ಸಂತೋಷ’ ದ ಸರ್ಕಾರಿ ಶಾಲೆ.
1 min read
‘ಸಂತೋಷ’ ದ ಸರ್ಕಾರಿ ಶಾಲೆ.
ಸರಕಾರಿ ಶಾಲೆಗೆ 2 ಕೋಟಿ ರೂ. ನೀಡಿ, ಮಗನ ಸೇರಿಸಿದ ಉದ್ಯಮಿ!
ಚಿಕ್ಕಮಗಳೂರು: ಸರಕಾರಿ ಶಾಲೆಗಳ ಬಗ್ಗೆ ಪಾಲಕರ ಅಸಡ್ಡೆಯಿಂದ ರಾಜ್ಯದಲ್ಲಿ ಬಹಳಷ್ಟು ಶಾಲೆಗಳು ಮುಚ್ಚುವ ಸ್ಥಿತಿ ನಿರ್ಮಾಣವಾಗಿವೆ. ಆದರೆ ಇಲ್ಲೊಬ್ಬರು ಶಾಲೆ ಅಭಿವೃದ್ಧಿಗೆ 2 ಕೋಟಿ ರೂ. ದೇಣಿಗೆ ನೀಡಿದ್ದಲ್ಲದೇ ಅದೇ ಸರಕಾರಿ ಶಾಲೆಯಲ್ಲಿ ತಮ್ಮ ಮಗನಿಗೆ ಶಿಕ್ಷಣ ಕೊಡಿಸುವ ಮೂಲಕ ಮಾದರಿಯಾಗಿದ್ದಾರೆ.
ಮೂಡಿಗೆರೆ ಸಮೀಪದಲ್ಲಿರುವ ಮುತ್ತಿಗೆರೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಇಲ್ಲಿನ ಉದ್ಯಮಿ ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಿಕ ಸಂತೋಷ ಅವರು 2 ಕೋಟಿ ರೂ. ವೆಚ್ಚದಲ್ಲಿ 8 ಕೊಠಡಿಗಳನ್ನು ಕಟ್ಟಿಸಿಕೊಟ್ಟಿದ್ದಾರೆ. ದೇಣಿಗೆ ನೀಡಿರುವುದು ಮಾತ್ರವಲ್ಲದೆ ನಾನು ಸರಕಾರಿ ಶಾಲೆಯಲ್ಲಿ ಕಲಿತಿದ್ದೇನೆ. ನನ್ನ ಮಗನೂ ಸರಕಾರಿ ಶಾಲೆಯಲ್ಲಿ ಓದಬೇಕೆಂಬ ಆಸೆಯಿಂದ ತಮ್ಮ ಮಗನನ್ನೂ ಇದೇ ಶಾಲೆಯಲ್ಲಿ ಓದಿಸುತ್ತಿದ್ದಾರೆ.
ತಾವು ಕೋಟ್ಯಧಿಪತಿಯಾಗಿದ್ದರೂ ಯಾವುದೇ ಖಾಸಗಿ ಶಾಲೆ ಮೊರೆ ಹೋಗದೆ ಸರಕಾರಿ ಶಾಲೆಗೆ ದೇಣಿಗೆ ನೀಡಿ ಶಾಲೆ ಅಭಿವೃದ್ಧಿಪಡಿಸಿದ್ದಾರೆ. ಮುತ್ತಿಗೆಪುರ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ 1973ರಲ್ಲಿ ಆರಂಭ ವಾಗಿದ್ದು, ಎಲ್‌ಕೆಜಿಯಿಂದ ಏಳನೇ ತರಗತಿವರೆಗೂ ಕನ್ನಡ ಮತ್ತು ಇಂಗ್ಲಿಷ್ ಮಾಧ್ಯಮದಲ್ಲಿ ಶಿಕ್ಷಣ ನೀಡಲಾಗುತ್ತಿದೆ. ಇಂಗ್ಲಿಷ್ ಮಾಧ್ಯಮದಲ್ಲಿ 150 ಸೇರಿ 363 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದಾರೆ.
ಬಸ್ ವ್ಯವಸ್ಥೆಗೂ ಸಿದ್ಧತೆ
ಮೂಡಿಗೆರೆಯ ಸುತ್ತಮುತ್ತಲ 25ಕ್ಕೂ ಹೆಚ್ಚು ಹಳ್ಳಿಗಳ ವಿದ್ಯಾರ್ಥಿಗಳು ಶಿಕ್ಷಣ ಪಡೆದುಕೊಳ್ಳುತ್ತಿದ್ದಾರೆ. ದಾನಿಗಳ ಸಹಕಾರದಿಂದ ಮುಂದಿನ ದಿನಗಳಲ್ಲಿ ಮಕ್ಕಳ ಅನುಕೂ ಲಕ್ಕಾಗಿ ಬಸ್ ವ್ಯವಸ್ಥೆ ಕಲ್ಪಿಸಲು ಮುಂದಾಗಿದೆ.
