ಇದು ನಮ್ಮ ನಡಿಗೆ ವಿಜ್ಞಾನದೆಡೆಗೆ
1 min readಇದು ನಮ್ಮ ನಡಿಗೆ ವಿಜ್ಞಾನದೆಡೆಗೆ ಪಾದಯಾತ್ರೆಯ ನಾಲ್ಕನೇ ದಿನದ ಸಂದರ್ಭ. ಉತ್ತರ ಪಿನಾಕಿನಿ ನದಿ ನಾವು ನಡೆಯುವ ಕಾಲ್ನಡಿಗೆಯ ತುಸುದೂರದಲ್ಲೇ ಬಹು ಬಾಡಿದಂತೆ ಬಿಸಿಲಿಗೆ ಒಣಗಿ ಹರಿಯುತ್ತಿತ್ತು, ಹಾಗಾಗಿ ಇಂದಿನ ಈ ನಡಿಗೆ ನದಿತೀರದ ನೆಡಿಗೆಯೇ ಅಗಿತ್ತು. ಇಂದು ಈ ನಡಿಗೆಯೊಟ್ಟಿಗೆ ಹೆಜ್ಜೆ ಹಾಕಿದವರು ಅನೇಕರು, ಅದರಲ್ಲಿ ಶಾಲಾ ಕಾಲೇಜಿನ ವಿದ್ಯಾರ್ಥಿ ಯುವ ಜನರಿಂದ ಹಿಡಿದು ವಯೋವೃದ್ಧರು ಕೂಡ ಈ ಕಾಲ್ನಡಿಗೆಗೆ ಸಾಥ್ ನೀಡಿದರು. ಹೀಗೆ ಸಾಥ್ ನೀಡಿದ ಪ್ರಮುಖರಲ್ಲಿ ಒಬ್ಬರಾದವರು ನಾಡಿನ ಖ್ಯಾತ ವಿಜ್ಞಾನಿ ಡಾ. ಕೆಪಿಜೆ ರೆಡ್ಡಿ ಕೂಡ ಒಬ್ಬರು. ವಿಚಾರವಾದಿ ಶಿಕ್ಷಣ ತಜ್ಞ ಡಾ.ಎಚ್ ನರಸಿಂಹಯ್ಯನವರ ಜನ್ಮ ಶತಮಾನೋತ್ಸವದ ಪ್ರಯುಕ್ತ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿ ಹಮ್ಮಿಕೊಂಡಿದ್ದ ಐದು ದಿನಗಳ ಕಾಲ್ನಡಿಗೆಯಲ್ಲಿ ಎರಡು ದಿನ ಭಾಗವಹಿಸಿ ಸುಮಾರು 14 ಕಿಲೋ ಮೀಟರ್ ದೂರ ಪಾದಯಾತ್ರೆ ಮಾಡಿ ಡಾ. ಹೆಚ್ ಎನ್ ಅವರಿಗೆ ಗೌರವ ಸಲ್ಲಿಸಿದವರಲ್ಲಿ ಈ ಖ್ಯಾತ ವಿಜ್ಞಾನಿ ಕೆಪಿಜೆ ರೆಡ್ಡಿ ಕೂಡ ಒಬ್ಬರು.
ನಮಗೆ ಈ ಖ್ಯಾತ ವಿಜ್ಞಾನಿ ಡಾ.ಕೆಪಿಜೆ ರೆಡ್ಡಿ ಅವರು ಪರಿಚಯವಾಗಿದ್ದು ಹೀಗೆ.
