ಮೂಡಿತು ಮೂಡಿಗೆರೆಯಲ್ಲೊಂದು ಹೊಂಗನಸು…..*
1 min read
*ಮೂಡಿತು ಮೂಡಿಗೆರೆಯಲ್ಲೊಂದು ಹೊಂಗನಸು…..*
ಇದು ಕವಿ ಸಮಯ. ಕವಿತೆಯಡೆಗೆ ನಮ್ಮೆಲ್ಲರ ನಡಿಗೆ…
ಸರ್ವಜ್ಞನ ಊರು ಹಾವೇರಿ ಜಿಲ್ಲೆ ಮಾಸೂರು,ಇಂತಹ ಮಾಸೂರಿನಿಂದ ಮೂಡಿಗೆರೆಗೆ ಬಂದು ನೆಲೆಸಿರುವವರು ಈಶನಗೌಡ ಪಾಟೀಲ ಮತ್ತು ಜಯಲಕ್ಷ್ಮಿ ಪಾಟೀಲ ಎಂಬ ಶಿಕ್ಷಕ ದಂಪತಿಗಳು. ಈ ದಂಪತಿಗಳ ಮನೆಯಂಗಳದಲ್ಲಿ, ಮೊನ್ನೆ,ಕರ್ನಾಟಕ ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕದ ವತಿಯಿಂದ, ಕವಿಯತ್ರಿ, ಶಿಕ್ಷಕಿ ಜಯಲಕ್ಷ್ಮಿ ಪಾಟೀಲ ಅವರು ಹೊರತಂದಿರುವ ಹೊಂಗನಸು ಕವಿತಾ ಸಂಕಲನ ಪುಸ್ತಕ ಕುರಿತು ವಿಮರ್ಶೆ ಮತ್ತು ಕವಿತಾ ವಾಚನ ಕಾರ್ಯಕ್ರಮ ನಡೆಯಿತು. ಇಲ್ಲಿ ಭಾಗವಹಿಸಿದವರೆಲ್ಲ ಒಂದಲ್ಲ ಒಂದು ಕವಿತೆಯನ್ನು ಹೇಳಲೇಬೇಕಾಗಿತ್ತು, ಅದು ಸಾಹಿತ್ಯ ಸಂಭ್ರಮ ವೇದಿಕೆಯ ಸೂಚನೆಯೊಂದಿಗೆ ಕರೆದ ಆಹ್ವಾನವಾಗಿತ್ತು. ಇನ್ನೂ
ಅತಿಥಿಗಳು ಕೂಡ ಪುಸ್ತಕದ ವಿಮರ್ಶೆಯೊಂದಿಗೆ, ಸಾಹಿತ್ಯ ಲೋಕದ ಬೆಳವಣಿಗೆಗಳನ್ನು ಕುರಿತು ಮಾತನಾಡಿ ಕವಿತೆ ವಾಚಿಸಬೇಕಿತ್ತು. ಆಗ ಇಳಿ ಸಂಜೆಯಾಗಿತ್ತು, ಅತ್ತ ಸೂರ್ಯ ಮೂಡಿಗೆರೆಯ ಪಡುವಣದ ದಿಕ್ಕಿನಲ್ಲಿ ಕೆಂಪು ಕೆಂಪಾಗಿ ಮುಳುಗುತ್ತಿದ್ದ, ಇತ್ತ ಪಾಟೀಲ ದಂಪತಿಗಳ ಮನೆಯ ಪಡಸಾಲೆಯಲ್ಲಿ ಮಾತು ಮತ್ತು ಕವಿತೆಗಳು ಒಂದರ ಮೇಲೊಂದು ಇಂಪು ಇಂಪಾಗಿ ಮೂಡತೊಡಗಿದವು.