ದಾನಿಗಳ ಸಹಕಾರದಿಂದ ಶಾಲೆಯನ್ನು ಖಾಸಗಿ ಶಾಲೆಗೆ ಸಡ್ಡು ಹೊಡೆಯುವಂತೆ ಮಾಡಲಾಗಿದೆ. ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಕ ಸಂತೋಷ್ ಅಂದಾಜು 2 ಕೋಟಿ ರೂ. ವೆಚ್ಚದಲ್ಲಿ 8 ಕೊಠಡಿಗಳನ್ನು ನಿರ್ಮಿಸಿಕೊಟಿದ್ದು ಫೆ. 28ರಂದು ಉದ್ಘಾಟನೆಗೊಳ್ಳಲಿದೆ.
ಈ ಶಾಲೆಯಲ್ಲಿ ಸರಕಾರದ ವಿವೇಕ ಯೋಜನೆಯಡಿ 4 ಕೊಠಡಿಗಳನ್ನು ನಿರ್ಮಿಸಲಾಗುತ್ತಿದ್ದು, ಒಟ್ಟು 12 ಕೊಠಡಿಗಳನ್ನು ನೂತನವಾಗಿ ನಿರ್ಮಿಸಲಾಗಿದೆ. ಸಂತೋಷ್ ಅವರು ಈ ಹಿಂದೆ 18 ಲಕ್ಷ ರೂ. ವೆಚ್ಚದಲ್ಲಿ ಪ್ರಾರ್ಥನಾ ಮಂದಿರ ಕಟ್ಟಿಸಿ ಕೊಟ್ಟಿದ್ದಾರೆ. ಸಿದ್ದಿಕ್ ಎಂಬುವರು 60 ಸಾವಿರ ರೂ. ವೆಚ್ಚದಲ್ಲಿ ಶುದ್ಧ ಕುಡಿಯುವ ನೀರು ಯಂತ್ರ ದೇಣಿಗೆಯಾಗಿ ನೀಡಿದ್ದಾರೆ. ಶರ್ಮಿನ್ ವಿಲಿಯಮ್ಸ್ ಕಂಪೆನಿ 18 ಲಕ್ಷ ರೂ. ವೆಚ್ಚದಲ್ಲಿ ಪೀಠೊಪಕರಣ ದೇಣಿಗೆಯಾಗಿ ನೀಡಿದೆ. ಯೂತ್ ಫಾರ್ ಸೇವಾ ಟ್ರಸ್ಟ್‌ನವರು 8 ಕಂಪ್ಯೂಟರ್‌ಗಳನ್ನು ನೀಡಿದ್ದಾರೆ.
12 ಜನ ಸಿಬಂದಿ
ಶಾಲೆಯಲ್ಲಿ 12 ಸಿಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಉತ್ತಮ ಶಾಲೆ ಪ್ರಶಸ್ತಿ, ಸ್ವತ್ಛ ಶಾಲೆ ಪ್ರಶಸ್ತಿ, ಅಕ್ಷರ ದಾಸೋಹ ಉತ್ತಮ ನಿರ್ವಹಣೆ ಪ್ರಶಸ್ತಿ, ಈ ಹಿಂದೆ ಶಾಲೆಯಲ್ಲಿ ಕಾರ್ಯ ನಿರ್ವಹಿಸಿದ್ದ ಶಿಕ್ಷಕಿ ರೇಣುಕಾ ಅವರಿಗೆ ಜಿಲ್ಲಾಮಟ್ಟದ ಉತ್ತಮ ಶಿಕ್ಷಕಿ ಪ್ರಶಸ್ತಿ, ಇಲ್ಲಿನ ವಿದ್ಯಾರ್ಥಿಗಳು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ. ಮುಂದಿನ ಶೈಕ್ಷಣಿಕ ವರ್ಷಕ್ಕೆ ಈಗಾಗಲೇ ನೋಂದಣಿಯಾಗಿದೆ ಎಂದು ಶಾಲಾ ಅಭಿವೃದ್ಧಿ ಸಮಿತಿಯ ಮಧು ತಿಳಿಸಿದ್ದಾರೆ.
363 ವಿದ್ಯಾರ್ಥಿಗಳು ಶಿಕ್ಷಣ ಪಡೆಯುತ್ತಿದ್ದು ಕೊಠಡಿಗಳ ಕೊರತೆ ಇತ್ತು. ಮುದ್ರೆಮನೆ ಕಾಫಿ ಕ್ಯೂರಿಂಗ್ ಮಾಲಕ ಸಂತೋಷ್ 8 ಹೈಟೆಕ್ ಕೊಠಡಿಗಳ ನಿರ್ಮಾಣಕ್ಕೆ 2 ಕೋಟಿ ರೂ. ದೇಣಿಗೆ ನೀಡಿದ್ದಾರೆ. ದಾನಿಗಳ ಸಹಕಾರದಿಂದ ಸರಕಾರಿ ಶಾಲೆಯನ್ನು ಖಾಸಗಿ ಶಾಲೆ ಮಾದರಿಯಲ್ಲಿ ಅಭಿವೃದ್ಧಿಪಡಿಸಿದ್ದು ಮಾದರಿ ಶಾಲೆಯಾಗಿದೆ. – .