ಅಂದು,
ಗೌರಿಬಿದನೂರು ತಾಲೂಕಿನ ಕಲ್ಲಿನಾಯಕನಹಳ್ಳಿಯಿಂದ ಡಾ.ಹೆಚ್. ನರಸಿಂಹಯ್ಯನವರ ಜನ್ಮಸ್ಥಳ ಹೊಸೂರಿಗೆ ಸುಮಾರು 30 ಕಿಲೋಮೀಟರ್ ಗೂ ಹೆಚ್ಚು ದೂರ ಕಾಲ್ನಡಿಗೆಯಲ್ಲಿ ಕ್ರಮಿಸುವ ಜವಾಬ್ದಾರಿ ನಮ್ಮೆಲ್ಲರದಾಗಿತ್ತು. ಅಂದಿನ ಈ ಕಾಲ್ನಡಿಗೆಯ ಮಾರ್ಗ ಮಧ್ಯದಲ್ಲಿ ಬಂದು, ಕಾರಿನಿಂದಿಳಿದು ನಮ್ಮೊಟ್ಟಿಗೆ ಕಾಲ್ನಡಿಗೆ ಜೊತೆಯಾಗಿ ಹೆಜ್ಜೆ ಹಾಕಿದ ಕೆಪಿಜೆ ರೆಡ್ಡಿ ಅವರು, ಅ ಕಲ್ಲು ಬೆಟ್ಟಗಳ ಮದ್ಯೆ ಬಿಸಿಲಿನ ಸೂರ್ಯನ ಕಿರಣಗಳು ರಾಶಿ ರಾಶಿಯಾಗಿ ಪಾದಯಾತ್ರಿಗಳ ನೆತ್ತಿಯ ಮೇಲೆ ಬಿಡದೆ ಒಂದೇ ಸಮನೆ ಝಳ ಝಳ ಸುರಿಯುತ್ತಿದ್ದುದ್ದನ್ನು ನೋಡಿ, ಮರಳುಗಾಡಿನಲ್ಲಿ ಓಯೆಸೆಸ್ ಸಿಕ್ಕಿದಂತೆ ಆ ಸುಡು ಬಿಸಿಲಿನ ರಸ್ತೆಯಲ್ಲಿ ಒಂದು ಟ್ರಾಲಿ ತುಂಬಾ ಕಲ್ಲಂಗಡಿ ಹಣ್ಣನ್ನು ತುಂಬಿಕೊಂಡು ಎದುರಾಗಿ ಬರುತ್ತಿದ್ದ ಅ ಟ್ಯಾಕ್ಟರ್ ಅನ್ನು ತಡೆದು ನಿಲ್ಲಿಸಿ, ಅದರೊಳಗಿದ್ದ ಕಲ್ಲಂಗಡಿ ಹಣ್ಣನ್ನೆಲ್ಲ ಚಾಕುವಿನಿಂದ ಕತ್ತರಿಸಿ ಪಾದಯಾತ್ರೆಗಳಿಗೆ ತಿನ್ನಲು ಕೊಡಿಸಿದರು. ನಾ ಮುಂದೆ ತಾ ಮುಂದೆ ಎಂಬಂತೆ ಸ್ಥಳೀಯ ಸಾವಯುವ ಕೃಷಿಕ ಚಂದ್ರಣ್ಣ ಮತ್ತು ಕೆಪಿಸಿ ರೆಡ್ಡಿ ಈ ಎರಡೂ ಜನರು ಆ ಹಣ್ಣಿನ ವ್ಯಾಪಾರಿಗೆ ಹಣ ಕೊಟ್ಟು ಪಾದಯಾತ್ರಿಗಳ ಗಂಟಲನ್ನು ತಣಿಸಿ ಇಬ್ಬರು ಸಂತೃಪ್ತಗೊಂಡರು. ಇಷ್ಟು ಸಾಲದೆಂಬಂತೆ, ಕಲ್ಲಂಗಡಿ ಹಣ್ಣನ್ನು ತಿಂದ ನನ್ನ ಕೈಗೆ ತಮ್ಮ ಕೈಲಿದ್ದ ಕುಡಿಯುವ ನೀರಿನ ಬಾಟಲಿಯ ಮುಚ್ಚಳ ಬಿಚ್ಚಿ ತಗೊಳ್ರಿ ಕೈ ತೊಳ್ಕೊಳ್ರಿ ಎಂದರು. ಅರೆ, ಇಷ್ಟು ದೊಡ್ಡವರು ಅವರಿಗಿಂತ ಸಣ್ಣವನಾದ ನನಗೆ ತೊಗೋಳ್ರಿ, ಕೈ ತೊಳ್ಕೊಳ್ರಿ ಎಂದು ಅತ್ಯಂತ ವಿನೀತದಿಂದ ನನ್ನ ಕೈಗೆ ನೀರು ಹಾಕಿದ ಈ ರೆಡ್ಡಿ ಅವರ ಮೇಲೆ ನನ್ನ ಗೌರವ ಹೆಚ್ಚಾಗಿ, ಅದು ಪರಸ್ಪರ ಪರಿಚಯಕ್ಕೆ ತಿರುಗಿ, ತದನಂತರ ಅನೇಕ ವಿಚಾರಗಳದ ಕಡೆ ಹೊರಳಿತು.