ಎಲ್ಲವು ಪರಸ್ಪರ ಒಂದಾಗಿ ಕೂಡಿದ್ದರೂ ಕೂಡ, ನಮ್ಮ ನಮ್ಮ ಮಾತುಗಳು ,ಅಲ್ಲಿ ಅರಳಿದ ಕವಿತೆಗಳು ಕಾಲದೊಡನೆ ಗುದ್ದಾಡುತ್ತಾ ಒಂದಷ್ಟು ಹೊಗಳುತ್ತಾ, ಮತ್ತೊಂದಿಷ್ಟು ತೆಗಳುತ್ತಾ ಒಂದೇ ದಾರಿಯಲ್ಲಿ ಭಿನ್ನ ವಿಭಿನ್ನವಾಗಿ ನಡೆದವು, ನಡೆದ ಈ ನಡಿಗೆಗಳೆಲ್ಲ ಭಿನ್ನವಾಗಿದ್ದರೂ ಕೂಡ ಜೊತೆ ಜೊತೆಗೆ ಪರಸ್ಪರ ಒಬ್ಬರನ್ನೊಬ್ಬರು ಕೈ ಕೈ ಹಿಡಿದು ನಡೆದಂತೆ ಇತ್ತು.
ಹೌದು,
ನಾಗರೀಕ ಸಮಾಜದ ನಿಜವಾದ ವಿಕಸನವಾಗಿದ್ದು ಈ ಭಿನ್ನತೆಗಳ~ ವಿಮರ್ಶೆಗಳ ಮಧ್ಯೆಯೇ. ವಿಬಿನ್ನತೆಗಳು ಮತ್ತು ವಿಮರ್ಶೆಗಳು ಆರೋಗ್ಯಕರವಾದ ಸಮಾಜದ ಬೆಳವಣಿಗೆಗೆ ಬೇಕಾದ ಎರಡು ಕಾಲುಗಳಿದ್ದಂತೆ. ನಾಲ್ಕಾರು ಜನ ಕವಿಗಳು ಸಾಹಿತಿಗಳು ಒಟ್ಟಾಗಿ ಇದ್ದಾಗ್ಯು ಕೂಡ ಅವರಲ್ಲಿ ಪರಸ್ಪರ ವಿಮರ್ಶೆಗಳು, ಟೀಕೆ ಟಿಪ್ಪಣಿಗಳು ಒಡಮೂಡಲಿಲ್ಲ ಎಂದರೆ ಅವರೊಳಗೆ ಯಾರಲ್ಲಿಯೂ ಸೃಜನಶೀಲತೆ ಒಡ ಮೂಡೇ ಇಲ್ಲ ಎಂದು ಭಾವಿಸಬೇಕಾಗುತ್ತದೆ.
ಇಂದಿನ ವರ್ತಮಾನ ಅರ್ಧ ಸತ್ಯದ ಕಾಲಘಟ್ಟವಾಗಿದೆ. ಸಾರ್ವಜನಿಕ ಬದುಕು ಬಹುತೇಕ ಕಲುಷಿತಗೊಂಡಿದೆ, ಇಂತಹ ಸಂದರ್ಭದಲ್ಲಿ ಯುವಜನತೆಯು ಹಿರಿಯರನ್ನು, ಹಿರಿಯರು ಯುವ ಸಮೂಹವನ್ನು ನೋಡುವ ಬಗೆಯೂ ಬೇರೆಯಾಗಿದೆ.
ವಿವೇಕದ ಜಾಗದಲ್ಲಿ ಉದ್ವೇಗ,
ಸಂವಾದದ ಜಾಗದಲ್ಲಿ ಉನ್ಮಾದ, ಮಾನವೀಯತೆಯ ಜಾಗದಲ್ಲಿ ಮತೀಯತೆ ಆಕ್ರಮಿಸಿಕೊಂಡಿವೆ.
