ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ.
1 min read![](https://avintv.com/wp-content/uploads/2025/02/IMG-20250213-WA0053.jpg)
ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ಇನ್ನಿಲ್ಲ.
ಪದ್ಮಶ್ರೀ ಸುಕ್ರಿ ಬೊಮ್ಮ ಗೌಡ ನಮ್ಮನ್ನು ಅಗಲಿದ್ದಾರೆ….
ಶಾಲೆಯ ಮೆಟ್ಟಿಲನ್ನು ಏರದ ಓರ್ವ ಬಡ ಗ್ರಾಮೀಣ ಮಹಿಳೆ ಕರ್ನಾಟಕ ವಿಶ್ವ ವಿದ್ಯಾನಿಲಯದ ಜಾನಪದ ವಿಭಾಗಕ್ಕೆ ವಿಶೇಷ ಉಪನ್ಯಾಸಕಿ ಯಾಗಿರುವುದೆಂದರೆ, ದೇಶದ ಪ್ರತಿಷ್ಠಿತ ಪದ್ಮಶ್ರೀ ಪುರಸ್ಕಾರ ಇವರನ್ನು ಅರಸಿಕೊಂಡು ಬಂತೆಂದರೆ…ಇವರು ಈ ದೇಶದ ಮಹಾನ್ ಸೆಲೆಬ್ರಿಟಿ ಅಲ್ಲದೆ ಇನ್ನೇನು ?
ಇವರೇ ಹಾಲಕ್ಕಿ ಬುಡಕಟ್ಟು ಸಮುದಾಯದ ನಾಯಕಿ, ಜಾನಪದ ಹಾಡುಗಾರ್ತಿ, ಹೋರಾಟಗಾರ್ತಿ ಸುಕ್ರೀ ಬೊಮ್ಮ ಗೌಡ.
ಉತ್ತರ ಕನ್ನಡ ಜಿಲ್ಲೆಯ ಅಂಕೋಲಾ ತಾಲೂಕಿನ ಬಡಿಗೆರಿ ಹಾಡಿಯಲ್ಲಿ ತಂದೆ ಸುಬ್ಬಣ್ಣ, ತಾಯಿ ದೇವಮ್ಮ, ಗಂಡ ಬೊಮ್ಮ ಗೌಡ್ರಿಂದ ಸುಕ್ರೀ ಅಜ್ಜಿ ಕಲಿತದ್ದು ಶ್ರಮ ಜೀವನ ಮತ್ತು ಒಂದಷ್ಟು ಭಜನೆ ಹಾಡುಗಳು.
ಇದ್ದುದರಲ್ಲೇ ತೃಪ್ತಿ ಪಡುವ, ನಾಳೆಯ ಬಗ್ಗೆ ಯೋಚಿಸದ, ಹಳೆಯ ಸಂಪ್ರದಾಯಗಳನ್ನು ಬಿಡದ, ಬದಲಾವಣೆಗೆ ಒಪ್ಪದ, ಹಣ, ಆಸ್ತಿ, ಪ್ರಚಾರಗಳ ಯಾವುದೇ ವ್ಯಾಮೋಹ ಇರದ ಹಾಲಕ್ಕಿ ಸಮುದಾಯದವರು.
ಸಾಂಸ್ಕೃತಿಕ ಶ್ರೀಮಂತಿಕೆ, ಸಾಹಿತ್ಯ ಸಿರಿ..ಇರುವ ವಿಶೇಷ ಸಮುದಾಯದವರು. ಸುಕ್ರೀ ಅಜ್ಜಿ ತನ್ನದೇ ಆದ ನಿಲುವು, ಧೋರಣೆಗಳಿಂದ ಬದುಕು ಕಟ್ಟಿಕೊಂಡವರು. ‘ ಸರ್ವರಿಗೂ ಸಮ ಪಾಲು, ಸರ್ವರಿಗೂ ಸಮ ಬಾಳು ‘ ಎಂಬ ತತ್ವದಲ್ಲಿ ಬದುಕು ಸಾಗಿಸುವ ಅಜ್ಜಿ ಯಾರನ್ನೂ ನಿಷ್ಠುರ ಮಾಡಿ ಕೊಳ್ಳದೆ, ಯಾರನ್ನೂ ದೇಶಿಸದ, ವ್ಯವಸ್ಥೆಯ ವಿರುದ್ಧ ಧ್ವನಿ ಎತ್ತುವ ಸಂದರ್ಭದಲ್ಲಿ ಪ್ರೀತಿಯಿಂದಲೇ ನೇರ ಮಾತುಗಳಿಂದ ಕಟುವಾಗಿ ನಿಂತರೂ ಮಾತು, ಪ್ರೀತಿ, ವಿಶ್ವಾಸ ಗಳಿಂದಲೆ ಮನ ಒಲಿಸುವವರು.