ನಾನು ರೈತನ ಮಗ, ಯಾರಾದರೊಬ್ಬ ಹಳ್ಳಿಯ ಕೃಷಿಕರ ಮಗನೋ ಮಗಳೋ ನೊಬೆಲ್ ಪ್ರೈಸ್ ಪಡೆಯಬೇಕು ಎಂಬುದು ನನ್ನ ಹಂಬಲ, ಈ ಕಾರಣಕ್ಕಾಗಿ ಗೌರಿಬಿದನೂರು ಎಂಬ ಹೆಸರನ್ನು ವರ್ಲ್ಡ್ ಮ್ಯಾಪಿನಲ್ಲಿ ಕೂರಿಸಬೇಕು ಎಂಬ ದೃಷ್ಟಿಯಿಂದ ನನ್ನೆಲ್ಲ ಚಟುವಟಿಕೆಗಳು ಸಾಗುತ್ತಿವೆ, ಇದು ನನ್ನ ಕನಸು ಕೂಡ, ಬಿದರನ್ನು ಬಂಗಾರವನ್ನಾಗಿ ಮಾಡಬೇಕು, ಹೆಚ್ಚಾಗಿ ಬಿದಿರು ಬೆಳೆಯುತ್ತಿದ್ದ ಕಾರಣಕ್ಕಾಗಿಯೇ ಈ ಊರಿಗೆ ಗೌರಿಬಿದನೂರು ಎಂಬ ಹೆಸರು ಬರಲು ಕಾರಣವಾಗಿದೆ. ಈ ದೃಷ್ಟಿಯಿಂದ ಈಗಾಗಲೇ ನದಿ ತೀರದಲ್ಲಿ 700 ಎಕರೆಗೂ ಹೆಚ್ಚು ಪ್ರದೇಶದಲ್ಲಿ ಬಿದುರು ನೆಟ್ಟು ಬೆಳೆಸಲಾಗಿದೆ, ಬಿದರಿನ ಮರು ಉತ್ಪಾದನಾ ಘಟಕವನ್ನು ಇಲ್ಲೇ ಸ್ಥಾಪನೆ ಮಾಡಬೇಕಾಗಿದೆ, ಇಡೀ ನಾಡೇ ಬಿದರಿನ ಉತ್ಪನ್ನಗಳಿಗಾಗಿ ಇತ್ತ ಕಡೆ ತಿರುಗಿ ನೋಡಬೇಕು. ಜೊತೆಗೆ ವಿಶ್ವದಲ್ಲಿಯೇ ಅತಿ ದೊಡ್ಡದಾದ ವಿಜ್ಞಾನ ಪಾರ್ಕನ್ನು ಸ್ಥಾಪಿಸುವ ಮಹಾ ಗುರಿಯೂ ಇದೆ. ಅ ಹಿನ್ನಲೆಯಲ್ಲಿ ಈಗಾಗಲೇ 15 ಎಕರೆ ಪ್ರದೇಶದಲ್ಲಿ ಈ ವಿಜ್ಞಾನ ಪಾರ್ಕಿಗೆ ಮುನ್ನುಡಿ ಬರೆಯಲಾಗಿದೆ. ಇನ್ನೂ 200 ಎಕರೆ ಪ್ರದೇಶವನ್ನು ಈ ಸೈನ್ಸ್ ಪಾರ್ಕಿಗಾಗಿ ಮೀಸಲಿಡಲಾಗಿದೆ.
ಕಲ್ಲಿನಾಯಕನಹಳ್ಳಿಯಿಂದ ಅಲಕಾಪುರದವರೆಗೆ ಹಾದುಹೋಗಿರುವ ರಸ್ತೆಯ ಎಡ ಮಗ್ಗಲಲ್ಲಿ ಸುಮಾರು 9 ಕಿ.ಮೀ ದೂರ ಡ್ರೋನ್ ತಂತ್ರಜ್ಞಾನವನ್ನು ಬಳಸಿ, ಮಾನ್ಸೂನ್ ಮಾರುತ ಪ್ರವೇಶವಾಗುವ ಜೂನ್ ಜುಲೈ ತಿಂಗಳಲ್ಲಿ, ಹುಣಸೆ, ಬೇವು, ಸೇರಿದಂತೆ ಇಲ್ಲಿನ ವಾತಾವರಣಕ್ಕೆ ಹೊಂದಿಕೊಂಡು ಬೆಳೆಯುವಂತಹ ಅನೇಕ ಸಸ್ಯಗಳ ಬೀಜಗಳನ್ನು ನೀರಿನಲ್ಲಿ ನೆನೆಸಿ ಕಲ್ಲು ಗುಡ್ಡಗಳ ಮೇಲೆಲ್ಲಾ ಚೆಲ್ಲಲಾಗಿದೆ ಎಂದು ಆ ಗುಡ್ಡವನ್ನು ಬೆರಳು ಮಾಡಿ ತೋರಿಸುತ್ತಾ, ಚೆಲ್ಲಿದ ಬೀಜಗಳು ಮೊಳಕೆ ಒಡೆದು ಸಸಿಯಾಗಿ ಮರಗಳಾಗಿ ಬೆಳೆಯುತ್ತಿರುವ ದೃಶ್ಯವನ್ನು ಒಂದೊಂದಾಗಿ ವಿವರಿಸುತ್ತಾ ಸಾಗಿದರು. ಇಷ್ಟಲ್ಲದೆ ಸುಮಾರು ನಾಲ್ಕು ಸಾವಿರ ವಿದ್ಯಾರ್ಥಿಗಳ ಕೈಗೆ ಬೀಜಗಳನ್ನು ಕೊಟ್ಟು, ಗುಡ್ಡದ ಮೇಲೆಲ್ಲ ಚೆಲ್ಲಿಸಿ , ಪರಿಸರಸಾಕ್ತಿಯನ್ನು ಅ ವಿದ್ಯಾರ್ಥಿಗಳಲ್ಲಿ ಮೂಡಿಸಿದ್ದನ್ನು ಹೇಳಲು ಮರೆಯಲಿಲ್ಲ.