ಸಾರ್ವಜನಿಕ ವಲಯ ಈ ಎಲ್ಲಾ ಕಾರಣಕ್ಕಾಗಿ ತನ್ನ ಧ್ವನಿ ಶಕ್ತಿಯನ್ನು ಕಳೆದುಕೊಂಡಿದೆ. ಕಳೆದುಕೊಳ್ಳುತ್ತಾ ಹೋಗುತ್ತಿದೆ. ಇಂತಹ ಹಲವು ವಿಚಾರಗಳನ್ನು ಕುರಿತು ಈ ಕಾರ್ಯಕ್ರಮ ಹೊಸ ಹೊಳವು ಮತ್ತು ಭಿನ್ನ ನೋಟವನ್ನು ಬೀರಿತು.
ಸಮಾಜ ಸೇವಕ ಹಸೈನರ್ ಈ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿಕೊಂಡಿದ್ದರು.ಲೇಖಕ ಡಿ.ಎಂ.ಮಂಜುನಾಥಸ್ವಾಮಿ ಉದ್ಘಾಟನೆ ಮಾಡಿ ಮಾತನಾಡಿದರು, ಶಿಕ್ಷಕ.ಸಾಹಿತಿ.ಕವಿ.ಯಗಟಿ ಸತೀಶ್ ಪುಸ್ತಕ ಕುರಿತು ವಿಮರ್ಶೆ ಮಾಡಿದರು. ಸಾಹಿತ್ಯ ಸಂಭ್ರಮ ವೇದಿಕೆ ರಾಜ್ಯ ಘಟಕದ ಅಧ್ಯಕ್ಷ ಎಂ.ಎಸ್ ನಾಗರಾಜು ಇಡೀ ಕಾರ್ಯಕ್ರಮವನ್ನು ರೂಪ ರೂಪರೇಷೆಗಳನ್ನು ತಿಳಿಸಿ ಸ್ವಾಗತ ಕೋರಿದರು. ಪ್ರಧಾನ ಕಾರ್ಯದರ್ಶಿ ನವೀನ್ ಬಿ ಆರ್ ಪ್ರಸ್ತಾವಿಕನಾಗಿ ಮಾತನಾಡಿದರು. ಹೊಂಗನಸು ಕವಿತಾ ಸಂಕಲನದ ಕರ್ತೃ ಶಶಿಕಲಾ ಪಾಟೀಲ ತಮ್ಮೊಳಗೆ ಕವಿತೆ ಹುಟ್ಟಿದ ಸಮಯ ಮತ್ತು ಕಾರಣವನ್ನು ತೆರೆದಿಟ್ಟರು.
ಕೆಜೆವಿಯೆಸ್ ಮೂಡಿಗೆರೆ ತಾಲೂಕು ಘಟಕದ ಅಧ್ಯಕ್ಷ ಆರ್. ಪ್ರಕಾಶ್. ಬೆಥನಿ ಆಂಗ್ಲ ಮಾಧ್ಯಮ ಶಾಲೆಯ ಶಿಕ್ಷಕಿ ಕಮಲ. ಕನ್ನಡ ಸಾಹಿತ್ಯ ಪರಿಷತ್ತಿನ ವಿ.ಪಿ. ನಾರಾಯಣ. ಜನಪದ ಗಾಯಕ ಬಕ್ಕಿ ರವಿ. ಕವಿ ನವೀನ್ ಆನೆ ದಿಬ್ಬ. ಶಿಕ್ಷಕರಾದ ಸುರೇಶ್. ದ್ರಾಕ್ಷಾಯಿಣಿ. ಕಮಲ ಮಲ್ಲಿಕಾರ್ಜುನ.ಅರುಂದತಿ ಮುಂತಾದವರು ಕವಿತೆಗಳನ್ನು ವಾಚಿಸಿದರು. ಈಶನ ಗೌಡ ಪಾಟೀಲ ಅವರ ವಂದನಾರ್ಪಣೆಯೊಂದಿಗೆ ಕಾರ್ಯಕ್ರಮ ಸಂಪನ್ನವಾಯಿತು.
••••••••••••••••••✒️ವರದಿ
ಡಿ. ಎಂ. ಮಂಜುನಾಥಸ್ವಾಮಿ