ಶರಾವತಿ ಮತ್ತು ಕಾಳಿ ನದಿ ವ್ಯಾಪ್ತಿಯಲ್ಲೇ ಇರುವ ಹಾಲಕ್ಕಿ ಸಮುದಾಯದವರ ಸಂಪ್ರದಾಯ, ಹಾಡು, ಉಡುಗೆ, ತೊಡುಗೆ , ಗುಮ್ಮಟೇ, ತಾರ್ಲೆ, ನಾಟಿ, ಪುಗುಡಿ ನೃತ್ಯವೂ ಒಂದು ರೀತಿಯ ವಿಭಿನ್ನತೆಯಲ್ಲಿ ಇವೆ. ಸುಕ್ರಿ ಅಜ್ಜಿಯ ಪರಿಸರ ಹೋರಾಟ, ಸಾಮಾಜಿಕ ಹೋರಾಟ, ಮದ್ಯಪಾನ ವಿರುದ್ಧ ಹೋರಾಟ…ಹೀಗೆ ಹಲವು ಹೋರಾಟಗಳ ಸಾಂಪ್ರದಾಯಿಕ ಹಾಡುಗಳ ಜೊತೆಗೆ ವ್ಯವಸ್ಥೆಯ ವಿರುದ್ಧ ಪ್ರತಿಭಟನಾ ತ್ಮಕ ಕಾವ್ಯ ಶಕ್ತಿಯೂ ಆದರು. ಯಾವುದೇ ಪುಸ್ತಕವನ್ನು ನೋಡದೇ, ಎಲ್ಲೂ ಬರೆಯದೇ ಇರುವ ಇವರ ಹಾಡುಗಳ ನೆನಪಿನ ಭಂಡಾರವೆಂದರೆ ಅದು ಹಾಡಿದಷ್ಟೂ ಮುಗಿಯದ ಹಾಡುಗಳ ಅಕ್ಷಯ ಪಾತ್ರೆ.
ರಾಮಾಯಣ, ಮಹಾಭಾರತ, ಪುರಾಣಗಳಿಂದ ಹಿಡಿದು, ಬಲೀಂದ್ರ ಮಾದೇವರಾಯ, ಚಂಡನಾರಾಯ ದಂತ ಕಥನ ಕಾವ್ಯಗಳು, ಐರಾವತ, ಕರಿದೇವರು, ತಂಗಿ ತುಳಸಿ , ಜಾನಪದ ಐತಿಹ್ಯ ಹಾಡುಗಳು, ಮದುವೆ ಸೋಬಾನ, ಜೋಗುಳ ಹಾಡುಗಳು, ಪರಿಸರ, ಸಾಮಾಜಿಕ ಸಮಸ್ಯೆಗಳನ್ನು ಬಿಂಬಿಸುವ ಮತ್ತು ಪರಿಹಾರದ ಜಾಗೃತಿ ಹಾಡುಗಳು….ಹೀಗೆ ಸುಕ್ರ ಜ್ಜಿಗೆ ಅವರೇ ಬರೆದಿರುವ 4 ಸಾವಿರಕ್ಕೂ ಮಿಕ್ಕಿ ಹಾಡುಗಳ ನೆನಪಿವೆ ಮತ್ತು ಅದನ್ನು ಯಾವುದೇ ಸಂದರ್ಭಗಳಲ್ಲಿ ನಿರಾಳವಾಗಿ ತನ್ನ ತಂಡದ ಜೊತೆ ಹಾಡುತ್ತಾರೆ.
ಈ ಅಜ್ಜಿ ಮನೆಗೆ ಯಾರೇ ಹೋದರೂ ಅವರನ್ನು ಹತ್ತಿರದಲ್ಲಿ ಕುಳಿಸಿ ಒಂದಷ್ಟು ಪ್ರೀತಿಯ ಮಾತುಗಳೊಂದಿಗೆ ಒಂದಷ್ಟು ಉಪಚಾರ ಮಾಡುವುದೇ ಅಜ್ಜಿಯ ಆಕರ್ಷಣೆ. ಅದರೆ ಇನ್ನು ನೆನಪು ಮಾತ್ರ…
ಹಣ, ಒಡವೆ, ಮನೆ ಎಂಬ ಆಸ್ತಿಗಿಂತ ಪ್ರೀತಿ, ವಿಶ್ವಾಸ, ನಂಬಿಕೆಗಳೇ ಎಲ್ಲರ ಆಸ್ತಿ ಆಗಬೇಕು ಎಂಬ ಅಜ್ಜಿಯ ಮಾತಿನಿಂದ ಕಲಿಯಬೇಕಾದದ್ದು ನಾವು, ನೀವು ಎಲ್ಲರ… ಪ್ರಣಾಮ ಗಳು ಸುಕ್ರಜ್ಜಿ….
ನಿಮ್ಮ ಶ್ರೇಷ್ಠ ಬದುಕಿಗೆ ನಾಡಿನ ನಾಗರಿಕರೆಲ್ಲರ ಪರವಾಗಿ ಅಂತಿಮ ನಮನಗಳು.
ಕೃಪೆ: ದಿನೇಶ್ ಹೊಳ್ಳ