ಭಾರತೀಯ ವಿಜ್ಞಾನ ಮಂದಿರದಲ್ಲಿ ವಿಜ್ಞಾನಿಯಾಗಿ ಸೇವೆ ಸಲ್ಲಿಸಿ ನಿವೃತ್ತಿಯಾದ ನಂತರವೂ ಕೂಡ, ಹತ್ತು ಹಲವು ಉದ್ಯಮಗಳಿಗೆ ಪಾಲುದಾರನಾಗಿ, ಹುಟ್ಟಿದ ಊರಿನಲ್ಲಿ ಸಹಜ ಕೃಷಿಯನ್ನು ಸಹ ಮಾಡುತ್ತಾ, ಜೊತೆಗೆ ಪ್ರತಿ ಶನಿವಾರ ಒಂದು ಶಾಲೆಗೆ ಹೋಗಿ, ವಿದ್ಯಾರ್ಥಿ ಮತ್ತು ಶಿಕ್ಷಕರೊಟ್ಟಿಗೆ ವೈಜ್ಞಾನಿಕ ಮನೋಭಾವ ಬೆಳೆಸುವ ಉದ್ದೇಶದಿಂದ ಸಂವಾದ ಮಾಡುತ್ತ, ಒಂದು ಬದಲಾವಣೆಯ ಹಾದಿಯಲ್ಲಿ ವಿದ್ಯಾರ್ಥಿಗಳನ್ನು ಕರೆದುಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ, ತಮ್ಮ ಸಂವಾದದ ಮೂಲಕ ಸಾವಿರಾರು ವಿದ್ಯಾರ್ಥಿಗಳ ಚಿತ್ತವನ್ನು ವೈಜ್ಞಾನಿಕತೆ ಕಡೆಗೆ ಸೆಳೆದಿದ್ದಾರೆ. ಏರೋ ಸ್ಪೇಸ್ ವಿಭಾಗದ ಪ್ರೊಫೆಸರ್ ಆಗಿ, ವಿಜ್ಞಾನಿಯಾಗಿ ದೇಶದ ವಿವಿಧ ರಾಜ್ಯಗಳಲ್ಲದೆ, ಇಸ್ರೇಲ್, ಜರ್ಮನ್, ಆಸ್ಟ್ರೇಲಿಯಾ ಮುಂತಾದ ದೇಶಗಳಲ್ಲಿ ವಿಸಿಟಿಂಗ್ ಪ್ರೊಫೆಸರ್ ಆಗಿ ತಮ್ಮ ಸೇವೆ ಸಲ್ಲಿಸಿದ್ದಾರೆ.
ಇತ್ತೀಚೆಗೆ ಚಂದ್ರಯಾನ 3 ಉಡಾವಣೆ ಮಾಡಿದ ವಿಜ್ಞಾನಿ ಸೋಮನಾಥ್ ಹಾಗೂ ಚಂದ್ರಯಾನ 2 ಉಡಾವಣೆ ಮಾಡಿದ ಶಿವನ್ ಇಬ್ಬರೂ ಕೂಡ ಕೆಪಿಜೆ ರೆಡ್ಡಿ ಅವರ ಶಿಷ್ಯಂದಿರಾಗಿದ್ದಾರೆ.
