿಲ್ಲ. ಆದರೆ ಅದನ್ನು ಹೊರತುಪಡಿಸಿ ಕೇವಲ ನಮ್ಮ ಸಣ್ಣ ಹಠಮಾರಿತನದಿಂದ ಅನೇಕ ವರ್ಷಗಳಿಂದ ನ್ಯಾಯಾಲಯದಲ್ಲಿ ಇನ್ನೂ ಇತ್ಯರ್ಥವಾಗದೇ ಇರುವಾಗ ಇದು ಸಾಧ್ಯ.
ಮನುಷ್ಯ ಆಧುನಿಕತೆಗೆ ತೆರೆದುಕೊಂಡ ನಂತರ ಈಗಲಾದರೂ ಸ್ವಲ್ಪ ತಾಳ್ಮೆಯಿಂದ, ಅನಿಶ್ಚಿತ ಬದುಕಿನ ಇಂದಿನ ಸಂದರ್ಭದಲ್ಲಿ ಕನಿಷ್ಠ ಮಾನವೀಯತೆಯಿಂದ, ಎಲ್ಲರೂ ಒಟ್ಟಾಗಿ ಕುಳಿತು ಅಥವಾ ತಾವು ಗೌರವಿಸುವ ಹಿರಿಯರು, ಹಿತೈಷಿಗಳ ಸಮ್ಮುಖದಲ್ಲಿ ಸ್ವಲ್ಪಮಟ್ಟಿಗೆ ಕ್ಷಮೆ, ಕರುಣೆ ಮತ್ತು ತ್ಯಾಗ ಮನೋಭಾವದಿಂದ ತಮ್ಮ ನಡುವಿನ ಈ ಆಸ್ತಿ ವಿವಾದಗಳನ್ನು, ವ್ಯಾವಹಾರಿಕ ವಿವಾದಗಳನ್ನು ಬಗೆಹರಿಸಿಕೊಂಡರೆ ಎಷ್ಟೊಂದು ಒಳ್ಳೆಯ ಪರಿಣಾಮ ಬೀರಿ ಆ ಕುಟುಂಬದ ನೆಮ್ಮದಿ, ರಕ್ತ ಸಂಬಂಧಗಳು ಉಳಿಯಬಹುದಲ್ಲವೇ.
ಆದ್ದರಿಂದ ಸಾಧ್ಯವಿರುವವರು, ಅವಕಾಶ ಇರುವವರು, ಆಸಕ್ತಿ ಇರುವವರು ದಯವಿಟ್ಟು ಈ ಸಾಧ್ಯತೆಗಳನ್ನು ಪರಿಶೀಲಿಸಿ ಎಂದು ಮತ್ತೊಮ್ಮೆ ಮನವಿ ಮಾಡಿಕೊಳ್ಳುತ್ತೇನೆ. ಇನ್ಯಾರದೋ ಕೆಟ್ಟ ಮನೋಭಾವದ ಮೂರನೇ ವ್ಯಕ್ತಿಯ ಸಲಹೆಗಳಿಗೆ ಹೆಚ್ಚು ತಲೆ ಕೆಡಿಸಿಕೊಳ್ಳಬೇಡಿ. ಇದು ವೈಯಕ್ತಿಕ ನೆಲೆಯಲ್ಲಿ ಆಗಬಹುದಾದದ್ದು. ಬೇರೆ ಕೆಟ್ಟ ಯಾರನ್ನೋ, ಯಾವುದನ್ನೋ ಉದಾಹರಣೆ ಕೊಟ್ಟುಕೊಂಡು, ಹೋಲಿಕೆ ಮಾಡಿಕೊಂಡು ನಮ್ಮನ್ನು ನಾವು ಇದಕ್ಕೆ ನಿರಾಕರಿಸಬಾರದು.
ಒಮ್ಮೆ ಇಲ್ಲಿ ಸಮಾಧಾನಕರ ಫಲಿತಾಂಶ ದೊರೆತರೆ, ಅನಂತರ ವಕೀಲರ ಬಳಿ ಹೋಗಿ ಮೊಕದ್ದಮೆಯನ್ನು ವಾಪಸ್ಸು ಪಡೆದುಕೊಂಡು ಅಧಿಕೃತವಾಗಿಯೇ ನ್ಯಾಯಾಲಯದ ಸಮಕ್ಷಮದಲ್ಲಿ ಒಪ್ಪಿಗೆ ಸೂಚಿಸಿ ವಿವಾದ ಬಗೆಹರಿಸಿಕೊಳ್ಳಬೇಕು.
ನೋಡಿ,
ಬದುಕಿನಲ್ಲಿ ಒದಗಿಬರುವ ಈ ರೀತಿಯ ಕೆಲವು ಸುವರ್ಣ ಅವಕಾಶಗಳನ್ನು ಸರಿಯಾಗಿ ನಿರ್ವಹಿಸಿದರೆ ಕುಟುಂಬದ, ವೈಯಕ್ತಿಕ ಬದುಕಿನ, ನ್ಯಾಯಾಲಯದ ಮತ್ತು ಇಡೀ ದೇಶದ ಮೇಲಿನ ಒತ್ತಡ ಸಾಕಷ್ಟು ಕಡಿಮೆಯಾಗಬಹುದು. ದಯವಿಟ್ಟು ಯೋಚಿಸಿ.
ಬರುವಾಗ ಬೆತ್ತಲೆ, ಹೋಗುವಾಗ ಬೆತ್ತಲೆ, ನಡುವೆ ಯಾಕಿಷ್ಟು ಮೋಹ,
ಬೇಕು ಬೇಕು ಎನ್ನುವ ಜಾಗದಲ್ಲಿ ಒಂದಷ್ಟು ಸಾಕು ಸಾಕು ಎನ್ನುವುದನ್ನು ಅಳವಡಿಸಿಕೊಳ್ಳೋಣ. ಇದೇನು ಅಸಾಧ್ಯವಲ್ಲ. ಸ್ವಲ್ಪ ಮನಸ್ಸು ಮಾಡಿ. ಹಾಗೆಂದು ಸನ್ಯಾಶ್ರಮ ಸ್ವೀಕರಿಸಬೇಕಾಗಿಲ್ಲ. ವ್ಯಾವಹಾರಿಕವಾಗಿಯೇ ಬದುಕನ್ನು ನೆಮ್ಮದಿಯಿಂದ ಕಳೆಯಬಹುದು. ದಯವಿಟ್ಟು ಯೋಚಿಸಿ. ಧನ್ಯವಾದಗಳು…..
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ, ಮನಗಳಲ್ಲಿ, ಮನೆಗಳಲ್ಲಿ, ಮತಗಳಲ್ಲಿ, ಪರಿವರ್ತನೆಗಾಗಿ ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ. ಎಚ್. ಕೆ. 9844013068……