ವಿಜ್ಞಾನದ ಆವಿಷ್ಕಾರಕ್ಕೆ ಸಂಬಂಧಪಟ್ಟಂತೆ ಐಡಿಯಾ, ಡಿಸೈನ್ ಹಾಗೂ ಅನಾಲಿಸಿಸ್ ನಲ್ಲಿ ಇಂದಿಗೂ ತೊಡಗಿಕೊಂಡಿರುವ 72ರ ವಯೋಮಾನದ ಡಾ.ಕೆ. ಪಿ. ಜಗನ್ನಾಥ್ ರೆಡ್ಡಿ ಅವರನ್ನು ಜೀವನದ ಅರ್ಥ ಏನು? ಅದನ್ನು ಹೇಗೆ ನೀವು ವಿವರಿಸಬಹುದು ಎಂದು ಕೇಳಿದಾಗ, ಸರಳವಾಗಿ ಸಹಜವಾಗಿ ಬದುಕುವುದು, ಕಠಿಣವಾದದ್ದನ್ನು ಸುಲಭವಾಗಿ ಹೇಳುವುದು, ನಗುವನ್ನು ಸದಾ ಮುಂದೆ ಮಾಡಿ ಮಾತನಾಡುತ್ತಾ ಸಾಗಿದರೆ ಸಾಕು ಜೀವನದ ಅರ್ಥ ತಿಳಿಯುತ್ತದೆ ಎನ್ನುತ್ತಾ ಈ ಮೇಲ್ಕಂಡ ಹತ್ತು ಹಲವು ತಮ್ಮ ಬದುಕಿನ ಪುಟಗಳ ವಿವರಗಳನ್ನು ತೆರೆದಿಟ್ಟರು.
ಗೌರಿಬಿದನೂರಿನಲ್ಲಿ ಪಿಯುಸಿ ಮುಗಿಸಿ ಯಾರಿಗೂ ಗೊತ್ತಿಲ್ಲದ ಹಾಗೆ ಹೊರಟು ಹೋದಾ ಡಾ.ಕೆಪಿಜೆ ರೆಡ್ಡಿ ಅವರು ಈಗಲೂ ಕೂಡ ಬೆಂಗಳೂರಿನಲ್ಲಿ ನೆಲೆ ನಿಂತಿದ್ದರೂ ಸಹ ವಾರದಲ್ಲಿ ಎರಡು ದಿನ ಯಾರಿಗೂ ಗೊತ್ತಿಲ್ಲದ ಹಾಗೆ ತಮ್ಮ ಹುಟ್ಟಿದೂರಿಗೆ ಬಂದು, ಸಹಜ ಕೃಷಿ ತೋಟದಲ್ಲಿ ಕಾಯಕ ಮಾಡಿ ತಮ್ಮ ಜೀವನ ಪ್ರೀತಿಗೆ ಗುಲಗಂಜಿಯಷ್ಟು ದಕ್ಕೆ ಬಾರದ ಹಾಗೆ ಅಗಾಧವಾದ ಮಹತ್ವಕಾಂಕ್ಷಿಗಳೊಂದಿಗೆ ಸರಳವಾಗಿ ಬದುಕುತ್ತಾ, ಕಠಿಣವಾದದ್ದನ್ನು ಸಹ ಸರಳವಾಗಿ ವಿವರಿಸುತ್ತಾ, ಸಿಟ್ಟು ಸೆಡುವ ಮಾಡಿಕೊಳ್ಳದೆ ನಗು ನಗುತ್ತಾ ಮಾತನಾಡುತ್ತಾ ಮಾದರಿಯಾಗಿದ್ದಾರೆ ಈ ಖ್ಯಾತ ವಿಜ್ಞಾನಿ ಡಾ. ಕೆಪಿಜೆ ರೆಡ್ಡಿ ಅವರು.
ಎರಡು ದಿನಗಳ ಕಾಲ 14 ಕಿಲೋಮೀಟರ್ ಪಾದಯಾತ್ರೆ ಮಾಡಿ ವಿಚಾರವಾದಿಯಾದ ನನ್ನ ಗುರು ಡಾ. ಹೆಚ್ ನರಸಿಂಹಯ್ಯನವರ ಋಣ ತೀರಿಸುವ ಪ್ರಯತ್ನವನ್ನು ಈ ಪಾದಯಾತ್ರೆ ನೀಡಿದ್ದಕ್ಕೆ ನನ್ನ ಕೃತಜ್ಞತೆಗಳು ಎಂದು ಹೇಳುವುದನ್ನು ಮರೆಯಲಿಲ್ಲ.
••••••••••••••••••••✒️ ಬರಹ
ಡಿ. ಎಂ. ಮಂಜುನಾಥಸ್ವಾಮಿ